ಬೆಂಗಳೂರು : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರಕ್ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಲ್ಲಿಸಿದ್ದಾರೆ.
ಮಹಿಳಾ ಅಭಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ವೃದ್ಧಿ ನಿಗಮದ ಬಹುನಿರೀಕ್ಷಿತ ಸಮೀಕ್ಷಾ ವರದಿ ಇದಾಗಿದೆ.
ರಾಜ್ಯದ 15 ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ ಮರು ಸಮೀಕ್ಷೆಯಿಂದ ಒಟ್ಟು 23,395 ಮಾಜಿ ದೇವದಾಸಿ ಮಹಿಳೆಯರು ಗುರುತಿಸಿಕೊಂಡಿದ್ದಾರೆ.
ಮರು ಸಮೀಕ್ಷೆಯ ವಿಶ್ಲೇಷಣಾ ವರದಿಯಲ್ಲಿ ಮಾಜಿ ದೇವದಾಸಿ ಮಹಿಳೆಯರು ಹಾಗೂ 1ನೇ, 02ನೇ . 03ನೇ ತಲೆಮಾರಿನ ಕುಟುಂಬದವರ ಮಾಹಿತಿ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿಗಾಗಿ ಮಾಡಲಾಗಿರುವ ಶಿಫಾರಸ್ಸುಗಳು ಸಮೀಕ್ಷಾ ವರದಿಯಲ್ಲಿವೆ.
ಸಮೀಕ್ಷೆಯ ಉದ್ದೇಶ:
ಈ ಹಿಂದಿನ ಸಮೀಕ್ಷೆಯಲ್ಲಿ ಒಳಪಟ್ಟ ಮಾಜಿ ದೇವದಾಸಿ ಮಹಿಳೆಯರ ದತ್ತಾಂಶದಲ್ಲಿ ಲಭ್ಯವಿಲ್ಲದ ಮಾಜಿ ದೇವದಾಸಿ ಮಹಿಳೆಯರ ವಯಸ್ಸು, ವಿಳಾಸ, ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕಸ್ಥಿತಿ ಹಾಗೂ ಅವರ 1ನೇ ತಲೆಮಾರು, 2ನೇ ತಲೆಮಾರು ಮತ್ತು 3ನೇ ತಲೆಮಾರಿನ ಮಕ್ಕಳ ಮಾಹಿತಿಗಳನ್ನು ಸಂಗ್ರಹಿಸುವುದು. ಕಾರಣಾಂತರಗಳಿಂದ ಈ ಹಿಂದಿನ ಸಮೀಕ್ಷೆಯಿಂದ ಹೊರಗುಳಿದಿರುವ ಮಾಜಿ ದೇವದಾಸಿ ಮಹಿಳೆಯರನ್ನು ಸಮೀಕ್ಷಾ ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಅವರ ಶಿಕ್ಷಣ, ಸಾಮಾಜಿಕ ಮತ್ತು ಅರ್ಥಿಕ ಸ್ಥಿತಿ ಹಾಗೂ ಅವರ 1ನೇ ತಲೆಮಾರು, 2ನೇ ತಲೆಮಾರು ಮತ್ತು 3ನೇ ತಲೆಮಾರಿನ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಮಾಜಿ ದೇವದಾಸಿ ಮಹಿಳೆಯರ ಸರ್ವತೋಮುಖ ಪುನರ್ವಸತಿಗಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು. ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಮಕ್ಕಳು ಸಮಾಜದಲ್ಲಿ ಗೌರವಯುತ ಬದುಕನ್ನು ನಡೆಸಲು ಸೂಕ್ತ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವುದು ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.
ಸಚಿವರ ಅಧ್ಯಕ್ಷತೆಯಲ್ಲಿ ಸಭೆ: ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಅಧ್ಯಕ್ಷತೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳು, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಸಮುದಾಯ ಆಧಾರಿತ ಸಂಖ್ಯೆಗಳ ಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸಲಾಗಿತ್ತು.
ಸ್ಥಿತಿಗತಿಗಳ ಬಗ್ಗೆ, ವಿಶ್ಲೇಷಣಾ ವರದಿ: ಅತೀ ಹೆಚ್ಚು ಮಾಜಿ ದೇವದಾಸಿ ಮಹಿಳೆಯರು ಹೊಂದಿರುವ ಮೊದಲ 05 ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 4,189, ವಿಜಯನಗರ ಜಿಲ್ಲೆಯಲ್ಲಿ 3,876, ಬೆಳಗಾವಿ ಜಿಲ್ಲೆಯಲ್ಲಿ 2,649, ಕೊಪ್ಪಳ ಜಿಲ್ಲೆಯಲ್ಲಿ 2,469 ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 2,333 ಜನರು ಇರುವುದು ತಿಳಿದು ಬಂದಿದೆ.
ಸಮೀಕ್ಷೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಹಾಗೂ ಕುಟುಂಬದವರ 03 ತಲೆಮಾರಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ಶೈಕ್ಷಣಿಕ ಮಾಹಿತಿ, ಕುಟುಂಬದ ಸದಸ್ಯರ ಅವಲಂಬಿತರ ಮಾಹಿತಿ, ಉದ್ಯೋಗದ ಮಾಹಿತಿ, ಕೃಷಿ ಭೂಮಿಯ ಮೂಲದ ಮಾಹಿತಿ, ಆದಾಯದ ಮಾಹಿತಿ, ಕೌಶಲ್ಯ ತರಬೇತಿ ಮಾಹಿತಿ, ಆರೋಗ್ಯದ ಸ್ಥಿತಿಗತಿ, ಮಾಶಾಸನ ಮಾಹಿತಿ ಹಾಗೂ ಮೂಲಭೂತ ಸೌಕರ್ಯಗಳ ಮಾಹಿತಿಯು ಸಮೀಕ್ಷೆಯಲ್ಲಿ ಒಳಗೊಂಡಿರುತ್ತದೆ.
ಪುನರ್ವಸತಿಗಾಗಿ ಶಿಫಾರಸ್ಸುಗಳು: ಶೈಕ್ಷಣಿಕ ಕ್ಷೇತ್ರದಲ್ಲಿ: ಶಾಲಾ ಕಾಲೇಜುಗಳಲ್ಲಿ ಹಾಗೂ ವಿವಿಧ ಅರ್ಜಿ ನಮೂನೆಗಳಲ್ಲಿ ತಂದೆಯ ಹೆಸರು ನಮೂದಿಸುವುದನ್ನು ಕಡ್ಡಾಯಗೊಳಿಸದಂತೆ ಕ್ರಮವಹಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡಲು ವಿಶೇಷ ವಿದ್ಯಾರ್ಥಿವೇತನ ಯೋಜನೆ, ಆಯಾ ವರ್ಗದ ಇಲಾಖೆಗಳ ಮುಖಾಂತರ ಜಾರಿಯಲ್ಲಿರುವ ಶಿಕ್ಷಣಕ್ಕೆ ಸಂಬಂಧಿಸಿದ ವಸತಿ ಶಾಲೆಗಳ ಸೌಲಭ್ಯ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು, ವಿಶೇಷ ತರಬೇತಿಯನ್ನು ನೀಡಲು ಸಮೀಕ್ಷಾ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಪುನರ್ವಸತಿ ಕಲ್ಪಿಸಲು ಸರ್ಕಾರವು “ವಿಶೇಷ ಪ್ಯಾಕೇಜ್” ಅನ್ನು ಘೋಷಣೆ ಮಾಡಲು ಸಮೀಕ್ಷಾ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

