ʼಧರ್ಮದಾವರಣದೊಳಗಿದ್ದು ಆಂತರಿಕ ವಿಮರ್ಶೆ ಮಾಡುವುದೂ ಮುಖ್ಯ’-ಝಕಿಯಾ ಸೋಮನ್

Most read

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾರ್ಚ್ 7, 8ರಂದು ನಡೆಯಲಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ 13ನೇ ಸಮಾವೇಶದ ಹಕ್ಕೊತ್ತಾಯ ಜಾಥಾದಲ್ಲಿ ಲೇಖಕಿ, ಬರಹಗಾರ್ತಿ, ಸಂಘಟಕಿ ಝಕಿಯಾ ಸೋಮನ್ ಪಾಲ್ಗೊಳ್ಳಲಿದ್ದಾರೆ. ಅವರನ್ನು ಸಂದರ್ಶಿಸಿದ್ದಾರೆ ಡಾ.ಎಚ್‌ ಎಸ್‌ ಅನುಪಮಾ.

ಗುಜರಾತಿನ ಅಹಮದಾಬಾದಿನ ಝಕಿಯಾ 2002ರಲ್ಲಿ ಗುಜರಾತನ್ನು ಬಾಧಿಸಿದ ಕೋಮುದಳ್ಳುರಿಯ ಸಮಯದಲ್ಲಿ ಕ್ರಿಯಾಶೀಲರಾದರು. ಬಡ, ಅಧಿಕಾರಹೀನ, ಅನಕ್ಷರಸ್ಥ ಮುಸ್ಲಿಂ ಮಹಿಳೆಯರೂ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುವುದನ್ನು ನೋಡಿ ಹಿಂಸಾತ್ಮಕವಾಗಿದ್ದ ತನ್ನ ವಿವಾಹ ಬಂಧನದಿಂದ ಹೊರಬಂದರು. ಮಗ ಅರಸ್ತುವಿನೊಡನೆ ಏಕಾಂಗಿಯಾಗಿ ಹೊಸ ಬದುಕು ಕಟ್ಟಿಕೊಂಡರು. ಸಾಮಾಜಿಕ ಹೋರಾಟದ ಬದುಕಿಗೆ ತೆರೆದುಕೊಂಡರು. ಬೋಧನೆಯ ಕೆಲಸ ಬಿಟ್ಟು ಪೂರ್ಣಕಾಲಿಕ ಹೋರಾಟಗಾರ್ತಿಯಾದರು. ಕೋಮುಗಲಭೆಯ ಸಂತ್ರಸ್ತರ ಪರಿಹಾರ, ಪುನರ್ವಸತಿಗಾಗಿ, ನ್ಯಾಯಕ್ಕಾಗಿ, ಸಾಮಾಜಿಕ ಸಾಮರಸ್ಯಕ್ಕಾಗಿ, ಮುಸ್ಲಿಂ ಮಹಿಳೆಯರ ಸಮಾನ ಹಕ್ಕುಗಳ ಹೋರಾಟಕ್ಕಾಗಿ `ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್’ವನ್ನು (ಬಿಎಂಎಂಎ) ಸಹಭಾಗಿಗಳೊಂದಿಗೆ ಆರಂಭಿಸಿದರು. ಮುಂಬೈಯ ಪ್ರಸಿದ್ಧ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧ ತೆರವುಗೊಳಿಸಲು ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿ 2016ರಲ್ಲಿ ಪ್ರವೇಶಾವಕಾಶದ ತೀರ್ಪು ಪಡೆದರು. ತ್ರಿವಳಿ ತಲಾಖ್‍ನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ಅರ್ಜಿದಾರರಲ್ಲಿ ಅವರೂ ಒಬ್ಬರು. ಸಂಘಟಿತ ಹೋರಾಟದ ಫಲವಾಗಿ 2017ರಲ್ಲಿ ನ್ಯಾಯಾಲಯವು ತ್ರಿವಳಿ ತಲಾಖನ್ನು ಅಮಾನ್ಯ ಮಾಡಿತು. ಪ್ರಸ್ತುತ 50 ಸಾವಿರ ಸದಸ್ಯರಿರುವ ಬಿಎಂಎಂಎ, ಸೂಕ್ತ ಧಾರ್ಮಿಕ ಶಿಕ್ಷಣ ನೀಡಿ 30 ಮಹಿಳಾ ಖಾಜಿಗಳನ್ನು ರೂಪಿಸಿದೆ.

ಝಕಿಯಾ ಸೋಮನ್

ಪ್ರಸ್ತುತ ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳು, ಕೋಮುಸೌಹಾರ್ದದ ಸಲುವಾಗಿ ವಿಭಿನ್ನ ನೆಲೆಗಳಲ್ಲಿ ಸಂಘಟನೆ, ವ್ಯಕ್ತಿಗಳೊಡನೆ ಕೆಲಸ ಮಾಡುತ್ತಿದ್ದಾರೆ. `ಸೆಂಟರ್ ಫಾರ್ ಪೀಸ್ ಸ್ಟಡೀಸ್’ (ಸಿಪಿಎಸ್) ಆರಂಭಿಸಿದ್ದಾರೆ. ದಕ್ಷಿಣ ಏಷ್ಯಾ ಬಡತನ ನಿರ್ಮೂಲನಾ ಮೈತ್ರಿ ಕೂಟದ ಭಾರತ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌, ಹಿಂದೂಸ್ತಾನ್ ಟೈಮ್ಸ್, ಫ್ರಂಟ್‍ಲೈನ್ ಮುಂತಾದ ಪತ್ರಿಕೆ, ನಿಯತಕಾಲಿಕ, ಸಾಮಾಜಿಕ ಜಾಲತಾಣಗಳಲ್ಲಿ ಅಂಕಣಕಾರ್ತಿಯಾಗಿದ್ದಾರೆ. ಡಾ. ನೂರ್‌ಜಹಾನ್ ಸಫಿಯಾ ನಿಯಾಜರೊಡನೆ ಸಮುದಾಯ ಮಟ್ಟದ ಸಂಶೋಧನಾತ್ಮಕ ಅಧ್ಯಯನ ನಡೆಸಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಅವರಿಬ್ಬರೂ ಪ್ರಕಟಿಸಿರುವ ಸಂಶೋಧನಾತ್ಮಕ ಪುಸ್ತಕಗಳಿವು:

1. ರಿಕ್ಲೇಮಿಂಗ್ ಸೇಕ್ರೆಡ್ ಪ್ಲೇಸಸ್: ಮುಸ್ಲಿಂ ವಿಮೆನ್ಸ್ ಸ್ಟ್ರಗಲ್ ಫಾರ್ ಎಂಟ್ರಿ ಇನ್ ಟು ಹಾಜಿ ಅಲಿ ದರ್ಗಾ. (2017).

2. ಇಂಡಿಯನ್ ಮುಸ್ಲಿಂ ವಿಮೆನ್ಸ್ ಮೂವ್ಮೆಂಟ್: ಫಾರ್ ಜಂಡರ್ ಜಸ್ಟಿಸ್ ಅಂಡ್ ಈಕ್ವಲ್ ಸಿಟಿಜನ್‍ಶಿಪ್. 2020.

3. ಕರೇಜ್ ಅನ್ಲಾಕಡ್:  2021.

4. ಸ್ಟೇಟಸ್ ಆಫ್ ವಿಮೆನ್ ಇನ್ ಪಾಲಿಗೆಮಸ್ ಮ್ಯಾರೇಜಸ್ ಅಂಡ್ ನೀಡ್ ಫಾರ್ ಲೀಗಲ್ ಪ್ರೊಟೆಕ್ಷನ್. (2022).

5. ಸೀಕಿಂಗ್ ಜಸ್ಟಿಸ್ ವಿದಿನ್ ಫ್ಯಾಮಿಲಿ: ಎ ನ್ಯಾಷನಲ್ ಸ್ಟಡಿ ಆನ್ ಮುಸ್ಲಿಂ ವಿಮೆನ್ಸ್ ವ್ಯೂಸ್ ಆನ್ ರಿಫಾಮ್ರ್ಸ್ ಇನ್ ಮುಸ್ಲಿಂ ಪರ್ಸನಲ್ ಲಾ. (2023).‌

ಝಕಿಯಾ ಅವರೊಡನೆ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ:

ನಿಮ್ಮ ಬಾಲ್ಯ, ಕುಟುಂಬ, ವಿದ್ಯಾಭ್ಯಾಸ, ವಿವಾಹ..

