ಬಾಜಿ ಕಟ್ಟಿಕೊಂಡು ಅತಿಯಾದ ಮದ್ಯ ಸೇವಿಸಿ ಮೃತನಾದ ಯುವಕ

Most read

ಮುಳಬಾಗಿಲು: ಮದ್ಯ ಸೇವನೆ ಮಾಡಲು ಸಾವಿರಾರು ರೂ. ಬಾಜಿ ಕಟ್ಟಿಕೊಂಡು ಅತಿಯಾದ ಮದ್ಯ ಸೇವನೆ ಮಾಡಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮುಳಬಾಗಿಲು ತಾಲ್ಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಕಾರ್ತೀಕ್ (21) ಮೃತ ಯುವಕ. ಭಾನುವಾರ ಸಂಜೆ ಈ ದುರಂತ ನಡೆದಿದೆ.

ಕಾರ್ತೀಕ್ ಮತ್ತು ಅದೇ ಊರಿನ ವೆಂಕಟರೆಡ್ಡಿ ನಡುವೆ ಈ ಬಾಜಿ ವ್ಯವಹಾರ ನಡೆದಿದೆ. ಐದು ಬಾಟಲ್ ವಿಸ್ಕಿಯನ್ನು ನೀರು ಬೆರೆಸದೆ ಕುಡಿದರೆ 10 ಸಾವಿರ ರೂ. ಕೊಡುವುದಾಗಿ ವೆಂಕಟರೆಡ್ಡಿ ಸವಾಲು ಹಾಕಿದ್ದಾನೆ. ಸೋತಲ್ಲಿ ಕಾರ್ತೀಕ್ 10 ಸಾವಿರ ರೂ.ಕೊಡಬೇಕು ಎಂಬ ಷರತ್ತು ಹಾಕಿಕೊಂಡಿದ್ದಾರೆ. ಮದ್ಯವನ್ನೂ ವೆಂಕಟರೆಡ್ಡಿಯೇ ತಂದುಕೊಟ್ಟಿದ್ದಾನೆ. ಸವಾಲಾಗಿ ಸ್ವೀಕರಿಸಿದ ಕಾರ್ತೀಕ್ ಅತಿಯಾದ ಮದ್ಯ ಸೇವನೆ ಮಾಡಿ ಅಸ್ವಸ್ಥನಾಗಿದ್ದಾನೆ. ನಂತರ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾನೆ. ಮೃತ ಕಾರ್ತಿಕನಿಗೆ 9 ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಚಟಕ್ಕೆ ಬಲಿಯಾಗಿ ಪತ್ನಿ ಪುತ್ರಿ ಮತ್ತು ಪೋಷಕರನ್ನು ಅನಾಥರನ್ನಾಗಿ ಮಾಡಿದ್ದಾನೆ. ವೆಂಕಟರೆಡ್ಡಿ ವಿರುದ್ಧ ಮೃತನ ಸಂಬಂಧಿಗಳು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

More articles

Latest article