ದುರಾದೃಷ್ಟವಶಾತ್ ವಯಸ್ಸಿನಲ್ಲಿ ದೊಡ್ಡವರಾಗುತ್ತಿದ್ದಂತೆ ನಮ್ಮೊಳಗಿನ ಮಕ್ಕಳು ಅದೆಲ್ಲೋ ಮರೆಯಾಗಿಬಿಟ್ಟರು. ನಾವು ಬದುಕಿರುವುದೇ ದುಡಿಯುವುದಕ್ಕೆ ಎಂಬ ಥಿಯರಿಗಳನ್ನು ಜಾಗತಿಕ ಮಾರುಕಟ್ಟೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾಗಿ ಹೆಣೆದವು. ಇದರೊಂದಿಗೆ ಹವ್ಯಾಸಗಳು ಶುದ್ಧ ಸಮಯ ಹಾಳು ಎಂಬ ಯೋಚನಾಕ್ರಮವು ಸಾಮಾನ್ಯವಾಯಿತು. ಇಂದು ಮಹಾನಗರಿಗಳಲ್ಲಿ ಬದುಕುವ ನಮಗೆ ಹವ್ಯಾಸಗಳ ಬಗ್ಗೆ ಕೇಳಿದರೆ ಪುರುಸೊತ್ತಿಲ್ಲ ಎಂದು ಆರಾಮಾಗಿ ಜಾರಿಕೊಳ್ಳುತ್ತೇವೆ – ಪ್ರಸಾದ್ ನಾಯ್ಕ್, ದೆಹಲಿ.
ವರ್ತಮಾನದಲ್ಲಿದ್ದುಕೊಂಡೇ ಆಗಾಗ ಬಾಲ್ಯಕಾಲಕ್ಕೆ ಹೊರಳಿಕೊಳ್ಳುವುದೊಂದು ಸೊಗಸು.
ಒಮ್ಮೆ ಯೋಚಿಸಿ ನೋಡಿ. ಬಾಲ್ಯದಲ್ಲಿ ಶಾಲಾ ದಿನಚರಿಗಳ ಹೊರತಾಗಿ ನಿಮ್ಮ ಬದುಕಿನಲ್ಲಿ ಏನೇನಿತ್ತು ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಆಟ-ಊಟ-ನಿದ್ದೆಗಳನ್ನು ಬಿಟ್ಟು ಅಲ್ಲಿ ಹೆಚ್ಚಿನದೇನಿರಲಿಲ್ಲ. ಶಾಲೆಯ ಪರೀಕ್ಷೆಗಳನ್ನು ಹೊರತುಪಡಿಸಿ ತಲೆಕೆಡಿಸಿಕೊಳ್ಳುವಂತಿನ ಬೇರೆ ಜವಾಬ್ದಾರಿಗಳಿರಲಿಲ್ಲ. ಕೆಲವರಿಗಂತೂ ಈ ಜಗತ್ತು ತಮ್ಮ ಸುತ್ತಲೇ ತಿರುಗುತ್ತಿದೆ, ತಾವು ಆಕಾಶದಿಂದ ಉದುರಿಬಿದ್ದ ಗಂಧರ್ವರು ಎಂಬ ಭಾವಗಳೂ ಇದ್ದಿರಬಹುದು. ಬಹಳಷ್ಟು ಮಂದಿ ತಮ್ಮ ಬಾಲ್ಯವನ್ನು ನಾಸ್ಟಾಲ್ಜಿಕ್ ಆಗಿ ನೆನಪಿಸಿಕೊಳ್ಳುವ ಬಗೆಯೂ ಸಾಮಾನ್ಯವಾಗಿ ಹೀಗೆಯೇ.
