ಪಶ್ಚಿಮ ಬಂಗಾಳದ ಸಂದೇಶಖಾಲಿ ಹಗರಣ: ಬಿಜೆಪಿ ಪಿತೂರಿಯೇ ಕಾರಣ

Most read

ಬಿಜೆಪಿಯು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಏನು ಬೇಕಾದರೂ ಸೃಷ್ಟಿಸಬಲ್ಲುದು, ಮಹಿಳೆಯರನ್ನೂ ಬಳಸಿಕೊಳ್ಳಬಲ್ಲುದು, ಧರ್ಮದ್ವೇಷವನ್ನು ಹರಡಬಲ್ಲುದು, ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳ ಬಹುದು, ನ್ಯಾಯಾಲಯದ ಹಾದಿ ತಪ್ಪಿಸಬಲ್ಲುದು ಎನ್ನುವುದಕ್ಕೆ ಸಂದೇಶಖಾಲಿ ಪ್ರಕರಣವೇ ಸಾಕ್ಷಿಯಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಮೈತ್ರಿಗೆ ಸಿದ್ಧವಿಲ್ಲದ ಪಕ್ಷಗಳ ನಾಯಕರುಗಳನ್ನು ತನ್ನತ್ತ ಸೆಳೆದುಕೊಂಡು ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನೂ ಬಿಜೆಪಿ ಎಲ್ಲಾ ರಾಜ್ಯಗಳಲ್ಲೂ ಮಾಡುತ್ತಲೇ ಬಂದಿದೆ. ಮೈತ್ರಿಗೆ ಒಪ್ಪದೇ ಬಿಜೆಪಿಯನ್ನು ವಿರೋಧಿಸಿದ ಆಮ್ ಆದ್ಮಿಯಂತಹ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ ರವರನ್ನು ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟಿ ಆ ಪಕ್ಷಗಳನ್ನು ದುರ್ಬಲಗೊಳಿಸುವ ಸಂಚನ್ನು ಬಿಜೆಪಿ ಮಾಡಿದೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಯಾವಾಗಲೂ ಬಿಜೆಪಿಗೆ ಕಂಟಕವಾಗಿತ್ತು. ಅದನ್ನು ನಿವಾರಿಸಿಕೊಳ್ಳಲು ಮೈತ್ರಿ ಮಾಡಿಕೊಂಡು ಜನರ ಕಣ್ಣಲ್ಲಿ ಜೆಡಿಎಸ್ ಒಂದು ರಾಜೀಕೋರ ಪಕ್ಷ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದು, ಜೆಡಿಎಸ್ ಪಕ್ಷದ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡು ಬಿಜೆಪಿ ತನ್ನ ನೆಲೆಯನ್ನು ಮೈಸೂರು ಭಾಗದಲ್ಲಿ ವಿಸ್ತರಿಸುವ ಕಾರ್ಯತಂತ್ರವನ್ನು ರೂಪಿಸಿದೆ. ಪ್ರಜ್ವಲ್ ಅಶ್ಲೀಲ ವಿಡಿಯೋ ಹಗರಣದಲ್ಲಿ ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಾಶಮಾಡುವ ಪ್ರಯತ್ನವೂ ಬಿಜೆಪಿಯದ್ದಾಗಿದೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ

ಆದರೆ.. ಬಿಜೆಪಿ ಪಕ್ಷಕ್ಕೆ ಭಾರೀ ಸವಾಲನ್ನು ಒಡ್ಡಿದ್ದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಹಾಗೂ ಆ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ. ಈ ಪ್ರಾದೇಶಿಕ ಪಕ್ಷವನ್ನು ನಿರ್ನಾಮ ಮಾಡಲು ಬಿಜೆಪಿ ಬೇಕಾದಷ್ಟು ಸಲ ಪ್ರಯತ್ನ ಪಟ್ಟು ವಿಫಲವಾಗಿದೆ. ಟಿಎಂಸಿ ಪಕ್ಷದ ಪ್ರಭಾವಿ ನಾಯಕನಾಗಿದ್ದ ಸುವೇಂದು ಅಧಿಕಾರಿ ಮೇಲಿದ್ದ ಭ್ರಷ್ಟಾಚಾರ ಪ್ರಕರಣದ ತನಿಖೆ ತೀವ್ರಗೊಳಿಸುವುದಾಗಿ ಹೆದರಿಸಿ ಬಿಜೆಪಿಗೆ ಸೇರಿಸಿ ಕೊಳ್ಳಲಾಯ್ತು. ಕಳೆದ ಸಲದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಹೀನಾಯವಾಗಿ ಸೋತಿದ್ದೂ ಆಯ್ತು. ಆದರೆ 42 ಸೀಟುಗಳಿರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಸೀಟುಗಳನ್ನು ಗೆದ್ದಾಗಲೇ ದೆಹಲಿ ಗದ್ದುಗೆ ಹಿಡಿಯಲು ಅನುಕೂಲ ಎನ್ನುವುದು ಗೊತ್ತಿದ್ದ ಬಿಜೆಪಿ ಹೇಗಾದರೂ ಮಾಡಿ ಮಮತಾ ಬ್ಯಾನರ್ಜಿಯವರನ್ನು ಜನರ ಕಣ್ಣಲ್ಲಿ ಖಳನಾಯಕಿಯನ್ನಾಗಿ ಚಿತ್ರಿಸಲು ಏನಾದರೂ ಪಿತೂರಿ ಮಾಡಲೇ ಬೇಕಾಗಿತ್ತು.

ಆ ಪಿತೂರಿಯ ಭಾಗವಾಗಿಯೇ ಸೃಷ್ಟಿಸಲಾಗಿದ್ದು ಸಂದೇಶಖಾಲಿ ಅತ್ಯಾಚಾರ ಹಗರಣ. ‘ಅಲ್ಲಿಯ ಟಿಎಂಸಿ ನಾಯಕ ಶಹಜಹಾನ್ ಶೇಖ್ ಹಾಗೂ ಅವರ ಸಹಚರರು ಆದಿವಾಸಿ ಬುಡಕಟ್ಟು ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾರೆ ಹಾಗೂ ಅವರ ಪೂರ್ವಜರ ಪಟ್ಟಾ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ ಬಿಜೆಪಿ ಪಕ್ಷವು ಪಶ್ಚಿಮ ಬಂಗಾಳದಾದ್ಯಂತ ಗದ್ದಲ ಹುಟ್ಟಿಸಿತು. ಸ್ಥಳೀಯ ಮಹಿಳೆಯರನ್ನು ಎತ್ತಿಕಟ್ಟಿ ಹೋರಾಟವನ್ನು ಸಂಘಟಿಸಿತು. ತನ್ನ ಗೋದಿ ಮಾಧ್ಯಮಗಳನ್ನು ಬಳಸಿ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿತು. ಶಹಜಹಾನ್ ಶೇಖ್ ರನ್ನು ಅತ್ಯಾಚಾರ ಹಾಗೂ ಹಿಂಸಾಚಾರ ಪ್ರಕರಣದಲ್ಲಿ ರಾಜ್ಯ ಸರಕಾರದ ವಿರೋಧದ ನಡುವೆಯೂ ಸಿಬಿಐ  ಕೇಂದ್ರ ಭದ್ರತಾ ಪಡೆಗಳ ಬೆಂಗಾವಲಿನಲ್ಲಿ ಬಂಧಿಸಿತು.

ಇಷ್ಟಕ್ಕೂ ಆಗಿದ್ದೇನೆಂದರೆ.. ಸಂದೇಶಖಾಲಿ ಪ್ರದೇಶದ ಕೆಲವು ಮಹಿಳೆಯರು “ಟಿಎಂಸಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರುಗಳು ಪಕ್ಷದ ಕಚೇರಿಯಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕಿರುಕುಳ ಕೊಟ್ಟಿದ್ದಾರೆ” ಎಂದು ದೂರಿ 2 ವಾರಗಳ ಕಾಲ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಬಿಜೆಪಿ ಪರ ಮಾಧ್ಯಮಗಳಿಂದಾಗಿ ಈ ಸುದ್ದಿ ದೇಶಾದ್ಯಂತ ತಲ್ಲಣ ಮೂಡಿಸಿತು. ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗ ಸ್ಥಳಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸ್ಸು ಮಾಡಿತು. ಈಗ ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ರಾಜ್ಯಪಾಲ ಸಿವಿ ಆನಂದ ಬೋಸ್ ರವರೇ ಸ್ವತಃ ಸಂದೇಶಖಾಲಿಗೆ ಹೋಗಿ “ ನಾನು ಕಂಡಿದ್ದು ಘೋರ ಆಘಾತಕಾರಿ, ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ” ಎಂದು ಹೇಳಿಕೆ ಕೊಟ್ಟರು. ಕಲ್ಕತ್ತಾ ಹೈಕೋರ್ಟ್ ಕೂಡಾ ಮಹಿಳೆಯರ ಮೇಲಾದ ಲೈಂಗಿಕ ಕಿರುಕುಳದ ಕುರಿತು ಪತ್ರಿಕೆಗಳ ವರದಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಅಧಿಕಾರಿಗಳಿಗೆ ವಿಚಾರಣೆ ಮಾಡಲು ನೋಟೀಸ್ ನೀಡಿತು. ಸಂತ್ರಸ್ತೆಯಲ್ಲಿ ಒಬ್ಬರದ ರೇಖಾ ಪಾತ್ರಾರವರನ್ನು ಸಂದೇಶಖಾಲಿ ಪ್ರದೇಶವನ್ನೂ ಒಳಗೊಳ್ಳುವ ಬಾಸಿರ್ ಹಾತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದ ಬಿಜೆಪಿ ಪಕ್ಷದ ಟಿಕೆಟ್ ನೀಡಿತು.

ಸಂದೇಶಕಾಲಿ

ಈ ಎಲ್ಲಾ ಘಟನೆಗಳೂ ಪೂರ್ವಯೋಜಿತವೆಂಬಂತೆ ಘಟಿಸುತ್ತಾ ಹೋದವು. ದೇಶದಾದ್ಯಂತ ಆಕ್ರೋಶ ಹೆಚ್ಚುತ್ತಾ ಹೋಯಿತು. ಬಿಜೆಪಿ ಪಕ್ಷವು ಟಿಎಂಸಿ ಪಕ್ಷದ ಮೇಲೆ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಾ ಈ ಘಟನೆಯನ್ನು ಲೋಕಸಭಾ ಚುನಾವಣೆಗಾಗಿ ಜೀವಂತವಾಗಿಟ್ಟು ಕೊಂಡಿತು. ಟಿಎಂಸಿ ಯ ಮುಸ್ಲಿಂ ನಾಯಕನೇ ಈ ಎಲ್ಲಾ ದುರ್ಘಟನೆಗಳ ಖಳನಾಯಕ ಆಗಿದ್ದರಿಂದಾಗಿ ಧಾರ್ಮಿಕ ದ್ವೇಷ ಭಾವವನ್ನು ದೇಶಾದ್ಯಂತ ಹರಡಲು ಬಿಜೆಪಿ ಕಾರ್ಯತತ್ಪರವಾಯಿತು. ‘ಮುಸ್ಲಿಂ ತುಷ್ಟೀಕರಣದಿಂದಾಗಿಯೇ ಹಿಂದೂ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳುವ ಮೂಲಕ ಕೋಮುದ್ವೇಷವನ್ನು ಪ್ರಚಾರ ಮಾಡಲು ಮೋದಿಯವರು ಆರಂಭಿಸಿದರು. ಲೋಕಸಭಾ ಚುನಾವಣೆಯಲ್ಲಿ ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ ಇಡೀ ದೇಶಾದ್ಯಂತ ರಾಜಕೀಯ ಲಾಭವನ್ನು ಪಡೆಯಲು ಸಂದೇಶಖಾಲಿ ಪ್ರಕರಣವನ್ನು ಬಿಜೆಪಿ ಬಳಸಿಕೊಂಡಿತು.

