ಕನ್ನಡ ಸೇವೆಯನ್ನು ಮಾಡಿದ ಅಪರೂಪದ ನಟ ದ್ವಾರಕೀಶ್: ಮುಖ್ಯಮಂತ್ರಿ ಸಿದ್ದರಾಮಯ್ಯ

Most read

ಬೆಂಗಳೂರು : ನಿನ್ನೆ ಅಗಲಿದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಅಂತಿಮ ನಮನ ಸಲ್ಲಿಸಿದರು.

ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿಗಳು ಕನ್ನಡ ಸೇವೆಯನ್ನು ಮಾಡಿದ ಅಪರೂಪದ ನಟ ದ್ವಾರಕೀಶ್ ಎಂದು ಬಣ್ಣಿಸಿದರು.

ಕನ್ನಡ ಚಿತ್ರರಂಗಕ್ಕೆ ನಟ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ದ್ವಾರಕೀಶ್ ಅಪಾರ ಕೊಡುಗೆ ಹಾಗೂ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಹಾಸ್ಯನಟರಾಗಿ ಯಲ್ಲದೆ ನಾಯಕ ನಟರಾಗಿಯೂ ಉತ್ತಮ ಅಭಿನಯ ನೀಡಿದವರು ಎಂದರು.

ಡಾ: ರಾಜ್ ಕುಮಾರ್ ಮತ್ತು ಅವರ ಜೋಡಿ ಬಹಳ ಚೆನ್ನಾಗಿತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೂ ಕನ್ನಡ ಚಿತ್ರ ನಿರ್ಮಾಣ, ನಟನೆಯನ್ನು ಬಿಟ್ಟಿರಲಿಲ್ಲ. ಕಷ್ಟಗಳನ್ನು ಸಹಿಸಿ ಕನ್ನಡ ಚಿತ್ರರಂಗ ಬೆಳೆಯಲು ಕೊಡುಗೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು.

ದ್ವಾರಕೀಶ್‌ ಅವರು ಮೈಸೂರಿನ ಹುಣಸೂರಿನಲ್ಲಿ ಹುಟ್ಟಿದವರು. ತವರಿನ ಬಗ್ಗೆ ಬಹಳ ಪ್ರೇಮವಿತ್ತು. ಒಮ್ಮೆ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರಾಜಕೀಯ, ಸಿನಿಮಾ, ಸಾಮಾಜಿಕ ವಿಚಾರಗಳನ್ನು ಚರ್ಚೆ ಮಾಡಿದ್ದೆವು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದು ಸಂತಾಪ ವ್ಯಕ್ತಡಿಸಿದರು.

ನೇತ್ರದಾನ ಮೂಲಕ ಸಮಾಜಮುಖಿ ಕೆಲಸ
ಅವರ ಎರಡು ಕಣ್ಣುಗಳನ್ನು ದಾನಮಾಡಿರುವುದು ಶ್ಲಾಘನೀಯ. ಸತ್ತ ನಂತರವೂ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದರು.

ಕೆಲ ವರ್ಷಗಳ ಹಿಂದೆ ಅವರ ಧರ್ಮಪತ್ನಿಯವರು ಮೃತಪಟ್ಟ ದಿನವೇ ದ್ವಾರಕೀಶ್ ಅವರೂ ಮೃತಪಟ್ಟಿದ್ದು, ಅವರಿಬ್ಬರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.

More articles

Latest article