ಗುಲ್ಫಿಶಾರನ್ನು ಬಿಡುಗಡೆಗೊಳಿಸಿ ಎಂಬ ಒಂದು ಅಭಿಯಾನವು ಇದೀಗ (ಎಪ್ರಿಲ್ 9- ಎಪ್ರಿಲ್ 16) ನಡೆಯುತ್ತಿದೆ. ನ್ಯಾಯಕ್ಕಾಗಿ ಇದೊಂದು ಸಾಮೂಹಿಕ ಕೂಗು. ಈ ಸಂದರ್ಭದಲ್ಲಿ ಜನರು ಆಕೆಯ ಕವಿತೆಗಳನ್ನು ಗಟ್ಟಿಯಾಗಿ ಓದಬೇಕು, ಅವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು, ಮನೆಗಳಲ್ಲಿ ತರಗತಿಗಳಲ್ಲಿ ಕವಿತಾ ಓದಿನ ಕಾರ್ಯಕ್ರಮ ಸಂಘಟಿಸಬೇಕು ಎಂದು ಕರೆಕೊಡಲಾಗಿದೆ. ಆ ಮೂಲಕ ʼಕಾಂಕ್ರೀಟಿನ ಗೋಡೆಗಳ ಮೂಲಕ ಗುಲ್ಫಿಶಾಳ ದನಿಯನ್ನು ನೀವು ಹತ್ತಿಕ್ಕಲಾರಿರಿʼ ಎಂದು ಜಗತ್ತಿಗೇ ನೆನಪಿಸಿಕೊಡುವುದು ಇದರ ಉದ್ದೇಶ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಕಾರ್ಕಳ ಅವರ ಲೇಖನ ಇಲ್ಲಿದೆ.
“ಬಹುತೇಕ ಎಲ್ಲವನ್ನೂ ಮರೆಯುತ್ತಿದ್ದೇನೆ – ಎಲ್ಲವನ್ನೂ;
ಆದರೆ, ನೆನಪಿರುವುದು ತಾರೀಕುಗಳು ಮಾತ್ರ”
“ಅಂತಿಮವಾಗಿ ಒಂದು ದಿನ ಈ ಹೊರೆಯಂಥ ಗೋಡೆಗಳು ಉರುಳಿಬೀಳುತ್ತವೆ
ಮತ್ತು ಅವುಗಳ ಜಾಗದಲ್ಲಿ ಮೌನಗೊಳಿಸುವ ಹೊಸ ಗೋಡೆಗಳನ್ನು ಎಬ್ಬಿಸಲಾಗುತ್ತದೆ”
ಇವು ಗುಲ್ಫಿಶಾ ಫಾತಿಮಾ (ಗುಲ್) ಅವರ, ಕ್ರಮವಾಗಿ ʼಮೆರೆಯುವುದುʼ (Forgettinģ), ʼನನ್ನ ಸುತ್ತಲ ಈ ಗೋಡೆಗಳುʼ (These walls around me) ಕವಿತೆಯ ಕೆಲ ಸಾಲುಗಳು.
ಒಂದು ಕಾಲದಲ್ಲಿ ಗುಲ್ ಗೆ ಇತಿಹಾಸದ ತಾರೀಕುಗಳೆಂದರೆ ಸದಾ ಮರೆತು ಹೋಗುವ ಸಂಗತಿಗಳಾಗಿದ್ದವು. ಆದರೆ ಈಗ ಹಾಗಲ್ಲ. ತಾರೀಕುಗಳನ್ನು ಆಕೆ ತಪ್ಪಿಯೂ ಮರೆಯುವುದಿಲ್ಲ. ತಾರೀಕುಗಳು ಆಕೆಗೆ ಈಗ ವಿಳಂಬ, ನಿರಾಕರಣೆ ಮತ್ತು ಕೈಬಿಡುವಿಕೆಯಂತಹ ಕಾಡುವ ಹೆಗ್ಗುರುತುಗಳಾಗಿವೆ. ನ್ಯಾಯಾಲಯದ ತಾರೀಕುಗಳು, ಜಾಮೀನು ವಿಚಾರಣೆ, ಸಮಯ ಕಳೆಯುವುದು ಹೀಗೆ ಪ್ರತಿಯೊಂದೂ ಆಕೆಯ ಅಳಲಿಗೆ ಕಿವಿಗೊಡಲು ನಿರಾಕರಿಸುವ ಪ್ರಭುತ್ವವನ್ನು ನೆನಪಿಸಿಕೊಡುವ ಸಂಗತಿಗಳಾಗಿವೆ.
