ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಗಡೀಪಾರು ಮಾಡಲು ಇದ್ದ ಎಲ್ಲ ಅಡೆತಡೆಗಳನ್ನು ಅಮೆರಿಕ ತೆಗೆದುಹಾಕಿದ ನಂತರ ಇಂದು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ. ಪಾಕಿಸ್ತಾನ ಮೂಲದ ಕೆನಡಾದ ಪ್ರಜೆ 64 ವರ್ಷದ ರಾಣಾ ಅವರನ್ನು ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿರಿಸಲಾಗಿತ್ತು.
ಭಾರತದ ಏಜೆನ್ಸಿ ತಂಡದ ಅಧಿಕಾರಿಗಳು ಅಮೆರಿಕಕ್ಕೆ ತೆರಳಿದ್ದಾರೆ. ರಾಣಾನನ್ನು ಭಾರತಕ್ಕೆ ಕರೆತರಲು ಎಲ್ಲ ದಾಖಲೆಗಳು ಮತ್ತು ಕಾನೂನು ಸಮಸ್ಯೆಗಳನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಪೂರ್ಣಗೊಳಿಸಿದ ನಂತರ ಕರೆತರಲಾಗುತ್ತಿದೆ. ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ರಾಣಾ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಗಡೀಪಾರು ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನ ವಿಫಲವಾಗಿದೆ..
64 ವರ್ಷದ ತಹವ್ವೂರ್ ಹುಸೇನ್ ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಿಚಾವತ್ನಿ ನಗರದಲ್ಲಿ ಜನಿಸಿದ್ದ ಈತ ವೈದ್ಯಕೀಯ ಅಧ್ಯಯನ ಪೂರ್ಣಗೊಳಿಸಿ ನಂತರದಲ್ಲಿ ಪಾಕಿಸ್ತಾನ ಸೇನೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ನಂತರದಲ್ಲಿ ಪಾಕ್ ಸೇನೆಯನ್ನು ತೊರೆದು ಕೆನಡಾಗೆ ವಲಸೆ ಹೋಗಿ ಅಲ್ಲಿಯ ಪೌರತ್ವವನ್ನು ಪಡೆದುಕೊಂಡಿದ್ದ. 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹಚರನೂ ಹೌದು. ಅಮೆರಿಕದಲ್ಲಿ ಬಂಧನಕ್ಕೀಡಾದ 16 ವರ್ಷಗಳ ಬಳಿಕ ಉಗ್ರನನ್ನು ಹಸ್ತಾಂತರ ಮಾಡಿದಂತಾಗಿದೆ.
2008ರ ನವೆಂಬರ್ 26ರಂದು, 10 ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಅರಬ್ಬಿ ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿ ರೈಲ್ವೆ ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳು ಮತ್ತು ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿತ್ತು. ಸುಮಾರು 60 ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ 166 ಜನರು ಮರಣ ಹೊಂದಿದ್ದರು. ಸೆರೆಸಿಕ್ಕಿದ್ದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು 2012ರಲ್ಲಿ ಪುಣೆಯ ಯೆರವಡಾ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.