ಬೆಂಗಳೂರು: ಕರ್ನಾಟಕ ಈ ಬಾರಿ ಹಿಂದೆಂದೂ ಕಾಣದಂಥ ಬೇಸಿಗೆಯ ಧಗೆಯಲ್ಲಿ ಬೆಂದು ಹೋಗಿದ್ದು, ಯಾವಾಗ ಮಳೆ ಆರಂಭವಾಗುತ್ತದೋ ಎಂದು ಜನರು ಕಾಯುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ದಾಖಲಾಗಿದ್ದರೂ ಭೂಮಿ ತಂಪಾಗುವಂಥ ಜಡಿ ಮಳೆ ಇನ್ನೂ ರಾಜ್ಯದ ಬಹುತೇಕ ಭಾಗಗಳಲ್ಲಿ ಕಾಣಿಸಿಕೊಂಡಿಲ್ಲ.
ಆದರೆ ಒಂದು ಸಂತೋಷದ ವಿಷಯವೂ ಇದೆ. ಇಷ್ಟೆಲ್ಲ ಸುಡು ಬೇಸಿಗೆಯನ್ನು ಅನುಭವಿಸುತ್ತಿದ್ದರೂ ಸದ್ಯದಲ್ಲೇ ಮಳೆರಾಯ ಕರ್ನಾಟಕವನ್ನು ಹರಸಲಿದ್ದಾನೆ. ಗಮನಾರ್ಹ ವಿಷಯವೇನೆಂದರೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಧಾರಾಕಾರ ಮಳೆ ಬಂದು ಭೂಮಿಗೆ ತಂಪೆರೆಯಲಿದೆ.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮುಂಗಾರು ಮಳೆಯ ಪ್ರಮಾಣ ವಾಡಿಕೆಯ ಪ್ರಮಾಣವನ್ನು ಮೀರಲಿದೆ. ರಾಜ್ಯದ ಒಟ್ಟು ಸರಾಸರಿ ಮುಂಗಾರು ಮಳೆಯ ಪ್ರಮಾಣ 85.2 ಸೆಂ ಮೀ. ಈ ವರ್ಷ ಸರಾಸರಿ ಮಟ್ಟಕ್ಕಿಂತ ಹೆಚ್ಚು ಮಳೆಯಾಗಲಿದೆ. ಜೂನ್ ತಿಂಗಳ ಸರಾಸರಿ ಮಳೆ ಪ್ರಮಾಣ 19.9 ಸೆಂ.ಮೀ ಆದರೆ ಜುಲೈ ತಿಂಗಳ ಪ್ರಮಾಣ 27.1 ಸೆಂ.ಮೀ., ಆಗಸ್ಟ್ ಮತ್ತು ಸೆಪ್ಟೆಂಬರ್ ಮಳೆ ಪ್ರಮಾಣ ಕ್ರಮವಾಗಿ 22 ಸೆಂ.ಮೀ ಮತ್ತು 16.1 ಸೆಂ.ಮೀ. ಆದರೆ ಈ ಬಾರಿ ಈ ಸರಾಸರಿಗಳನ್ನು ಮೀರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
18 ರಿಂದ 20 ಏಪ್ರಿಲ್ ರವರೆಗೆ ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ ಜಿಲ್ಲೆಗಳಲ್ಲಿಅಲ್ಲಲ್ಲಿ ಚದುರಿದಂತೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ (ಮೂಲ: SDSC-SHAR).
ಈ ದಿನಗಳಲ್ಲಿ ಅದೇ ರೀತಿ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಗುಡುಗು ಸಮೇತ ಸಾಧಾರಣ ಮಳೆ ಬರುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಇದುವರೆಗೆ ಮಳೆಯಾಗದಿದ್ದರೂ ಇನ್ನು ಮೂರು ದಿನಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮೇ-ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಬಹುತೇಕ ಜಿಲ್ಲೆಗಳಲ್ಲಿ ಬಗೆಹರಿಯುವ ಸಾಧ್ಯತೆ ಇದೆ.