ತಂದೆಮನೆಯ ಅಜ್ಜ ಬಟ್ಟೆ ಗಿರಣಿಯ ನೌಕರರಾಗಿದ್ದರು. ತಾಯಿಮನೆಯವರದು ಎಜುಕೇಶನಿಸ್ಟ್ಸ್ ಕುಟುಂಬ. ಮುತ್ತಜ್ಜಿ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಅಜ್ಜ, ಅಜ್ಜಿಯರೂ ಶಿಕ್ಷಕ ವೃತ್ತಿಯಲ್ಲಿದ್ದರು. ತಂದೆ ಕಾಲೇಜೊಂದರ ಪ್ರಾಂಶುಪಾಲರಾಗಿದ್ದರು. ಅಮ್ಮ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದರು. ನಾಲ್ಕು ಮಕ್ಕಳಲ್ಲಿ ನಾನು ಹಿರಿಯವಳು. ಅತಿ ಸಾಂಪ್ರದಾಯಿಕವಲ್ಲದ, ಆಧುನಿಕತೆಗೆ ತೆರೆದುಕೊಂಡ ಕುಟುಂಬ ನಮ್ಮದು. ಗುಜರಾತಿ ಮಾಧ್ಯಮದಲ್ಲಿ ಓದಿದೆ. ಬಳಿಕ ಇಂಗ್ಲಿಷ್ ಮೇಜರ್ ತೆಗೆದುಕೊಂಡೆ. ಗುಜರಾತ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬೋಧಿಸತೊಡಗಿದೆ. ಮೇಲ್ವರ್ಗದ ವ್ಯಕ್ತಿಯೊಂದಿಗೆ ಮದುವೆಯಾಯಿತು. ಅವಮಾನ, ಹೀಗಳಿಕೆ, ಹಿಂಸೆ, ಭಯೋತ್ಪಾದನೆಯ ನರಕಸದೃಶ ಬದುಕನ್ನು ಕುಟುಂಬ ಮರ್ಯಾದೆ ಕಾಪಾಡಲು ಹಲ್ಲುಕಚ್ಚಿ ಸಹಿಸಿದೆ. ಹೊರಬರುವುದೂ ಸುಲಭವಿರಲಿಲ್ಲ. ಸಮಾಜ, ಸಂಸ್ಕೃತಿ, ಪರಂಪರೆ, ಧರ್ಮ ಎಲ್ಲವೂ ಹೆಣ್ಣು ಮೌನವಾಗಿರಲು, ಇರುವುದನ್ನು ಒಪ್ಪಿಕೊಳ್ಳಲು ಒತ್ತಾಯಿಸುತ್ತವೆ. ಆ ವಿಷವರ್ತುಲದಿಂದ ಹೊರಬರಲು ಹದಿನಾರು ವರ್ಷ ಹಿಡಿಯಿತು. ಬದುಕಿನ ಅಮೂಲ್ಯ ಭಾಗ, ಅರಸ್ತುವಿನ ಸಂಪೂರ್ಣ ಬಾಲ್ಯ ಹಿಂಸೆ, ಭಯದ ಉಸಿರುಗಟ್ಟಿಸುವ ವಾತಾವರಣದಲ್ಲಿ ಕಳೆದುಹೋಯಿತು.

2002ರಲ್ಲಿ ಗುಜರಾತ್ ಕೋಮುಗಲಭೆ ಸಂಭವಿಸಿದಾಗ ನೂರಾರು ಅತ್ಯಂತ ಬಡ, ಅಸಹಾಯಕ ಮಹಿಳೆಯರು ನನ್ನ ಬಳಿ ಬಂದರು. ಅವರಿಗಾಗಿ ಕೆಲಸ ಮಾಡುತ್ತ ಒಳಗಿನಿಂದ ಧೈರ್ಯ ಎದ್ದುಬಂತು. ನೊಂದ ಮಹಿಳೆಯರ ಹೋರಾಟದ ಕೆಚ್ಚು ನನ್ನನ್ನು ಸಾಮಾಜಿಕ ಕಾರ್ಯಕರ್ತೆಯಾಗಿ ಬದಲಾಯಿಸಿತು. ಲೋಕದೆದುರು ಭ್ರಮೆಯ `ಸುಖೀ ಕುಟುಂಬ’ದ ಬದುಕನ್ನು ತೋರಿಸಲು ಕೌಟುಂಬಿಕ ದೌರ್ಜನ್ಯ ಸಹಿಸಿ ಮೌನವಾಗಿರುವುದು ಅಸಾಧ್ಯವೆನಿಸಿತು. ಹಿಂಸಾತ್ಮಕ ವಿವಾಹ ಬಂಧನದಿಂದ ಹೊರಬರಲು ನಿರ್ಧರಿಸಿದೆ. 2003ರಲ್ಲಿ ವಿಚ್ಛೇದನೆ ಪಡೆದೆ. ಬಳಿಕ ಕೇರಳ ಮೂಲದ ಸೋಮನ್ ನಂಬಿಯಾರರ ಭೇಟಿಯಾಯಿತು. ನಾನೇನಾಗಬೇಕೆಂದು, ಮಾಡಬೇಕೆಂದು ಬಯಸುವೆನೋ ಅದೆಲ್ಲಕ್ಕೂ ಬೇಷರತ್ ಬೆಂಬಲ ನೀಡುವ, ನನ್ನನ್ನು ಅರ್ಥ ಮಾಡಿಕೊಂಡ ಬಾಳಸಂಗಾತಿ ದೊರಕಿದರು. ಹದಿನೆಂಟು ವರ್ಷಗಳಿಂದ ಖುಷಿಯಿಂದ ಜೊತೆಗಿದ್ದೇವೆ. ನನ್ನ ಮಗ, ಅವರ ಮಗಳು ನಮಗಿಬ್ಬರು ಮಕ್ಕಳು. ಮಗನಿಗೆ ಹೆಸರಿನಿಂದಲೇ ಜಾತಿ ಗುರುತಿಸಲಾಗದಂತಹ ಹೆಸರಿಟ್ಟಿದ್ದೆ. ಅರಿಸ್ಟಾಟಲನ ಪೌರ್ವಾತ್ಯ ಹೆಸರು ಅರಸ್ತು. ವಿಚ್ಛೇದನದ ಬಳಿಕ ಕಾನೂನು ಹೋರಾಟ ಮಾಡಿ ನನ್ನ ಹೆಸರನ್ನು ತನ್ನ ಹೆಸರಿನ ಮುಂದೆ ಹಾಕಿಕೊಂಡ. ಒಂದು ಮೊಮ್ಮಗು ಬಂದಿದೆ. ಇನ್ನೊಂದು ಬರುವ ಹಾದಿಯಲ್ಲಿದೆ. ಕುಟುಂಬದವರು ನನ್ನಿಂದ ಯಾವ ಸೇವೆಯನ್ನೂ, ಕೆಲಸವನ್ನೂ ನಿರೀಕ್ಷಿಸುವುದಿಲ್ಲ. ಊಟತಿಂಡಿ, ಮನೆಯ ಒಪ್ಪಓರಣ, ಹಬ್ಬ, ನೆಂಟರ ಉಪಚಾರ, ಯಾತ್ರೆ ಮುಂತಾದ ಯಾವ ಜವಾಬ್ದಾರಿ, ನಿರೀಕ್ಷೆಗಳೂ ಇಲ್ಲ. ನಾನೇ ಕೆಲವೊಮ್ಮೆ ಹೋರಾಟದ, ಸಂಘಟನೆಯ ಹಾದಿಯಲ್ಲಿ ಕುಟುಂಬಕ್ಕೆ ಸಮಯ ಕೊಡಲಾಗುತ್ತಿಲ್ಲವಲ್ಲ ಎಂದು ಆತಂಕಗೊಳ್ಳುವುದಿದೆ. `ನೀವು ಮಾಡುತ್ತಿರುವ ಕೆಲಸ ತುಂಬ ಮುಖ್ಯವಾದದ್ದು. ಇದೆಲ್ಲದರ ಬಗೆಗೆ ತಲೆ ಕೆಡಿಸಿಕೊಳ್ಳಬೇಡಿ, ಮುಂದುವರೆಯಿರಿ’ ಎಂದು ನನ್ನ ಸಂಗಾತಿ ಮತ್ತು ಮಗ-ಸೊಸೆ ಒತ್ತಾಸೆಯಾಗಿ ನಿಲ್ಲುತ್ತಾರೆ. ಇಂತಹ ಅಪೂರ್ವ ಬೆಂಬಲ ಹೋರಾಟಗಾರ್ತಿಯರಿಗೆ ಸಿಗುವುದು ಬಲುವಿರಳ.

ನಿಜ ಹೇಳಬೇಕೆಂದರೆ ನೀವಿಂದು ಕಾಣುವ ಝಕಿಯಾ ಹುಟ್ಟಿದ್ದು 2003ರಲ್ಲಿ. ವಿಚ್ಛೇದನೆ ಪಡೆದ ದಿನವನ್ನು ಹುಟ್ಟಿದ ದಿನವೆಂದು ಭಾವಿಸಿರುವೆ. ನನಗೀಗ 22 ವರ್ಷ ಅಷ್ಟೇ, ಇನ್ನೂ ಯುವತಿ ಅನಿಸುತ್ತಿದೆ. (ನಗು). ಮನೆಗೆಲಸದವಳಂತಿದ್ದ ಹಿಂದಿನ ಬದುಕಿಗಿಂತ ಈ ಬದುಕು ಸಂಪೂರ್ಣ ಭಿನ್ನವಾಗಿದೆ.

