ಮೈಕ್ರೀಫೈನಾನ್ಸ್ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ.
ಬಾಂಗ್ಲಾದಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳಾಗಿ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ್ದಾರೆ. ಸದ್ಯಕ್ಕೆ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ದೇಶದ ಸೇನೆಯು ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದೆ.
ಈ ಮೊದಲು ಹಸೀನಾ ಯಾರನ್ನು ರಕ್ತದಾಹಿ ಎಂದು ಕರೆದಿದ್ದರೋ ಅದೇ ಯೂನಸ್ಗೆ ಬಾಂಗ್ಲಾ ಸಾರಥ್ಯ ನೀಡಲಾಗಿದೆ. ರಕ್ಷಣ ಪಡೆಯ ಮೂರು ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಚಳವಳಿಯ 13 ಸದಸ್ಯರೊಂದಿಗೆ ಮಧ್ಯಂತರ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ದೇಶದ ಮಧ್ಯಂತರ ಸರ್ಕಾರ ಮುನ್ನಡೆಸುವಂತೆ ಒತ್ತಾಯಿಸಿರುವ ಪ್ರತಿಭಟನಾ ನಿರತರ ವಿಶ್ವಾಸದಿಂದ ನಾನು ಗೌರವಿಸಲ್ಪಟ್ಟಿದ್ದೇನೆ. ನನ್ನ ದೇಶಕ್ಕಾಗಿ ಮತ್ತು ನನ್ನ ಜನರ ಧೈರ್ಯಕ್ಕಾಗಿ ಕ್ರಮ ಅಗತ್ಯವಿದ್ದರೆ, ನಾನು ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಮುಕ್ತ ಚುನಾವಣೆಗೂ ಇದೇ ವೇಳೆ ಕರೆ ಕೊಟ್ಟಿದ್ದಾರೆ.