Sunday, September 8, 2024

ಕಾರ್ಪೋರೇಟ್‌ ಕೇಂದ್ರಿತ ಬಜೆಟ್‌ನಲ್ಲಿ ಸಾಮಾನ್ಯರಿಗೆ ಸೊನ್ನೆ

Most read

ವಿಕಸಿತ ಭಾರತ ತನ್ನ 2047ರ ಅಮೃತ ಕಾಲದ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದರೆ ದೇಶದ ತಳಮಟ್ಟದ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಯಾಗಬೇಕಿದೆ. ಕಾರ್ಪೋರೇಟ್‌ ಪ್ರೇರಿತ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಹಜವಾಗಿ ಆಗಬಹುದಾದ ವ್ಯತ್ಯಯಗಳಿಗೆ ಭಾರತ ಸಾಕ್ಷಿಯಾಗುತ್ತಿರುವುದು ಸ್ಪಷ್ಟ. ನವ ಉದಾರವಾದಿ ಕಾರ್ಪೋರೇಟೀಕರಣ ಹಾದಿಯಲ್ಲಿ ಬಜೆಟ್‌ ಒಂದು ಸಾಂತ್ವನದ ಹೆಜ್ಜೆ ಮಾತ್ರನಾ ದಿವಾಕರ

ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬಜೆಟ್‌ ಎಂಬ ಪ್ರಕ್ರಿಯೆ ಸಮಾಜದ ಎರಡು ವರ್ಗಗಳಲ್ಲಿ ಅತಿಯಾದ ಉತ್ಸಾಹವನ್ನು ಉಂಟುಮಾಡುತ್ತದೆ. ಮೊದಲನೆಯದು ತಮ್ಮ ಬಂಡವಾಳದ ವಿಸ್ತರಣೆಗಾಗಿ ಆಳ್ವಿಕೆಯ ಆರ್ಥಿಕ ನೀತಿಯನ್ನೇ ಅವಲಂಬಿಸುವ ಕಾರ್ಪೋರೇಟ್‌ ಮಾರುಕಟ್ಟೆ. ಎರಡನೆಯದು ಅಭಿವೃದ್ಧಿ ರಾಜಕಾರಣದ ಪ್ರಧಾನ ಫಲಾನುಭವಿಗಳಾದ ಸಮಾಜದ ಮಧ್ಯಮ ವರ್ಗದ ಜನತೆ. ಈ ಎರಡೂ ವರ್ಗಗಳನ್ನು ಸಂತೃಪ್ತಗೊಳಿಸಿಬಿಟ್ಟರೆ, ಎಲ್ಲ ಮಾಧ್ಯಮಗಳೂ ಭಟ್ಟಂಗಿಗಳಂತೆ ಬಜೆಟ್‌ ಎಂಬ ಕಡತದ ಉತ್ಸವ ನಡೆಸಲು ಮುಂದಾಗಿಬಿಡುತ್ತವೆ. ಇದು ಕಳೆದ ಮೂರು ದಶಕಗಳ  ನವ ಉದಾರವಾದಿ ಯುಗದಲ್ಲಿ ಭಾರತ ಕಂಡಿರುವ ವಾಸ್ತವ. 2024 ಇದಕ್ಕೆ ಹೊರತಾಗಿರಲು ಸಾಧ್ಯವೇ ಇಲ್ಲ. ಕಳೆದ ಚುನಾವಣೆಗಳಲ್ಲಿ ತಳಸಮಾಜ ಅನುಭವಿಸುವ ಬಡತನ, ಹಸಿವು, ನಿರ್ಗತಿಕತೆ ಹಾಗೂ ನಿತ್ಯ ಬದುಕಿನ ಜಂಜಾಟಗಳ ಮೂಲ ಕಾರಣವೇ ಬೆಲೆ ಏರಿಕೆ ಮತ್ತು ನಿರುದ್ಯೋಗ ಎಂಬ ಸ್ಪಷ್ಟ ಸಂದೇಶವನ್ನು ಸ್ವೀಕರಿಸುತ್ತಲೇ ಅವಕಾಶವಾದಿ ಮೈತ್ರಿಕೂಟಗಳ ಮೂಲಕ ಅಧಿಕಾರ ಗ್ರಹಣ ಮಾಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಈ ಬಜೆಟ್‌ ಎರಡು ರೀತಿಯಲ್ಲಿ ನಿರ್ಣಾಯಕವಾಗಿತ್ತು.