ಹಾಗೆ ನೋಡಿದರೆ ಇದು ಒಂದರೆಕ್ಷಣದ ಕಲ್ಪನಾವಿಲಾಸವಷ್ಟೇ. ನಿಜವೇನೆಂದರೆ ಈಗ ನಮಗೆ ಸೊಗಸೆಂಬಂತೆ ಕಾಣುವ ಬಾಲ್ಯವು ಆ ಕಾಲದಲ್ಲಿ ನಮಗೆ ಅಷ್ಟೇನೂ ಸೊಗಸಾಗಿ ಕಂಡಿರಲಿಲ್ಲ. ಬದಲಾಗಿ ನಾವು ಯಾವಾಗ ದೊಡ್ಡವರಾಗುತ್ತೇವಪ್ಪ ಎಂಬ ವಿಚಿತ್ರ ಅವಸರಗಳು ಅಂದು ನಮ್ಮಲ್ಲಿದ್ದವು. ಏಕೆಂದರೆ ದೊಡ್ಡವರಾಗಿಬಿಟ್ಟರೆ ನಮ್ಮ ಎಲ್ಲಾ ನಿರ್ಧಾರಗಳನ್ನು ನಾವೇ ಸ್ವತಃ ತೆಗೆದುಕೊಳ್ಳಬಹುದಿತ್ತು. ಯಾರ ಅಪ್ಪಣೆಗೂ ಕಾಯಬೇಕಾಗಿರಲಿಲ್ಲ. ಮನಬಂದಂತೆ ಬೇಕಿದ್ದಲ್ಲಿಗೆ ಎದ್ದು ಹೋಗಬಹುದಿತ್ತು. ಈ ದೃಷ್ಟಿಕೋನದಲ್ಲಿ ನೋಡಿದರೆ ನಮ್ಮ ಒಂದು ಕಾಲದ ಹಂಬಲವನ್ನು ನಾವಿಂದು ಖುದ್ದಾಗಿ ಜೀವಿಸುತ್ತಿದ್ದೇವೆ. ಜೊತೆಗೇ ಆ ಕಳೆದುಹೋದ ದಿನಗಳು ಮತ್ತೊಮ್ಮೆ ಬೇಕು ಎಂದು ಕೂಡ ಇನ್ನಿಲ್ಲದಂತೆ ಹಂಬಲಿಸುತ್ತಿದ್ದೇವೆ. ಬಹುಷಃ ನಮ್ಮ ಬದುಕಿನ ಹಲವು ದ್ವಂದ್ವಗಳಲ್ಲಿ ಇದೂ ಒಂದು.
ಈಗ ಮತ್ತೊಮ್ಮೆ ನಮ್ಮ ಎಂದಿನ ವಯಸ್ಕ ಬದುಕಿಗೆ ಮರಳೋಣ. ಬಹಳಷ್ಟು ಮಂದಿ ಹೊಸದಾಗಿ ಪರಿಚಯವಾಗುವಾಗ “ಇದು ನನ್ನ ಹೆಸರು, ಇಂತಿಂಥಾ ಉದ್ಯೋಗದಲ್ಲಿದ್ದೇನೆ. ಇಂತಿಪ್ಪ ನಗರದಲ್ಲಿ ಉಳಿದುಕೊಂಡಿದ್ದೇನೆ” ಅಂತೆಲ್ಲ ಹೇಳುತ್ತಿರುತ್ತಾರೆ. ಅದು ಸಹಜ ಕೂಡ. ಒಂದು ಹಂತದ ಪರಿಚಯಗಳಾದ ನಂತರ ಎದುರಿಗಿರುವ ವ್ಯಕ್ತಿಯ ಬಳಿ ನಾನು ಸಾಮಾನ್ಯವಾಗಿ ಕೇಳುವ ಪ್ರಶ್ನೆಯೆಂದರೆ: “ನಿಮ್ಮ ಹವ್ಯಾಸಗಳೇನು? ನಿಮ್ಮ ಉದ್ಯೋಗದಾಚೆಗೆ ನಿಮ್ಮ ವೈಯಕ್ತಿಕ ಖುಷಿಗಾಗಿ ಏನು ಮಾಡುತ್ತೀರಿ?”, ಎಂಬುದನ್ನು. ಬಹಳಷ್ಟು ಮಂದಿಗೆ “ಹವ್ಯಾಸ” ಎಂದಾಕ್ಷಣ ಇದೊಂದು ಬಾಲಿಶ ಪ್ರಶ್ನೆಯೆಂಬಂತೆ ಆ ಕ್ಷಣಕ್ಕೆ ಭಾಸವಾಗುತ್ತದೆ. ಇನ್ನು ಕೆಲವರಿಗೆ ಉತ್ತರವು ತಕ್ಷಣಕ್ಕೆ ಸಿಗದ ಪರಿಣಾಮವಾಗಿ ಕೊಂಚ ಗೊಂದಲವೂ ಆಗುತ್ತದೆ. ನನಗನಿಸುವಂತೆ ಅದೊಂದು ಒಳ್ಳೆಯ ಬೆಳವಣಿಗೆ ಕೂಡ. ಏಕೆಂದರೆ ಅಷ್ಟರಲ್ಲಿ ಆ ಪ್ರಶ್ನೆಯನ್ನು ಅವರು ತಮಗೆ ತಾವೇ ಹಾಕಿಕೊಂಡು ಉತ್ತರದ ತಲಾಶೆಯಲ್ಲಿರುತ್ತಾರೆ.
