Saturday, July 27, 2024

ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವುದಿಲ್ಲ : ಅಧಿವೇಶನಕ್ಕೆ ಉತ್ತರಿಸಿದ ಸರ್ಕಾರ

Most read

ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಹಾಗಾಗಿ, ಅವರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸಚಿವ ಡಾ. ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 16 ಸಾವಿರ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವಂತೆ ಪ್ರಸ್ತಾಪ ಇಟ್ಟಿದ್ದಕ್ಕೆ ರಾಜ್ಯ ಸರ್ಕಾರ ನಿರಾಕರಿಸಿದೆ.

ವಿಧಾನ ಪರಿಷತ್ ಕಲಾಪದಲ್ಲಿ ಇಂದು ನಿಯಮ 72ರ ಅಡಿ ಸದಸ್ಯರಾದ ಅ.ದೇವೇಗೌಡ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಯಡಿ ಚಿದಾನಂದ, ಮರಿತಿಬ್ಬೇಗೌಡ, ಬೋಜೇಗೌಡ, ಡಿ.ಎಸ್.ಅರುಣ್ ಅವರ ಚರ್ಚೆಗೆ ಉತ್ತರಿಸಿದ ಸಚಿವರು, “ಉನ್ನತ ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ನೇಮಕಾತಿ ಮಾಡಿಕೊಳ್ಳಲು ಅವಕಾಶವಿಲ್ಲ. ಇದಕ್ಕೆ ಬದಲಾಗಿ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಆಯಾ ಶೈಕ್ಷಣಿಕ ವರ್ಷಕ್ಕೆ ಸೀಮಿತವಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ತಾತ್ಕಾಲಿಕ ವ್ಯವಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಕುಮಾರ ನಾಯ್ಕ್ ಸಮಿತಿ ವರದಿಯೂ ಕೂಡ ಅತಿಥಿ ಉಪನ್ಯಾಸಕರ ಖಾಯಮಾತಿ ಸಾಧ್ಯವಿಲ್ಲ ಎಂದಿದೆ. ಹಾಗಾಗಿ, ಆ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆ ಬಗ್ಗೆ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ವರದಿಯ ಪ್ರಕಾರ ಪರಿಶೀಲನೆ ಮಾಡಲಾಗಿದೆ. ವಿವಿಧ ಮಾನದಂಡದ ಆಧಾರದ ಮೇಲೆ ವೇತನ ನಿಗದಿ ಮಾಡಲಾಗಿದೆ. 26 ಸಾವಿರದಿಂದ 32 ಸಾವಿರವರೆಗೆ ವೇತನ ನೀಡಲಾಗುತ್ತಿದೆ.

ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅತಿಥಿ ಉಪನ್ಯಾಸಕರನ್ನು ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಕಾಲೇಜುಗಳಲ್ಲಿ ಹೆಚ್ಚುವರಿ ಅವಧಿಗೆ ಶೈಕ್ಷಣಿಕ ವರ್ಷಕ್ಕೆ ಸೀಮಿತವಾಗಿ ತಾತ್ಕಾಲಿಕ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಸ್ಪಷ್ಟನೆ ನೀಡಿದರು.

More articles

Latest article