ನವದೆಹಲಿ: ಅಮೆರಿಕದಿಂದ ಗಡೀಪಾರಾಗಿರುವ 2008ರ 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ಹೊತ್ತ ವಿಶೇಷ ವಿಮಾನ ಇಂದು ಮಧ್ಯಾಹ್ನ ದೆಹಲಿಗೆ ಬಂದಿಳಿದಿದೆ. ರಾಣಾನನ್ನು ಹೊತ್ತ ವಿಮಾನವು ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಎನ್ ಐ ಎ, 64 ವರ್ಷದ ರಾಣಾನನ್ನು ಬಂಧಿಸಿದ್ದು, ದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಿದೆ.
ನ್ಯಾಯಾಲಯದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಭದ್ರತೆಗಾಗಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ನ್ಯಾಯಾಲಯದ ಹೊರಗೆ ಅರೆಸೇನಾ ಪಡೆಗಳು ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಣಾನನ್ನು ತಿಹಾರ್ ಜೈಲಿನಲ್ಲಿ ಬಂಧಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಮತ್ತು 2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟವರ್ತಿಯಾಗಿದ್ದಾನೆ.
2008 ರ ಮುಂಬೈ ದಾಳಿಯ ಪ್ರಮುಖ ಆರೋಪಿ ರಾಣಾ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದರಿಂದ ಗಡೀಪಾರಿನಿಂದ ತಪ್ಪಿಸಿಕೊಳ್ಳುವ ಆತನ ಕೊನೆಯ ಪ್ರಯತ್ನ ವಿಫಲವಾಗಿತ್ತು.