ಸಮ್ಮಿಳಿತ ಸಂಸ್ಕೃತಿಯ ಪರಂಪರೆಯನ್ನು ಎತ್ತಿಹಿಡಿದ ಉಸ್ತಾದ್‌ ಝಾಕಿರ್‌ ಹುಸೈನ್‌

Most read

ತಬಲಾವನ್ನು ಜಾಗತಿಕ ಸ್ಥಾನಮಾನಕ್ಕೆ ಏರಿಸಿ ಗಡಿ ರೇಖೆಗಳನ್ನು ಕುಗ್ಗಿಸಿದ ತಬಲಾ ದಂತಕಥೆ ಝಾಕಿರ್‌ ಹುಸೈನ್‌  ಅವರ ಬೆರಳುಗಳು ತಬಲಾದ ಮೇಲೆ ಆಟವಾಡುವುದನ್ನು ಸೋಮವಾರ (ಡಿಸೆಂಬರ್ 16, 2024) ದಂದು ನಿಲ್ಲಿಸಿವೆ.  ಆದರೆ ಅವು ಆಟವಾಡಿದ್ದರ ನೆನಪು ಸಂಗೀತ ಪ್ರಿಯರ ಮನಸ್ಸಿನಲ್ಲಿ ಹಸಿರಾಗಿಯೇ ಇರುತ್ತದೆ. ಈ ತಬಲಾ ಮಾಂತ್ರಿಕನಿಗೆ ಮ ಶ್ರೀ ಮುರಳಿ ಕೃಷ್ಣರವರು ಬರೆದ ನುಡಿನಮನ ಇಲ್ಲಿದೆ.

ಅವಧೀ ಭಾಷೆಯ “ಗಂಗಾ-ಯಮೂನಿ ತೆಹಝೀಬ್‌“ ಉತ್ತರ ಭಾರತದ ಹಿಂದೂ-ಮುಸಲ್ಮಾನ ಸಂಸ್ಕೃತಿಯ ಕೊಡು-ಕೊಳುವಿಕೆಯ ಅನನ್ಯ ಪ್ರಕ್ರಿಯೆಗಳನ್ನು ವರ್ಣಿಸುವ ಪದಗುಚ್ಛ. ಇದು ನಮ್ಮ ದೇಶದ ಸಮ್ಮಿಳಿತ ಸಂಸ್ಕೃತಿ(Composite Culture)ಯ ಒಂದು ಪ್ರಮುಖ ಘಟಕ. ನಮ್ಮ ಸಂಗೀತದಲ್ಲೂ ಸಮ್ಮಿಳಿತ ಸಂಸ್ಕೃತಿಯ ಪ್ರಭಾವಗಳನ್ನು ಕಾಣಬಹುದು.  ಹಿಂದೂಸ್ಥಾನಿ, ಕರ್ನಾಟಕ ಮತ್ತು ಇತರ ಸಂಗೀತ ಪ್ರಕಾರಗಳ ನಡುವೆ ನಾನಾ ವಿನಿಮಯಗಳು ಜರಗುತ್ತ ಬಂದಿವೆ. ಅಲ್ಲದೆ, ಈ ವಿನಿಮಯಗಳು ವಿಶ್ವ ಸಂಗೀತ ವಲಯಕ್ಕೂ ವಿಸ್ತರಿಸಿವೆ.  ಶಹನಾಯಿ ವಾದ್ಯದ ಹೆಸರುವಾಸಿ ಕಲಾವಿದ ಬಿಸ್ಮಿಲ್ಲಾ ಖಾನ್‌ ಅವರು ನಿತ್ಯ ಕಾಶಿಯ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡುತ್ತಿದ್ದದ್ದು, ಝಾಕಿರ್‌ ಹುಸೈನ್‌ರ ತಂದೆ  ಉಸ್ತಾದ್‌ ಅಲ್ಲಾ ರಖಾ ಅವರಿಗಿದ್ದ ಸರಸ್ವತಿ, ಗಣಪತಿ ದೇವರ ಬಗೆಗಿನ ಗೌರವ,  ಗಂಗೂಬಾಯಿ ಹನಗಲ್‌ಗೆ ಬಿಸ್ಮಿಲ್ಲಾ ಖಾನ್‌ರೊಡನೆ ಇದ್ದ ಸಹೋದರತ್ವದ ಬಾಂಧವ್ಯ ಮುಂತಾದ ವ್ಯಕ್ತಿಗತ ನೆಲೆಯ ಸಂಬಂಧಗಳು ಕೂಡ ಸಮ್ಮಿಳಿತ ಸಂಸ್ಕೃತಿಯ ಗಮನಾರ್ಹ ನಿದರ್ಶನಗಳಾಗಿವೆ.  ಇಂತಹ ಅಪೂರ್ವ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದರು ಉಸ್ತಾದ್‌ ಝಾಕಿರ್‌ ಹುಸೈನ್.‌