ʼನನ್ನ ಸುತ್ತಲ ಗೋಡೆಗಳುʼ ಕವಿತೆಯು ವ್ಯವಸ್ಥೆಯು ಹೇಗೆ ಪ್ರತಿರೋಧವನ್ನು ಮತ್ತೆ ಮತ್ತೆ ಮೌನಗೊಳಿಸಲು, ಹತ್ತಿಕ್ಕಲು ಯತ್ನಿಸುತ್ತಲೇ ಇರುತ್ತದೆ ಎಂಬುದನ್ನು ಹೇಳುತ್ತದೆ. ಒಂದು ಗೋಡೆ ಉರುಳಿಬಿದ್ದಾಗ ಅದೇ ಜಾಗದಲ್ಲಿ ಮತ್ತೊಂದು ಗೋಡೆಯನ್ನು ಎಬ್ಬಿಸಿ ನಿಲ್ಲಿಸಲಾಗುತ್ತದೆ. ವ್ಯವಸ್ಥೆಯೆಂದರೇ ಹಾಗೆಯೇ. ದಬ್ಬಾಳಿಕೆ ನಿರಂತರ. ಅದು ಭಿನ್ನ ಅಭಿಪ್ರಾಯವನ್ನು, ಪ್ರತಿರೋಧವನ್ನು ಯಾವತ್ತೂ ಸಹಿಸುವುದಿಲ್ಲ.
ಜೈಲಿನಲ್ಲಿ ಐದು ವರ್ಷ!
ಇವೆಲ್ಲ ಕೇವಲ ಕವಿತೆಗಳಲ್ಲ. ಸತ್ಯ, ನ್ಯಾಯದ ಪರ ನಿಂತುದಕ್ಕೆ ಜೈಲು ಸೇರಬೇಕಾಗಿ ಬಂದ ಎಳೆಯ ಹೆಣ್ಣುಮಗಳೊಬ್ಬಳ ಅಂತರಂಗದ ಅಳಲುಗಳು. ಸಾಮಾಜಿಕ ಕಾಳಜಿಯ, ಸೂಕ್ಷ್ಮ ಸಂವೇದನೆಯ, ಧೈರ್ಯಶಾಲಿ, ಪ್ರತಿಭಾವಂತ ಹುಡುಗಿ, ದಿಲ್ಲಿ ನಿವಾಸಿ, ಎಂಬಿಎ ಪದವೀಧರೆ ಗುಲ್ಫಿಶಾ ಫಾತಿಮಾ (ಗುಲ್) ವಿಚಾರಣೆಯೇ ಇಲ್ಲದೆ ಜೈಲಿನಲ್ಲಿ ಉಳಿದು ಎಪ್ರಿಲ್ 9 ಕ್ಕೆ ಐದು ವರ್ಷಗಳಾದವು!
