Sunday, July 14, 2024

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ; ಫೆ.29 ರಿಂದ ಆರಂಭ, ಈ ಭಾರಿಯ ವಿಶೇಷವೇನು?

Most read

ಪ್ರತಿಷ್ಠಿತ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಮತ್ತೆ ಬಂದಿದೆ. 15ನೇ ಬೆಂಗಳೂರು ಫಿಲಂ ಫೆಸ್ಟ್ ಫೆ.29 ರಿಂದ ಮಾರ್ಚ್ 7 ರವರೆಗೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವ ಹಲವು ಕಾರಣಗಳಿಗೆ ಮುಖ್ಯವಾದುದಾಗಿದೆ. ಈ ಬಾರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಂದ. ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದ ಸಿನಿಮಾಗಳೂ ಸೇರಿದಂತೆ 180 ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತರು, ಕಾನ್ (ಫ್ರಾನ್ಸ್), ಬರ್ಲಿನ್(ಜರ್ಮನಿ), ಕಾರ್ಲೋ ವಿವಾರಿ(ಜೆಕ್‌ರಿಪಬ್ಲಿಕ್. ಲೊಕಾರ್ನೊ (ಸ್ವಿಟ್ಸರ್ಲೆಂಡ್), ರಾಟರ್‌ಡ್ಯಾಮ್ (ನೆದ‌ಲ್ಯಾಂಡ್), ಬೂಸಾನ್ (ದಕ್ಷಿಣ ಕೊರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾಪ್ರಿಯರಿಗೆ ದೊರೆಯುತ್ತವೆ.

ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಹಲವು ವೈಶಿಷ್ಟ್ಯಗಳಿವೆ. ಕನ್ನಡ ಚಲನಚಿತ್ರರಂಗಕ್ಕೆ 90 ವರ್ಷ ತುಂಬಲಿದ್ದು, ಈ ಸಂಭ್ರಮಾಚರಣೆಯನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಚರಿಸಲಾಗುತ್ತಿದೆ. ಕನ್ನಡ ಚಿತ್ರಗಳು ಪ್ರಸ್ತುತ ಸಂದರ್ಭದಲ್ಲಿ ವಿಶ್ವದ ಎಲ್ಲ ಕಡೆ ಜನಪ್ರಿಯವಾಗುತ್ತಿದ್ದು ಕನ್ನಡ ಚಿತ್ರರಂಗ ನಡೆದು ಬಂದ ದಾರಿ, ಹಾಗೂ ಕನ್ನಡದಲ್ಲಿ ಮೈಲುಗಲ್ಲು ಸ್ಥಾಪಿಸಿದ ಚಾರಿತ್ರಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿವಾದಿಸುವ ವಿಶೇಷ ಚಲನಚಿತ್ರಗಳ ಉತ್ಸವವನ್ನು ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದೆ. ಅಲ್ಲದೆ ಕರ್ನಾಟಕ ಎಂದು ನಾಮಕರಣಗೊಂಡ ನೆನಪಿಗೆ ಕರ್ನಾಟಕ 50 ಸುವರ್ಣ ಸಂಭ್ರಮ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಹಿರಿಮೆಯನ್ನು ಸಾರುವ ಕಾರ್ಯಕ್ರಮ ಸಂಯೋಜಿಸಲಾಗಿದೆ.

ಫೆಬ್ರವರಿ 29 ರಂದು ವಿಧಾನಸೌಧದ ಎದುರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ ಒಂದರಿಂದ ರಾಜಾಜಿನಗರದಲಿರುವ ಒರಾಯನ್ ಮಾಲ್‌ನ 11 ಪರದೆಗಳಲ್ಲಿ ಪ್ರದರ್ಶನ ನಡೆಯಲಿದೆ. ಫೆಬ್ರವರಿ 7ರಂದು ಸಮಾರೋಪ ಸಮಾರಂಭ ಮತ್ತು ಏಷಿಯನ್, ಭಾರತೀಯ ಹಾಗೂ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ 800 ರೂ, ಚಿತ್ರೋದ್ಯಮದ ಸದಸ್ಯರಿಗೆ 400 ರೂ, ಹಿರಿಯ ನಾಗರಿಕರಿಗೆ 400 ರೂ ಟಿಕೆಟ್ ದರ ನಿಗದಿಪಡಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರೋತ್ಸವ ಸಮಿತಿಯ ಅಧ್ಯಕ್ಷ ಕೆ.ವಿ. ತ್ರಿಲೋಕ್ ಚಂದ್ರ. ‘ವಿಧಾನಸೌಧದ ಮುಂಭಾಗ ಫೆ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ‘ಸಿಂಹಾಸನ್’, ‘ಸಾಮ್ಮಾ’, ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್’ ಸಿನಿಮಾ ಖ್ಯಾತಿಯ ನಿರ್ದೇಶಕ ಜಬ್ಬಾರ್ ಪಟೇಲ್, ನಟ ಶಿವರಾಜ್‌ಕುಮಾರ್, ಬಾಂಗ್ಲಾದೇಶದ ನಟಿ ಅಜಮೇರಿ ಬಂದೋನ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿ 50ಕ್ಕೂ ಅಧಿಕ ದೇಶಗಳ 185 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

