Saturday, September 14, 2024

ವಿನಿಶ ಬಗ್ಗೆ ಮಾತನಾಡುವವರಿಗೆ ಇಂದು ಉತ್ತರ ಸಿಕ್ಕಿದೆ, ಯಶಸ್ಸಿನ ಪ್ರತಿಧ್ವನಿ ದೆಹಲಿಗೆ ಮುಟ್ಟಿದೆ: ರಾಹುಲ್ ಗಾಂಧಿ

Most read

ವಿನಿಶ ಫೋಗಟ್ ಅವರು ಯುಸ್ನೆಲಿಸ್ ಗುಜ್ಮನ್ ಲೋಪೆಜ್ (ಕ್ಯೂಬಾ) ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ಸ್ 2024 ರ ಮಹಿಳಾ ಕುಸ್ತಿ 50 ಕೆಜಿ ಫೈನಲ್‌ಗೆ ಪ್ರವೇಶಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ವಿನಿಶ ಅವರಿಗೆ ಶುಭಾಶಯ ಕೋರುತ್ತಾ, ವಿನಿಶಾ ಕುರಿತು ಟೀಕೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಈ ಕುರಿತು ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿಶ್ವದ ಟಾಪ್ ಮೂವರು  ಕುಸ್ತಿಪಟುಗಳನ್ನು ಒಂದೇ ದಿನದಲ್ಲಿ ಸೋಲಿಸಿದ ವಿನಿಶ ಜೊತೆಗೆ ಇಡೀ ದೇಶವೇ ಭಾವುಕವಾಗಿದೆ.

ವಿನಿಶ ಮತ್ತು ಅವರ ಸಹೋದ್ಯೋಗಿಗಳ ಹೋರಾಟಗಳನ್ನು ಹತ್ತಿಕ್ಕುವವರು, ಅವರ ಉದ್ದೇಶ ಮತ್ತು ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವವರಿಗೆ ಇಂದು ಉತ್ತರಗಳು ಸಿಕ್ಕಿವೆ.

ಇಂದು ಇಡೀ ಅಧಿಕಾರ ವ್ಯವಸ್ಥೆಯೇ ಭಾರತದ ವೀರ ಪುತ್ರಿಯ ಮುಂದೆ ರಕ್ತದ ಕಣ್ಣೀರು ಸುರಿಸುವಂತೆ ಮಾಡಿದೆ. ಇದು ಚಾಂಪಿಯನ್‌ಗಳ ಗುರುತು, ಅವರು ತಮ್ಮ ಕಾರ್ಯ ಕ್ಷೇತ್ರದಿಂದ ಉತ್ತರಗಳನ್ನು ನೀಡುತ್ತಾರೆ. ವಿನಿಶ ಅವರಿಗೆ ಶುಭಾಶಯಗಳು.  ಪ್ಯಾರಿಸ್‌ನಲ್ಲಿ ನಿಮ್ಮ ಯಶಸ್ಸಿನ ಪ್ರತಿಧ್ವನಿ ದೆಹಲಿಗೆ ಸ್ಪಷ್ಟವಾಗಿ ಕೇಳಿಸಿತು ಎಂದು ಹೇಳಿದ್ದಾರೆ.

ವಿನಿಶ ಅವರು ಕುಸ್ತಿ ಫೆಡರೇಷನ್‌ ನ ಅಧ್ಯಕ್ಷ ಹಾಗೂ ಲೈಂಗಿಕ ದೌರ್ಜನ್ಯ ಆರೋಪಿ ಬ್ರಿಜ್‌ ಭೂಷಣ ಸಿಂಗ್‌ ವಿರುದ್ಧ ಹೋರಾಡಿದ್ದರು. ಇಡೀ ಸರ್ಕಾರವೇ ಅವನ ರಕ್ಷಣೆಗೆ ನಿಂತಾಗ ಎದೆಗುಂದದೆ ಬ್ರಿಜ್‌ ಭೂಷಣನ ಕಾಮಕಾಂಡವನ್ನು ಬಯಲಿಗೆಳೆದಿದ್ದರು. ಈ ಆರೋಪ ಮಾಡುತ್ತಿದ್ದಂತೆ ವಿನಿಶ ಅವರ ವಿರುದ್ಧ ಟೀಕೆ, ಆರೋಪ ಮತ್ತು ಸಾಮರ್ಥ್ಯ ಬಗ್ಗೆ ಪ್ರಶ್ನೆಗಳನ್ನು ಸಹ ಮಾಡಲಾಗಿತ್ತು. ಈಗ ಈ ಎಲ್ಲಾ ಟೀಕೆಗಳಿಗೆ ಕ್ರೀಡೆ ಮೂಲಕವೇ ಉತ್ತರ ನೀಡಿದ್ದಾರೆ. ಇದನ್ನೇ ರಾಹುಲ್ ಗಾಂಧಿ ಅವರು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಅವರು ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತಕ್ಕೆ ಬೆಳ್ಳಿ ಪದಕವನ್ನೂ ಖಚಿತಪಡಿಸಿದ್ದಾರೆ. ಅವರ ಅಮೋಘ ಪ್ರದರ್ಶನಕ್ಕೆ ದೇಶಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

#GoForGold

More articles

Latest article