ಬಾಬರಿ ಮಸೀದಿ ದ್ವಂಸ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ (Srikanth Poojari) ಹಾಗೂ ಇತರರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ (BJP Protest) ತೀವ್ರಗೊಳಿಸಿದೆ. ಶ್ರೀಕಾಂತ್ ಪೂಜಾರಿ ಶ್ರೀರಾಮ ಅಥವಾ ಶ್ರೀಕೃಷ್ಣನಂತೆ ಆದರ್ಶ ಪುರುಷ ಅಲ್ಲ. ರಾಮಭಕ್ತನ ಸೋಗಿನಲ್ಲಿರುವ ವೃತ್ತಿಪರ ಕ್ರಿಮಿನಲ್ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಎಕ್ಸ್ನಲ್ಲಿ ಬರೆದುಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ‘ಹಳೆಯ ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಶ್ರೀಕಾಂತ್ ಪೂಜಾರಿ ಶ್ರೀರಾಮನಂತೆ ಆದರ್ಶ ಪುರುಷನೂ ಅಲ್ಲ, ಶ್ರೀಕೃಷ್ಣನಂತೆ ಅವತಾರ ಪುರುಷನೂ ಅಲ್ಲ. ಆತ ವೃತ್ತಿಪರ ಕ್ರಿಮಿನಲ್ ಅಷ್ಟೆ. ಶ್ರೀಕಾಂತ್ ಪೂಜಾರಿ ವಿರುದ್ಧ 1992 ರಿಂದ 2014 ರವರೆಗೆ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ಸುಮಾರು 16 ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಇಂತಹ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿ ರಾಮಭಕ್ತ ಎಂಬ ಸೋಗು ಹಾಕಿಕೊಂಡರೆ ಕಾನೂನು ಕ್ರಮ ತೆಗೆದುಕೊಳ್ಳಬಾರದೆ’ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
‘ರಾಜಕೀಯ ಕಾರಣಗಳಿಗಾಗಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಬೆಂಬಲಕ್ಕೆ ನಿಂತಿರುವ ರಾಜ್ಯ ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಮತ್ತು ಸಂಸ್ಕಾರವೇ ಇಲ್ಲದಂತಾಗಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣಾ ಪ್ರಮಾಣಪತ್ರವನ್ನು ನ್ಯಾಯಾಲಯ ಕೇಳಿದೆ. ಅದರಂತೆ ಪೊಲೀಸರು ಇತ್ಯರ್ಥವಾಗದ ಹಳೆಯ ಪ್ರಕರಣ ಸಂಬಂಧ ಶ್ರೀಕಾಂತ್ ಪೂಜಾರಿ ಹೆಸರಿದ್ದುದರಿಂದ ಬಂಧಿಸಿದ್ದಾರೆ. ನ್ಯಾಯಾಲಯದ ಸೂಚನೆಯ ಅನುಸಾರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಈ ವಿಚಾರ ತಿಳಿದಿದ್ದರೂ ರಾಜ್ಯ ಬಿಜೆಪಿ ನಾಯಕರು ಕ್ರಿಮಿನಲ್ ಪರ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.