ಇದರಲ್ಲಿ ಅವರ ತಪ್ಪೇನಿಲ್ಲ. ಅಲ್ಲದೆ ಈ ಪ್ರಶ್ನೆಯನ್ನು ಹಾಕಿದೊಡನೆ ಅದೇನೋ ಗೂಡಾರ್ಥವನ್ನೊಳಗೊಂಡ ಪ್ರಶ್ನೆಯನ್ನು ಕೇಳಿದ ಮಹಾತತ್ವಜ್ಞಾನಿಯೂ ನಾನಾಗುವುದಿಲ್ಲ. ವ್ಯಕ್ತಿಯೊಬ್ಬನನ್ನು ಮತ್ತೊಂದಿಷ್ಟು ಅರಿಯುವ ಮನುಷ್ಯಸಹಜ ಕುತೂಹಲವೊಂದನ್ನು ಬಿಟ್ಟರೆ ಇಲ್ಲಿ ನನಗೆ ಬೇರ್ಯಾವ ಉದ್ದೇಶಗಳೂ ಇರುವುದಿಲ್ಲ. ಆದರೆ ಒಪ್ಪಿಕೊಳ್ಳಬೇಕಾದ ಸತ್ಯವೇನೆಂದರೆ ಸಾಮಾನ್ಯವಾಗಿ ಇಂತಹ ಪ್ರಶ್ನೆಗಳು ವಯಸ್ಕರ ಗುಂಪಿನಲ್ಲಿ ಅಷ್ಟಾಗಿ ಕೇಳಲ್ಪಡುವುದಿಲ್ಲ ಎಂಬುದು. ಬಾಲ್ಯ ಕಳೆದು ದೊಡ್ಡವರಾದ ತಪ್ಪಿಗೆ ಹವ್ಯಾಸಗಳನ್ನು ಪೋಷಿಸಬೇಕಾದ ಕಾಲವು ಮುಗಿದುಹೋಯಿತು ಎಂದು ಅದೇಕೋ ನಮಗೆ ನಾವೇ ಹೇಳಿಕೊಂಡಿದ್ದೇವೆ. ಬಹಳಷ್ಟು ಮಂದಿಗೆ ತಮ್ಮ ಆರಂಭದ ದಿನಗಳ ಆಸಕ್ತಿಗಳು ಈಗ ನೆನಪಾಗಿ ಮಾತ್ರ ಉಳಿದಿವೆ ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ.
ನೀವೇ ಯೋಚಿಸಿ ನೋಡಿ. ನಿಮ್ಮ ಹವ್ಯಾಸವೇನೆಂದು ಕೇಳುವುದು ನಮ್ಮೆಲ್ಲರ ಬಾಲ್ಯದಲ್ಲಿ ಒಂದು ವಿಚಿತ್ರವಾದ ಪ್ರಶ್ನೆಯಾಗಿರಲೇ ಇಲ್ಲ. “ದೊಡ್ಡವನಾದ ಮೇಲೆ ಏನಾಗ್ತೀಯಪ್ಪ?”, “ಹವ್ಯಾಸ ಅಂತ ಏನೆಲ್ಲ ಮಾಡ್ತೀಯಮ್ಮಾ?”… ಆ ಕಾಲಕ್ಕೆ ಸವಕಲು ಕ್ಲೀಷೆಯೆನಿಸುತ್ತಿದ್ದ ಇಂತಹ ಪ್ರಶ್ನೆಗಳ ಜೊತೆಗೇ ನಾವು ಬೆಳೆದವರು. ಆದರೆ ಕ್ರಮೇಣ ಈ ಪ್ರಶ್ನೆಗಳು ಬಾಲ್ಯದ ಜೊತೆಗೇ ಕಳೆದುಹೋದವು. ನಿಮ್ಮ ವೃತ್ತಿಯಾಚೆಗೆ ನೀವು ಏನೆಲ್ಲ ಮಾಡುತ್ತೀರಿ ಎಂದು ಕಳೆದ ಸುಮಾರು ಹತ್ತು ವರ್ಷಗಳಲ್ಲಿ ನನ್ನನ್ನು ವಿಚಾರಿಸಿದ ಓರ್ವ ವ್ಯಕ್ತಿಯೂ ನನಗೆ ನೆನಪಿಲ್ಲ. ಇದು ಬಹುತೇಕ ನಮ್ಮೆಲ್ಲರ ಅನುಭವವೂ ಹೌದು.
ಮತ್ತೊಮ್ಮೆ ನಮ್ಮ ಕಳೆದುಹೋದ ದಿನಗಳನ್ನು ನೆನಪಿಸಿಕೊಂಡರೆ ನಮ್ಮೆಲ್ಲರಿಗೂ ಒಂದಲ್ಲ ಒಂದು ಬಗೆಯ ಹವ್ಯಾಸಗಳಿದ್ದವು. ಚಿತ್ರಕಲೆ, ಸಂಗೀತ, ಶಿಲ್ಪಕಲೆ, ಅಂಚೆಚೀಟಿ-ನಾಣ್ಯಗಳ ಸಂಗ್ರಹ, ಒಂದೆರಡು ಆಟಗಳ ಬಗ್ಗೆ ವಿಪರೀತ ಒಲವು, ನೃತ್ಯ, ಓದು, ಬರವಣಿಗೆ, ಯಂತ್ರಗಳ ರಿಪೇರಿ, ತೋಟಗಾರಿಕೆ, ಮನೆಯ ಸಾಕುಪ್ರಾಣಿಗಳ ಜೊತೆ ಸಮಯ ಕಳೆಯುವುದು… ಹೀಗೆ ಏನೇನೋ. ಈ ಹವ್ಯಾಸಗಳಲ್ಲಿ ನಾವು ಪರಿಣತರಾಗಿರಲಿಲ್ಲ. ಆದರೆ ಅವುಗಳ ಬಗ್ಗೆ ನಮಗೆ ಪ್ರೀತಿಯಿತ್ತು. ಚಿಕ್ಕದೊಂದು ಹೆಮ್ಮೆಯೂ ಇತ್ತು. ಇವುಗಳಲ್ಲಿ ತೊಡಗಿಸಿ ಕೊಂಡಾಗಲೆಲ್ಲ ನಾವು ನಮ್ಮ ಸುತ್ತಮುತ್ತಲಿನ ಜಗತ್ತನ್ನೇ ಮರೆಯುತ್ತಿದ್ದೆವು. ಎಲ್ಲದಕ್ಕಿಂತ ಹೆಚ್ಚಾಗಿ ಈ ಚಟುವಟಿಕೆಗಳು ಇತರರೊಂದಿಗೆ ಒಂದು ಸ್ಪರ್ಧೆಯಾಗಿಯೋ, ಪರರನ್ನು ಮೆಚ್ಚಿಸುವುದಕ್ಕಾಗಿಯೋ ಇರದೆ ಸಂಪೂರ್ಣವಾಗಿ ನಮ್ಮದೇ ಒಂದು ಪುಟ್ಟ ಜಗತ್ತಾಗಿತ್ತು. ಆಗ ಹೇಗೂ ಲೈಕ್, ಶೇರ್, ಕಾಮೆಂಟು, ವೈರಲ್ಲುಗಳ ಹಪಾಹಪಿಯಿರಲಿಲ್ಲವಲ್ಲ!
ದುರಾದೃಷ್ಟವಶಾತ್ ವಯಸ್ಸಿನಲ್ಲಿ ದೊಡ್ಡವರಾಗುತ್ತಿದ್ದಂತೆ ನಮ್ಮೊಳಗಿನ ಮಕ್ಕಳು ಅದೆಲ್ಲೋ ಮರೆಯಾಗಿಬಿಟ್ಟರು. ನಾವು ಬದುಕಿರುವುದೇ ದುಡಿಯುವುದಕ್ಕೆ ಎಂಬ ಥಿಯರಿಗಳನ್ನು ಜಾಗತಿಕ ಮಾರುಕಟ್ಟೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾಗಿ ಹೆಣೆದವು. ಇದರೊಂದಿಗೆ ಹವ್ಯಾಸಗಳು ಶುದ್ಧ ಸಮಯ ಹಾಳು ಎಂಬ ಯೋಚನಾಕ್ರಮವು ಸಾಮಾನ್ಯವಾಯಿತು. ಇಂದು ಮಹಾನಗರಿಗಳಲ್ಲಿ ಬದುಕುವ ನಮಗೆ ಹವ್ಯಾಸಗಳ ಬಗ್ಗೆ ಕೇಳಿದರೆ ಪುರುಸೊತ್ತಿಲ್ಲ ಎಂದು ಆರಾಮಾಗಿ ಜಾರಿಕೊಳ್ಳುತ್ತೇವೆ. ಒಂದು ಮಟ್ಟಿಗೆ ಅದು ನಿಜವೂ ಹೌದು ಅನ್ನೋಣ. ದಿನಕ್ಕೆರಡು ತಾಸು ಡ್ರೈವ್, ಮುಗಿಯದ ಟ್ರಾಫಿಕ್ಕು, ಎಂಟು ತಾಸಿನ ಉದ್ಯೋಗ, ಅದರ ಜೊತೆಗೆ ಬರುವ ಒತ್ತಡಗಳು-ಸ್ಪರ್ಧೆ-ರಾಜಕೀಯ-ಮಹತ್ವಾಕಾಂಕ್ಷೆ, ಸೋಷಿಯಲ್ ಮೀಡಿಯಾ ಜಗಳ-ರಗಳೆಗಳು, ಕೌಟುಂಬಿಕ ಅವಶ್ಯಕತೆ-ಜವಾಬ್ದಾರಿಗಳು, ಇತರೆ ಕೆಲಸಗಳು… ಇವೆಲ್ಲದರ ಮಧ್ಯೆ ಸಮಯವು ಹರಿದು ಮೂರಾಬಟ್ಟೆಯಾದಂತಿರುತ್ತದೆ. ಹೀಗಾಗಿ ಎಲ್ಲರೂ ಮಾತಾಡುವ “ಮೀ ಟೈಮ್” ಎಂಬುದು ಪುಸ್ತಕದ ಬದನೆಕಾಯಿಯಂತಾಗಿ ಬಿಡುತ್ತದೆ. ಒಂದು ಚಂದದ ಸುಳ್ಳು.
