ಕೆನಡಾ: ಇಲ್ಲಿನ ಬ್ರಿಟಿಷ್ ಕೊಲಂಬಿಯಾ ಎಂಬ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಸುಮಾರು 10 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಮಾಹಿತಿ ಪ್ರಕಾರ, ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಿಂದ ಇಪ್ಪತ್ತೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗುಂಡು ಹಾರಿಸಿರುವ ವ್ಯಕ್ತಿಯೂ ಕೂಡ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ವಿವರ ನೀಡಿದ್ದಾರೆ.
ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಂತ್ರಸ್ತರು ಮತ್ತು ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ನಡುವಿನ ಸಂಬಂಧದ ಕುರಿತು ತನಿಖೆ ನಡೆಸುತ್ತಿದ್ದೇವೆ. ಶಂಕಿತನನ್ನು ಹೊರತುಪಡಿಸಿ ಆರು ಇತರ ವ್ಯಕ್ತಿಗಳು ಶಾಲೆಯೊಳಗೆ ಮೃತಪಟ್ಟಿದ್ದಾರೆ. ಗಂಭೀರ ಅಥವಾ ಮಾರಣಾಂತಿಕವಾಗಿ ಗಾಯಗೊಂಡ ಇಬ್ಬರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯ ಬಳಿಕ ಪೀಸ್ ರಿವರ್ ಸೌತ್ ಸ್ಕೂಲ್ ಡಿಸ್ಟ್ರಿಕ್ಟ್ ಮಾಧ್ಯಮಿಕ ಶಾಲೆ ಮತ್ತು ಟಂಬ್ಲರ್ ರಿಡ್ಜ್ ಎಲಿಮೆಂಟರಿ ಶಾಲೆಯನ್ನು ಲಾಕ್ಡೌನ್ ಮಾಡಲಾಗಿದೆ.
ಕೆನಡಾ ಪ್ರಧಾನಿ ಘಟನೆಗೆ ತೀವ್ರ ಆಕ್ರೋಶವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