ಭಾರತದ ಆರ್ಥಿಕತೆ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಮೂಲ ಕಾರಣ ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಸರಬರಾಜು ಬದಿಯ ಆರ್ಥಿಕ ನೀತಿಗಳನ್ನು (Supply side economic policies) ಅನುಸರಿಸುತ್ತಿರುವುದೇ ಆಗಿದೆ. ಅರ್ಥವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ತಳಸಮಾಜದ ದುಡಿಯುವ ವರ್ಗಗಳ ಹಾಗೂ ಉತ್ಪಾದಕ ಸಮುದಾಯಗಳ ತಮ್ಮ ಆದಾಯ ಕುಸಿತದ ಪರಿಣಾಮವಾಗಿ ಈ ಜನರ ಖರೀದಿ ಸಾಮರ್ಥ್ಯವು ಕುಸಿದಿರುವುದರಿಂದ  ಮಾರುಕಟ್ಟೆಯಲ್ಲಿ ಬೇಡಿಕೆಯ ಕೊರತೆ ಹೆಚ್ಚಾಗುತ್ತಲೇ ಇದೆ. ಅನೇಕ ಅರ್ಥಶಾಸ್ತ್ರಜ್ಞರು ಆರ್ಥಿಕತೆಯನ್ನು ಬೇಡಿಕೆ ಬದಿಯ ನೀತಿಗಳ ( Demand side economy) ಮೂಲಕ ನಿರ್ವಹಿಸಲು ಕರೆ ನೀಡುತ್ತಲೇ ಇದ್ದರೂ, ಅಮರ್ತ್ಯಸೆನ್‌ ಅವರಂತಹ ತಜ್ಞರ ಅಭಿಪ್ರಾಯವನ್ನೂ ಬಿಜೆಪಿ ಸರ್ಕಾರ ಕಡೆಗಣಿಸುತ್ತಲೇ ಬಂದಿದೆ. ಇದರ ಪರಿಣಾಮ ಮಾರುಕಟ್ಟೆಗೆ ಸರಕು-ಸೇವೆ ಸರಬರಾಜು ಮಾಡುವ ಕಾರ್ಪೋರೇಟ್‌ ಶಕ್ತಿಗಳು ಮೇಲ್ಮುಖಿ ಚಲನೆ ಕಾಣುತ್ತಿದ್ದರೆ ತಳಮಟ್ಟದಲ್ಲಿ ಬೇಡಿಕೆ ಸೃಷ್ಟಿಸುವ ಜನಸಾಮಾನ್ಯರ ಬದುಕು ಕುಸಿಯುತ್ತಲೇ ಇದೆ.

ಆದಾಗ್ಯೂ 2024-25ರ ವಾರ್ಷಿಕ ಬಜೆಟ್‌ ತಳಮಟ್ಟದ ಸಮಾಜಕ್ಕೆ ಏನಾದರೂ ಸಾಂತ್ವನ ನೀಡುವುದೇ ಎಂದು ಗಮನಿಸಿದಾಗ, ನಿರಾಸೆಯೇ ಹೆಚ್ಚು. ಯುವ ಸಮುದಾಯಕ್ಕೆ ಹೆಚ್ಚು ನೀಡಲಾಗಿದೆ ಎಂದು ವಿತ್ತಸಚಿವರು ಹೇಳಿದ್ದರೂ, ವಾಸ್ತವವಾಗಿ ಇದು ಕೌಶಲಾಭಿವೃದ್ಧಿಯನ್ನು ದಾಟಿ ಬೇರೇನನ್ನೂ ಸಾಧಿಸುವುದಿಲ್ಲ. ಸಾರ್ವತ್ರಿಕ ಶಿಕ್ಷಣದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 1.25 ಲಕ್ಷ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಇದು 9 ಸಾವಿರ ಕೋಟಿ ರೂ ಹೆಚ್ಚಾಗಿದೆ. ಕಳೆದ ವರ್ಷದ 1.16 ಲಕ್ಷಕೋಟಿ ರೂ ಯೋಜಿತ ವೆಚ್ಚದಲ್ಲಿ ಸರ್ಕಾರ ಖರ್ಚು ಮಾಡಿರುವುದು 1.08 ಲಕ್ಷ ಕೋಟಿ ರೂ ಮಾತ್ರ. ಅಂದರೆ ಯುವ ಸಮೂಹದಲ್ಲಿ ಕೌಶಲಾಭಿವೃದ್ಧಿಯನ್ನು ಸಾಧಿಸುವ ಮೂಲಕ ಉದ್ಯೋಗ ಮಾರುಕಟ್ಟೆಗೆ ಉತ್ತೇಜನ ನೀಡುವ ಆರ್ಥಿಕ ನೀತಿಯಲ್ಲಿ, ಉದ್ಯೋಗಕ್ಕೆ ಪ್ರವೇಶ ನೀಡಲು ಬೇಕಾದ ಶಿಕ್ಷಣವನ್ನೇ ಅಲಕ್ಷಿಸಲಾಗಿದೆ. ಈ ಮುಸುಕಿನೊಳಗಿನ ವಾಸ್ತವವನ್ನು ಅರಿಯಬೇಕಿದೆ.

ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಬರಾಜು ಪ್ರೇರಿತ ನೀತಿಗಳತ್ತ ಬಜೆಟ್‌ ಗಮನ ಹರಿಸಿದ್ದರೂ, ಉತ್ಪಾದನಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಮತ್ತೊಮ್ಮೆ ಖಾಸಗಿ ಕಾರ್ಪೋರೇಟ್‌ ವಲಯವನ್ನೇ ಅವಲಂಬಿಸಲಾಗಿದೆ. ಬಜೆಟ್‌ನಲ್ಲಿ ವಿತ್ತಸಚಿವರು ಉದ್ಯೋಗ ಸಂಬಂಧಿತ ಉತ್ತೇಜಕ ಯೋಜನೆಯ ಮೂರು ಮಾದರಿಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲನೆಯದು ಭವಿಷ್ಯ ನಿಧಿ ಸಂಸ್ಥೆಯೊಡನೆ ಸಂಯೋಜಿತವಾದ ಉದ್ಯಮಗಳಲ್ಲಿ ಮೊದಲ ಸಲ ಉದ್ಯೋಗ ಪಡೆಯುವ 15 ಸಾವಿರ ರೂ ಸಂಬಳದವರೆಗಿನ ಉದ್ಯೋಗಿಗಳಿಗೆ ಮೊದಲ ತಿಂಗಳ ವೇತನವನ್ನು ಸರ್ಕಾರವೇ ಕೊಡುವಂತಹುದು. ಎರಡನೆಯದು ಉತ್ಪಾದನಾ ವಲಯದಲ್ಲಿ ಮೊದಲ ಸಲ ಉದ್ಯೋಗ ಪಡೆಯುವವರಿಗೆ ವೇತನ ಸಬ್ಸಿಡಿಯನ್ನು ಒದಗಿಸುವುದು. ಇದನ್ನು ಉದ್ಯೋಗಿ ಮತ್ತು ಉದ್ಯೋಗದಾತ ಸಮನಾಗಿ ಪಡೆಯುತ್ತಾರೆ. ಮೂರನೆಯದು ಹೆಚ್ಚುವರಿ ಉದ್ಯೋಗವನ್ನು ಒದಗಿಸುವ ಉದ್ಯೋಗದಾತರು ಅವರು  ಭವಿಷ್ಯ ನಿಧಿಗೆ ಪಾವತಿಸಬೇಕಾದ ಮೊತ್ತದ ಪೈಕಿ ತಿಂಗಳಿಗೆ 3000 ರೂಗಳಂತೆ ಸರ್ಕಾರವೇ ಎರಡು ವರ್ಷಗಳ ಕಾಲ ಭರಿಸುವುದು.  ಒಂದು ವೇಳೆ ಸರ್ಕಾರವು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿಯೇ 2 ಲಕ್ಷ ಕೋಟಿ ರೂ ವಿನಿಯೋಗಿಸುವುದೇ ಆದರೆ , ನರೇಗಾ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸುವ ಮೂಲಕ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬಾರದೇಕೆ ? ನರೇಗಾ ಯೋಜನೆಯಲ್ಲಿ ವೇತನದ ಅರ್ಹತೆಗೆ ಇರುವ ದಿನಮಿತಿಯನ್ನು 100ಕ್ಕಿಂತಲೂ ಹೆಚ್ಚಿಸಬಾರದೇಕೆ ?