ಆದರೆ ಸ್ಪಷ್ಟ ಗುರಿ, ಆದ್ಯತೆ, ಶಿಸ್ತಿಲ್ಲದ ಜೀವನಶೈಲಿಗಳೂ ನಮ್ಮ ಅದೆಷ್ಟು ಆಯಸ್ಸನ್ನು ನುಂಗಿಹಾಕುತ್ತಿವೆ ಎಂಬುದನ್ನು ನಾವಿಲ್ಲಿ ಗಮನಿಸುವುದು ಮುಖ್ಯ. ಒಂದೈದು ನಿಮಿಷ ಸೋಷಿಯಲ್ ಮೀಡಿಯಾದಲ್ಲಿ ತಿರುಗಾಡಿಕೊಂಡು ಬರೋಣವೆಂದು ಹೋದರೆ, ಸ್ಕ್ರೋಲ್ ಮಾಡುತ್ತಾ ಒಂದರ್ಧ-ಮುಕ್ಕಾಲು ತಾಸು ಅಲ್ಲಿ ಅಡ್ಡಾಡಿದ್ದೇ ಗೊತ್ತಾಗುವುದಿಲ್ಲ. ಈ ಜಂಜಾಟದಲ್ಲಿ ನಮ್ಮ ಆದ್ಯತೆಯ ಕೆಲಸಗಳು ಬಲಿಯಾಗಿರುತ್ತವೆ. ಮುಗಿಸಿರುವ ಬಹಳಷ್ಟು ಕೆಲಸಗಳಲ್ಲಿ ನಮ್ಮ ಅಸಲಿ ಸಾಮರ್ಥ್ಯಕ್ಕೆ ತಕ್ಕಂತೆ, ಹೇಳಿಕೊಳ್ಳುವ ಗುಣಮಟ್ಟ ಕಾಣುವುದಿಲ್ಲ. ಇನ್ನು ದಿನದ ಕೊನೆಗೆ ಸ್ಮಾರ್ಟ್‍ಫೋನಿನ “ಡಿಜಿಟಲ್ ವೆಲ್-ಬೀಂಗ್” ನಲ್ಲಿ ಪರಿಶೀಲಿಸಿದರೆ, ದಿನದ ನಾಲೈದು ತಾಸುಗಳು ನಾವು ಇಂತಿಂಥಾ ಆಪ್ ಗಳಲ್ಲೇ ಕಳೆದಿರುತ್ತೇವೆ ಎಂಬುದು ಮನದಟ್ಟಾಗಿ ವಿಚಿತ್ರ ಪಶ್ಚಾತ್ತಾಪವೊಂದು ಹುಟ್ಟಿಕೊಳ್ಳುತ್ತದೆ. ನಮ್ಮ ಸಣ್ಣತನ, ಉಡಾಫೆ, ಅಶಿಸ್ತುಗಳು ನಮ್ಮನ್ನೇ ದಿಟ್ಟಿಸಿ ನೋಡಿದಂತಾಗಿ ಮನಸ್ಸು ಮತ್ತಷ್ಟು ಕುಗ್ಗಿಹೋಗುತ್ತದೆ.