ಹಿಂದೂಸ್ತಾನಿ ಮತ್ತು ಭಾರತದ ಸಂಗೀತದಲ್ಲಿ ತಬಲಾ ವಾದಕ ಉಸ್ತಾದ್‌ ಅಲ್ಲಾ ರಖಾರವರದ್ದು ದೊಡ್ಡ ಹೆಸರು.  ಅವರು ತಮ್ಮ ಮಗ ಝಾಕಿರ್‌ ಹುಸೈನ್‌ ಹುಟ್ಟಿದಾಗ ಕಿವಿಯಲ್ಲಿ ತಾಳವನ್ನು ಗುನುಗುನಿಸಿದರು. ಝಾಕಿರ್‌ ಹುಸೈನ್‌ ಅವರ ತಾಯಿ, ಸಂಪ್ರದಾಯದಂತೆ ಮಗುವಿನ ಕಿವಿಯಲ್ಲಿ ಪ್ರಾರ್ಥನೆಯನ್ನು ಉಸುರುವ ಬದಲು ತಾಳವನ್ನು ಉಸುರಿದ್ದಕ್ಕೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ಅಲ್ಲಾ ರಖಾರು “ತಾಳ ಕೂಡ ಪ್ರಾರ್ಥನೆ “ಎಂದರು. ಸ್ವತಃ ಝಾಕಿರರೇ ಈ ವಿಷಯವನ್ನು ಹೇಳಿರುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಝಾಕಿರರ ಮೂರು ವಯಸ್ಸಿನವರೆಗೂ ಈ ತಾಳದ ಉಸುರುವಿಕೆಯನ್ನು ಅಲ್ಲಾ ರಖಾ ಮುಂದುವರೆಸಿದರು.

ಶೈಶವ್ಯದಲ್ಲೇ ತಮ್ಮ ತಂದೆಯಿಂದ ತಬಲಾದ ಪಾಠಗಳನ್ನು ಕಲಿತ ಝಾಕಿರ್‌ ಸಣ್ಣವರಿದ್ದಾಗಲೇ ಅಲ್ಲಾ ರಖಾರ ಸಂಗೀತ ಕಚೇರಿಗಳಲ್ಲಿ ಸಾಥ್‌ ನೀಡುತ್ತಿದ್ದರು.  ಸಂಗೀತ ಕಚೇರಿಗಳು ಮುಗಿದು, ಮನೆಗೆ ಹಿಂದಿರುಗಿದ ತರುವಾಯ ಅಪ್ಪ ಮಗನ ಜೊತೆ ಸಂಭಾಷಣೆಯನ್ನು ನಡೆಸುತ್ತಿದ್ದರು.  ಯುವಕರಾಗಿದ್ದಾಗಲೇ ಝಾಕಿರ್‌ ತಬಲಾ ಪಕ್ಕವಾದ್ಯಗಾರರಾದರು.  ಒಮ್ಮೆ ಟೈಂಸ್‌ ಆಫ್‌ ಇಂಡಿಯಾದಲ್ಲಿ ಐವತ್ತು ವರ್ಷಗಳಿಗೂ ಹೆಚ್ಚಿನ ಕಾಲ ಸಂಗೀತ ವಿಮರ್ಶಕರಾಗಿದ್ದ ಮೋಹನ್‌ ನಾಡ್‌ಕರ್ಣಿ ಕಚೇರಿವೊಂದರ ಝಾಕಿರ್‌ ತಬಲಾ ವಾದನದ ಬಗೆಗೆ ವಿಮರ್ಶಿಸುತ್ತ  ಅದು ನೀರಸವಾಗುತ್ತಿದೆ ಎಂದು ನೇರವಾಗಿ ವಿಮರ್ಶಿಸಿದ್ದರು! ಇನ್ನೊಂದು ಸಂದರ್ಭದಲ್ಲಿ ಕಚೇರಿ ಮುಗಿದ ತರುವಾಯ ಒಬ್ಬ ಅಭಿಮಾನಿ, “ಅಬ್ಬಾಜಿ (ಅಲ್ಲಾ ರಖಾರನ್ನು ಹೀಗೆಂದು ಕರೆಯುತ್ತಿದ್ದರು)…ನಿಮ್ಮ ಮಗ ನಿಮ್ಮಂತೆಯೇ ನುಡಿಸುತ್ತಾನೆ ……..” ಎಂದು ಹೇಳಿದರು! ನಂತರ ಅಬ್ಬಾಜಿ ಮಗ ಸ್ವತಂತ್ರವಾಗಿ ಬೆಳೆದು, ತನ್ನದೇ ಹಾದಿಯನ್ನು ಕಂಡುಕೊಂಡು, ಮುಂದುವರೆಯಬೇಕು ಎಂದು ಮನವರಿಕೆ ಮಾಡಿಕೊಟ್ಟರು! ಇದು ಝಾಕಿರರ ಬೆಳವಣಿಗೆಗೆ ಪ್ರೇರಕ ಶಕ್ತಿಯಾಯಿತು.

