ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷಾ ಬಳಕೆಯನ್ನು ಕಡ್ಡಾಯಗೊಳಿಸುವ ಮಹತ್ವದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ’ವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು, ಹೋಟೆಲ್ಗಳು ಮತ್ತು ಮುಂತಾದೆಡೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರಮಾಣದಲ್ಲಿ ಪ್ರದರ್ಶಿಸುವುದನ್ನು ವಿಧೇಯಕದಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಅವರ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧೇಯಕವನ್ನು ಮಂಡಿಸಿದರು.
ಇದಕ್ಕಾಗಿ ಅಧಿನಿಯಮದ ಸೆಕ್ಷನ್ 13ಕ್ಕೆ ತಿದ್ದುಪಡಿ ತರಲಾಗಿದ್ದು, ಭಾಷಾ ಅನುಷ್ಠಾನ ರಾಜ್ಯ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕರನ್ನು ಸದಸ್ಯರನ್ನಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರನ್ನು ಸಂಚಾಲಕರನ್ನಾಗಿಯೂ ನೇಮಿಸಲು ನಿರ್ಧರಿಸಲಾಗಿದೆ. ಇದರಿಂದ ಇನ್ನು ಮುಂದೆ ಕಾಟಾಚಾರಕ್ಕೆ ಕನ್ನಡ ಬರದಂತೆ ಮಾಡುವುದು ಅಥವಾ ಅಸಡ್ಡೆಯಿಂದ ನಾಮಫಲಕದ ಒಂದು ಮೂಲೆಯಲ್ಲಿ ಕನ್ನಡ ಭಾಷೆ ಬಳಸುವುದಕ್ಕೆ ಕಡಿವಾಣ ಬೀಳಲಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಾರಾಯಣಗೌಡ ನೇತೃತ್ವದಲ್ಲಿ ಕರವೇ ಸಂಘಟನೆ ಹಾಗೂ ಕನ್ನಡಪರ ಹೋರಾಟಗಾರರು ಕನ್ನಡ ನಾಮಫಲಕದ ಪರವಾಗಿ ಹೋರಾಟ ನಡೆಸಿದ್ದವು. ಈ ವೇಳೆ ಕನ್ನಡ ಹೋರಾಟಗಾರರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ಕನ್ನಡ ಸಂಘಟನೆಗಳ ಒತ್ತಡಕ್ಕೆ ಮಣಿದು 60%,40% ಕನ್ನಡ ಕಡ್ಡಾಯ ಕಾನೂನು ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದರು.
ಈ ಕುರಿತಾಗಿ ಸುಗ್ರೀವಾಜ್ಞೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಆದರೆ ಸುಗ್ರೀವಾಜ್ಞೆಗೆ ಅನುಮೋದನೆ ನೀಡದೆ ಕಡತವನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದರು. ಈ ಹಿನ್ನಲೆಯಲ್ಲಿ ಕಾನೂನು ಜಾರಿಗೆ ತರಲು ವಿಧೇಯಕ ಮಂಡನೆ ಮಾಡಲಾಗಿದೆ.
ವಿಧೇಯಕ ಮಂಡನೆಯ ಪ್ರಮುಖ ಅಂಶಗಳು:-
- ರಸ್ತೆಗಳು, ಬಡಾವಣೆ ಪ್ರದೇಶದ ನಾಮಫಲಕದಲ್ಲೂ ಕನ್ನಡ ಕಡ್ಡಾಯ.
- ರಾಜ್ಯದೊಳಗೆ ತಯಾರಿಸಿದ ಉತ್ಪನ್ನಗಳ ಹೆಸರು, ಮಾಹಿತಿಯಲ್ಲೂ ಇತರ ಭಾಷೆಯ ಜೊತೆಗೆ ಕನ್ನಡ ಕಡ್ಡಾಯ.
- 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಜ್ಯ, ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡ ಕೋಶ ಸ್ಥಾಪನೆಗೆ ಸೂಚನೆ.
- ದಿನ ನಿತ್ಯದ ವ್ಯವಹಾರಗಳ ನಿರ್ವಹಣೆಯಲ್ಲಿ ಕನ್ನಡ ಭಾಷೆ ಬಳಕೆಗೆ ಹಿರಿಯ ಉದ್ಯೋಗಿಗಳ ನೇತೃತ್ವದಲ್ಲಿ ಕನ್ನಡ ಕೋಶ ಸ್ಥಾಪಿಸಲು ಸೂಚನೆ.
- ಕನ್ನಡ ಭಾಷೆ ಮಾತನಾಡಲು ಬರದ ಉದ್ಯೋಗಿಗಳಿಗೆ ಕನ್ನಡ ಪರಿಚಯಿಸಲು ಕನ್ನಡ ಕಲಿಕಾ ಘಟಕ ಸ್ಥಾಪಿಸಲು ಸೂಚನೆ.
- ರಾಜ್ಯದ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರ ಜೊತೆಗಿನ ಸಂಪರ್ಕ, ಪತ್ರ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯ.