ಕೆಲದಿನಗಳ ಹಿಂದೆ ಆಯೋಧ್ಯೆಯ ರಾಮಮಂದಿರದ ಮೇಲೆ ಬಾಂಬ್ ದಾಳಿ ನಡೆಸಿ ಸ್ಪೋಟಿಸುವುದಾಗಿ ಮುಸ್ಲಲ್ಮಾನರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಇಬ್ಬರು (ತಹರ್ ಸಿಂಗ್ ಹಾಗೂ ಓಂ ಪ್ರಕಾಶ್ ಮಿಶ್ರಾ) ಆರೋಪಿಗಳನ್ನು ಉತ್ತರ ಪ್ರದೇಶದ ವಿಶೇಷ ಪೊಲೀಸ್ ಕಾರ್ಯಪಡೆ ಲಕ್ನೋದ ಗೋಮತಿ ನಗರ ವಿಭೂತಿ ಖಂಡ್ ನಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ರಾಮಮಂದಿರ ಮತ್ತು ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆಯ ಇಮೇಲ್ ಕಳುಹಿಸಲಾಗಿತ್ತು. .
ಎಸ್‌ಟಿಎಫ್ ಪ್ರಕಾರ, ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಅಧ್ಯಕ್ಷ ದೇವೇಂದ್ರ ತಿವಾರಿ ಅವರೇ ಈ ಸಂಚು ರೂಪಿಸಿದ್ದರು. ದೇವೇಂದ್ರ ತಿವಾರಿ ಅವರು ಭದ್ರತೆ ಪಡೆದು ದೊಡ್ಡ ನಾಯಕರಾಗಲು ತಮ್ಮದೇ ಉದ್ಯೋಗಿಗಳಿಂದ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಅವರನ್ನು ಎಸ್‌ಟಿಎಫ್ ಬಂಧಿಸಿದೆ. ಅಲ್ಲದೆ, ಮಾಸ್ಟರ್ ಮೈಂಡ್ ದೇವೇಂದ್ರ ತಿವಾರಿಗಾಗಿ ಶೋಧ ನಡೆಯುತ್ತಿದೆ.
ಇಬ್ಬರು ಆರೋಪಿಗಳೂ [email protected] ಮತ್ತು [email protected] ಎಂಬ ಮುಸ್ಲಿಂ ಹೆಸರುಗಳುಳ್ಳ ಇಮೇಲ್ ಐಡಿಗಳನ್ನು ಬಳಸಿ ನಕಲಿ ಐಡಿಗಳನ್ನು ಸೃಷ್ಟಿಸುವ ಮೂಲಕ ಬಾಂಬ್ ಬೆದರಿಕೆ ಹಾಕುವ ಇಮೇಲ್ ಕಳುಹಿಸಿದ್ದರು ಎಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಇಬ್ಬರು ಆರೋಪಿಗಳು ಗೊಂಡಾ ನಿವಾಸಿಗಳಾಗಿದ್ದು, ಪ್ಯಾರಮೆಡಿಕಲ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರೆಂದು ತಿಳಿದು ಬಂದಿದೆ.