ಅಪ್ಪ ಮಗ ಜುಗಲ್‌ ಬಂದಿ

ಯೌವನದಲ್ಲಿದ್ದಾಗಲೇ ಝಾಕಿರರು ಅನೇಕ ಖ್ಯಾತ ಹಿಂದೂಸ್ತಾನಿ ಗಾಯಕರು ಮತ್ತು ವಾದ್ಯಗಾರರಿಗೆ ಕಚೇರಿಗಳಲ್ಲಿ ತಬಲಾ ಸಾಥಿಯಾಗುವ ಅವಕಾಶಗಳು ದೊರೆತವು. ಪಂಡಿತ್ ರವಿಶಂಕರ್‌ ಅವರ ಸಿತಾರ್‌ ವಾದನದ ಎರಡು ಕಚೇರಿಗಳಿಗೆ ಅವರು ತಬಲಾದ ಸಾಥ್‌ ನೀಡಿದ್ದರು.  ಎಂದಿನಂತೆ ತಮ್ಮ ವಾದನದಲ್ಲಿ ಮುಳುಗಿ, ಝಾಕಿರ್‌ ಮುಂಭಾಗದಲ್ಲಿದ್ದ ಎರಡು ಸಾಲುಗಳ ಸಭಿಕರ ಆರಾಧಕ ಸ್ಪಂದನಗಳಲ್ಲಿ ತೇಲಿ ಹೋದರು. ತಮ್ಮ ತಬಲಾ ವಾದನದ ಬಗೆಗೆ ರವಿಶಂಕರರ ಪ್ರತಿಕ್ರಿಯೆಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದರು.  ಆದರೆ ಅದು ಫಲಿಸಲಿಲ್ಲ! ನಂತರ ಮುಂದಿನ ಕಚೇರಿಗಾಗಿ ಒಮ್ಮೆ ವಿಮಾನದಲ್ಲಿ ಪಯಣಿಸುತ್ತಿದ್ದಾಗ, ಧೈರ್ಯ ಮಾಡಿ, ರವಿಶಂಕರರನ್ನು ಉದ್ದೇಶಿಸಿ, “ ಹಿಂದಿನ ಕಚೇರಿ ಚೆನ್ನಾಗಿ ಮೂಡಿಬಂದಿತಲ್ಲವೇ?” ಎಂದು ಪರೋಕ್ಷವಾಗಿ ತನ್ನ ವಾದನದ ಬಗೆಗೆ ತಿಳಿದುಕೊಳ್ಳಲು ಪ್ರಯತ್ನಿಸಿದರು!  ದಿನಪತ್ರಿಕೆ, ನಿಯತಕಾಲಿಕಗಳ ಓದಲ್ಲಿ ನಿರತರಾಗಿದ್ದ ರವಿಶಂಕರರು, “ ಓಕೆ “ ಎಂದಷ್ಟೇ ಹೇಳಿದರು! ಆದರೆ ತುಸು ಸಮಯದ ನಂತರ ಅವರು ನೇರವಾಗಿ ತಮ್ಮ ಅಭಿಮತವನ್ನು ತಿಳಿಸಿದರು! ಆಗ ಜರುಗಿದ ಸಂಭಾಷಣೆ:

ರವಿಶಂಕರ್:‌ “ನಾನು ಹಿಂದಿನ ಕಚೇರಿಯಲ್ಲಿ ಯಾವ ತಾನ್‌, ತಿಹಾಯ್(ಕ್ರಮವಾಗಿ ಮೂರು ಬಾರಿ ಲಯಬದ್ಧವಾಗಿ ನುಡಿಸಲ್ಪಡುವ ಸಂಗೀತಾಂಗದ ಭಾಗ) ನುಡಿಸಿದೆ ಎಂದು ನೆನಪಿದೆಯೆ?”

