ಮಂಡ್ಯ: ಐದು ವರ್ಷಗಳ ಹಿಂದೆ ಸುಮಲತಾ ಗೆಲ್ಲಿಸಲು ಪಣತೊಟ್ಟು ಓಡಾಡಿದ್ದ ದರ್ಶನ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಹಲಗೂರಿಗೆ ಬೆಳಿಗ್ಗೆ ಆಗಮಿಸಿದ ದರ್ಶನ್ ಸ್ಟಾರ್ ಚಂದ್ರು ಜತೆಗೂಡಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದರು. ನಂತರ ಹಲವಾರು ಗ್ರಾಮಗಳಲ್ಲಿ ಸಾಗಿದ ರೋಡ್ ಶೋ ನೋಡಲು ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಹುಸ್ಕೂರು, ಹಾಡ್ಲಿ ಸರ್ಕಲ್, ಮಳವಳ್ಳಿ ಪಟ್ಟಣ, ಬೆಳಕವಾಡಿ, ಬೊಪ್ಪೇಗೌಡನಪುರ, ಸರಗೂರು ಹ್ಯಾಂಡ್ ಪೋಸ್ಟ್, ಪೂರಿಗಾಲಿ, ಟಿ ಕಾಗೇಪುರ ( ತಳಗವಾದಿ), ಬಂಡೂರು, ಹಿಟ್ಟನಹಳ್ಳಿ ಕೊಪ್ಪಲು, ಮಿಕ್ಕೆರೆ, ಕಿರಗಾವಲು ಸಂತೆಮಾಳ, ಚನ್ನಪಿಳ್ಳೆ ಕೊಪ್ಪಲು ಗ್ರಾಮಗಳಲ್ಲಿ ದರ್ಶನ್ ಅವರ ರೋಡ್ ಶೋ ನಡೆಯುತ್ತಿದೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿಬ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಸ್ವಾಭಿಮಾನದ ಹೋರಾಟ ನಡೆಸುವುದಾಗಿ ಘೋಷಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರ ಬೆನ್ನಿಗೆ ಜನಪ್ರಿಯ ಚಿತ್ರನಟರಾದ ದರ್ಶನ್ ಮತ್ತು ಯಶ್ ನಿಂತಿದ್ದರು. ಈ ಬಾರಿ ಸುಮಲತಾ ಬಿಜೆಪಿನಿಂದ ಟಿಕೆಟ್ ಕೇಳಿದರೂ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಕಳೆದ ಬಾರಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಧೈರ್ಯ ಸಾಲದೆ ಸುಮಲತಾ ಈ ಬಾರಿ ಚುನಾವಣಾ ಕಣದಿಂದ ಹೊರಗೆ ಉಳಿದಿದ್ದಾರೆ.
ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದರೂ ಮಂಡ್ಯದ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಪ್ರಚಾರದಲ್ಲಿ ಸುಮಲತಾ ಇದುವರೆಗೆ ಕಾಣಿಸಿಕೊಂಡಿಲ್ಲ. ಈಗ ಅವರು ತಮ್ಮ ಹಿರಿಯ ಮಗ ಎಂದೇ ಹೇಳಿಕೊಳ್ಳುವ ದರ್ಶನ್ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.