‘ಈ ಋತುವಿನ ಭಾರತದ ಯಾವುದೇ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣದ 30ಕ್ಕೂ ಅಧಿಕ ಭಾರತೀಯ ಸಿನಿಮಾಗಳು ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಾಣಲಿವೆ. ಈ ಬಾರಿಯ 21 ತೀರ್ಪುಗಾರರ ಪೈಕಿ 9 ಮಹಿಳೆಯರಿದ್ದರು. ಈ ಪೈಕಿ ಹಲವರು ವಿದೇಶದವರು. ಜೊತೆಗೆ ಈ ಬಾರಿಯ ವಿಚಾರ ಸಂಕಿರಣಗಳು, ಸಂವಾದ, ಉಪನ್ಯಾಸ, ಕಾರ್ಯಾಗಾರಗಳಲ್ಲಿ ಸಿನಿಮಾ ರಂಗದಲ್ಲಿ ಇರುವ 52ಕ್ಕೂ ಅಧಿಕ ಮಹಿಳೆಯರು ಭಾಗವಹಿಸಲಿದ್ದಾರೆ. ‘ಭಾರತೀಯ ಸಾಂವಿಧಾನಿಕ ಮೌಲ್ಯಗಳು ಮತ್ತು ಭಾರತೀಯ ಸಿನಿಮಾ’ ಎಂಬ ವಿಷಯದಡಿ ನಿರ್ದೇಶಕ ಜಬ್ಬಾರ್ ಪಟೇಲ್ ಉಪನ್ಯಾಸ ನೀಡಲಿದ್ದಾರೆ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌.ವಿದ್ಯಾಶಂಕ‌ರ್ ತಿಳಿಸಿದರು.

‘ಈಗಾಗಲೇ 2 ಸಾವಿರ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಒರಾಯನ್ ಮಾಲ್‌, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಡಾ.ರಾಜ್‌ಕುಮಾರ್ ಭವನ ಹಾಗೂ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಅಕಾಡೆಮಿಯಲ್ಲಿ ಸಿನಿಮಾ ಪ್ರದರ್ಶನಗಳು ನಡೆಯಲಿವೆ’ ಎಂದು ಸಮಿತಿಯ ಉಪಾಧ್ಯಕ್ಷ ಹೇಮಂತ ಎಂ. ನಿಂಬಾಳ್ಳ‌ರ್ ತಿಳಿಸಿದರು.

ತಲಾ 12 ಚಿತ್ರಗಳು: ಚಿತ್ರೋತ್ಸವದಲ್ಲಿ ಏಷ್ಯನ್, ಚಿತ್ರಭಾರತಿ ಹಾಗೂ ಕನ್ನಡ ಸಿನಿಮಾ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳಿದ್ದು, ಪ್ರತಿ ವಿಭಾಗದಲ್ಲಿ 12 ಚಿತ್ರಗಳು ನಾಮನಿರ್ದೇಶನಗೊಂಡಿವೆ. ಈ ಪೈಕಿ ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಏಷ್ಯನ್ ವಿಭಾಗದಲ್ಲಿ ಹಾಗೂ ಶಿಶಿರ್ ರಾಜಮೋಹನ್ ನಿರ್ದೇಶನದ ‘ಅಬ್ರಕಡಾಬ್ರ’ ಸಿನಿಮ್ಮಾಚಿತ್ರಭಾರತಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

More articles

Latest article