ಝಾಕಿರ್:‌ “ನೆನಪಿಲ್ಲ”!

ರವಿಶಂಕರ್:‌ “ನೀನು ನನ್ನನ್ನು ದೃಷ್ಟಿಸುತ್ತಿದ್ದೆಯಾ”?

ಝಾಕಿರ್:‌ “ಇಲ್ಲ”

ರವಿಶಂಕರ್:‌ “ನಾನು ಯಾವ ಕುರ್ತಾ ಧರಿಸಿದ್ದೆ ಎಂಬುದು ಜ್ಞಾಪಕದಲ್ಲಿದೆಯೇ”?

ಝಾಕಿರ್:‌ “ಜ್ಞಾಪಕದಲ್ಲಿಲ್ಲ”

ರವಿಶಂಕರ್:‌ “ನಾನು, ನೀನು ಇಬ್ಬರು ಸೇರಿ ವೇದಿಕೆಯಲ್ಲಿ ಸಂಗೀತವನ್ನು ಸೃಷ್ಟಿಸುತ್ತಿದ್ದೇವೆ. ನಾವು ಪರಸ್ಪರ ಸಂಭಾಷಣೆಯಲ್ಲಿ ತೊಡಗಿರಬೇಕು. ಆದರೆ ನೀನು ನನ್ನತ್ತ ನೋಡುವುದಿಲ್ಲ. ನಿನ್ನ ಗಮನವೆಲ್ಲ ಮುಂದಿನ ಎರಡು ಸಾಲುಗಳಲ್ಲಿರುವ ಸಭಿಕರನ್ನು ಮೆಚ್ಚಿಸುವುದರಲ್ಲೇ ಕೇಂದ್ರೀಕೃತವಾಗಿರುತ್ತದೆ.  ಹೀಗಾದರೆ, ಇಬ್ಬರ ನಡುವೆ ಸಂಭಾಷಣೆ ಜರುಗುವುದಿಲ್ಲ….!  ನೀನು ಮುಂದಿನ ಕಚೇರಿಯಲ್ಲಿ ಕುಳಿತುಕೊಳ್ಳುವ ಕೋನವನ್ನು ಬದಲಾಯಿಸಿ, ನಿನ್ನ ಸಹಕಲಾವಿದರನ್ನು ದೃಷ್ಟಿಸುತ್ತಿರು..”‌

“ವಾಹ್‌ ತಾಜ್‌ “- ಮನೆ ಮನೆಗೂ ತಲಪಿದ ತಾಜ್‌ ಮಹಲ್‌ ಟೀ ಜಾಹೀರಾತು

ಪಂಡಿತ್‌ ರವಿಶಂಕರ್ ಅವರ ಜೊತೆಗಿನ ಈ ಮಾತುಕತೆ ಒಂದು ಮೈಲಿಗಲ್ಲು ಕ್ಷಣ, ಹೀಗೆ ಇನ್ನು ಅನೇಕ ಸಂಗೀತದ ವಿದ್ವಾಂಸರ ಜೊತೆ ನಡೆಸಿದ ಸಂಭಾಷಣೆಗಳು ಕೂಡ ಎಂದು ಝಾಕಿರ್‌ ತಿಳಿಸಿದ್ದರು. ಇಂತಹ ಅನುಭವಗಳಿಗೆ ತಮ್ಮ ಯೌವನಾವಸ್ಥೆಯಲ್ಲಿಯೇ ಪಕ್ಕಾದ ಝಾಕಿರರು ಸಂಗೀತ ಲೋಕದಲ್ಲಿ ದಾಪುಗಾಲು ಹಾಕುತ್ತ ಮುನ್ನಡೆದರು; ವಿಶ್ವದಲ್ಲಿ ತಬಲಾ ಪ್ರಧಾನ ಭೂಮಿಕೆಯಲ್ಲಿ ಮೆರೆಯುವಂತೆ ಮಾಡಿದರು. ಇದೇ ರೀತಿ ಸಂತೂರ್‌, ಬಾನ್ಸುರಿ ಅಂತಹ ವಾದ್ಯಗಳು ಪ್ರಾಪಂಚಿಕ ಮಟ್ಟದಲ್ಲಿ ಜನಜನಿತವಾಯಿತು ಎಂಬುದನ್ನು ನೆನೆಪಿಸಿಕೊಳ್ಳಬಹುದು.

