ನಾರಿಶಕ್ತಿಯ ಪ್ರದರ್ಶನ: ಕಣ್ಮನ ಸೂರೆಗೊಂಡ 75ನೇ ಗಣರಾಜ್ಯೋತ್ಸವ ಪೆರೇಡ್

Most read

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನೇತೃತ್ವದಲ್ಲಿ ನಡೆಯುತ್ತಿರುವ 75ನೇ ಗಣರಾಜ್ಯೋತ್ಸವ ಸಂಭ್ರಮ ಈ ಬಾರಿ ʻನಾರಿಶಕ್ತಿʼಯ ಪ್ರದರ್ಶನವಾಗಿ ಕಣ್ಮನ ಸೂರೆಗೊಂಡಿತು.

ಭಾರತದ ಸಾಂಸ್ಕೃತಿಕ ವೈವಿಧ್ಯ ಮತ್ತು ಮಿಲಿಟರಿ ಶಕ್ತಿ ಏಕಕಾಲಕ್ಕೆ ಪ್ರದರ್ಶನಗೊಳ್ಳುತ್ತಿರುವ ಇಂದಿನ ಗಣರಾಜ್ಯೋತ್ಸವ ಪೆರೇಡ್‌ ನಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೇಲ್‌ ಮ್ಯಾಕ್ರೋನ್‌ ಸೇರಿದಂತೆ ಸುಮಾರು ಹದಿಮೂರು ಸಾವಿರಕ್ಕೂ ಹೆಚ್ಚು ವಿಶೇಷ ಆಹ್ವಾನಿತರು ವರ್ಣರಂಜಿತ ಸಮಾರಂಭವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದೇ ಮೊದಲ ಬಾರಿಗೆ ನೂರಕ್ಕೂ ಹೆಚ್ಚು ಮಹಿಳಾ ಕಲಾವಿದರು ಶಂಖ, ನಾದಸ್ವರ, ನಗಾರಿ ಇತ್ಯಾದಿ ಭಾರತೀಯ ಸಂಗೀತ ವಾದ್ಯಗಳನ್ನು ಮೊಳಗಿಸಿ ಗಣರಾಜ್ಯೋತ್ಸವ ಪೆರೇಡ್‌ ಗೆ ಶುಭಾರಂಭ ನೀಡಿದರು.

ಕರ್ತವ್ಯಪಥದಲ್ಲಿ ನಡೆಯುತ್ತಿರುವ ಇಂದಿನ ಪೆರೇಡ್‌ ನಲ್ಲಿ ಎಲ್ಲ ಮೂರು ಸಶಸ್ತ್ರ ಪಡೆಗಳ ಮಹಿಳಾ ಸೈನಿಕರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಎದೆನಡುಗಿಸುವ ವಾಯುಪಡೆಯ ಕವಾಯತುಗಳನ್ನು ಸಹ ಮಹಿಳಾ ಪೈಲೆಟ್‌ ಗಳೇ ಮುನ್ನಡೆಸಿ ಗಮನ ಸೆಳೆಯುತ್ತಿದ್ದಾರೆ. ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ( ಸಿಎ ಪಿಎಫ್)‌ ಈ ಬಾರಿ ಕೇವಲ ಮಹಿಳಾ ಸೈನಿಕರನ್ನು ಮಾತ್ರ ಪೆರೇಡ್ಗೆ ಕಳುಹಿಸಿದೆ.

ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ ʻವಿಕಸಿತ್‌ ಭಾರತ್‌ʼ ಮತ್ತು ʻಭಾರತ್ – ಲೋಕ್ ತಂತ್ರ್‌ ಕೀ ಮಾತ್ರುಕಾʼ ಎಂಬ ಎರಡು ಮುಖ್ಯ ಥೀಮ್‌ ಅಡಿಯಲ್ಲಿ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಭೇಟಿ ನೀಡುವುದರೊಂದಿಗೆ ಈ ವರ್ಷದ ಗಣರಾಜ್ಯೋತ್ಸವ ಪೆರೇಡ್‌ ವಾಡಿಕೆಯಂತೆ ಆರಂಭಗೊಂಡಿತು. ಅಮರ್ ಜವಾನ್ ಸ್ಮಾರಕಕ್ಕೆ ಸ್ಮಾರಕಕ್ಕೆ ಮೋದಿ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. ಪ್ರಧಾನಿ ಮೋದಿಯವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಹಾಜರಾಗಿದ್ದರು.