ಗುಲ್ ಮಾಡಿದ ಘನಘೋರ ತಪ್ಪಾದರೂ ಏನು? ದೇಶದ ಪ್ರಜೆಗಳು ಯಾವುದೇ ಜಾತಿ, ಜನಾಂಗ, ಮತಧರ್ಮ, ಲಿಂಗಕ್ಕೆ ಸೇರಿರಲಿ ಅವರೆಲ್ಲರೂ ಸಮಾನರು, ಅವರಿಗೆ ಸಮಾನ ಹಕ್ಕುಗಳಿವೆ ಎಂದು ಹೇಳಿದ ಭಾರತದ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಮುಸ್ಲಿಮರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸುವ ಮೋದಿ ಸರಕಾರದ ಕ್ರೂರ ನಡೆ ʼಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ʼ ವಿರುದ್ಧ ಜನರನ್ನು ಸಂಘಟಿಸಿದ್ದು. ಇವನ್ನೆಲ್ಲ ಆಕೆ ಮಾಡಿದ್ದಾದರೂ ಹೇಗೆ? ಸಂವಿಧಾನದ ಪುಸ್ತಕ ಹಿಡಿದು, ಅಹಿಂಸೆ ಶಾಂತಿಯ ವಕಾಲತ್ತು ಮಾಡುತ್ತಾ, ಗಾಂಧಿಯ ಹೋರಾಟದ ಹಾದಿಯಲ್ಲಿ. ಇಷ್ಟಕ್ಕೇ ಬಂಧನ (09, ಎಪ್ರಿಲ್,2020), ವರ್ಷ ವರ್ಷಗಳ ವಿಚಾರಣೆಯೇ ಇಲ್ಲದೆ, ಅಪರಾಧ ಸಾಬೀತಾಗದೆಯೇ ಜೈಲು.
ಗುಲ್ ಮಾತ್ರವಲ್ಲ, ದಿಲ್ಲಿ ದಂಗೆಯ ಪ್ರಕರಣದಲ್ಲಿ ಉಮರ್ ಖಲೀದ್, ಶರ್ಜಿಲ್ ಇಮಾಮ್ ಇವರೆಲ್ಲ ನಿರಪರಾಧಿಗಳು, ಒಂದಲ್ಲ ಒಂದು ದಿನ ಅವರೆಲ್ಲ ನಿರಪರಾಧಿಗಳ ಹಣೆಪಟ್ಟಿ ಹೊತ್ತು ಹೊರಬರುತ್ತಾರೆ ಎನ್ನುವುದು, (ಹಾಗೆಯೇ ಈಗಣ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹಿಂಸೆಯನ್ನು ಪ್ರಚೋದಿಸಿದ ಒಬ್ಬ ಅಪರಾಧಿ ಎನ್ನುವುದು) ಜಗತ್ತಿಗೆ ಗೊತ್ತು. ಆದರೆ ದೇಶದಲ್ಲಿ ಈಗ ನ್ಯಾಯಾಂಗದ ಮಟ್ಟಿಗೆ ಪ್ರಕ್ರಿಯೆಯೇ ಒಂದು ಶಿಕ್ಷೆಯಲ್ಲವೇ? ಮಾಡದ ತಪ್ಪಿಗೆ ಅನುಭವಿಸಿದ ಶಿಕ್ಷೆಗೆ ಪರಿಹಾರ ನೀಡುವವರು ಯಾರು?
ಈಗ ಕೇವಲ ಮತಧರ್ಮದ ಗುರುತಿನ ಕಾರಣಕ್ಕೇ ನೀವು, ಮಾಡದ ತಪ್ಪಿಗೂ ಜೈಲು ಸೇರಬೇಕಾಗುವ, ಮತ್ತು ತಪ್ಪು ಮಾಡಿಯೂ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ವಿಶೇಷಾವಕಾಶ ಹೊಂದಿರುವ ಕಾಲದಲ್ಲಿ ಗುಲ್ಫಿಶಾ, ಉಮರ್, ಶರ್ಜಿಲ್ ಮೊದಲಾದವರು ಜೈಲಿನಲ್ಲಿರಬೇಕಾಗಿ ಬಂದಿರುವುದು, ಕಪಿಲ್ ಮಿಶ್ರಾ ಮೇಲೆ ಎಫ್ ಐ ಆರ್ ಕೂಡಾ ಬೀಳದಿರುವುದು, ಆತನನ್ನು ಬಚಾವು ಮಾಡಲು ಖುದ್ದು ದಿಲ್ಲಿ ಪೊಲೀಸರೇ ಕೋರ್ಟ್ ಗೆ ಹೋಗುತ್ತಿರುವುದು ಇವೆಲ್ಲ ಅರ್ಥಮಾಡಿಕೊಳ್ಳಲಾಗದಷ್ಟು ಕಠಿಣ ಸಂಗತಿಯೇನಲ್ಲ.