ನಿಮ್ಮ ಹೋರಾಟ, ಸಂಘಟನೆಗೆ ಆದರ್ಶ, ಸ್ಫೂರ್ತಿ ಯಾರು? 

“Status of Women in Polygamous Marriage and the Need for Legal Protection” ವರದಿ ಬಿಡುಗಡೆ

ಮೌನ ಮುರಿದು ದೌರ್ಜನ್ಯದ ವಿರುದ್ಧ ಎದ್ದು ನಿಲ್ಲುವವರೆಲ್ಲರೂ ನನ್ನ ಸ್ಫೂರ್ತಿಯಾಗಿದ್ದಾರೆ. ಒಮ್ಮೆ ಒಂದು ಮಹಿಳೆಯರ ಗುಂಪಿನೊಡನೆ ಮಾತನಾಡುವಾಗ, `ನೀ ಕಲಿತಾಕಿ ನಮ್ಮಂತೋರಿಗೆಲ್ಲ ಏನಾರಾ ಸಹಾಯ ಆಗಂತದು ಮಾಡಬೇಕು’ ಎಂದೊಬ್ಬಾಕೆ ಸೂಚಿಸಿದಳು. ಆ ಕ್ಷಣವೇ ನಾನು ಬದಲಾದೆ.

ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ) ಹೋರಾಟಕ್ಕೆ ಭಾರತದ ಸಂವಿಧಾನ ಮತ್ತು ಕುರಾನ್ ಸ್ಫೂರ್ತಿ ಮೂಲಗಳು. ವಿಶ್ವಭ್ರಾತೃತ್ವವನ್ನು ಪ್ರತಿಪಾದಿಸಿದ ಗಾಂಧಿ (ಈಗಾಗಿದ್ದರೆ ವಿಶ್ವ ಸೋದರಿತ್ವ ಎನ್ನುತ್ತಿದ್ದರೇನೋ, ಅಷ್ಟು ಹೆಣ್ಣು ಗುಣ ಅವರಲ್ಲಿತ್ತು) ನಮಗೆ ತುಂಬ ಇಷ್ಟ. ನಮ್ಮ ಹೋರಾಟಕ್ಕೊಂದು ನೆಲೆಗಟ್ಟನ್ನೊದಗಿಸಿರುವ ಬಾಬಾಸಾಹೇಬರಿಗೆ ಆಲ್ ಸಾಲ್ಯೂಟ್ಸ್. ಎಲ್ಲ ಸ್ವಾತಂತ್ರ್ಯ ಹೋರಾಟಗಾರರು, ನ್ಯಾಯಕ್ಕಾಗಿ ಹೋರಾಡುತ್ತಿರುವವರು ನಮ್ಮ ಸ್ಫೂರ್ತಿ. ನಮ್ಮ ವಿಷನ್: ಹೋರಾಡುವ ಗುಂಪುಗಳೊಡಗೂಡಿ ಕೆಲಸ ಮಾಡುವುದು.

ಗುಜರಾತಿನ ಜನಪರ/ಸ್ತ್ರೀವಾದಿ ಮತ್ತಿತರ ಚಳವಳಿ, ಹೋರಾಟಗಳ ಬಗೆಗೆ.

ಅಭಿವ್ಯಕ್ತಿ ಸ್ವಾತಂತ್ರ್ಯ ತೀರಾ ಹತ್ತಿಕ್ಕಲ್ಪಟ್ಟ, ದಮನ ಮುಚ್ಚಿಡಲ್ಪಟ್ಟ ರಾಜ್ಯ ಗುಜರಾತ್. ಇಲ್ಲಿ ಜನಚಳುವಳಿ ಕಟ್ಟುವುದು ಅಸಾಧ್ಯವೆನ್ನುವಂತಹ ಪರಿಸ್ಥಿತಿಯಿದೆ. ವರ್ಷಗಟ್ಟಲೆಯಿಂದ ಸೆ. 144 ಚಾಲ್ತಿಯಲ್ಲಿದೆ. ಸಾರ್ವಜನಿಕವಾಗಿ ಏನನ್ನೂ ಮಾಡುವುದು ಕಷ್ಟ. ಇದು ಚಳವಳಿ, ಹೋರಾಟದ ಬಲವನ್ನು ಹೊಸಕಿ ಹಾಕಿದೆ. ಪ್ರತಿರೋಧದ ವಿವಿಧ ಮಾರ್ಗಗಳನ್ನು, ಸತ್ಯಾಗ್ರಹವನ್ನು ರೂಪಿಸಿದ ಗಾಂಧಿ ಹುಟ್ಟಿದ ರಾಜ್ಯ ಹೀಗಾಗಿರುವುದು ವರ್ತಮಾನದ ವ್ಯಂಗ್ಯವೆನ್ನಬಹುದು. ಆದರೆ ಇದರ ನಡುವೆಯೂ ಕೆಲವರು ದಿಟ್ಟ ಪ್ರತಿರೋಧ ತೋರಿಸುತ್ತಿದ್ದಾರೆ. ಜೈಲು ಪಾಲಾಗುತ್ತಿದ್ದಾರೆ. ಅವರಿಗೆ ಸಾವಿರದ ಸಲಾಮು.

ಗುಜರಾತ್ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಎನ್ನುತ್ತಾರೆ, ನಿಜವೇ?

ಹೌದು. ಇದು ಮಹಿಳೆಯರಿಗೆ ಅತ್ಯಂತ ಸುರಕ್ಷಿತ ರಾಜ್ಯ. ನಡುರಾತ್ರಿ ಹೊತ್ತಿನಲ್ಲೂ ನೀವು ಆರಾಮವಾಗಿ ಯಾವ ಹೆದರಿಕೆಯಿಲ್ಲದೆ ಹೊರಗೆ ಬೈಕಿನಲ್ಲಿ, ಸ್ಕೂಟಿಯಲ್ಲಿ, ನಡೆದುಕೊಂಡು ಓಡಾಡಬಹುದು. ನೀವು ಮುಸ್ಲಿಂ ಅಲ್ಲದಿದ್ದರೆ, ಪ್ರಶ್ನಿಸುವವರಲ್ಲದಿದ್ದರೆ ಮಹಿಳೆಯರಿಗಿದು ಸುರಕ್ಷಿತ ನೆಲವಾಗಿದೆ.

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಧರ್ಮದ ಆಧಾರದಲ್ಲಿ ಸಂಘಟನೆಯಾಗತೊಡಗಿದರೆ, `ಹಿಂದೂ ಫೆಮಿನಿಸ್ಟ್’, `ಮುಸ್ಲಿಂ ಫೆಮಿನಿಸ್ಟ್’, `ಕ್ರಿಶ್ಚಿಯನ್ ಫೆಮಿನಿಸ್ಟ್’ ಎಂದುಕೊಂಡರೆ ಅದು ಸೋದರಿತ್ವವನ್ನು ಒಡೆಯುವ ಭಯವಿಲ್ಲವೆ?

ನಾನು ನನ್ನನ್ನು ಇಸ್ಲಾಮಿಕ್ ಫೆಮಿನಿಸ್ಟ್ ಎಂದು ಕರೆದುಕೊಳ್ಳ ಬಯಸುವುದಿಲ್ಲ. ನಾನು ಮಹಿಳಾ ಸಮಾನತೆಯನ್ನು ನಂಬುವಂತೆಯೇ ಮಾನವ ಸಮಾನತೆಯನ್ನೂ ನಂಬುತ್ತೇನೆ.

ಕೆಲವು ಸ್ತ್ರೀವಾದಿ ಹೋರಾಟಗಾರರು ಯಾಕೆ ಕುರಾನ್, ಷರಿಯ ಅಂತೀರಿ? ಅದರಾಚೆ ಬನ್ನಿ ಎನ್ನುತ್ತಾರೆ. ನಾನದನ್ನು ಒಪ್ಪುವುದಿಲ್ಲ. ನ್ಯಾಯಕ್ಕಾಗಿ ಹೋರಾಡುವ ಎಷ್ಟೊಂದು ಸಂಘಟನೆ, ಗುಂಪುಗಳಿದ್ದಾಗ್ಯೂ ಮಹಿಳೆಯರಿಗೆಂದೇ ಬೇರೆ ಯಾಕೆ ಬೇಕು? ಅದೇ ಕಾರಣಕ್ಕೆ ಮುಸ್ಲಿಂ ಮಹಿಳೆಯರಿಗೂ ಬೇರೆ ಸಂಘಟನೆ ಬೇಕು. ಸಂವಿಧಾನವೇ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿರುವಾಗ ನಂನಮ್ಮ ಧರ್ಮ ಅನುಸರಿಸುತ್ತಲೇ ಅದರೊಳಗಿರುವ ಸಮಾನತೆ, ಹಕ್ಕುಗಳನ್ನು ಕೇಳಬಹುದು. ಧರ್ಮದ ಆವರಣ ಪ್ರವೇಶಿಸಿ ನಿಮ್ಮ ಹಕ್ಕುಗಳನ್ನು ಕೇಳುವುದು ಸುಲಭವಿಲ್ಲ. ಮೋಸ್ಟ್ ಚಾಲೆಂಜಿಂಗ್ ಅದು. ಫೆಮಿನಿಸ್ಟ್ ಗ್ರೂಪ್ಸ್ ಹ್ಯಾವ್ ಶೈಡ್ ಅವೇ ಫ್ರಂ ದಿಸ್. ಇದು ಧರ್ಮದ ಆವರಣದೊಳಗೆ ಸ್ತ್ರೀವಾದಿ ಚಿಂತನೆಗಳಿರದ ಹಾಗೆ, ದಿಟ್ಟ ಮಹಿಳೆಯರಿರದ ಹಾಗೆ ಮಾಡಿದೆ. ಈ ಖಾಲಿ ಬಳಸಿಕೊಂಡು ಪ್ರತಿ ಧರ್ಮವೂ ಮಹಿಳೆಯರನ್ನು ದಾಳದಂತೆ ಬಳಸಿಕೊಳ್ಳುತ್ತಿದೆ. ಮಹಿಳೆಯರಿಗೆ ಸಾಕಷ್ಟು ಹಕ್ಕುಗಳನ್ನು ಕೊಟ್ಟ ಧರ್ಮ ಇಸ್ಲಾಂ. ಆದರೆ ಸಂಪ್ರದಾಯವಾದಿ ಪುರುಷರ ನೆರಳಿನಲ್ಲಿ ಅರಳುವ ಧಾರ್ಮಿಕ ಸಂಘಟನೆಗಳ ಮಹಿಳೆಯರು ಪುರುಷರ ಭಾಷೆಯನ್ನೇ ಮಾತಾಡುತ್ತಾರೆ. ಬೇರೆ ಯೋಚನೆಗಳೇ ಅವರಿಗೆ ಬರುವುದಿಲ್ಲ. ಸ್ವತಂತ್ರವಾಗಿ ಮಾತನಾಡುವಷ್ಟು, ತಮ್ಮದೇ ಅಭಿಪ್ರಾಯ ಹೇಳುವಷ್ಟು, ಪ್ರಶ್ನಿಸುವಷ್ಟು ಮುಂದಾಳ್ತಿಯರಾಗುವ ಅವಕಾಶ ಸಿಗುವುದೇ ಇಲ್ಲ. ಸೂಕ್ಷ್ಮ ಸಂವೇದನೆ, ಅನುಭವ ಪ್ರಾಮಾಣ್ಯ, ಭಾವುಕತೆ, ಸೋದರಿತ್ವಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಮೌನವಾಗಿ, ಹೌದಮ್ಮಗಳಾಗಿ `ಉತ್ತಮ ಮಹಿಳೆ’ಯರಾಗಿದ್ದಾರೆ. ಎಲ್ಲ ಧರ್ಮಗಳ ವ್ಯವಸ್ಥೆಯೊಳಗೆ ಸಂಘಟಿತರಾದ ಮಹಿಳೆಯರ ಸ್ಥಿತಿ ಹೀಗೆಯೇ ಇದೆ. ಹಾಗಾಗದಿರಲು ಸ್ಟ್ರಾಟೆಜಿಕ್ ಆಗಿ ನಾವು ಧರ್ಮದ ಅಸ್ಮಿತೆಯನ್ನು ಬಳಸಿಕೊಂಡು ಒಳ ಹೊಕ್ಕಬೇಕು.

ತ್ರಿವಳಿ ತಲಾಕ್‌ ವಿರುದ್ದದ ಹೋರಾಟದಲ್ಲಿ..

ನಾನು ನಾಸ್ತಿಕಳೋ, ಆಜ್ಞೇಯವಾದಿಯೋ ಆಗಿರಬಹುದು. ಆದರೆ ಧರ್ಮ-ದೇವರನ್ನು ನಂಬುವ ಅಸಂಖ್ಯ ಸಾಮಾನ್ಯ ಮಹಿಳೆಯರಿದ್ದಾರೆ. ತಮ್ಮನ್ನು ಪುರುಷರಿಗೆ ಸಮನಾಗಿ ಸೃಷ್ಟಿ ಮಾಡಲಾಗಿದೆ ಮತ್ತು ದೇವರು ತಾರತಮ್ಯ ಎಸಗಲು ಸಾಧ್ಯವೇ ಇಲ್ಲ ಎಂದವರು ಧೃಢವಾಗಿ ನಂಬಿದ್ದಾರೆ. ಬಹುತೇಕ ಬಡ, ಅನಕ್ಷರಸ್ಥ, ಅಧಿಕಾರವಂಚಿತ ಮುಸ್ಲಿಂ ಮಹಿಳೆಯರ ನಂಬಲರ್ಹ ಬಂಧು, ಶಕ್ತಿ ಅಲ್ಲಾ ಮಾತ್ರ. ದೇವರ ಜೊತೆಗಿನ ಅವರ ಸಂಬಂಧ ವೈಯಕ್ತಿಕ ನೆಲೆಯದು ಮತ್ತು ಅಧ್ಯಾತ್ಮಿಕವಾದದ್ದು. ಒಬ್ಬ ಫೆಮಿನಿಸ್ಟ್, ಸೆಕ್ಯುಲರ್ ವ್ಯಕ್ತಿಯಾಗಿ ನಾನು ಅವರ ಈ ನಿಲುವನ್ನು ಗೌರವಿಸುತ್ತೇನೆ. ನನ್ನ ಪ್ರಕಾರ ಮಿಕ್ಕವರ ವಿಶ್ವಾಸವನ್ನು ಅರ್ಥ ಮಾಡಿಕೊಂಡು ಸಹಬಾಳ್ವೆಯಿಂದ ಬದುಕುವುದೇ ಸೆಕ್ಯುಲರಿಸಂನ ನಿಜವಾದ ಅರ್ಥ. ಸಂವಿಧಾನ ಹೇಳುವುದೂ ಅದನ್ನೇ. ದೇಶ ಧರ್ಮನಿರಪೇಕ್ಷವಾಗಿದೆ. ಯಾವುದೇ ಒಂದು ಧರ್ಮಕ್ಕೂ ವಿಶೇಷ ಸ್ಥಾನಮಾನವಿಲ್ಲ, ಯಾವುದೂ ಸರ್ಕಾರವನ್ನು ಪ್ರಭಾವಿಸುವಂತಿಲ್ಲ. ಆದರೆ ದೇಶದ ಪ್ರತಿ ವ್ಯಕ್ತಿಗೂ ವೈಯಕ್ತಿಕವಾಗಿ ತನಗಿಷ್ಟ ಬಂದ ಧರ್ಮವನ್ನು ಆಯ್ಕೆ ಮಾಡಿಕೊಂಡು ಬದುಕುವ ಸ್ವಾತಂತ್ರ್ಯವಿದೆ.

ನಾವು ಭಾರತದ ಪ್ರಜೆಗಳು. ಅದು ನಮ್ಮ ಮೊದಲ ಅಸ್ಮಿತೆ. ಸಂವಿಧಾನ ಹಕ್ಕುಗಳನ್ನು ಕೊಟ್ಟಿದೆ. ಅದನ್ನು ಪಡೆದು, ಧಾರ್ಮಿಕ ಚೌಕಟ್ಟಿನೊಳಗೂ ನಮ್ಮ ಹಕ್ಕುಗಳನ್ನು ಪಡೆಯೋಣ, ಕರ್ತವ್ಯಗಳನ್ನು ನಿಭಾಯಿಸೋಣ; ಅಲ್ಪಸಂಖ್ಯಾತ ಅಸ್ಮಿತೆಯನ್ನು ದಮನಿತ ಅಸ್ಮಿತೆಯಾಗಿ ಮಾತ್ರ ಮಾಡಿಕೊಳ್ಳದೆ ಹಕ್ಕುಜಾಗೃತಿಯ ಅಸ್ಮಿತೆಯನ್ನಾಗಿ ರೂಪಿಸಿಕೊಳ್ಳೋಣ ಎನ್ನುವುದು ಬಿಎಂಎಂಎ ನಿಲುವು. ಎಂದೇ ನಮ್ಮ ಸಂಘಟನೆಯ ಮುಸ್ಲಿಂ ಐಡೆಂಟಿಟಿಯು ಧರ್ಮದ ಆಧಾರದಲ್ಲಿ ಮಹಿಳೆಯರನ್ನು ಪ್ರತ್ಯೇಕಿಸಲೆಂದು ಅಲ್ಲ, ಕಾರ್ಯತಂತ್ರದ ಭಾಗವಾಗಿ ಅಡಕವಾಗಿದೆ. ಧರ್ಮದೊಳಗಿನ ಆವರಣದ ಅನ್ಯಾಯವನ್ನು ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯ ಮಾಡಿದೆ. ಪಾವ್ಲೋ ಫ್ರೇರೆ ಹೇಳುವಂತೆ ದಮನಿತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ತಾವೇ ಎದ್ದು ನಿಲ್ಲುವಷ್ಟು ಬಿಡುಗಡೆ ಪಡೆಯದಿದ್ದರೆ ಬದಲಾವಣೆಯ ಯಾವುದೇ ಭರವಸೆಯಿಡಲು ಸಾಧ್ಯವಿಲ್ಲ. ಎಂದೇ ನಮ್ಮ ಧಾರ್ಮಿಕ ಅಸ್ಮಿತೆಯು ಸಂಘಟಿಸಲು, ವಿಶೇಷ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಲು ಮುಖ್ಯವಾಗಿದೆ.