ಅಸಲಿಗೆ ಮಹಾನಗರಗಳಲ್ಲಿ ಹಲವು ಬಗೆಯ ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಮಾನ ಮನಸ್ಕರ ಅದೆಷ್ಟೋ ಗುಂಪುಗಳಿರುತ್ತವೆ. ಆದರೆ ಸ್ವಇಚ್ಛೆಯಿಂದ ಈ ತಂಡಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮತ್ತು ಈ ಮೂಲಕ ಏನನ್ನಾದರೂ ಹೊಸದನ್ನು ಕಲಿಯುವ, ತಮ್ಮನ್ನು ಹೊಸ ಜೀವನಾನುಭವಗಳಿಗೆ ಒಡ್ಡಿಕೊಳ್ಳುವ ಆಸಕ್ತರ ಸಂಖ್ಯೆ ಅಷ್ಟಕ್ಕಷ್ಟೇ ಇದೆ. ಏಕೆಂದರೆ ಒಂದು ಸಮಾಜಮುಖಿ ಚಟುವಟಿಕೆಯಾಗಲಿ ಅಥವಾ ಸರಳ ಹವ್ಯಾಸವಾಗಲಿ; ನಮ್ಮಿಂದ ತಕ್ಕಮಟ್ಟಿನ ಶ್ರಮವನ್ನಾದರೂ ಬೇಡುವುದು ಸಹಜ. ಸರಳವಾಗಿ ಒಂದು ಕಾಫಿ ಮಾಡಬೇಕಾದರೂ ಮೈಗಂಟಿರುವ ಆಲಸ್ಯವನ್ನು ಕೊಡವಿ ಎದ್ದು, ಕೆಲ ನಿಮಿಷಗಳ ಶ್ರಮ ಹಾಕಿಯೇ ಕಾಫಿಯನ್ನು ಸಿದ್ಧಗೊಳಿಸಬೇಕಾಗುತ್ತದೆ. ಆದರೆ ಮನಸ್ಸು ಹುಡುಕುವುದು ಸುಲಭದ ಒಳದಾರಿಗಳನ್ನು. ಅದರ ಜಾಯಮಾನವೇ ಅದು. ಹೀಗಾಗಿ ಆನ್ಲೈನ್ ಆರ್ಡರುಗಳಿಗಿಂದು ಸುಗ್ಗಿಕಾಲ.
ಮನಸ್ಸು ಯಾವಾಗಲೂ ಸುಲಭದ ದಾರಿಗಳನ್ನು ಹುಡುಕುತ್ತದೆ, ಆದರೆ ನೀನದಕ್ಕೆ ಬಲಿಯಾಗಬೇಡ ಎಂದು ತಿಳಿದವರು ಹೇಳುವುದುಂಟು. ಇಂದು ಲಭ್ಯವಿರುವ ಅಪರಿಮಿತ ಒ.ಟಿ.ಟಿ ಕಂಟೆಂಟ್ ಗಳು, ಸೋಷಿಯಲ್ ಮೀಡಿಯಾ ಸಮೂಹಸನ್ನಿ… ಇತ್ಯಾದಿಗಳ ಗದ್ದಲದಲ್ಲಿ ಒಂದಿಷ್ಟು ಶ್ರಮ ಬೇಡುವ ಚಂದದ ಹವ್ಯಾಸಗಳಿಗೆ ಹಿನ್ನಡೆಯಾಗುವುದು ಇದೇ ಕಾರಣಕ್ಕಾಗಿ. “ಡೋಂಟ್ ಬಿಲೀವ್ ಎವರಿಥಿಂಗ್ ಯೂ ಥಿಂಕ್” ಎಂದು ಖ್ಯಾತ ಬೆಸ್ಟ್-ಸೆಲ್ಲಿಂಗ್ ಲೇಖಕ ಜೋಸೆಫ್ ಗೂಯೆನ್ ಒಂದು ಪುಸ್ತಕವನ್ನೇ ಬರೆದಿದ್ದಾರೆ. “ನಿಮ್ಮ ಮನಸ್ಸಿನಲ್ಲಿ ಬರುವ ಎಲ್ಲಾ ಯೋಚನೆಗಳನ್ನು ನೀವು ನಂಬಬೇಕಿಲ್ಲ” ಎಂಬುದು ಇದರ ಶೀರ್ಷಿಕೆಯಲ್ಲೇ ಇದೆ. ನಮ್ಮ ಹಿರಿಯರು “ಮನಸ್ಸು ಮರ್ಕಟ” ಎಂದಿರುವುದಕ್ಕೂ, “ಮನಸ್ಸಿನ ಮಂಗನಾಟಕ್ಕೆಲ್ಲ ನೀವು ಕುಣಿಯಬೇಕಿಲ್ಲ” ಎಂದು ಜೋಸೆಫ್ ಹೇಳಿರುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ.
