ತನ್ನದೇ ಕುಟುಂಬದ ಐವರನ್ನು ಭೀಕರವಾಗಿ ಹತ್ಯೆ ಮಾಡಿದ ಯುವಕ: ಬೆಚ್ಚಿ ಬಿದ್ದ ತಿರುವನಂತಪುರ

Most read

ತಿರುವನಂತಪುರ: 23 ವರ್ಷದ ಯುವಕನೊಬ್ಬ ತನ್ನ ಕುಟುಂಬದ ಐವರನ್ನು ಸುತ್ತಿಗೆಯಿಂದ ಹಣೆ, ತಲೆಗೆ ಹೊಡೆದು ಅತ್ಯಂತ ಕ್ರೂರವಾಗಿ ಸಾಯಿಸಿರುವ ಭೀಕರ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ರಾಜಧಾನಿ ತಿರುವನಂತಪುರದ ಹೊರವಲಯವಾದ ವೆಂಜರಮೂಡು ಎಂಬಲ್ಲಿ ಈ ಹತ್ಯಾಕಾಂಡ ನಡೆದಿದೆ. ಐವರನ್ನು ಸಾಯಿಸಿರುವ ಹಂತಕ ಆಫಾನ್ ಎಂಬಾತ  ಪೊಲೀಸರಿಗೆ ಶರಣಾಗಿದ್ದಾನೆ.

ಆತ ಹೆತ್ತ ತಾಯಿಯನ್ನೂ ಸಾಯಿಸುವ ಉದ್ದೇಶದಿಂದ ತೀವ್ರ ಹಲ್ಲೆ ಮಾಡಿದ್ದಾನೆ. ಆದರೆ ಸದ್ಯ ಆಕೆ  ತಿರುವನಂತಪುರದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಸಭ್ಯಸ್ಥನಂತೆ ಕಾಣುತ್ತಿದ್ದ ಆಫಾನ್, 10.30 ರಿಂದ 12.30ರ ಸುಮಾರು ವೆಂಜರಮೂಡುವಿನ ಪಾಂಗೊಡೆ ಮನೆಯಲ್ಲಿ ಹಾಲ್‌ನಲ್ಲಿ ಕುಳಿತಿದ್ದ ತನ್ನ ಅಜ್ಜಿ ಸಲ್ಮಾ ಬೀಬಿ (74) ಅವರನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ನಂತರ ಮಧ್ಯಾಹ್ನ 1.30 ರಿಂದ 4 ಗಂಟೆ ಸುಮಾರು ಪಾಂಗೊಡೆಯಿಂದ 17 ಕಿ.ಮೀ ದೂರದಲ್ಲಿರುವ ಎಸ್‌.ಎನ್‌ ಪುರ ಎಂಬಲ್ಲಿಗೆ ತೆರಳಿ ತನ್ನ ಚಿಕ್ಕಪ್ಪ ಲತೀಫ್ (60) ಮತ್ತು ಚಿಕ್ಕಮ್ಮ ಶಾಹೀದಾ (56) ಎನ್ನುವರನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಅಷ್ಟಕ್ಕೆ ಸುಮ್ಮನಾಗದ ಆಫಾನ್ ಶಾಲೆಗೆ ಹೋಗಿದ್ದ ತನ್ನ 14 ವರ್ಷದ ತಮ್ಮ ಆಫ್ಸಾನ್‌ ನನ್ನು ಶಾಲೆಯಿಂದ ಬೈಕ್‌ನಲ್ಲಿ ಕರೆದುಕೊಂಡು ಎಸ್‌. ಎನ್‌ ಪುರದಿಂದ 5 ಕಿ.ಮೀ ದೂರ ಇರುವ ಪೆರುಮಾಳ್ ಎಂಬಲ್ಲಿ ತನ್ನ ತಾಯಿ ರೇಷ್ಮಾ (50) ಹಾಗೂ ಗೆಳತಿ ಫರ್ಸಾನಾ (22) ಇದ್ದ ಮನೆಗೆ 4 ಗಂಟೆ  ಸುಮಾರಿಗೆ ಹೋಗಿದ್ದಾನೆ. ಮೂವರನ್ನೂ ಪ್ರತ್ಯೇಕವಾಗಿ ಮಾತನಾಡಿಸುವ ನೆಪದಲ್ಲಿ ಸುತ್ತಿಗೆಯಿಂದ ಹಣೆಗೆ, ತಲೆಗೆ ಹಲವಾರು ಸಾರಿ ಜೋರಾಗಿ ಹೊಡೆದಿದ್ದಾನೆ. ಒಂದೇ ಏಟಿಗೆ ತಮ್ಮ ಆಫ್ಸಾನ್‌ ಮತ್ತು ಗೆಳತಿ ಫರ್ಸಾನಾ ಮೃತಪಟ್ಟಿದ್ದಾರೆ. ಆದರೆ, ಆತನ ತಾಯಿಯ ಪ್ರಾಣ ಹೋಗಿರಲಿಲ್ಲ.

ನಂತರ ಆಫಾನ್ ಅದೇ ದಿನ ರಾತ್ರಿ 8 ಗಂಟೆ ಸುಮಾರು ವೆಂಜರಮೂಡು ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ. ಕೂಡಲೇ ಪೊಲೀಸರು ಕೊಲೆ ನಡೆದ ಸ್ಥಳಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಶರಣಾಗುವುದಕ್ಕೂ ಮುನ್ನ ಆರೋಪಿ ಬೇರೆ ಬೇರೆ ವಿಧಾನಗಳನ್ನು ಬಳಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ತಿಳಿದು ಬಂದಿದೆ..

ಕೊಲೆಗಳನ್ನು ಮಾಡಲು ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆಫಾನ್ ಕೊಲೆಗಳನ್ನು ಮಾಡುವ ಮುನ್ನ ಡ್ರಗ್ಸ್‌ ತೆಗೆದುಕೊಂಡಿದ್ದು ದೃಢಪಟ್ಟಿದೆ. ಠಾಣೆಗೆ ಶರಣಾದ ದಿನ ಆತನ ಮುಖದಲ್ಲಿ ಯಾವುದೇ ಪಶ್ಚಾತ್ತಾಪದ ಭಾವನೆ ಮೂಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

More articles

Latest article