ಅದೇ ಹೊತ್ತಿಗೆ ಮುಸ್ಲಿಂ ಮಹಿಳೆಯರಲ್ಲದೆ ಮುಸ್ಲಿಮೇತರ ಮಹಿಳೆಯರ ಕಷ್ಟಗಳಿಗೂ ದನಿಗೂಡಿಸಲು ಅದು ಸಿದ್ಧವಾಗಿದೆ. ನಿಮಗೆ ಅಚ್ಚರಿಯಾಗಬಹುದು ಅನುಪಮಾ, ನಾವು ಮಾಡುವ `ಔರತೋಂಕಿ ಷರಿಯತ್ ಅದಾಲತ್’ನಲ್ಲಿ 20% ಹಿಂದೂ ಮಹಿಳೆಯರೂ ಭಾಗವಹಿಸಿ ಕಾನೂನು ಸಲಹೆ ಪಡೆಯುತ್ತಾರೆ.

ನೀವು ಮತ್ತು ನಿಮ್ಮ ಸಂಘಟನೆ ಎದುರಿಸಿದ ದೊಡ್ಡ ಸವಾಲು.

ಸಾಕಷ್ಟು ಸವಾಲು ಎದುರಿಸಿದ್ದೇವೆ. ಮುಸ್ಲಿಮರದು ಮೊದಲಿನಿಂದಲೂ ಅತಿಕಷ್ಟದ ಬದುಕನ್ನು ಕಟ್ಟಿಕೊಂಡ ಸಮುದಾಯ. ಇಂಡೋನೇಷ್ಯಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲಿಮರಿರುವುದು ಭಾರತದಲ್ಲಿ. ಆದರೆ ಶಿಕ್ಷಣ, ಆದಾಯ, ರಾಜಕೀಯ ಪ್ರಾತಿನಿಧ್ಯ, ಉದ್ಯೋಗ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಅಂಚಿಗೆ ಸರಿಸಲ್ಪಟ್ಟ ಸಮುದಾಯ. ಅತ್ಯಂತ ಸಾಂಪ್ರದಾಯಿಕ ಮನಸ್ಥಿತಿ ಇದಕ್ಕೆ ಕಾರಣವೂ, ಪರಿಣಾಮವೂ ಆಗಿದೆ. ಸಮುದಾಯದ ಆಲೋಚನೆಯಲ್ಲಿ ಪ್ರಜಾಪ್ರಭುತ್ವ, ಲಿಂಗಸಮಾನತೆ, ಮಹಿಳಾ ಹಕ್ಕುಗಳ ಅರಿವುಗಳನ್ನು ತರುವುದೇ ಕಷ್ಟವಾಗಿದೆ. ಸಮುದಾಯದ ನಾಯಕತ್ವವಾದರೂ ಎಂತಹದು? ಒಂದೋ ಸಂಪ್ರದಾಯವಾದಿ ಧಾರ್ಮಿಕ ವಲಯದ್ದು ಅಥವಾ ಸ್ವಾರ್ಥಿ ರಾಜಕಾರಣಿಗಳದು. ಅವರಿಬ್ಬರೂ ಒಂದೇ, ಸಮಾನ ಅಪಾಯಕಾರಿಗಳವರು. ಇಲ್ಲಿ ಸೆಕ್ಯುಲರ್ ಲೀಡರ್‌ಶಿಪ್ ಇಲ್ಲ. ಎಲ್ಲ ವರ್ಗದ ಮುಸ್ಲಿಮರು, ಅದೂ ಪುರುಷರು ಒಟ್ಟು ಸೇರುವುದು ಮಸೀದಿಯಲ್ಲಿ ಮಾತ್ರ. ಬೇರೆಕಡೆ ಸೆಕ್ಯುಲರ್ ಸ್ಪೇಸ್‍ನಲ್ಲಿ ಅವರು ಸೇರುವುದೇ ಇಲ್ಲ. ಇದು ಅವರನ್ನು ಸಂಘಟಿಸಲು ದೊಡ್ಡ ಸವಾಲಾಗಿದೆ.

ತ್ರಿವಳಿ ತಲಾಖ್ ಸಮಯದಲ್ಲಿ ಅದು ಹೇಗೋ ಇದನ್ನು ದಾಟಿದೆವು. ಸಾವಿರಾರು ಸಭೆ, ಸೆಮಿನಾರು, ಕಾರ್ಯಾಗಾರ, ಚರ್ಚೆ ನಡೆಸಿದೆವು. ಇರುವ ವಿಷಯ ತಿಳಿಸಿದೆವು. ಮಹಿಳೆಯರಿಂದ ಅಗಾಧ ಬೆಂಬಲ ಬಂತು. ಪುರುಷರೂ ಕೈಜೋಡಿಸಿದರು. ತ್ರಿವಳಿ ತಲಾಖನ್ನು ಕುರಾನಿನಲ್ಲಿ ಹೇಳಿಲ್ಲ; ಇಸ್ಲಾಮಿಕ್ ದೇಶಗಳಾದ ಬಾಂಗ್ಲಾ-ಪಾಕಿಸ್ತಾನದಲ್ಲೂ ಇಲ್ಲ; ಭಾರತದಲ್ಲಿ ಮಾತ್ರ ಇಟ್ಟುಕೊಂಡಿದ್ದೇವೆಂದು ಜನರಿಗೆ ತಿಳಿಸಿ ಹೇಳಿದೆವು.

ದುರಂತವೆಂದರೆ ಸಾಂಪ್ರದಾಯಿಕ ಶಕ್ತಿಗಳಷ್ಟೇ ಮುಸ್ಲಿಂ ಗಣ್ಯವರ್ಗದಿಂದಲೂ ಬಿಎಂಎಂಎಯನ್ನು ಮೂಲೆಗೊತ್ತುವ, ಅಪಖ್ಯಾತಿಗೊಳಿಸುವ ಯತ್ನ ನಡೆಯಿತು. ನಾವೊಂದು ಅಧ್ಯಯನ ನಡೆಸಿ 120 ತ್ರಿವಳಿ ತಲಾಖ್ ಪ್ರಕರಣಗಳನ್ನು ಪರಿಶೀಲಿಸಿ ಬರೆದಿದ್ದೆವು. ಅದಕ್ಕೆ, `ಬರೀ 120 ಜನ ತ್ರಿವಳಿ ತಲಾಖ್ ತೆಗೆದುಕೊಂಡದ್ದಕ್ಕೆ ಷರಿಯ ಬದಲಿಸಬೇಕೇ?’ ಎಂದು ಬರೆದರು. 120 ಎನ್ನುವುದು ನಾವು ತೆಗೆದುಕೊಂಡ ಸ್ಯಾಂಪಲ್ ಆಗಿತ್ತಷ್ಟೇ. ಇನ್ನೆಷ್ಟೋ ಸಾವಿರಾರು ಮಹಿಳೆಯರು ಅದರಿಂದ ನೊಂದಿದ್ದರು. ಇಂತಹ ವಾಸ್ತವಗಳ ಪರಿಚಯವಿರದ ಪರಿಚಿತ, ಕುಲೀನ ಮುಸ್ಲಿಂ ಮಹಿಳೆಯೊಬ್ಬರು, `ನೀವು ಇಸ್ಲಾಮನ್ನು ಕಟಕಟೆಗೆ ತಂದು ನಿಲ್ಲಿಸಿದಿರಿ’ ಎಂದು ಮೂದಲಿಸಿದರು.