ಹವ್ಯಾಸಗಳು ಏಕೆ ನಮ್ಮ ಜೊತೆಗಿರಬೇಕು ಎಂದು ಇಂದು ಕಾರ್ಪೋರೆಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗಾಗಿ ತರಬೇತಿ ಶಿಬಿರಗಳನ್ನು ಆಯೋಜಿಸುವುದುಂಟು. ಮಾನಸಿಕ ಒತ್ತಡ, ಏಕಾಗ್ರತೆಯ ಕೊರತೆ ಇತ್ಯಾದಿ ಸಮಸ್ಯೆಗಳಿಂದ ತೊಳಲಾಡುತ್ತಿರುವ ವಯಸ್ಕರಿಗಾಗಿ ಇಂದು ಕಲರಿಂಗ್ ಬುಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ದೊಡ್ಡವರೂ ಮಕ್ಕಳಂತೆ ಒಂದೆಡೆ ಕೂತು, ಈ ಪುಸ್ತಕಗಳಲ್ಲಿರುವ ಚಂದದ ಚಿತ್ರಗಳಿಗೆ ಬಣ್ಣ ತುಂಬಿಸಿದರಾಯಿತು. ಇಷ್ಟೇ ಕೆಲಸ! ಇಲ್ಲಿ ಬಣ್ಣಗಳನ್ನು ಬಹಳ ನಾಜೂಕಾಗಿ ತುಂಬಿಸಬೇಕಾದ ಅವಶ್ಯಕತೆಯಿರುವುದರಿಂದ, ಇದು ವಯಸ್ಕರಲ್ಲಿ ತೀವ್ರವಾಗಿ ಇಳಿಮುಖವಾಗುತ್ತಿರುವ ಏಕಾಗ್ರತೆಯ ಸಮಸ್ಯೆಯನ್ನು ಮತ್ತು ಒಟ್ಟಾರೆಯಾಗಿ ಒತ್ತಡಗಳನ್ನು ಸಾಕಷ್ಟು ನಿಯಂತ್ರಣಕ್ಕೆ ತರಬಲ್ಲದು ಎಂಬ ವಾದವಿದೆ. ಒಂದಾನೊಂದು ಕಾಲದಲ್ಲಿ ನಾವು ಚಿತ್ರಗಳನ್ನು ಬಿಡಿಸುತ್ತಾ ನಮ್ಮ ಸುತ್ತಲಿನ ಜಗತ್ತನ್ನು ಸಂಪೂರ್ಣವಾಗಿ ಮರೆಯುತ್ತಿದ್ದಂತೆ!
ಇನ್ನು ಹವ್ಯಾಸಗಳನ್ನು ಹೊಸದಾಗಿ ಮೈಗೂಡಿಸಿಕೊಂಡ ನನ್ನ ನಡುವಿನ ಹಲವರಲ್ಲಿ ಅದೆಷ್ಟೋ ಅದ್ಭುತ ಬದಲಾವಣೆಗಳನ್ನು ನಾನು ಸ್ವತಃ ಕಂಡಿದ್ದೇನೆ. ನಮ್ಮ ಆಫೀಸಿನ ಕೆಲ ಯುವಕರು ತಂಡವೊಂದನ್ನು ಕಟ್ಟಿಕೊಂಡು ಪ್ರತೀ ಭಾನುವಾರದಂದು ಕ್ರಿಕೆಟ್ ಆಡುತ್ತಾರೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕಾರಣ, ಇವರೆಲ್ಲರ ಪಾಲಿಗೆ ಇದೊಂದು ಬಗೆಯ ಐ.ಪಿ.ಎಲ್ ರೇಂಜಿನ ಕ್ರೀಡಾಕೂಟವೇ ಆಗಿಬಿಟ್ಟಿದೆ. ನಮ್ಮಲ್ಲಿ ಕೆಲವರು ನಿತ್ಯವೂ ತಾಸುಗಟ್ಟಲೆ ಡ್ರೈವ್ ಮಾಡುವ ಅವಧಿಯಲ್ಲಿ ಸದಭಿರುಚಿಯ ಪಾಡ್-ಕಾಸ್ಟ್ (ಆಡಿಯೋ ಕಾರ್ಯಕ್ರಮಗಳು) ಅಥವಾ ಆಡಿಯೋ ಪುಸ್ತಕಗಳನ್ನು ಕೇಳುವ ಅಭ್ಯಾಸವನ್ನು