ಕಾರವಾರ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಣ್ಣಲ್ಲಿ ರಕ್ತವಿಲ್ಲ; ಬಡಜನರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ವಾಗ್ದಾಳಿ ನಡೆಸಿದರು.
ಶಿರವಾಡ ಬಂಗಾರಪ್ಪನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಸ್ಪೀಕರ್ ಇದ್ದರು. ಚುನಾವಣೆಯಲ್ಲಿ ಸೋತು ಈಗ ಮತ್ತೆ ಅಭ್ಯರ್ಥಿಯಾಗಿದ್ದಾರೆ. ಬೆಂಗಳೂರಿನಲ್ಲಿ ಅತಿಕ್ರಮಣದಾರರ ಹೋರಾಟ ನಡೆದಾಗ ಇಡೀ ದಿನ ಹೋರಾಟಗಾರರು ಬಿಸಿಲೆನ್ನದೆ ಕೂತರೂ ನಮ್ಮ ವಿಧಾನಸಭಾಧ್ಯಕ್ಷರು ವಿಧಾನಸಭೆಯಿಂದ ಒಂದು ಕಿ.ಮೀ. ದೂರದ ಪ್ರತಿಭಟನಾ ಸ್ಥಳಕ್ಕೆ ಬಂದಿರಲಿಲ್ಲ. ಈಗ ಬಂದು ಮತ ಕೇಳುತ್ತಿದ್ದಾರೆ. ಜನ ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಾರದವರನ್ನ ನೀವು ಗೆಲ್ಲಿಸುತ್ತೀರಾ? ಎಂದು ಪ್ರಶ್ನಿಸಿದರು.
‘ಹಮ್ ದೋ ಹಮಾರಾ ದೋ’ ಎಂಬುದು ಬಿಜೆಪಿಗರ ಕಥೆಯಾಗಿದೆ. ಮೋದಿ, ಶಾ ಸರ್ಕಾರಿ ಆಸ್ತಿಗಳನ್ನ ಮಾರಾಟ ಮಾಡುವುದು, ಅಂಬಾನಿ, ಅದಾನಿ ಅವುಗಳನ್ನ ಖರೀದಿ ಮಾಡುವುದು. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ದೇಶದಲ್ಲಿ ಜನರ ತೆರಿಗೆಯಿಂದ ಸಾರ್ವಜನಿಕ ಉದ್ದಿಮೆಗಳನ್ನ ಸ್ಥಾಪಿಸಿದ್ದೆವು. ಈಗ ಎಸಿ ರೂಮಲ್ಲಿ ಕುಳಿತು ಅವುಗಳನ್ನ ಮಾರಾಟ ಮಾಡುತ್ತಿದ್ದಾರೆ. ಪುನಃ ಇವರು ಬಂದರೆ ದೇಶದ ಕಥೆ ಮುಗಿದಂತೆ. ‘ಇಸ್ ಬಾರ್ ೪೦೦ ಪಾರ್’ ಎಂದು ಮೋದಿಯವರು ಹೇಳುತ್ತಿದ್ದಾರೆ. ಸಂಸತ್ನಲ್ಲಿ ಸಂವಿಧಾನ ಬದಲಿಸಲು ಅವರಿಗೆ ೪೦೦ ಬೇಕಾಗಿದೆ. ಎಸ್ಟಿ- ಎಸ್ಸಿ ಮೀಸಲಾತಿ ತೆಗೆಯಲು, ಹಿಂದುಳಿದವರ ಸೌಲಭ್ಯ ಕಡಿತಗೊಳಿಸಲು ಅವರು ಸಂವಿಧಾನ ಬದಲಿಸಲು ಯೋಚಿಸುತ್ತಿದ್ದಾರೆ. ದೇಶದಲ್ಲಿ ಶಾಂತಿ, ನೆಮ್ಮದಿ ಇರಲು, ಪ್ರೀತಿ- ವಿಶ್ವಾಸವಿರಲು ಕಾಂಗ್ರೆಸ್ ಬೇಕು. ಬಿಜೆಪಿ ಸಮಾಜವನ್ನು ತುಂಡು- ತುಂಡು ಮಾಡುತ್ತಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಉತ್ತರಕನ್ನಡ ಜಿಲ್ಲೆ ಕಾಂಗ್ರೆಸ್ನ ಭದ್ರಕೋಟೆ. ಕಾಂಗ್ರೆಸ್ನದ್ದು ಕಾಂಗ್ರೆಸ್ ಜಾತಿ ಹೊರತು ಬೇರೆ ಇಲ್ಲ. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿದಾಗ ಬಿಜೆಪಿ ಪಕ್ಷವೇ ಇರಲಿಲ್ಲ. ಭಾರತ್ ಮಾತಾ ಕೀ ಜೈ ಎನ್ನುತ್ತೇವೆ. ಅದರ ಅರ್ಥ ಭಾರತ ಮಾತೆಗೆ ಮಕ್ಕಳೆಲ್ಲರೂ ಒಂದೇ ಎನ್ನುವುದು. ಪ್ರಧಾನಿ ಕೂಡ ಎಲ್ಲರನ್ನೂ ಒಂದೇ ರೀತಿ ನೋಡಬೇಕಿದೆ. ಆದರೆ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬಾಯಲ್ಲಿ ಹೇಳೋದು ಒಂದು, ಮಾಡೋದು ಮತ್ತೊಂದು. ಅವರು ನಿಷ್ಠಾವಂತರಲ್ಲ, ಭಾರತೀಯರ ಕಷ್ಟದೊಂದಿಗೆ ಅವರಿಲ್ಲ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಪ್ರಜಾಪ್ರಭುತ್ವ ಬಲಪಡಿಸಲು ಕಾಂಗ್ರೆಸ್ಗೆ ಮತ ನೀಡಬೇಕಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರರು ನೀಡಿರುವ ಪವಿತ್ರ ಸಂವಿಧಾನದಿಂದಲೇ ದೇಶದಲ್ಲಿ ಪ್ರಜಾಪ್ರಭುತ್ವವಿದೆ, ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಚುನಾವಣೆಯಲ್ಲಿ ಕೇವಲ ೬೩% ಮತ ಚಲಾವಣೆಯಾಗಿದೆ. ೩೭% ಮತದಾರರು ಮತ ಚಲಾಯಿಸದಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ. ಒಂದು ಮತದಲ್ಲಿ ಗೆದ್ದ- ಸೋತ ಉದಾಹರಣೆ ಇದೆ. ಹೀಗಾಗಿ ಮತದ ಮಹತ್ವ ತಿಳಿದುಕೊಳ್ಳಬೇಕು ಎಂದರು.
ಪ್ರಧಾನಿ ಪತ್ರಕರ್ತರು ಪ್ರಶ್ನೆ ಕೇಳುತ್ತಾರೆಂದು ಶಿರಸಿಗೆ ಬಂದಾಗ ಪತ್ರಿಕಾಗೋಷ್ಠಿ ಇಟ್ಟಿಲ್ಲ. ಶಿರಸಿಗೆ ಬಂದಿದ್ದ ಅವರು ಜಿಲ್ಲೆಯ ಒಂದೇ ಒಂದು ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಅದಕ್ಕಾಗಿ ನಾನು ಜಿಲ್ಲೆಯ ಡಜನ್ ಸಮಸ್ಯೆಗಳ ಬಗ್ಗೆ ಪತ್ರ ಬರೆದಿದ್ದೆ. ಸಿದ್ದರಾಮಯ್ಯ ಸರ್ಕಾರ ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ನೀಡದಿದ್ದರೆ ಎಲ್ಲರನ್ನೂ ಇವರು ಕಿತ್ತೊಗೆಯುತ್ತಿದ್ದರು. ಪ್ರಧಾನಿ ನಮ್ಮ ಗ್ಯಾರಂಟಿಗಳ ಬಗ್ಗೆ ಚೇಷ್ಠೆ ಮಾಡುತ್ತಿದ್ದರು. ಸತ್ಯದಿಂದ ಗ್ಯಾರಂಟಿ ದೂರವಿದೆ, ಅದರ ಮೇಲೆ ವಿಶ್ವಾಸವಿಡಬೇಡಿ ಎಂದಿದ್ದರು. ಆದರೆ ಈಗ ಅವರೇ ಮೋದಿ ಕೀ ಗ್ಯಾರಂಟಿ ಎನ್ನುತ್ತಿದ್ದಾರೆ.
