ಗದಗ: ನಿನ್ನೆ ರಾತ್ರಿ ಇಡೀ ಗದಗ ನಗರವೇ ಬೆಚ್ಚಿ ಬೀಳುವ ಘಟನೆ ನಡೆದಿದ್ದು ತಮ್ಮ ಮನೆಯಲ್ಲಿ ಮಲಗಿದ್ದ ನಾಲ್ಕು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ. ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರು ಜನರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ,
ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ( 27), ಸಂಬಂಧಿ ಪರಶುರಾಮ (55) ಪತ್ನಿ ಲಕ್ಷ್ಮಿ (45), ಅವರ ಪುತ್ರಿ ಆಕಾಂಕ್ಷಾ (16) ಮೃತಪಟ್ಟ ನತದೃಷ್ಟರು.
ಹೀನ ಕೃತ್ಯ ಎಸಗಿದ ನಂತರ ಕೊಲೆಗಡುಕರು ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದರು. ಶ್ವಾನದಳ, ಫೋರೆನ್ಸಿಕ್ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿವೆ. ಎಸ್ಪಿ ಬಿ ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಏಪ್ರಿಲ್ 17ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಕಳೆ ಕುಟುಂಬದ ಸಂಬಂಧಿಗಳೂ ಸಹ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಪ್ರಕಾಶ್ ಬಾಕಳೆ ಮತ್ತು ಇನ್ನಿತರರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಗದಗ ಎಸ್ಪಿ ಬಿಎಸ್ ನೇಮಗೌಡ, ತಡರಾತ್ರಿಯಲ್ಲಿ ಪ್ರಕಾಶ್ ಬಾಕಳೆ ಅವರ ಮನೆಯಲ್ಲಿ ನಾಲ್ಕು ಮಂದಿಯ ಕೊಲೆ ಆಗಿದೆ. ಈ ಬಗ್ಗೆ ಬಂದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದೇವೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಂಡಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ. ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮೃತರ ಸಂಬಂಧಿ ಪ್ರಕಾಶ್ ಬಾಕಳೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ನಡುರಾತ್ರಿ 2.45ರ ಸುಮಾರಿಗೆ ಯಾರೋ ಬಂದು ಬಾಗಿಲು ಬಡಿದರು. ಎದ್ದು ಬಂದು ಬಾಗಿಲು ತೆರೆಯಲು ಹೋದೆವು. ಆದರೆ ಯಾರು ಮಾತನಾಡಲಿಲ್ಲ. ಅನುಮಾನ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆವು. ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದರು. ಮನೆ ಎದುರು ಏನು ಆಗಿರಲಿಲ್ಲ. ಆದರೆ ಎರಡನೇ ಮಹಡಿಗೆ ಹಿಂದಿನಿಂದ ಎಂಟ್ರಿ ಕೊಟ್ಟು ಕೃತ್ಯ ನಡೆಸಿರುವುದು ಗೊತ್ತಾಯಿತು. ನಿನ್ನೆ ಮೃತ ಲಕ್ಷ್ಮೀ ಅವರ ಹುಟ್ಟಿದ ಹಬ್ಬ ಇತ್ತು, ರಾತ್ರಿ ಆಚರಣೆ ಮಾಡಿ ಮಲಗಿದ್ದೆವು. 16 ವರ್ಷದ ಬಾಲಕಿ ಅಂತನೂ ನೋಡದೆ ಬರ್ಬರವಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕೊಲೆ ನಡೆದ ಪ್ರಕಾಶ್ ಬಾಕಳೆ ಅವರ ನಿವಾಸಕ್ಕೆ ಸಚಿವ ಎಚ್.ಕೆ.ಪಾಟೀಲ್ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಕೊಲೆಗಾರರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದರು. ಆರೋಪಿಗಳನ್ನು ಕೂಡಲೆ ಬಂಧಿಸಲಾಗುವುದು ಎಂದು ಸಚಿವ ಹೆಚ್.ಕೆ ಪಾಟೀಲ್ ಭರವಸೆ ನೀಡಿದರು.