ಬೆಳೆಸಿಕೊಂಡು ಯಶಸ್ವಿಯಾಗಿದ್ದಾರೆ. ವಾರಾಂತ್ಯಗಳಲ್ಲಿ ಯಾವುದೇ ಆರ್ಥಿಕ ಫಲಾಪೇಕ್ಷೆಗಳಿಲ್ಲದೆ ಅನಾಥಾಶ್ರಮಗಳಲ್ಲಿ, ವೃದ್ಧಾಶ್ರಮಗಳಲ್ಲಿ ತಮ್ಮ ಅತ್ಯಮೂಲ್ಯ ಸಮಯವನ್ನು ವಿನಿಯೋಗಿಸುವ ಯುವಕ-ಯುವತಿಯರ ತಂಡಗಳು ಇಲ್ಲಿವೆ. ಇನ್ನು ನಿತ್ಯವೂ ಶಿಸ್ತಾಗಿ ಕೂತು, ಪಟ್ಟು ಹಿಡಿದು, ಒಂದೆರಡು ತಾಸು ಬರೆದಾಗಲೆಲ್ಲ ನನ್ನ ಬರವಣಿಗೆಯ ಕೆಲಸಗಳಿಗೆ ಒಳ್ಳೆಯ ವೇಗ ಸಿಕ್ಕಿದೆ. ಕೊಡಬೇಕಾಗಿರುವ ಸಮಯಕ್ಕೆ ಸರಿಯಾಗಿ ಅಂಕಣಗಳೂ, ಕತೆಗಳೂ, ಲೇಖನಗಳೂ ಸಿದ್ಧವಾಗುತ್ತವೆ.
ಹವ್ಯಾಸಗಳು ಒಂದು ಕಾಲದಲ್ಲಿ ನಮ್ಮ ಜೊತೆಯಾಗಿದ್ದವು ಎನ್ನುವುದಕ್ಕಿಂತ ಈಗಲೂ ಜೊತೆಗಿವೆ ಎನ್ನುವುದು ನಿಜಕ್ಕೂ ಸಂತಸದ ಬೆಳವಣಿಗೆ. ನಮ್ಮೊಳಗಿನ ಲವಲವಿಕೆಯ ಮಗುವನ್ನು ಜೀವಂತವಾಗಿರಿಸಲು ಇದಿಷ್ಟು ಸಾಕು. ಏನನ್ನೂ ಓದದಿರುವುದಕ್ಕಿಂತ ದಿನಕ್ಕೆ ಕನಿಷ್ಠ ಐದು ಪುಟಗಳ ಓದು, ಏನೂ ದೈಹಿಕ ಕಸರತ್ತು ಮಾಡದಿರುವುದಕ್ಕಿಂತ ದಿನಕ್ಕೆ ಕನಿಷ್ಠ ಐವತ್ತು ಹೆಜ್ಜೆಯ ಕಾಲ್ನಡಿಗೆ, ಒಂದೊಮ್ಮೆ ಬಹಳ ಆಕರ್ಷಿಸಿದ್ದ ಹೊಸ ಭಾಷೆಯೊಂದರ ಕಲಿಕೆ, ತನ್ನ ಮೆಚ್ಚಿನ ಲೇಖಕಿಗೊಂದು ತಾನೇ ಬರೆದ ಕೈಬರಹದ ಪತ್ರ, ಅರ್ಥವಾಗದ ಭಾಷೆಯದ್ದೊಂದು ಸಿನೆಮಾ, ಸುಮ್ಮನೆ ಎದ್ದು ಹೊರಟುಬಿಟ್ಟ ಒಂದು ದಿಢೀರ್ ಪ್ರವಾಸ… ಹೀಗೆ ಹವ್ಯಾಸಗಳ ನೆಪದಲ್ಲಿ ಒಂದಿಷ್ಟು ಜೀವನಪ್ರೀತಿ ಹೆಚ್ಚಾದರೆ ಅದರಲ್ಲಿ ತಪ್ಪೇನಿಲ್ಲ.
ಈ ರೀತಿಯಾಗಿ ಮೆಟ್ರೋನಗರಿಯ ಸೋ-ಕಾಲ್ಡ್ ಆಧುನಿಕ ನಂಬಿಕೆಗಳಿಗೆ ವಿರುದ್ಧವಾಗಿ ಉದ್ಯೋಗ, ಒತ್ತಡ ಮತ್ತು ದಿನನಿತ್ಯದ ಜಂಜಾಟಗಳಾಚೆಗೂ ಹಿಡಿಯಷ್ಟು ಬದುಕು ಕಂಡರೆ ಅಚ್ಚರಿಯೂ ಇಲ್ಲ!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://“ನೈಟ್ ಲೈಫ್ ಮಹಾತ್ಮೆ” https://kannadaplanet.com/night-life-story/