ಈಗ ಸಿಎಎ, ಬುಲ್ಡೋಜರ್ ಧ್ವಂಸ, ಹಿಜಾಬ್-ನಮಾಜ್-ಅಜಾನ್-ಗೋಮಾಂಸ ಎಲ್ಲವೂ ಇಷ್ಯೂಗಳೇ ಆಗಿರುವಾಗ ಮಹಿಳೆಯರನ್ನು ಸಂಘಟನೆ ಮಾಡುವುದು ತುಂಬ ಕಷ್ಟವಾಗಿದೆ. ಮುಸ್ಲಿಂ ದ್ವೇಷದ ವಾತಾವರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿರುವ ನಮ್ಮ ಬಹುಪತ್ನಿತ್ವ ನಿಷೇಧ ಅರ್ಜಿಯು ಮುಂದೆ ಹೋಗಲು ಅಥವಾ ಅದಕ್ಕಾಗಿ ಜನರನ್ನು ಒಟ್ಟುಗೂಡಿಸಿ ಹೋರಾಡಲು ಅಸಾಧ್ಯವಾಗಿದೆ. ಯಾವುದೇ ಪ್ರಶ್ನೆಯು ಇಸ್ಲಾಂ ವಿರೋಧದಂತೆ, ವಿದ್ರೋಹದಂತೆಯೇ ಕೇಳಿಸುತ್ತ ಸುಧಾರಣೆ ಕಷ್ಟಸಾಧ್ಯವಾಗಿದೆ.

ಸಂವಿಧಾನಾತ್ಮಕ ಹಕ್ಕುಗಳು ಮತ್ತು ಕುರಾನಿನ ಹಕ್ಕುಗಳು ಇವೆರೆಡನ್ನು ಒಗ್ಗೂಡಿಸಿ ಸಾಧಿಸಿಕೊಳ್ಳುವ ಬಗೆ ಹೇಗೆ?

ನಮ್ಮ ಸಂವಿಧಾನದ ಅನನ್ಯತೆ ಎಂದರೆ ಅದು ಧರ್ಮನಿರಪೇಕ್ಷವಾಗಿರುತ್ತಲೇ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ. ಈ ಅಂಶವು ನಾಗರಿಕರಾಗಿರುವ ಮಹಿಳೆಯರನ್ನು ತಂತಮ್ಮ ಧರ್ಮದಡಿ ನ್ಯಾಯಕ್ಕೆ ಅರ್ಹರನ್ನಾಗಿ ಮಾಡುತ್ತದೆ. ಮಹಿಳೆಯರು ಎರಡೂ ಮೂಲಗಳಿಂದ ಉಪಯೋಗ ಪಡೆಯಬಹುದಾಗಿದೆ. ಆದರೆ ಪುರುಷ ಪ್ರಾಧಾನ್ಯ ಮತ್ತು ರಾಜಕಾರಣಗಳು ಈ ಎರಡೂ ನೆಲೆಗಳಲ್ಲೂ ನ್ಯಾಯ ಸಿಗದಂತೆ ಮಾಡಿವೆ.

ನಾನು ಸಮಾನ ನಾಗರಿಕ ಸಂಹಿತೆಯನ್ನು ಸ್ವಾಗತಿಸುತ್ತೇನೆ. ಹೀಗೆಂದ ಕೂಡಲೇ ಯಾವ ಬಿರುದು ಸಿಗಲಿದೆಯೆಂಬ ಅರಿವಿದೆ. ಸ್ವಾತಂತ್ರ್ಯ ಹೋರಾಟಗಾರರು, ಬಾಬಾಸಾಹೇಬರು ಎಲ್ಲರೂ ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು. ಈಗ ಆ ಮಾತೆತ್ತುವುದೇ ಕಷ್ಟವೆನ್ನುವಂತೆ ರಾಜಕೀಕರಣಗೊಂಡುಬಿಟ್ಟಿದೆ. ಹಾಗೆ ನೋಡಿದರೆ ಭಾರತದ ಎಲ್ಲ ಮಹಿಳೆಯರಿಗೂ ನ್ಯಾಯಯುತ ಬದುಕು ನಡೆಸಲು ಸಮಾನ ನಾಗರಿಕ ಸಂಹಿತೆ ಬರಲೇಬೇಕಾಗಿದೆ. ಆದರೆ ಅದನ್ನು ತರಲು ಪಟ್ಟು ಹಿಡಿದು ಪ್ರಯತ್ನಿಸುತ್ತಿರುವವರಾರು? ನಮ್ಮ ವಿರೋಧಿ ಪಕ್ಷ. ದುರಾದೃಷ್ಟ, ಆದರೆ ವಾಸ್ತವ.

ಆದರ್ಶಮಯ ಪರಿಸರದಲ್ಲಿ ಧರ್ಮನಿರಪೇಕ್ಷ ಕಾನೂನುಗಳೇ ಅತ್ಯುತ್ತಮ. ಆದರೆ ನಾವೀಗ ಆ ವಾಸ್ತವದಿಂದ ತುಂಬ ದೂರವಿದ್ದೇವೆ. ನನ್ನ ಜೀವಿತಾವಧಿಯಲ್ಲಂತೂ ಕಾಣಲು ಸಾಧ್ಯವಿಲ್ಲದಷ್ಟು ಅದು ದೂರವಿದೆ. ಏಕರೂಪ ನಾಗರಿಕ ಸಂಹಿತೆ ಎನ್ನುವುದನ್ನು ಅತಿ ರಾಜಕೀಕರಣಗೊಳಿಸಿದ್ದಾರೆ. ಹೀಗಿರುತ್ತ ಕುರಾನಿನಲ್ಲಿ ಕೊಡಲ್ಪಟ್ಟ ಮಹಿಳೆಯರ ಹಕ್ಕುಗಳು ಭಾರತದ ಕಾನೂನಾಗಿ ಪರಿಗಣಿತವಾಗಿ ಮಹಿಳೆಯರಿಗೆ ಹಕ್ಕುಗಳು ಸಿಗುವುದು ಅನಿವಾರ್ಯವಾಗಿದೆ.

ಧರ್ಮದೊಳಗೆ ಹಕ್ಕು ಕೇಳುತ್ತ ನಡೆಸುವ ಹೋರಾಟವು ಧರ್ಮದ ಸಂಕಷ್ಟ ಕಾಲದಲ್ಲಿ ಎಸಗುವ ದ್ರೋಹದಂತೆ ಕೇಳುವುದಿಲ್ಲವೆ? ಸ್ತ್ರೀಪುರುಷರನ್ನು ಒಡೆಯಲು ಎದುರಾಳಿ ನಡೆಸುವ ತಂತ್ರದಿಂದ ಬೆಂಬಲ ಪಡೆಯುವುದಿಲ್ಲವೆ? ಇವೆರೆಡನ್ನು ಹೇಗೆ ನಿಭಾಯಿಸುತ್ತಿರುವಿರಿ?