ಪ್ರತಿಬಾರಿಯಂತೆ ಈ ಸಲವೂ ಬಜೆಟ್‌ನಲ್ಲಿ ಯುವ ಸಮೂಹ, ಮಹಿಳೆಯರು, ರೈತರು ಮತ್ತು ಬಡಜನತೆಯನ್ನು ಕೇಂದ್ರೀಕರಿಸಲಾಗಿದ್ದರೂ, ವಾಸ್ತವವಾಗಿ ಹೊಸತೇನನ್ನೂ ಕಾಣಲಾಗುವುದಿಲ್ಲ. ಈ ಸಮೂಹಗಳಿಗೆ ನಿರ್ಣಾಯಕವಾಗಿ ಪರಿಣಮಿಸುವಂತಹ ಸಾಮಾಜಿಕ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಒದಗಿಸಿರುವ ಹಣಕಾಸು ಅನುದಾನದಲ್ಲಿ ತೀವ್ರ ಹೆಚ್ಚಳ ಕಂಡುಬರುತ್ತಿಲ್ಲ. ಉದಾಹರಣೆಗೆ ಶಾಲಾ ಶಿಕ್ಷಣಕ್ಕೆ ಕೇವಲ 5,000 ಕೋಟಿ ರೂ, ಉನ್ನತ ಶಿಕ್ಷಣಕ್ಕೆ 3,000 ಕೋಟಿ ರೂ ಹೆಚ್ಚಿಸಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಅಧಿಕ ಶುಲ್ಕ ಹಾಗೂ ಸ್ವಯಂ ಹಣಕಾಸು ಯೋಜನೆಯ ಮೂಲಕ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ. ದುರ್ಬಲ ವರ್ಗಗಳಿಗಾಗಿಯೇ ರೂಪಿಸಲಾಗಿರುವ ಹಲವು ಯೋಜನೆಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಶಾಲೆಗಳಲ್ಲಿ ಬಿಸಿಯೂಟ ಒದಗಿಸುವ ಪೋಷಣ್‌ ಯೋಜನೆಗೆ ಮೀಸಲಾಗಿರುವ 12,647 ಕೋಟಿ ರೂಗಳು 2022-23ರ 12,681 ಕೋಟಿ ರೂಗಳ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ. ಆರು ವರ್ಷದ ಕೆಳಗಿನ ಮಕ್ಕಳು, ವಯಸ್ಕ ಹೆಣ್ಣುಮಕ್ಕಳು ಹಾಗೂ ಮೊಲೆಯೂಡಿಸುವ ಗರ್ಭಿಣಿ ಮಹಿಳೆಯರಿಗಾಗಿ ರೂಪಿಸಲಾಗಿರುವ ಸಕ್ಷಮ್‌ ಅಂಗನವಾಡಿ ಯೋಜನೆಗಾಗಿ 21,200 ಕೋಟಿ ರೂ ಒದಗಿಸಲಾಗಿದೆ. 2023-24ರ ಬಜೆಟ್‌ ಅಂದಾಜಿನಲ್ಲಿ ಇದು 20,554 ಕೋಟಿ ರೂಗಳಷ್ಟಿತ್ತು. ಈ ಅಲ್ಪ ಹೆಚ್ಚಳವನ್ನು ಗಮನಿಸಿದಾಗ 2018 ರಿಂದಲೂ ನಿರೀಕ್ಷಿಸಲಾಗುತ್ತಿರುವ ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಿಸುವ ಯಾವುದೇ ಸಾಧ್ಯತೆಗಳು ಇಲ್ಲ ಎಂದೇ ತೋರುತ್ತದೆ.

