ಬಿಜೆಪಿ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು 1200 ಕೋಟಿ ರುಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಕುರಿತು ಕಾಂಗ್ರೆಸ್ ಪಕ್ಷ ದೂರು ದಾಖಲಿಸಲಿದೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆ.ಪಿ.ಸಿ.ಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಗಂಭೀರವಾದ ಆರೋಪ. ಪಕ್ಷ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಈ ಆರೋಪ ಮಾಡುವಾಗ ಬಿಜೆಪಿಯ ಹಲವು ಶಾಸಕರು, ಮುಖಂಡರೂ ಅವರ ಜೊತೆಗಿದ್ದರು. ಪಕ್ಷ ಸಂಬಂಧಪಟ್ಟ ಇಲಾಖೆಯಲ್ಲಿ ದೂರು ದಾಖಲಿಸಲಿದೆ ಎಂದು ಅವರು ಹೇಳಿದರು.
ಯತ್ನಾಳ್ ನೀಡಿರುವ ಹೇಳಿಕೆಯ ಬಗ್ಗೆ ಐಟಿ ಇಲಾಖೆ ತನಿಖೆ ಮಾಡಬೇಕು. ಇನ್ನು ಬಿಜೆಪಿ ಪ್ಲ್ಯಾನ್ ಗೆ ನಾವೂ ಪ್ಲ್ಯಾನ್ ಆಫ್ ಆ್ಯಕ್ಷನ್ ರೆಡಿ ಮಾಡ್ತಿದ್ದೇವೆ. ಅದು ಏನಂತ ಆಮೇಲೆ ಹೇಳ್ತೇವೆ ಎಂದು ತಿಳಿಸಿದರು