ಕರ್ತವ್ಯಪಥದಲ್ಲಿ ಇಂದು ಫ್ರಾನ್ಸ್ ನ ಸಶಸ್ತ್ರಪಡೆಗಳ ಯೋಧರು ಭಾರತೀಯ ಯೋಧರೊಂದಿಗೆ ಬ್ಯಾಂಡ್‌ ಮೊಳಗಿಸಿದ್ದು ವಿಶೇಷವಾಗಿತ್ತು. ಫ್ರಾನ್ಸ್‌ನ ಎರಡು ರಫೇಲ್‌ ಫೈಟರ್‌ ಜೆಟ್‌ ಗಳು ಸಹ ವಾಯು ಕವಾಯತಿನಲ್ಲಿ ಪಾಲ್ಗೊಂಡಿದ್ದವು.

ಗಣರಾಜ್ಯೋತ್ಸವ ಪೆರೇಡ್ ನ ಮುಂಚೂಣಿಯಲ್ಲಿ ಭಾರತದ 61 ಅಶ್ವದಳ ತುಕಡಿ ಎಲ್ಲರ ಗಮನ ಸೆಳೆಯಿತು. ಮೇಜರ್‌ ಯಶದೀಪ್‌ ಅಹ್ಲಾವತ್‌ ಇದರ ನೇತೃತ್ವ ವಹಿಸಿಕೊಂಡಿದ್ದರು. ಕುದುರೆ ಸವಾರರ ಈ ಅಶ್ವದಳ 1953ರಲ್ಲಿ ಆರಂಭಗೊಂಡಿತ್ತು. ಜಗತ್ತಿನಲ್ಲಿ ಸದ್ಯ ಇರುವ ಏಕೈಕ ಅಶ್ವದಳ ಭಾರತದ 61 ಕ್ಯಾವಲ್ರಿ ಆಗಿದೆ.
ಭಾರತೀಯ ನೌಕಾದಳದ 144 ಮಹಿಳಾ ಮತ್ತು ಪುರುಷ ಅಗ್ನಿವೀರರು ಪೆರೇಡ್‌ ನಲ್ಲಿ ಪಾಲ್ಗೊಂಡಿದ್ದರು. ಲೆಫ್ಟಿನೆಂಟ್‌ ಮುದಿತಾ ಗೋಯಲ್‌ ಮತ್ತು ಲೆಫ್ಟಿನೆಂಟ್‌ ಪ್ರಜ್ವಲ್‌ ಎಂ, ಲೆಫ್ಟಿನೆಂಟ್‌ ದೇವಿಕಾ ಎಚ್‌, ಶರ್ವಾಣಿ ಸುಪ್ರಿಯಾ ಪ್ಲಾಟೂನ್ ಕಮ್ಯಾಂಡರ್‌ ಗಳಾಗಿದ್ದರು

ಭಾರತೀಯ ವಾಯುಪಡೆಯಿಂದಲೂ (IAF) 144 ಸೈನಿಕರು ಪೆರೇಡ್‌ ನಲ್ಲಿ ಭಾಗವಹಿಸಿದ್ದರು. ಸ್ಕ್ವಾಡ್ರನ್‌ ಲೀಡರ್‌ ರಶ್ಮಿ ಠಾಕೂರ್‌, ಸುಮಿತಾ ಯಾದವ್‌, ಪ್ರತಿತಿ ಅಹ್ಲುವಾಲಿಯಾ ಹಾಗು ಫ್ಲೈಟ್‌ ಲೆಫ್ಟಿನೆಂಟ್‌ ಕೀರ್ತಿ ರೋಹಿಲ್‌ ನೇತೃತ್ವ ವಹಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಈ ಬಾರಿಯ ಪೆರೇಡ್‌ ನಲ್ಲಿ ಗಮನ ಸೆಳೆಯುತ್ತಿದೆ. ಭೂಮಿ, ಗಾಳಿ, ಸಮುದ್ರ, ಸೈಬರ್‌ ಮತ್ತು ಅಂತರಿಕ್ಷ ಹೀಗೆ ಐದು ದಿಕ್ಕಿನಲ್ಲಿ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಮಹಿಳಾ ಶಕ್ತಿಯ ಪ್ರಾಮುಖ್ಯತೆಯನ್ನು ಬಿಂಬಿಸುವ ಟ್ಲಾಬ್ಲೋ ಪ್ರದರ್ಶಿಸಲಾಯಿತು.

More articles

Latest article