ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು 200 ಕಟ್ಟಡಗಳು ಬೈಲಾನಿಯಮಗಳನ್ನು ಉಲ್ಲಂಘಿಸಿದ್ದು, ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಅಕ್ರಮ ಕಟ್ಟಡಗಳನ್ನು ಪತ್ತೆ ಹಚ್ಚಲು ಕಿರಿಯ ಹಾಗೂ ಸಹಾಯಕ ಎಂಜಿನಿಯರ್ ಗಳು ಸೇರಿದಂತೆ ಹೊರಗುತ್ತಿಗೆ ಆಧಾರದಲ್ಲಿ 70 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಈಗಾಗಲೇ ಮಹದೇವಪುರದಲ್ಲಿ 65 ಹಾಗೂ ಪಶ್ಚಿಮ ವಲಯದಲ್ಲಿ 27 ಕಟ್ಟಡಗಳು ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವುದು ಪತ್ತೆಯಾಗಿದೆ.
ಇದುವರೆಗೂ ನಿಯಮ ಉಲ್ಲಂಘಿಸಿರುವ 200 ಕಟ್ಟಡಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಬಿದ್ದು 9 ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಿಂದ ಅಕ್ರಮ ಕಟ್ಟಡಗಳ ಸಮೀಕ್ಷೆಯನ್ನು ಪಾಲಿಕೆ ಆರಂಭಿಸಿದೆ.
ನಿಯಮಗಳನ್ನು ಉಲ್ಲಂಘಿಸಿರುವ ಅಕ್ರಮ ಕಟ್ಟಡಗಳನ್ನು ಗುರುತಿಸಲು ಆಪ್ ಬಳಸಲಾಗುತ್ತಿದೆ. ಈ ಮೂಲಕ ಕಟ್ಟಡಗಳ ನಕ್ಷೆ, ಮೂಲ ನಕ್ಷೆಯನ್ನು ಬದಲಾಯಿಸಿ ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಕಟ್ಟಡದ ಭಾವಚಿತ್ರವನ್ನು ಅಪ್ ಲೋಡ್ ಮಾಡುತ್ತಿದ್ದಂತೆ ಆಪ್ ಆಸ್ತಿಯ ವಿವರಗಳನ್ನು ಒದಗಿಸುತ್ತದೆ. ಇದರಿಂದ ಉಲ್ಲಂಘನೆ ಮಾಡಲಾಗಿದೆಯೇ ಇಲ್ಲವೇ ಎನ್ನುವುದು ಪತ್ತೆಯಾಗುತ್ತದೆ.