ಆದರೆ, ಲೋಕಸಭಾ ಚುನಾವಣೆ ರಂಗೇರಿದ ಹೊತ್ತಿನಲ್ಲೇ ಸಂದೇಶಖಾಲಿ ಹಗರಣದ ಹಿಂದಿರುವ ಬಿಜೆಪಿಯ ಪಿತೂರಿ ಬಯಲಾಯಿತು. ಸಂದೇಶಖಾಲಿ ಬಿಜೆಪಿಯ ಮಂಡಲ ಅಧ್ಯಕ್ಷ ಗಂಗಾಧರ್ ಕೋಯಲ್ ಎನ್ನುವ ಬಿಜೆಪಿ ನಾಯಕ ಸ್ಟಿಂಗ್ ಆಪರೇಶನ್ ನಲ್ಲಿ ಒಂದಿಷ್ಟು ಸತ್ಯವನ್ನು ಬಾಯಿಬಿಟ್ಟಿದ್ದು ಬಿಜೆಪಿಗೆ ಈಗ ನುಂಗಲಾರದ ತುತ್ತಾಗಿದೆ. ‘ಬಿಜೆಪಿಯ ವಿಪಕ್ಷ ನಾಯಕ ಸುವೇಂದು ಅಧಿಕಾರಿಯ ನಿರ್ದೇಶನದ ಮೇರೆಗೆ ಈ ಹಗರಣವನ್ನು ಸೃಷ್ಟಿಸಲಾಯ್ತು’ ಎಂದು ಹೇಳಲಾದ ವಿಡಿಯೋ ಈಗ ಸಂಚಲನವನ್ನು ಸೃಷ್ಟಿಸುತ್ತಿದೆ. ಬಹಿರಂಗಗೊಂಡ ಆ ಒಂದು ವಿಡಿಯೋ ಸಂದೇಶಖಾಲಿ ವಿವಾದಕ್ಕೆ ಹೊಸ ತಿರುವನ್ನು ಕೊಟ್ಟಿದೆ. ಶಾಹಜಹಾನ್‌  ಶೇಖ್ ಸೇರಿದಂತೆ ಮೂವರು ಟಿಎಂಸಿ ನಾಯಕರ ವಿರುದ್ಧ ಅತ್ಯಾಚಾರ ಆರೋಪ ಹೊರಿಸುವಂತೆ ಮೂವರು ಸ್ಥಳೀಯ ಮಹಿಳೆಯರನ್ನು ಪ್ರಚೋದಿಸಲು ಸುವೇಂದು ಅಧಿಕಾರಿ ತಮ್ಮನ್ನು ಹಾಗೂ ಪ್ರದೇಶದ ಇತರ ಬಿಜೆಪಿ ನಾಯಕರಲ್ಲಿ ಹೇಳಿದ್ದರು ಎಂದು ವಿಡಿಯೋದಲ್ಲಿ ಆತ ಹೇಳುವುದು ಕೇಳಿಸುತ್ತದೆ. ‘ನಂದಿಗ್ರಾಮ ಶಾಸಕರಾಗಿರುವ ಅಧಿಕಾರಿ ಅವರೇ ಸಂದೇಶಖಾಲಿಯ ಮನೆಯೊಂದರಲ್ಲಿ ಬಂದೂಕುಗಳನ್ನು ಇರಿಸಿದ್ದರು, ಇವುಗಳನ್ನು ನಂತರ ಕೇಂದ್ರ ಸಂಸ್ಥೆಗಳು ವಶಪಡಿಸಿಕೊಂಡಿದ್ದವು’ ಎಂದು ಆ ವ್ಯಕ್ತಿ ಹೇಳುವುದು ಕೇಳಿಸುತ್ತದೆ.