ಗುಲ್ಫಿಶಾ ಪ್ರಕರಣ ಪ್ರಭುತ್ವದ ಬೃಹತ್ ಕ್ರೌರ್ಯವೊಂದರ ಪುಟ್ಟ ರೂಪ. ಇಲ್ಲಿ ಭಿನ್ನ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಅಪರಾಧೀಕರಣಗೊಳಿಸಲಾಗುತ್ತದೆ. ಮುಸ್ಲಿಮರ ವಿರೋಧದ ದನಿಗಳನ್ನು ಅಡಗಿಸಲಾಗುತ್ತದೆ, ಪ್ರಭುತ್ವವೇ ಕಾನೂನನ್ನು ಒಂದು ಅಸ್ತ್ರವನ್ನಾಗಿ ಕೈಗೆತ್ತಿಕೊಳ್ಳುತ್ತದೆ. ಗುಲ್ಫಿಶಾ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಲು ಆಕೆಯ ಪ್ರತಿಭಟನೆ ಮಾತ್ರವಲ್ಲ, ಆಕೆ ಸ್ಪಷ್ಟ ಮಾತುಗಳಲ್ಲಿ ಬಡಿದೆಬ್ಬಿಸುವಂತೆ ಮಾತನಾಡಬಲ್ಲವಳು, ವಿದ್ಯಾವಂತೆ. ದಿಟ್ಟೆ, ಮಂಡಿಯೂರಲು ಸಿದ್ಧ ಇರದ ಎಳೆಯ ಮುಸ್ಲಿಂ ಮಹಿಳೆ ಎಂಬುದೂ ಒಂದು ಕಾರಣ.
ಕಟಕಟೆಯಲ್ಲಿ ನಿಂತಿರುವುದು ನ್ಯಾಯಾಂಗ
ನರೇಂದ್ರ ಮೋದಿಯವರು “ಭಾರತವು, ಪ್ರಜಾತಂತ್ರದ ತಾಯಿ”, “ನಮ್ಮ ಡಿಎನ್ ಎ ಯಲ್ಲಿಯೇ ಪ್ರಜಾತಂತ್ರ ಇದೆ”, “ಟೀಕೆಯು ಪ್ರಜಾತಂತ್ರದ ಆತ್ಮ” ಎಂದೆಲ್ಲ ಭಾಷಣ ಬಿಗಿಯುತ್ತಾರೆ. ಆದರೆ ಅವರ ಆಡಳಿತದ ಕಾಲದಲ್ಲಿ ಸರಕಾರದ ವಿರುದ್ಧ ದನಿ ಎತ್ತಿದ ಕೇವಲ ಕಾರಣಕ್ಕೆ ಜೈಲು ಸೇರಿದ, ಇನ್ನೂ ಜೈಲಿನಲ್ಲಿಯೇ ಉಳಿದ ಕವಿ, ಲೇಖಕರು, ವಿದ್ವಾಂಸರು, ಪತ್ರಕರ್ತರು, ಹೋರಾಟಗಾರರ ಪಟ್ಟಿ ಬಲು ದೀರ್ಘವಿದೆ. ಸರಕಾರವೊಂದರ ನಡೆಯನ್ನಾದರೋ ಯಾವತ್ತೂ ಅರ್ಥಮಾಡಿಕೊಳ್ಳಬಹುದು. ಯಾವ ಸರಕಾರವೂ ವಿರೋಧದ ದನಿಗಳನ್ನು ಇಷ್ಟಪಡುವುದಿಲ್ಲ. ಅವನ್ನು ಹೊಸಕಿ ಹಾಕಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಅನುಸರಿಸುತ್ತದೆ. ಆದರೆ ಇದನ್ನು ತಡೆಯಲೆಂದೇ ಇರುವ ಒಂದು ವ್ಯವಸ್ಥೆಯಾದ ನ್ಯಾಯಾಂಗ ಏನು ಮಾಡುತ್ತಿದೆ ಎನ್ನುವುದರ ಮೇಲೆ ದೇಶದ ಪ್ರಜಾತಂತ್ರದ ಆರೋಗ್ಯವನ್ನು ಅಳೆಯ ಬೇಕಾಗುತ್ತದೆ. ಉಮರ್, ಗುಲ್ಫಿಶಾ, ಶರ್ಜಿಲ್ ಮೊದಲಾದ ಯುವಕರ ವಿಷಯದಲ್ಲಿ ಕಟಕಟೆಯಲ್ಲಿ ನಿಂತಿರುವುದು ಈ ಮಂದಿಯಲ್ಲ. ಬದಲಿಗೆ ಕಟಕಟೆಯಲ್ಲಿ ನಿಂತಿರುವುದು ದೇಶದ ನ್ಯಾಯಾಂಗ.
ಗುಲ್ಫಿಶಾರನ್ನು ಬಿಡುಗಡೆಗೊಳಿಸಿ ಎಂಬ ಒಂದು ಅಭಿಯಾನವು ಇದೀಗ (ಎಪ್ರಿಲ್ 9 -ಎಪ್ರಿಲ್ 16) ನಡೆಯುತ್ತಿದೆ. ನ್ಯಾಯಕ್ಕಾಗಿ ಇದೊಂದು ಸಾಮೂಹಿಕ ಕೂಗು. ಈ ಸಂದರ್ಭದಲ್ಲಿ ಜನರು ಆಕೆಯ ಕವಿತೆಗಳನ್ನು ಗಟ್ಟಿಯಾಗಿ ಓದಬೇಕು, ಅವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು, ಮನೆಗಳಲ್ಲಿ ತರಗತಿಗಳಲ್ಲಿ ಕವಿತಾ ಓದಿನ ಕಾರ್ಯಕ್ರಮ ಸಂಘಟಿಸಬೇಕು ಎಂದು ಕರೆಕೊಡಲಾಗಿದೆ. ಆ ಮೂಲಕ ʼಕಾಂಕ್ರೀಟಿನ ಗೋಡೆಗಳ ಮೂಲಕ ಗುಲ್ಫಿಶಾಳ ದನಿಯನ್ನು ನೀವು ಹತ್ತಿಕ್ಕಲಾರಿರಿʼ ಎಂದು ಜಗತ್ತಿಗೇ ನೆನಪಿಸಿಕೊಡುವುದು ಇದರ ಉದ್ದೇಶ.
ʼಗುಲ್ಫಿಶಾ ಫಾತಿಮಾರನ್ನು ಜೈಲಿನಿಂದ ಬಿಡುಗಡೆಗೊಳಿಸಿʼ ಎಂಬ ಈ ಅಭಿಯಾನ ಯಶಸ್ವಿಯಾಗಲಿ, ಹಾಗೆಯೇ ಗುಲ್ಫಿಶಾ ಸಹಿತ ಜೈಲಿನಲ್ಲಿರುವ ಎಲ್ಲ ಹೋರಾಟಗಾರರು ಬೇಗನೇ ಜೈಲಿನಿಂದ ಹೊರಬರುವಂತಾಗಲಿ ಎಂದು ಆಶಿಸೋಣ.
ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ- ಶ್ರೀಸಾಮಾನ್ಯರ ಬವಣೆಯೂ ರಾಜಕೀಯ ನಾಟಕಗಳೂ