ಬೆಂಗಳೂರು: ನಕ್ಸಲ್ ಮುಕ್ತ ರಾಜ್ಯವಾಗುವತ್ತ ಕರ್ನಾಟಕ ಹೆಜ್ಜೆ ಹಾಕುತ್ತಿದೆ. ಜನವರಿ 8, ಬುಧವಾರ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಪ್ರಮುಖ 6 ಮಂದಿ ನಕ್ಸಲರು ಶರಣಾಗತಿಯಾಗುವ ಸಾಧ್ಯತೆಗಳಿವೆ.
ಈ ನಕ್ಸಲರು ದಕ್ಷಿಣದ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದಾರೆ. ಈ ನಕ್ಸಲ್ ತಂಡದ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ ಸೇರಿದಂತೆ ಪ್ರಮುಖ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ. ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುತ್ಲೂರು ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಶರಣಾಗುವ ಪ್ರಮುಖ ನಕ್ಸಲರು. ಮಾಜಿ ನಕ್ಸಲ್ ನೂರ್ ಶ್ರೀಧರ್ ನೇತೃತ್ವದಲ್ಲಿ ಶರಣಾಗತಿಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಕುತ್ಲೂರು ಸುಂದರಿ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ರೂ ಮತ್ತು ಲತಾ ಅವರನ್ನು ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನಕ್ಸಲಿಸಂ ಚಟುವಟಿಕೆಗಳನ್ನು ತೊರೆದು ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದ್ದರು. ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್ ನಂತರ ರಾಜ್ಯದಲ್ಲಿ ನಕ್ಸಲರು ಭಯಭೀತರಾಗಿದ್ದಾರೆ. ವಿಕ್ರಂಗೌಡ ಹತ್ಯೆ ನಂತರ ಸಂಘಟನೆ ದುರ್ಬಲವಾಗಿದೆ ಎಂಬ ಮಾಹಿತಿ ಇದೆ.