ಸುವೇಂದು ಅಧಿಕಾರಿ

“ಪಶ್ಚಿಮ ಬಂಗಾಳ ಮತ್ತು ಸಂದೇಶಖಾಲಿಗೆ ಕೆಟ್ಟ ಹೆಸರು ತರಲು ಸಾಮೂಹಿಕ ಅತ್ಯಾಚಾರಗಳು ನಡೆದಿವೆ ಎಂಬ ಅಭಿಪ್ರಾಯ ಮೂಡಿಸಲು ಸುವೇಂದು ಅಧಿಕಾರಿ ಈ ಸುಳ್ಳು ಸೃಷ್ಟಿಸಿದ್ದಾರೆ ಮತ್ತು ಸಾಮೂಹಿಕ ಅತ್ಯಾಚಾರದಿಂದ ಹಿಡಿದು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವಿಕೆ ತನಕ ಪ್ರತಿಯೊಂದು ಆರೋಪ ಸುವೇಂದು ಅವರ ಸಂಚಿನಿಂದ ಆಗಿದೆ,” ಎಂದು ಟಿಎಂಸಿ ಪಕ್ಷ ಹೇಳಿದೆ. “ಬಿಜೆಪಿಯೊಳಗೆ ಆಳವಾಗಿ ಬೇರೂರಿರುವ ಕೊಳಕು ಬಹಿರಂಗವಾಗಿದ್ದು ನಮ್ಮ ರಾಜ್ಯವನ್ನು ಎಲ್ಲ ಹಂತಗಳಲ್ಲಿ ಅವಮಾನಿಸುವುದು ಅವರ ಸಂಚಾಗಿದೆ,” ಎಂದು ಸಿಎಂ ಮಮತಾ ಬ್ಯಾನರ್ಜಿ  ಹೇಳಿದ್ದಾರೆ. ಈ ಒಂದು ಸ್ಟಿಂಗ್ ಆಪರೇಶನ್ ವಿಡಿಯೋ ಬಿಜೆಪಿಗೆ ಈಗ ತಿರುಗುಬಾಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಸಂದೇಶಖಾಲಿ ಹಗರಣದಿಂದಲೇ ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸೀಟು ಗೆಲ್ಲಬಹುದು ಎಂದುಕೊಂಡಿದ್ದ ಬಿಜೆಪಿ ಪಕ್ಷಕ್ಕೆ ಈಗ ಬಟಾಬಯಲಾದ ವಿಡಿಯೋ ಮೋದಿ ಪಡೆಯ ಹಿನ್ನಡೆಗೆ ಕಾರಣವಾಗುವುದರಲ್ಲಿ ಸಂದೇಹವೇ ಇಲ್ಲ.

ಹೀಗೆ ಬಿಜೆಪಿಯು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಏನು ಬೇಕಾದರೂ ಸೃಷ್ಟಿಸಬಲ್ಲುದು, ಮಹಿಳೆಯರನ್ನೂ ಬಳಸಿಕೊಳ್ಳಬಲ್ಲುದು, ಧರ್ಮದ್ವೇಷವನ್ನು ಹರಡಬಲ್ಲುದು, ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳ ಬಹುದು, ನ್ಯಾಯಾಲಯದ ಹಾದಿ ತಪ್ಪಿಸಬಲ್ಲುದು ಎನ್ನುವುದಕ್ಕೆ ಸಂದೇಶಖಾಲಿ ಪ್ರಕರಣವೇ ಸಾಕ್ಷಿಯಾಗಿದೆ. ಈಗಾಗಲೇ ದೇಶಾದ್ಯಂತ ಮೂರು ಹಂತಗಳ ಮತದಾನ ಮುಗಿದಿದೆ. ಇನ್ನೂ ನಾಲ್ಕು ಹಂತಗಳ ಮತದಾನ ಬಾಕಿ ಇದೆ. ಈಗಲಾದರೂ ಬಿಜೆಪಿ ಪಕ್ಷದ ಷಡ್ಯಂತ್ರಗಳನ್ನು ಅರಿತುಕೊಂಡು ಈ ದೇಶದ ಜನತೆ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಿದರೆ ಸರ್ವಾಧಿಕಾರಿ ಆಡಳಿತವನ್ನು ತಪ್ಪಿಸಬಹುದಾಗಿದೆ. ಸಂವಿಧಾನವನ್ನು ಕಾಪಾಡಿಕೊಳ್ಳಬಹುದಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಸುಳ್ಳಿನ ಸರದಾರ ಮೋದಿ ಮತ್ತು ಸತ್ಯದ ಅನಾವರಣ

More articles

Latest article