ದೇಶದಲ್ಲಿ ಆರ್ಥಿಕ ಅಸಮಾನತೆ ತೀವ್ರವಾಗುತ್ತಿರುವುದನ್ನು ಎಲ್ಲ ಅರ್ಥಶಾಸ್ತ್ರಜ್ಞರೂ ಸ್ಪಷ್ಟವಾಗಿ ಗುರುತಿಸಿದ್ದಾರೆ. ಮತ್ತೊಂದೆಡೆ ಜನಸಾಮಾನ್ಯರಿಂದ ಸಂಗ್ರಹವಾಗುವ ತೆರಿಗೆಯ ಪ್ರಮಾಣವು ಕಾರ್ಪೋರೇಟ್‌ ತೆರಿಗೆಯನ್ನೂ ಮೀರಿಸಿರುವುದನ್ನು ಅಂಕಿಅಂಶಗಳೇ ಹೇಳುತ್ತವೆ. 2019-20ರ ವಾರ್ಷಿಕ ಅವಧಿಯಲ್ಲಿ ಆದಾಯ ತೆರಿಗೆ ಸಂಗ್ರಹದ ಪ್ರಮಾಣ 4.92 ಲಕ್ಷ ಕೋಟಿರೂಗಳಷ್ಟಿದ್ದರೆ, ಕಾರ್ಪೋರೇಟ್‌ ತೆರಿಗೆಯು 5.56 ಲಕ್ಷ ಕೋಟಿರೂಗಳಷ್ಟಿತ್ತು. 2019ರಲ್ಲಿ ಕಾರ್ಪೋರೇಟ್‌ ತೆರಿಗೆ ದರದಲ್ಲಿ ಶೇಕಡಾ 8ರಷ್ಟು ಕಡಿತ ಮಾಡಿದ ನಂತರ ಕಾರ್ಪೋರೇಟ್‌ ತೆರಿಗೆ ಸಂಗ್ರಹವೂ ಕಡಿಮೆಯಾಗುತ್ತಿದ್ದು 2023-24ರ ವೇಳೆಗೆ ಇದು ಆದಾಯ ತೆರಿಗೆಗಿಂತಲೂ ಕಡಿಮೆಯಾಗಿದೆ. ಈ ವರ್ಷದ ಅಂಕಿಅಂಶಗಳ ಅನುಸಾರ ಆದಾಯ ತೆರಿಗೆ 11.56 ಲಕ್ಷ ಕೋಟಿರೂಗಳಷ್ಟಿದ್ದರೆ ಕಾರ್ಪೋರೇಟ್‌ ತೆರಿಗೆ 10.42 ಲಕ್ಷ ಕೋಟಿ ರೂಗಳಷ್ಟಾಗಿದೆ. ಅಂದರೆ ಈ ದೇಶದ ಮಧ್ಯಮ ವರ್ಗಗಳು ಮತ್ತು ಜಿಎಸ್‌ಟಿ ಮೂಲಕ ಬಡಜನತೆ ಶ್ರೀಮಂತ ಕಾರ್ಪೋರೇಟ್‌ಗಳಿಗಿಂತಲೂ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದಾರೆ.

ಹಾಗಾಗಿ 2024-25ರ ವಾರ್ಷಿಕ ಬಜೆಟ್‌ ಮೇಲ್ನೋಟಕ್ಕೆ ಆಶಾದಾಯಕವಾಗಿ ಕಾಣುವುದಾದರೂ, ಆಂತರಿಕವಾಗಿ ದೇಶ ಎದುರಿಸುತ್ತಿರುವ ನಿರುದ್ಯೋಗ, ಬಡತನ ಮತ್ತು ಉದ್ಯೋಗಾವಕಾಶಗಳ ಕೊರತೆಯನ್ನು ನೀಗಿಸುವ ಯಾವುದೇ ದೀರ್ಘಕಾಲಿಕ ಪರಿಹಾರೋಪಾಯಗಳನ್ನು ಸೂಚಿಸುವುದಿಲ್ಲ. ವಿಕಸಿತ ಭಾರತ ತನ್ನ 2047ರ ಅಮೃತ ಕಾಲದ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದರೆ ದೇಶದ ತಳಮಟ್ಟದ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಯಾಗಬೇಕಿದೆ. ಕಾರ್ಪೋರೇಟ್‌ ಪ್ರೇರಿತ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಹಜವಾಗಿ ಆಗಬಹುದಾದ ವ್ಯತ್ಯಯಗಳಿಗೆ ಭಾರತ ಸಾಕ್ಷಿಯಾಗುತ್ತಿರುವುದು ಸ್ಪಷ್ಟ. ತಳಮಟ್ಟದ ಸಮಾಜದ ದೃಷ್ಟಿಯಿಂದ ಇಲ್ಲಿ ಸಂಭವಿಸಬಹುದಾದ ಪಲ್ಲಟಗಳಿಗೆ, ಸಾಮಾಜಿಕ-ಆರ್ಥಿಕ ಸಂಕಷ್ಟಗಳಿಗೆ, ಜಟಿಲ ಸವಾಲುಗಳಿಗೆ ಪರಿಹಾರವಾಗಿ ಸರ್ಕಾರಗಳು ಬಜೆಟ್‌ ಮೂಲಕ ಕೆಲವು ಮೇಲ್ಪದರದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತವೆ. 2024-25ರ ಕೇಂದ್ರ ಬಜೆಟ್‌ನಲ್ಲೂ ಇದೇ ಚಾಣಾಕ್ಷತನವನ್ನು ಗುರುತಿಸಬಹುದು.

ನಾ ದಿವಾಕರ

ಚಿಂತಕರು

ಇದನ್ನೂ ಓದಿ- ಮುಸ್ಲಿಮ್ ಮಹಿಳೆ ಮತ್ತು ಷರೀಯತ್-ಭಾಗ 2

More articles

Latest article