ಮಾಧ್ಯಮಗಳಲ್ಲಿ ಬೆಳಿಗ್ಗಿನಿಂದ ರಾತ್ರಿವರೆಗೆ ಈಗ ಅವರದೇ ಸಂದರ್ಶನ. ಕಪ್ಪು ಹಣ ತರುತ್ತೇವೆ, ಹದಿನೈದು ಲಕ್ಷ ಹಾಕುತ್ತೇವೆಂದರು. ಜನ ನಂಬಿ ಐನೂರು ರೂ. ತುಂಬಿ ಖಾತೆ ತೆಗೆದರು. ಹದಿನೈದು ಲಕ್ಷವೂ ಬಂದಿಲ್ಲ, ಖಾತೆಗಾಗಿ ಕೊಟ್ಟ ಐನೂರು ರೂ.ನೂ ಕರಗಿ ಹೋಯಿತು, ಇದೇ ಮೋದಿ ಗ್ಯಾರಂಟಿ. ಎರಡು ಕೋಟಿ ಉದ್ಯೋಗ ಪ್ರತಿವರ್ಷ ಸೃಷ್ಟಿಸುತ್ತೇವೆಂದರು. ೧೦ ವರ್ಷದಲ್ಲಿ ೨೦ ಕೋಟಿ ಉದ್ಯೋಗ ಸೃಷ್ಟಿಯಾಗುವ ಬದಲು ನಿರುದ್ಯೋಗದ ಸಮಸ್ಯೆ ಜ್ವಲಂತವಾಗಿದೆ. ಇವರ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಗೃಹಲಕ್ಷ್ಮಿಯಿಂದಾಗಿ ಕೊಂಚ ಜೀವನ ಸುಧಾರಿಸಿದೆ. ಸಾಮಾನ್ಯ ಜನರ ಜೀವನ ಬಿಜೆಪಿ ಆಡಳಿತದಲ್ಲಿ ಕಷ್ಟವಾಗಿದೆ. ಗ್ಯಾರಂಟಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಸತ್ಯಕ್ಕೆ ದೂರವಾದುದು. ಎಲ್ಲೆಡೆ ಗ್ಯಾರಂಟಿಯ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿ ಕೊಟ್ಟು ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತೆ ಐದು ನ್ಯಾಯ ಗ್ಯಾರಂಟಿ ಕೊಡಲಿದ್ದೇವೆ. ಹತ್ತು ವರ್ಷಗಳಿಂದ ಬಿಜೆಪಿಯದ್ದು ಬರೀ ಸುಳ್ಳು. ಶಿರಸಿ ಮಾರಿಕಾಂಬೆಯ ಹೆಸರನ್ನೂ ಸರಿ ಹೇಳಲು ಮೋದಿಯೆಂಬ ಆ ಪುಣ್ಯಾತ್ಮನಿಗೆ ಬಂದಿಲ್ಲ. ಹಾಗಿದ್ದರೆ ಆ ಪುಣ್ಯಾತ್ಮ ಜನರಿಗೆ ಇನ್ನು ಏನು ನ್ಯಾಯ ಕೊಡುತ್ತಾರೆ? ಬೀಚ್ ಸೀಬರ್ಡ್ಗೆ ಹೋದರೂ ಸ್ಥಳೀಯರಿಗೆ ಉದ್ಯೋಗ ಕೊಟ್ಟಿಲ್ಲ. ನಮ್ಮದೇ ಜಾಗ ತೆಗೆದುಕೊಂಡು ಪರಿಹಾರವನ್ನೂ ಸರಿಯಾಗಿ ನೀಡಿಲ್ಲ. ಈಗ ಏನನ್ನೇ ಕೇಳಿದರೂ ಮೋದಿ ನಮಸ್ಕಾರ ಎನ್ನುತ್ತಾರೆ. ಮೋದಿ ನಮಸ್ಕಾರದಿಂದ ಮನೆ ನಡೆಯುತ್ತಾ? ಎಂದು ಪ್ರಶ್ನಿಸಿದರು.
ಸಂಸತ್ನಲ್ಲಿ ಒಂದೇ ಒಂದು ಬಾರಿ ಹೆಣ್ಣುಮಕ್ಕಳ ಪರವಾಗಿ ಬಿಜೆಪಿಗರು ಮಾತನಾಡಿಲ್ಲ. ಆರು ಬಾರಿ ಶಾಸಕರು, ಶಿಕ್ಷಣ ಸಚಿವರು, ಉಸ್ತುವಾರಿ ಮಂತ್ರಿ, ಸ್ಪೀಕರ್ ಆಗಿದ್ದ ಬಿಜೆಪಿ ಅಭ್ಯರ್ಥಿ ಕಾಗೇರಿಯವರು ಒಂದು ಶಾಲೆಯನ್ನಾದರೂ ಮಾಡಿದ್ದಾರಾ? ತಮ್ಮ ಸ್ವಂತ ಸ್ವಾರ್ಥಕ್ಕಾಗಿ ಬಿಜೆಪಿಗರು ಕೆಲಸ ಮಾಡುತ್ತಾರಷ್ಟೇ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ವಿಧಾನಸಭಾ ಚುನಾವಣಾ ಪೂರ್ವ ನೀಡಿದ್ದ ಐದು ಗ್ಯಾರಂಟಿ ಆಶ್ವಾಸನೆಯನ್ನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಬಡವರ ಪಕ್ಷ, ಬಡವರ ಬಗ್ಗೆ ಚಿಂತಿಸುವ ಪಕ್ಷ. ಈ ಬಾರಿ ನಮ್ಮ ಅಭ್ಯರ್ಥಿ ಡಾ.ಅಂಜಲಿಯವರಿಗೆ ಮತ ನೀಡುವ ಮೂಲಕ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವಾ, ಮಾಧ್ಯಮ ವಕ್ತಾರ ನಿಕೇತರಾಜ್ ಮೌರ್ಯ, ಪ್ರಭಾಕರ್ ಮಾಳ್ಸೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಜಿ.ಪಿ.ನಾಯ್ಕ, ಶಂಭು ಶೆಟ್ಟಿ ಮುಂತಾದವರಿದ್ದರು.