ಝಾಕಿರರು ಯುವ ಸಂಗೀತ ಕಲಾವಿದರಿಗೆ ಉತ್ತೇಜನವನ್ನು ನೀಡುತ್ತಿದ್ದರು.  ಅನೇಕ ಶಿಷ್ಯರನ್ನು ತಯಾರು ಮಾಡಿದರು.  ಯುವ ಜನಾಂಗದ ಸಂಗೀತಗಾರರ ಬೆಳವಣಿಗೆಯನ್ನು ಗುರುತಿಸುತ್ತಿದ್ದರು.  ಅವರಿಂದ ಕಲಿತರು ಕೂಡ. 

ಸಂಗೀತದ ಬಗೆಗೆ ಅವರಿಗೆ ಮಡಿವಂತಿಕೆಯ ನಿಲುವಿರಲಿಲ್ಲ.  ತಪ್ಪಾದ ಸಂಗೀತವಿರುವುದಿಲ್ಲ; ಇರುವುದು ಭಿನ್ನ ಸಂಗೀತ ಎಂದವರು ಹೇಳುತ್ತಿದ್ದರು. ಅನೇಕ ಭಿನ್ನ ಸಂಗೀತಧಾರೆಗಳನ್ನು ಒಟ್ಟುಗೂಡಿಸಿ “ವಿಶ್ವ ಸಂಗೀತ”ದ ಪರಿಕಲ್ಪನೆಗೆ ಮೂರ್ತ ರೂಪವನ್ನು ಸಾಧ್ಯವಾದಷ್ಟು ನೀಡಿದರು.  ಜಾಝ್‌ ಗಿಟಾರ್‌ ವಾದಕ ಜಾನ್‌ ಮೆಕ್ಲಾಕ್‌ಲಿನ್, ವಯೋಲಿನ್‌ ವಾದಕ ಎಲ್‌ ಶಂಕರ್‌ ಮತ್ತು ಘಟಂ ವಿದ್ವಾನ್‌ ವಿಕ್ಕು ವಿನಾಯರ್‌ರಾಮ್ ಅವರ ಜೊತೆಗೂಡಿ ಗ್ರಾಮಿ ಪ್ರಶಸ್ತಿ ವಿಜೇತ ಶಕ್ತಿ ಬ್ಯಾಂಡನ್ನು ರಚಿಸಿದರು. ಕೆಲವು ಸಿನಿಮಾಗಳಿಗೂ ಸಂಗೀತವನ್ನು ನೀಡಿದರು.

ಗೂಗಲ್‌ ಹುಡುಕಾಟದಲ್ಲಿ ಸಿಕ್ಕಿದ ಕಾರ್ಟೂನ್

ಝಾಕಿರ್‌ ಹುಸೈನ್‌ ತಮ್ಮ ಜೀವನಚರಿತ್ರೆಯಲ್ಲಿ “ ನಾನು ಹೇಳುತ್ತಿರುತ್ತೇನೆ: ಸಂಗೀತ ಪ್ರತಿ ರಾತ್ರಿ ಸಾಯುತ್ತದೆ; ಮರುದಿನ ಪುನಃ ಹುಟ್ಟುತ್ತದೆ….” ಎಂದು ತಿಳಿಸಿದ್ದಾರೆ.  ತಬಲಾದ ಮೇಲೆ ಅವರ ಬೆರಳುಗಳು ಆಟವಾಡುವುದನ್ನು ನಿಲ್ಲಿಸಿವೆ.  ಆದರೆ ಅವು ಆಟವಾಡಿದ್ದರ ನೆನಪು ಸಂಗೀತಪ್ರಿಯರ ಮನಸ್ಸನಲ್ಲಿ ಹಸಿರಾಗಿಯೇ ಇರುತ್ತದೆ. 

ಅಲ್ವಿದಾ ಝಾಕಿರ್‌ ಹುಸೈನ್‌ಜಿ………

ಮ ಶ್ರೀ ಮುರಳಿ ಕೃಷ್ಣ

More articles

Latest article