ಮುಂಬೈ:ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಅಭಿಪ್ರಾಯಕ್ಕೆ ತೀವ್ರ ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಯಾರೊಬ್ಬರೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಅವರು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಪರ ವಿರೋಧ ಚರ್ಚೆಗಳು ನಡೆದಿದ್ದವು. ಇಂದು ಈ ಬಗ್ಗೆ ಅವರು ಮುಂಬೈನ ಎಎಂಸಿಯ ಕಿಲಾಚಂದ್ ಸ್ಮಾರಕ ಉಪನ್ಯಾಸ ನೀಡುವಾಗ ಸ್ಪಷ್ಟೀಕರಣವನ್ನು ನೀಡಿದ್ದಾರೆ. ನೀವು ಇದನ್ನು ಮಾಡಬೇಕು, ಮಾಡಬಾರದು ಎಂದು ಹೇಳುವವರು ಯಾರೂ ಇಲ್ಲ. ನೀವೇ ಅದನ್ನು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಇನ್ಫೋಸಿಸ್ ಆರಂಭಿಸಿದ ಆರಂಭದ ವರ್ಷಗಳಲ್ಲಿ ನಾನು ಬೆಳಿಗ್ಗೆ 6:20ರಿಂದ ರಾತ್ರಿ 8:30ರವರೆಗೆ ಕೆಲಸ ಮಾಡುತ್ತಿದ್ದೆ. 40 ವರ್ಷಗಳ ಕಾಲ ನಾನು ಇದನ್ನು ಪಾಲಿಸಿಕೊಂಡು ಬಂದಿದ್ದೇನೆ. ಹಾಗಾಗಿ, ಯಾರೂ ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಆಯ್ಕೆಗಳು ವೈಯಕ್ತಿಕವಾಗಿರುತ್ತವೆ. ಸಾರ್ವಜನಿಕ ಚರ್ಚೆಗೆ ನಿಜವಾಗಿಯೂ ಸೂಕ್ತವಲ್ಲ ಇವೆಲ್ಲ ಚರ್ಚೆ ನಡೆಸಬೇಕಾದ ವಿಷಯಗಳೂ ಅಲ್ಲ. ಅಗತ್ಯತತೆಯನ್ನು ಅರಿತು ಆತ್ಮಾವಲೋಕನ ಮಾಡಿಕೊಂಡು ಏನನ್ನು ಮಾಡಬೇಕೆಂಬುದರ ಬಗ್ಗೆ ವೈಯಕ್ತಿಕ ನಿರ್ಧಾರ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಮತ್ತು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಹೆಚ್ಚು ದುಡಿಮೆಯ ಅಗತ್ಯವಿರುತ್ತದೆ. ಮಹತ್ವಾಕಾಂಕ್ಷೆ, ಚಾಣಾಕ್ಷತನ, ಶಿಸ್ತು ಮತ್ತು ಉತ್ತಮ ಮೌಲ್ಯಗಳನ್ನು ಇಟ್ಟುಕೊಂಡು ಶ್ರಮಪಟ್ಟು ದುಡಿಯುವ ಜನರು ಎಲ್ಲ ತೊಡಕುಗಳನ್ನು ಮೀರಿ ಯಶಸ್ವಿ ದೇಶವನ್ನು ಕಟ್ಟುತ್ತಾರೆ ಎಂದು ಜರ್ಮನಿಯ ಸಮಾಜವಾದಿ ಮ್ಯಾಕ್ಸ್ ವೆಬ್ಬರ್ ಅವರ ಮಾತುಗಳನ್ನು ಮೂರ್ತಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ದೇಶದ ಶೇ. 60ರಷ್ಟು ಜನರು ಈಗಲೂ ಉಚಿತ ಆಹಾರ ಧಾನ್ಯಗಳ ಮೇಲೆ ಅವಲಂಬಿತರಾಗಿದ್ದಾರೆ. ಅಂತಹ, ಬಡತನವು ಆರ್ಥಿಕವಾಗಿ ಬಲಿಷ್ಠ ದೇಶವನ್ನು ನಿರ್ಮಿಸುವುದಿಲ್ಲ.ಹಾಗೆಯೇ ಕಾರ್ಪೊರೇಟ್ ಸಂಸ್ಥೆಗಳ ದುರಾಸೆಯ ನಡವಳಿಕೆಯೂ ಜನರು ಬಂಡವಾಳಶಾಹಿಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.