Saturday, December 7, 2024

ಶ್ರೀಕಾಂತ್ ಪೂಜಾರಿ ಬಂಧಿಸಿದ ಪೊಲೀಸರನ್ನು ಅಮಾನತು ಮಾಡುವುದಿಲ್ಲ: ಗೃಹ ಸಚಿವ ಪರಮೇಶ್ವರ ಸ್ಪಷ್ಟನೆ

Most read

1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಕುರಿತಾದ ಗಲಭೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಚನ್ನಪೇಟೆಯ ನಿವಾಸಿಯಾದ ಶ್ರೀಕಾಂತ್ ಪೂಜಾರಿ (51)ಯನ್ನು ಬಂಧಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಯಾವುದೇ ಕಾರಣಕ್ಕೂ ಅಮಾನತು ಮಾಡುವುದಿಲ್ಲ ಎಂದು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಗುರುವಾರ ಹೇಳಿದ್ದಾರೆ.

ಕರಸೇವಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಜನವರಿ 9ರೊಳಗೆ ಬಂಧಿಸಿರುವ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಬೇಕು ಎಂಬ ಬಿಜೆಪಿಯ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಹುಬ್ಬಳ್ಳಿಯ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡುವುದಿಲ್ಲ. ಅವರನ್ನು ಏಕೆ ಅಮಾನತುಗೊಳಿಸಬೇಕು? ಅವರು ಮಾಡಿದ ತಪ್ಪಾದರೂ ಏನು? ಬಿಜೆಪಿಯವರು ಪ್ರತಿಭಟನೆ ಮಾಡಲಿ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇರಬಾರದು ಎಂದು ಅವರು ಭಾವಿಸಿದರೆ, ಅವರು ಪ್ರತಿಭಟನೆಯನ್ನು ಮುಂದುವರಿಸಲಿ ಎಂದು ಹೇಳಿದ್ದಾರೆ.

“ಹುಬ್ಬಳ್ಳಿ ಇನ್ಸ್ ಪೆಕ್ಟರ್ ಅವರನ್ನ ಏಕೆ ಅಮಾನತು ಮಾಡಬೇಕು? ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಅವರ ಕೆಲಸ ಬಿಜೆಪಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸುವುದು ಸರಿಯೇ? ನಾವು ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಬೇಕೇ? ಎಂದು ಪ್ರಶ್ನಿಸಿದ್ದಾರೆ.

“ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಪ್ರಕಾರ ಹುಬ್ಬಳ್ಳಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ರಾಮಮಂದಿರ ಉದ್ಘಾಟನೆ ವೇಳೆ ಬಂಧನ ಮಾಡಿರುವುದನ್ನು ಬಿಟ್ಟರೆ ಪೊಲೀಸರು ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ಬಿಜೆಪಿ ಇದನ್ನು ಅನಗತ್ಯವಾಗಿ ಗಾಳಿಗೆ ತೂರುತ್ತಿದೆ. ಬಿಜೆಪಿಯ ರಾಜಕೀಯವನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿಯವರು ಪ್ರತಿಭಟನೆ ಮಾಡಲಿ ಎಂದು ಪರಮೇಶ್ವರ ಹೇಳಿದರು.

ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ, ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿಲ್ಲ. ಎರಡು ದಿನ ರಜೆಯ ಮೇಲೆ ತೆರಳಿದ್ದು, ಮರಳಿದ ಬಳಿಕ ಅಧಿಕಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಲಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ “ನಾನು ಕರಸೇವಕ, ನನ್ನನ್ನು ಬಂಧಿಸಿ” ಎಂಬ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, “ಅವರು ಏನು ಬೇಕಾದರೂ ಮಾಡಲಿ, ನಾವು ನಮ್ಮ ಕೆಲಸವನ್ನು ಮಾಡುತ್ತೇವೆ” ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಕರಸೇವಕನನ್ನು ಬಂಧಿಸಿದ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮ್ಮದ್ ರಫೀಕ್ ಅವರನ್ನು ಕರ್ನಾಟಕ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

1990ರಲ್ಲಿ ರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ 31 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಶೆಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಫೀಕ್ ಅವರು ಡಿಸೆಂಬರ್ 29 ರಂದು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದರು.

More articles

Latest article