ಕನ್ನಡ ವಿರೋಧಿ ಏಕನಾಥ ಶಿಂಧೆಯಿಂದ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ: ಸಂತೋಷ್ ಲಾಡ್ ಆಕ್ರೋಶ

Most read

ಧಾರವಾಡ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಇಂದು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರು ಕನ್ನಡದ ವಿರೋಧಿ. ಮಹದಾಯಿ ನೀರಿಗೆ ಅಡ್ಡಗಾಲು ಹಾಕಿ ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರಿಲ್ಲದಂತೆ ಮಾಡಿದವರು ಅವರು ಎಂದು ಕಾರ್ಮಿಕ ಸಚಿವ ಸಂತೋಶ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕನಾಥ ಶಿಂಧೆ ಕರ್ನಾಟಕಕ್ಕೆ ಬಂದಾಗ, ಮಹದಾಯಿಗೆ ಅಡ್ಡಗಾಲು ಹಾಕಿದ್ದು ಯಾಕೆ ಎಂದು ಪ್ರಶ್ನೆ ಮಾಡಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಪವರ್ ಫುಲ್ ಅಲ್ಲವೇ? ಅವರು ಚಿಟಿಕೆ ಹೊಡೆಯುವಷ್ಟರಲ್ಲಿ ಮಹದಾಯಿ ನೀರು ತರಬಹುದು. ಅವರು ಯಾಕೆ ಮನಸು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕಿತ್ತೂರು ಹೊರಹೊಲಯದಲ್ಲಿ ಸಚಿವ ಸಂತೋಷ್ ಲಾಡ್ ಹಾಗೂ ಶಾಸಕ ವಿನಯ್ ಕುಲಕರ್ಣಿ ಸುದ್ದಿಗೋಷ್ಠಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಮಹದಾಯಿ ಯೋಜನೆಯ ಬಗ್ಗೆ ನಿನ್ನೆ ಪ್ರಹ್ಲಾದ ಜೋಶಿಯವರು ಮಾತನಾಡಿದ್ದಾರೆ. ಈಗಲೂ ಅವರು ಸೋನಿಯಾ ಗಾಂಧಿಯವರ ಬಗ್ಗೆ ಮಾತನಾಡುತ್ತಾರೆ. ಪವರ್ ಫುಲ್ ಇರುವ ಮೋದಿ ಸಾಹೇಬರು ಯಾಕೆ ನೀರು ತರುತ್ತಿಲ್ಲ ಎಂದು ಸಂತೋಶ್ ಲಾಡ್ ಪ್ರಶ್ನಿಸಿದರು.

70 ವರ್ಷದಲ್ಲಿ ಆಗದ ಕೆಲಸ 10 ವರ್ಷದಲ್ಲಿ ಆಗಿದೆಯಾ ಎಂದು ಪ್ರಶ್ನಿಸಿದ ಅವರು, ಬಡವರಿಗೆ ಯಾವುದನ್ನೂ ನೀವು ಉಚಿತವಾಗಿ  ಕೊಟ್ಟಿಲ್ಲ. 16 ಲಕ್ಷ ಕೋಟಿ ಉದ್ಯಮಿದಾರ ಸಾಲ ಮನ್ನಾ ಆಗಿದೆ. ಯಾವುದೇ ರೈತರ ಸಾಲ ಮನ್ನಾ ಆಗಿಲ್ಲ. 55 ಲಕ್ಷ ಸಾಲ ಕೋಟಿ ಭಾರತದ ಮೇಲಿದೆ ಎಂದು ಟೀಕಿಸಿದರು.

ಪ್ರಜ್ವಲ್ ರೇವಣ್ಣ ಕಾಮಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲೇ ಪ್ರಕರಣ ದಾಖಲಾಗಿದ್ದರೆ ನಾವು ಬಿಡುತ್ತಿರಲಿಲ್ಲ. ಮೋದಿ ಅವರ ಬಳಿ ಡ್ಯಾಶ್ ಬೋರ್ಡ್ ಇದೆಯಲ್ವಾ? ಎಲ್ಲೆಲ್ಲಿ ಏನೇನು ಆಗ್ತಿದೆ ಅಂತ ಅವರಿಗೆ ಗೊತ್ತಾಗುತ್ತದೆಯಲ್ಲವೇ? ಹೀಗಾಗಿ ಪ್ರಜ್ವಲ್ ನನ್ನು ಸುಲಭವಾಗಿ ಹಿಡಿಯಬಹುದು ಎಂದು ಅವರು ವ್ಯಂಗ್ಯವಾಡಿದರು.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬರ ಪರಿಹಾರ ನೀಡುವುದು ತಡವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ನಾವು ಬರಪರಿಸ್ಥಿತಿಯ ಬಗ್ಗೆ ಮನವಿ ಮಾಡಿದ್ದೇ ತಡವಾಗಿ ಎಂದು ಸುಳ್ಳು ಹೇಳಿದರು. ನಾವೇ ತಡ ಮಾಡಿದ್ದರೆ ನಾವೇ ಯಾಕೆ ಸುಪ್ರೀಂ ಕೋರ್ಟ್ ಮುಂದೆ ಹೋಗುತ್ತಿದ್ದೆವು? ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದ್ದರಿಂದಲೇ ಬರಪರಿಹಾರದ ಘೋಷಣೆ ಬಂದಿದೆ ಎಂದು ಅವರು ಹೇಳಿದರು.

ಅತ್ಯುತ್ತಮ ಕೆಲಸ ಮಾಡಿದ ಕಾರಣಕ್ಕೆ ಪ್ರಹ್ಲಾದ  ಜೋಶಿ ಅವರಿಗೆ ಅಮಿತ್ ಶಾ  ಅಭಿನಂದನಾ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸುಳ್ಳು ಗುರು ಇನ್ನೊಬ್ಬ ಸುಳ್ಳು ಗುರುವಿಗೆ ಲೆಟರ್ ಕೊಟ್ಟರೆ ನಾವೇನು ಮಾಡೋಣ ಎಂದು ಲಾಡ್ ಗೇಲಿ ಮಾಡಿದರು.

More articles

Latest article