ನಮ್ಮ ವಿರೋಧಿ ಪಕ್ಷದ ಸರ್ಕಾರವಿರುವಾಗ ತ್ರಿವಳಿ ತಲಾಖ್ ವಿರುದ್ಧ ಮಾತನಾಡಿದೆವೆಂದು ನಮ್ಮ ವಿರುದ್ಧ ಟೀಕೆಗಳಿದ್ದವು. ಆದರೆ ಅನ್ಯಾಯ ನಿರಂತರವಾಗಿ ಸಂಭವಿಸುತ್ತಲೇ ಇರುವಾಗ ನ್ಯಾಯ ಮತ್ತು ಸಮಾನತೆಯನ್ನು ಪಡೆದುಕೊಳ್ಳಲು `ಸೂಕ್ತ’ ಸಮಯ ಅಂತ ಯಾವುದೂ ಇಲ್ಲ. ಕೇವಲ ಷರಿಯತ್ ಇಸ್ಲಾಮಿಕ್ ಕಾನೂನು ಆಗಲಾರದು. ಅದನ್ನು ಸೂಕ್ತವಾಗಿ ಕ್ರೋಢೀಕರಿಸಬೇಕು. ಎಲ್ಲ ಮುಸ್ಲಿಂ ದೇಶಗಳೂ ಮುಸ್ಲಿಂ ವೈಯಕ್ತಿಕ ಕಾನೂನನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿವೆ. ವಿವಾಹ-ಒಪ್ಪಿಗೆ-ಮದುವೆ ವಯಸ್ಸು-ಆಸ್ತಿ-ವಿಚ್ಛೇದನೆ-ಜೀವನಾಂಶ ಇತ್ಯಾದಿಗಳ ಬಗೆಗೆ ಸ್ಪಷ್ಟವಾದ, ಈ ಕಾಲಕ್ಕೂ ಅನ್ವಯವಾಗಬಲ್ಲಂತಹ ಕಾನೂನುಗಳನ್ನು ರೂಪಿಸಿವೆ. ಆದರೆ ಭಾರತದಲ್ಲಿ ಏನೂ ಮಾಡಿಲ್ಲ. ನೋಡಿ: ಇಸ್ಲಾಮಿನಲ್ಲಿ ಮದುವೆ ಎನ್ನುವುದು ಒಂದು ಸಾಮಾಜಿಕ ಒಪ್ಪಂದ. ಒಪ್ಪಂದ ಮಾಡಿಕೊಳ್ಳುವಾಗ ವಧುವಿನ ಸಮ್ಮತಿ ಅತ್ಯಗತ್ಯ. ಆದರೆ ಸಾಮಾಜಿಕ ಒಪ್ಪಂದವನ್ನು ಅರ್ಥ ಮಾಡಿಕೊಂಡು ಮದುವೆಗೆ ಅನುಮತಿ ಕೊಡಲು ಒಂದು ಹೆಣ್ಣುಮಗುವಿಗೆ ಹೇಗೆ ಸಾಧ್ಯ? ಎಂದರೆ ಇಸ್ಲಾಮಿನಲ್ಲಿ ಬಾಲ್ಯವಿವಾಹ ಮಾಡುವ ಹಾಗೆಯೇ ಇಲ್ಲ. ಆದರೂ ಬಾಲ್ಯವಿವಾಹ ನಡೆಯುತ್ತಿದೆ. ಇಸ್ಲಾಂ ಹುಟ್ಟಿದ ಸಮಯದಲ್ಲಿ ಯುದ್ಧ, ಜಗಳ, ದಂಗೆಗಳು ನಡೆದು ಬಹುತೇಕ ಗಂಡಸರು ಹತರಾಗುತ್ತಿದ್ದರು. ಹೆಣ್ಣುಗಳು ಹೆಚ್ಚುವರಿಯಾಗಿದ್ದರು. ಆ ಕಾರಣದಿಂದ ಬಹುಪತ್ನಿತ್ವವನ್ನು ಮಾನ್ಯ ಮಾಡಿದ್ದರು. ಆದರೆ ಪ್ರೋತ್ಸಾಹಿಸಲಿಲ್ಲ. ಒಂದಕ್ಕಿಂತ ಹೆಚ್ಚು ಮಹಿಳೆಯರು ಪತ್ನಿಯರಾದರೆ ಅವರಿಗೆ ಎಲ್ಲವನ್ನು ಸಮಾನವಾಗಿ ಹಂಚಬೇಕು; ಐಹಿಕ ಸಂಪತ್ತುಗಳನ್ನು ಸಮಾನವಾಗಿ ಹಂಚಿದಂತೆ ಪ್ರೀತಿಯನ್ನು, ಕಾಳಜಿ ಗೌರವಗಳನ್ನು ಹಂಚುವುದು ಕಷ್ಟವೆಂದು ಪ್ರವಾದಿಯವರೇ ಹೇಳಿದ್ದಾರೆ. ಈಗವರಿದ್ದಿದ್ದರೆ ಏಕಪತ್ನಿ ವಿವಾಹವನ್ನೇ ಕಡ್ಡಾಯಗೊಳಿಸುತ್ತಿದ್ದರು. ಆದರೆ ನಮ್ಮ ಪುರುಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆಗಳನ್ನು ತಿರುಚಿದರು. ಈಗಲೂ ಬಹುಪತ್ನಿತ್ವ ಚಾಲ್ತಿಯಲ್ಲಿದೆ.

ಈಗ ಕಂಡುಬರುತ್ತಿರುವ `ವಹಾಬಿ ಶುದ್ಧ ಇಸ್ಲಾಮಿ’ನ ವರಸೆಯಲ್ಲಿ `ಇದಿಲ್ಲ, ಅದಿಲ್ಲ, ಹೀಗಿಲ್ಲ, ಹಾಗಿಲ್ಲ, ಹೀಗೆ ಮಾಡಬೇಡ, ಹಾಗೆ ಇರಬೇಡ’ ಎಂಬ ನೋನೋಗಳೇ ತುಂಬಿಹೋಗಿವೆ. ತೈಲದೇಶಗಳ ಡ್ರೆಸ್‍ಕೋಡ್ ಸೇರಿದಂತೆ ಎಲ್ಲವನ್ನೂ ಹೇರುತ್ತಿದ್ದಾರೆ. ಎಂತಹ ಬಟ್ಟೆ, ಎಲ್ಲಿ, ಯಾವಾಗ ಧರಿಸಬೇಕು? ಕೂದಲು ಹೇಗೆ ಬಿಡಬೇಕು? ದೇಹ ಹೇಗೆ ಮುಚ್ಚಬೇಕು? ಮುಂತಾದ ಅಮುಖ್ಯ ವಿಷಯಗಳ ಬಗೆಗೆ, ಸಂಕೇತಗಳ ಬಗೆಗೆ ಎಂದೂ ಬದಲಾಗದ ಕಠೋರ ನಿಯಮಗಳ ರೂಪಿಸಿ, ವ್ಯಕ್ತಿತ್ವ ತಂತಾನೇ ಸಹಜವಾಗಿ ಅರಳುವ ಅವಕಾಶವನ್ನೇ ಕೊಡದೆ ಧರ್ಮಕ್ಕೆ ಅಪಚಾರ ಎಸಗುತ್ತಿದ್ದಾರೆ. ಇಸ್ಲಾಂ ವ್ಯಕ್ತಿತ್ವ ಅರಳಬೇಕು (ಇವಾಲ್ವ್ ಆಗಬೇಕು) ಎನ್ನುವ ಧರ್ಮ. ಕರುಣೆ, ಅನುಭೂತಿ, ನ್ಯಾಯ, ವಿವೇಕಗಳು ಇಸ್ಲಾಮಿನ ತಳಹದಿಗಳು. ಎಂದರೆ ಕಾಲಕ್ಕೆ ತಕ್ಕಂತೆ ಮಹಿಳೆಯರಿಗೂ ಪುರುಷರಿಗಿರುವ ಎಲ್ಲ ಹಕ್ಕುಗಳನ್ನು ಕೊಡಬೇಕಿತ್ತು. ಮಹಿಳೆಯರಿಗೆ ಅಲ್ಲಾ ಕೊಟ್ಟದ್ದನ್ನು ಪುರುಷರು ಕಿತ್ತುಕೊಂಡರು. ಮಹಿಳೆಯರಿಗೆ ಹಕ್ಕುಗಳ ಅರಿವೇ ಇಲ್ಲದಂತೆ ಮಾಡಿದರು. ಸಮುದಾಯದ ಪುರುಷರು, ಧಾರ್ಮಿಕ ಮುಖಂಡರು ಕುರಾನಿನಲ್ಲಿ ಹೇಳಿದಂತೆ ನಡೆಯದೆ ಅಪ್ರಾಮಾಣಿಕತೆ ತೋರಿಸಿದರು. ಅದಕ್ಕಾಗಿ ಇವರು ಕಿತ್ತುಕೊಂಡದ್ದನ್ನು ಅವರ ವಿರೋಧಿಗಳೇ ಬಾಣ ಮಾಡಿ ಎಸೆಯುವಂತಾಗಿದೆ. ಇದೊಂದು ಅಬರೆಷನ್ ಹೌದು, ಆದರೆ ಬದಲಾವಣೆ ಸ್ವಾಗತಾರ್ಹವಾದುದೆನ್ನದೇ ವಿಧಿಯಿಲ್ಲ. ದುರಾದೃಷ್ಟವೆಂದರೆ ನಮ್ಮ ಹೋರಾಟದಲ್ಲಿ ಕಾಂಗ್ರೆಸ್‍ನಂತಹ ಸೆಕ್ಯುಲರ್ ಪಕ್ಷಗಳು ಮೌನವಾಗುಳಿದವು. ಆ ಮೌನವು ಸುಧಾರಣೆಯ ಎಲ್ಲ ಯಶಸ್ಸನ್ನು ಬಿಜೆಪಿ ತೆಗೆದುಕೊಳ್ಳುವಂತೆ ಮಾಡಿತು. ನಾವು ಸದಾ ವಿರೋಧಿಸುತ್ತ ಬಂದ, ದಾರುಣ ಸ್ಥಿತಿಗೆ ನಮ್ಮನ್ನು ದೂಡಿದ ಪಕ್ಷ ನಮ್ಮ ದಾರಿಯನ್ನು ಸುಗಮಗೊಳಿಸಿರುವುದು ವಿಪರ್ಯಾಸವಾದರೂ ಸತ್ಯವಾಗಿದೆ.

ನಿಮ್ಮ ಅಭಿಪ್ರಾಯ ಸೆಕ್ಯುಲರ್, ಡೆಮಾಕ್ರೆಟಿಕ್ ಭಾರತದಲ್ಲಿ ಇಸ್ಲಾಂ ಧರ್ಮಕ್ಕೆ ಸುಧಾರಣೆಯ ಅವಕಾಶಗಳು ಹೆಚ್ಚು ಇವೆಯೆಂದೇ?

