ಇದೇ ತಿಂಗಳ 27ರಂದು 42,345 ಮನೆ ಹಂಚಿಕೆ: ಸಚಿವ ಜಮೀರ್

Most read

ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ‘ಸರ್ವರಿಗೂ ಸೂರು’ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ನಿರ್ಮಿಸಲಾಗುತ್ತಿರುವ 1.82 ಲಕ್ಷ ಮನೆಗಳ ಪೈಕಿ, ಎರಡನೇ ಹಂತದಲ್ಲಿ 42,345 ಮನೆಗಳನ್ನು ಏಪ್ರಿಲ್‌ 27 ರಂದು ಹುಬ್ಬಳ್ಳಿಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಮನೆ ಹಂಚಿಕೆ ಕುರಿತು ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮೊದಲ ಹಂತದಲ್ಲಿ, ಕಳೆದ ವರ್ಷ ಫೆಬ್ರವರಿಯಲ್ಲಿ 36,789 ಮನೆ ಹಂಚಿಕೆ ಮಾಡಲಾಗಿತ್ತು ಎಂದು ಹೇಳಿದರು. ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಸಚಿವರು ಮತ್ತು ಶಾಸಕರು ಭಾಗವಹಿಸಲಿದ್ದಾರೆ ಎಂದರು. ಮುಖ್ಯಮಂತ್ರಿ ಹಂಚಿಕೆ ಮಾಡಲಿರುವ ಮನೆಗಳನ್ನು ಮೂಲಸೌಕರ್ಯ ಸಹಿತ ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಮೀರ್ ಹೇಳಿದರು.

2013ರಿಂದ 2023ರವರೆಗೆ 1.82 ಲಕ್ಷ ಮನೆ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಫಲಾನುಭವಿಗಳ ವಂತಿಗೆ ಪಾವತಿ ಕಷ್ಟವಾಗಿ ಮನೆಗಳು ಅರ್ಧಕ್ಕೆ ನಿಂತಿತ್ತು. ಮುಖ್ಯಮಂತ್ರಿ ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟು ಫಲಾನುಭವಿಗಳ ವಂತಿಗೆ ತಲಾ ರೂ. 4 ಲಕ್ಷವನ್ನು ಸರ್ಕಾರವೇ ಭರಿಸಿ ಮನೆ ನಿರ್ಮಾಣ ಪೂರ್ಣಗೊಳಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

More articles

Latest article