ಕೈ ಶಾಸಕರಿಗೆ 50 ಕೋಟಿ ರೂ. ಆಮಿಷ; ಬಿಜೆಪಿ ಅಧ್ಯಕ್ಷ ವಿಜಯೇಂದ್ರ ತಿರುಗೇಟು

Most read

ಬೆಂಗಳೂರು:ಕೈ ಶಾಸಕರಿಗೆ 50 ಕೋಟಿ ರೂಪಾಯಿ ಆಮಿಷವೊಡ್ಡಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಆರೋಪಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.


ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಮಾನ್ಯ ಸಿದ್ದರಾಮಯ್ಯನವರೇ, ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ ಅದಕ್ಕಾಗಿಯೇ ₹50 ಕೋಟಿಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ. ಇದು ನೀವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ. ನಿಮ್ಮ ಈ ಹೇಳಿಕೆ ಶಾಸಕರುಗಳನ್ನು ಅಂಕೆಯಲಿಟ್ಟುಕೊಳ್ಳಲು ಹಾಗೂ ನಿಮ್ಮನ್ನು ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎನ್ನುವುದು ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೂ ಅರಿವಾಗುತ್ತದೆ ಎಂದಿದ್ದಾರೆ.


ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು ಅದರ ಘನತೆಯನ್ನು ಕುಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ, ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, ₹50 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿಯಾಗಿರುತ್ತದೆ. ಇಲ್ಲದಿದ್ದರೆ ನಿಮ್ಮ ಹೇಳಿಕೆ ಪುಡಾರಿಗಳು ನೀಡುವ ಬಾಲಿಶ ರಾಜಕೀಯ ಹೇಳಿಕೆಯಾಗುತ್ತದೆಯಷ್ಟೆ ಎಂದು ಹೇಳಿದ್ದಾರೆ.
ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು 50 ಕೋಟಿ ಆಮಿಷದ ಗಂಭೀರ ಆರೋಪ ಮಾಡಿರುವ ಹಿನ್ನಲೆಯಲ್ಲಿ ಸರ್ಕಾರ ಬೀಳಿಸಲು ಸಾವಿರಾರು ಕೋಟಿ ಬಂಡವಾಳ ಹೂಡಲು ತಯಾರಾಗಿರುವವರು ಯಾರು? ಎಂಬುದು ಬಹಿರಂಗವಾಗಬೇಕಿದೆ ಈ ನಿಟ್ಟಿನಲ್ಲಿ ಇ.ಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ತನಿಖೆ ನಡೆಸುವುದು ತುರ್ತು ಅಗತ್ಯವಿದೆ, ರಾಜ್ಯದ ಜನತೆಗೆ ಸತ್ಯ ತಿಳಿಯಬೇಕಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

More articles

Latest article