ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆಯೇ ಹೊರತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಅಲ್ಲ. ಬ್ರಿಜ್ ಭೂಷಣ್ ಸಿಂಗ್ ಜೊತೆಗೆ ನಿಂತ ಮೋದಿ ಅನ್ಯಾಯಕ್ಕೆ ಒಳಗಾದ ಮಹಿಳೆಯರ ಯುವತಿಯರ ರಕ್ಷಣೆಗೆ ನಿಂತಿಲ್ಲ ಎಂದು ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೆಟ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅತ್ಯಾಚಾರಿಗಳನ್ನು ರಕ್ಷಣೆ ಮಾಡಿದ್ದಾರೆ. ಅತ್ಯಾಚಾರಿ ಪ್ರಜ್ವಲ್ ಜೊತೆಗೆ ನಿಂತುಕೊಂಡಂತೆ ಮೋದಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ರಕ್ಷಣೆಗೆ ನಿಂತಿಲ್ಲ ಎಂದು ಗಂಭೀರ ಆರೋಪ ಮಾಡಿದರೆ
ಇಡೀ ಪ್ರಕರಣದಲ್ಲಿ ಕರ್ನಾಟಕದ ರಾಕ್ಷಸನೊಬ್ಬ ದೇಶ ಬಿಟ್ಟು ಹೋಗಲು ಬಿಜೆಪಿಯೇ ಅವಕಾಶ ಮಾಡಿಕೊಟ್ಟಿದೆ. ರಾಷ್ಟ್ರೀಯ ಮಹಿಳಾ ಆಯೋಗ ಇದರಲ್ಲಿ ಏನು ಮಾಡ್ತಿದೆ? ಸ್ಮೃತಿ ಇರಾನಿ ಈಗ ಮೌನವಾಗಿದ್ದಾರೆ ಯಾಕೆ? ಮೋದಿ ಯಾಕೆ ಬಾಯಿ ಬಿಡುತ್ತಿಲ್ಲ. ಅಮಿತ್ ಶಾ ಗೃಹ ಸಚಿವರಾಗಿ ಎಷ್ಟು ಕೆಟ್ಟ ಹೇಳಿಕೆ ಕೊಡಬೇಕೋ ಅಷ್ಟು ಕೆಟ್ಟ ಹೇಳಿಕೆ ಕೊಟ್ಟಿದ್ದಾರೆ ಎಂದು ಅವರು ಟೀಕಿಸಿದರು.
ಫೆಬ್ರವರಿ ಮಾರ್ಚ್ ನಲ್ಲಿ ಮೈಸೂರಿಗೆ ಬಂದಾಗಲೇ ಪ್ರಜ್ವಲ್ ಬಗ್ಗೆ ಅಮಿತ್ ಶಾಗೆ ಮಾಹಿತಿ ಇತ್ತು. ಏನೇನು ದಾಖಲೆ ಇತ್ತು ಎಂಬ ಬಗ್ಗೆಯೂ ಮಾಹಿತಿ ಅಮಿತ್ ಶಾಗೆ ಇತ್ತು. ಆದರೂ ಅದೇ ವ್ಯಕ್ತಿಗೆ ಟಿಕೆಟ್ ಕೊಟ್ಟು ರಕ್ಷಣೆ ಮಾಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.
ದೇವೇಗೌಡ ಕುಟುಂಬದ ಮರ್ಯಾದೆ ಮುಖ್ಯವೋ, ಮಹಿಳೆಯರಿಗೆ ನ್ಯಾಯ ಕೊಡೋದು ಮುಖ್ಯವೋ? ದೇವೇಗೌಡ ಕುಟುಂಬಕ್ಕೆ ಅಗೌರವ ಅಂತ ನೋಡಬೇಕೋ ಅಥವಾ ಯುವತಿಯರ ಕುಟುಂಬದ ಬಗ್ಗೆ ಯೋಚನೆ ಮಾಡಬೇಕೋ? ದೇವೇಗೌಡ ಕುಟುಂಬದ ಡಿಗ್ನಿಟಿ ಬಗ್ಗೆ ಮಾತ್ರ ಯಾಕೆ ಮಾತನಾಡಲಾಗುತ್ತಿದೆ? ಮಹಿಳೆಯರಿಗೆ ಆದ ಅನ್ಯಾಯ ಆದ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ. ರೇವಣ್ಣ ಸ್ವತಃ ಹೇಳಿಕೆ ನೀಡ್ತಿದ್ದಾರೆ ನಾಲ್ಕು ವರ್ಷದ ಹಳೆಯ ವಿಡಿಯೋ ಅಂತ. ದೇವೇಗೌಡರ ಕುಟುಂಬದ ಪ್ರತಿಷ್ಟೆಯೇ ನಿಮಗೆ ಮುಖ್ಯ ಆಗಿದೆಯಾ ಕುಮಾರಸ್ವಾಮಿಯವರೇ? ಎಂದು ಕುಮಾರಸ್ವಾಮಿ ವಿರುದ್ಧ ಸುಪ್ರಿಯಾ ಶ್ರೀನೆಟ್ ವಾಗ್ದಾಳಿ ನಡೆಸಿದರು.