ಪಾಟ್ನಾ: ಬಿಹಾರದ ಲಖಿಸರಾಯ್ ಜಿಲ್ಲೆಯ ಪ್ರಸಿದ್ಧ ಅಶೋಕಧಾಮ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಏಳು ಭಕ್ತರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ಶ್ರಾವಣ ಮಾಸದ ಮೂರನೇ ಸೋಮವಾರದ ಹಿನ್ನೆಲೆಯಲ್ಲಿ ಅಶೋಕಧಾಮದ ಇಂದ್ರದಮನೇಶ್ವರ ಮಹಾದೇವ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಶಿವನಿಗೆ ಜಲಾಭಿಷೇಕ ಮಾಡಲು ಸಾವಿರಾರು ಭಕ್ತರು ದೇವಸ್ಥಾನದತ್ತ ಆಗಮಿಸಿದ್ದರಿಂದ ಭಾರೀ ಜನದಟ್ಟಣೆ ಉಂಟಾಗಿತ್ತು.
ಬೆಳಗ್ಗೆ ಸುಮಾರು 6.30ರಿಂದ 6.45ರ ವೇಳೆಗೆ ಎರಡು ರೈಲುಗಳು ಅಶೋಕಧಾಮ ನಿಲ್ದಾಣದಲ್ಲಿ ನಿಂತಿದ್ದರಿಂದ ಏಕಾಏಕಿ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನದತ್ತ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ಜನದಟ್ಟಣೆ ನಿಯಂತ್ರಣ ತಪ್ಪಿ ನೂಕುನುಗ್ಗಲು ಉಂಟಾಗಿದೆ. ಜನರು ಒಬ್ಬರ ಮೇಲೊಬ್ಬರು ಬಿದ್ದ ಪರಿಣಾಮ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ವಿದ್ಯುತ್ ಕಂಬ ಅಥವಾ ತಂತಿ ಬಿದ್ದಿರುವುದರಿಂದ ವಿದ್ಯುತ್ ಹರಿದಿದೆ ಎಂಬ ಆತಂಕವೂ ಜನರಲ್ಲಿ ಮೂಡಿತ್ತು ಎನ್ನಲಾಗಿದ್ದು, ಈ ಬಗ್ಗೆ ಹರಿದ ವದಂತಿಯಿಂದ ಕೆಲವರು ಏಕಾಏಕಿ ಓಡಲು ಆರಂಭಿಸಿದ್ದೇ ನೂಕುನುಗ್ಗಲು ಮತ್ತಷ್ಟು ಹೆಚ್ಚಲು ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದೇವಸ್ಥಾನದ ಬಳಿ ಅಳವಡಿಸಲಾಗಿದ್ದ ಬ್ಯಾರಿಕೇಡಿಂಗ್ ಕೂಡ ಮುರಿದುಬಿದ್ದಿರುವ ಬಗ್ಗೆ ವರದಿಯಾಗಿದೆ.
ಘಟನೆಯ ಬಳಿಕ ಸ್ಥಳದಲ್ಲಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಕುರಿತು ಜಿಲ್ಲಾಡಳಿತ ತನಿಖೆ ಆರಂಭಿಸಿದ್ದು, ಕಾಲ್ತುಳಿತಕ್ಕೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ದೇವಸ್ಥಾನದಲ್ಲಿ ಭಕ್ತರ ನಿಯಂತ್ರಣ, ಬ್ಯಾರಿಕೇಡಿಂಗ್ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಇದೀಗ ಎದುರಾಗಿವೆ.
ಅಶೋಕಧಾಮ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೋಮವಾರದಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುವುದು ಸಾಮಾನ್ಯವಾಗಿದ್ದು, ಮೂರನೇ ಸೋಮವಾರದ ಹಿನ್ನೆಲೆಯಲ್ಲಿ ಈ ಬಾರಿ ಜನಸಂದಣಿ ಮತ್ತಷ್ಟು ಹೆಚ್ಚಾಗಿತ್ತು. ದುರಂತದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