ಸಂದರ್ಶಕಿ ಡಾ. ಎಚ್‌ ಎಸ್‌ ಅನುಪಮಾ

ಹೌದು. ಬಹುಧರ್ಮಗಳ ಸೆಕ್ಯುಲರ್ ಪ್ರಜಾಪ್ರಭುತ್ವವಿರುವ ಭಾರತದಲ್ಲಿ ನ್ಯಾಯಯುತ ಧಾರ್ಮಿಕ ಸಮಾಜ ಹೇಗಿರಬಹುದೆಂಬ ಮಾದರಿಯಾಗಿ ಇಸ್ಲಾಮನ್ನು ರೂಪಿಸುವ ಎಲ್ಲ ಅವಕಾಶಗಳಿದ್ದವು. ಹಾಗೆ ಮಾಡಲಿಲ್ಲ.

ಇಸ್ಲಾಂ ಮಹಿಳೆಯರಿಗೆ ನ್ಯಾಯ, ಸಮಾನತೆ ಕೊಟ್ಟಿರುವ ಧರ್ಮ. ಆದರೆ ಮುಸ್ಲಿಂ ಮಹಿಳೆ ಸದಾ ಒಬ್ಬರಲ್ಲ ಒಬ್ಬ ಪುರುಷನಿಗೆ ಅಧೀನಳಾಗಿಯೇ ಇರಬೇಕಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನುಗಳು ಕಾಲಕ್ಕೆ ತಕ್ಕಂತೆ ಸುಧಾರಣೆಗೊಳ್ಳದೇ ಮುಸ್ಲಿಂ ಮಹಿಳೆ ಹೆಚ್ಚು ತಾರತಮ್ಯ ಎದುರಿಸುವಂತಾಗಿದೆ. ಹಿಂದೂ, ಸಿಖ್, ಕ್ರೈಸ್ತ ಮಹಿಳೆಯರು ಭಾರತ ಸಂವಿಧಾನದ ಪ್ರಕಾರ ಮದುವೆ, ವಿಚ್ಛೇದನೆ, ಆಸ್ತಿ ಹಕ್ಕು, ಪೋಷಕತ್ವ, ಪಾಲಕತನದ ಹಕ್ಕುಗಳನ್ನು ಪಡೆದಿದ್ದಾರೆ. ಆದರೆ ಮುಸ್ಲಿಂ ಮಹಿಳೆಯರಿಗೆ ಸುಧಾರಿತ ಕಾನೂನು ಸವಲತ್ತು ಸಿಗಲಿಲ್ಲ. ಭಾರತ ವಿಭಜನೆ ಮತ್ತು ಸ್ವಾತಂತ್ರ್ಯದ ಬಳಿಕ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಸರಿಪಡಿಸುವ ಪ್ರಯತ್ನಗಳಿಗೆ ಒಂದು ಹಿಂಜರಿಕೆ ಅಥವಾ ಅದಕ್ಕೆ `ಧಾರ್ಮಿಕ ಭಾವನೆ, ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ’ ಎಂಬ ನೆಪ ಸಿಕ್ಕಿಬಿಟ್ಟಿತು. ಸುಧಾರಣೆಯ ಮಾತು ಬಂದದ್ದೇ ಧಾರ್ಮಿಕ ನಾಯಕರು ತಮ್ಮ ಧಾರ್ಮಿಕ ನಂಬಿಕೆಯೊಳಗೆ ಕೈಹಾಕಬೇಡಿ ಎಂದು ಕೂಗೆಬ್ಬಿಸಿದರು. ಈಗ ಹಿಂದೂ ಬಹುಸಂಖ್ಯಾತ ರಾಷ್ಟ್ರೀಯತೆಯ ಮಾತು ಮೇಲೆ ಬಂದಿರುವಾಗ ಮುಸ್ಲಿಂ ಸಮುದಾಯ ಅಂಚಿಗೆ ದೂಡಲ್ಪಟ್ಟಿರುವಾಗ ಮುಸ್ಲಿಂ ಮಹಿಳೆ ಎಲ್ಲ ದಿಕ್ಕಿನಿಂದಲೂ ಒತ್ತಡ ಎದುರಿಸುವಂತಾಗಿದೆ. ಪಿತೃಪ್ರಾಧಾನ್ಯ ಮತ್ತು ರಾಜಕಾರಣಗಳು ಮುಸ್ಲಿಂ ಮಹಿಳೆಯರಿಗೆ ಧರ್ಮದ ಒಳಗೂ, ಹೊರಗೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲಾಗದಂತೆ ಮಾಡಿವೆ.

ಭಾರತದ ಅರ್ಧಭಾಗ ಜನಸಂಖ್ಯೆ ಮಹಿಳೆಯರಿದ್ದೇವೆ. ಆದರೆ ಒಡೆದು ಹೋಗಿದ್ದೇವೆ. ನಮ್ಮ ರಾಜಕಾರಣಿಗಳು, ಪುರೋಹಿತಶಾಹಿ-ಅಧಿಕಾರಶಾಹಿಗಳಲ್ಲಿ ಪುರುಷ ಪ್ರಾಧಾನ್ಯ, ಸಾಂಪ್ರದಾಯಿಕತೆ, ಸ್ತ್ರೀದ್ವೇಷ ತುಂಬಿಹೋಗಿದೆ. ಇಂಥ ಕಾಲದಲ್ಲಿ ಮಹಿಳೆಯರು ಸಂವಿಧಾನವನ್ನು ಎದೆಗೊತ್ತಿ ಹಿಡಿಯಬೇಕು. ಅದನ್ನು ರಕ್ಷಿಸುತ್ತ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು.

ಸಮುದಾಯ ಎದುರಿಸುವ ಬಿಕ್ಕಟ್ಟುಗಳಿಗೆ ಹೊರದಾರಿಗಳೇನು?

ಹೆಣ್ಣುಮಕ್ಕಳ ಭವಿಷ್ಯ ನೆನೆದರೆ ಒಮ್ಮೊಮ್ಮೆ ಭಯವೆನಿಸುತ್ತದೆ. ಆದರೆ ಈ ತಲೆಮಾರೇ ಹೊರಬರುವ ದಾರಿ ಕಂಡುಕೊಳ್ಳಬೇಕು. ನನಗನಿಸುವ ಮಟ್ಟಿಗೆ ಯುವಜನರು ಬದಲಾವಣೆಗೆ ತೆರೆದುಕೊಳ್ಳುತ್ತಿದ್ದಾರೆ. ಬದಲಾವಣೆಗೆ ಸಿದ್ಧವಾಗಿದ್ದಾರೆ. ಅವರ ಮೇಲೆ ಹಿಡಿತ ಹೊಂದಿರುವ ಸಾಂಪ್ರದಾಯಿಕ ಹಳೆಯ ತಲೆಮಾರು ಬದಲಾವಣೆಯ ಅವಕಾಶ ಕೊಡುತ್ತಿಲ್ಲ. ಯುವಜನರ ನಡುವೆ ಒಂದು ನಾಯಕತ್ವ ಮೂಡಬೇಕು. ಸ್ವಾರ್ಥವಿಲ್ಲದ ಸೆಕ್ಯುಲರ್ ವ್ಯಕ್ತಿಗಳಿಗೆ ರಾಜಕೀಯ ನಾಯಕತ್ವ ದೊರೆಯಬೇಕು. ಆಗ ಜಡಗೊಂಡಿರುವವೆಲ್ಲ ಬದಲಾವಣೆ ಆಗಿಯೇ ಆಗುತ್ತವೆ. ಅದನ್ನು ನಮಗೇ ಮಾಡಲು ಆಗುತ್ತದೆಂದಲ್ಲ. ನಾವಿಷ್ಟು ಮಾಡಿದೆವು. ಮುಂದೆ ಯಾರೋ ಬರುತ್ತಾರೆ, ಮತ್ತೆರೆಡು ಹೆಜ್ಜೆ ಮುಂದೊಯ್ಯುತ್ತಾರೆ. ಅದು ಆಗೇ ಆಗುತ್ತದೆ. ನಾಗರಿಕ ಹಕ್ಕು ಹೋರಾಟಗಾರರು, ಸ್ತ್ರೀವಾದಿಗಳು, ಕಲಾವಿದರು, ಮಾಧ್ಯಮ, ಅಧಿಕಾರಿವರ್ಗ ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ.

ಸಂದರ್ಶನ ಮತ್ತು ಅನುವಾದ: ಡಾ. ಎಚ್. ಎಸ್. ಅನುಪಮಾ

ಇದನ್ನೂ ಓದಿ- ಛತ್ತೀಸ್‌ಗಢ ಹೈಕೋರ್ಟ್ ತೀರ್ಪು- ಇತಿಹಾಸದಲ್ಲಿ ದಾಖಲಾದ ಅನ್ಯಾಯದ ತೀರ್ಪು

More articles

Latest article