ಮುಂದಿನ ತಲೆಮಾರು ಘನತೆವೆತ್ತ ಬದುಕು ನಡೆಸಲು ಅನುವು ಮಾಡಿಕೊಡಬೇಕು ಎನ್ನುವ ಚಿಂತನೆ ಸಾರ್ವಜನಿಕ ಜೀವನದಲ್ಲಿರುವವರ ಚಿತ್ತದಲ್ಲಿ ಹುತ್ತ ಗಟ್ಟುವವರೆಗೆ, ಎಲ್ಲವನ್ನೂ ಮೆಟ್ಟಿಲಾಗಿಯೇ ಕಾಣುವ ರೋಗದಿಂದ ನಮ್ಮ ನಾಯಕರಿಗೆ ಮುಕ್ತಿ ಹೇಗೆ? ಮನೆಯನ್ನೇನೋ ಕಟ್ಟಬಹುದು ಆದರೆ ಸುಖೀ ಸಮಾಜದ ಆಶಯದ ಮೂಟೆ ಹೊತ್ತು ಜನರ ಮನಸ್ಸು ಮುಟ್ಟುವುದು ಹೇಗೆ?- ಡಾ. ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು
ನೆಹರೂ ಪ್ರತಿಪಾದಿಸಿದ ‘ಜಾತ್ಯತೀತತೆ’ ಯ ಮೇಲಿನ ದಾಳಿ ಯಾವ ಪರಿ ಇದೆಯೆಂದರೆ ಬಹಳಷ್ಟು ಸಲ ಈ ಪದವನ್ನು ಬಳಸಲೂ ಹಿಂದೇಟು ಹಾಕುವಲ್ಲಿಯವರೆಗೆ. ‘ಜಾತ್ಯತೀತತೆ’ ಎನ್ನುವ ಪದದ ನೆಪದಲ್ಲಿ ನೆಹರೂ ಮೇಲೆ ಕೆಸರೆರಚುವ ಅವಕಾಶ ಸಿಕ್ಕರೆ ಅದನ್ನು ಬಲಪಂಥೀಯರು, ಟೀಕಾಕಾರರು ಸುಮ್ಮನೆ ಬಿಟ್ಟಾರೆಯೇ? ಈ ಮಾತು ನೆನಪಾಗುವುದಕ್ಕೆ ಕಾರಣ ಸದ್ಯ ಸುದ್ದಿಯಲ್ಲಿರುವ ಎರಡು ವಿಷಯಗಳು. ಒಂದನೆಯದು ಶಾಲಾ ಆವರಣಗಳಲ್ಲಿ ಶೈಕ್ಷಣಿಕವಲ್ಲದ ಇತರ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಹೊರಡಿಸಲಾದ ಸರಕಾರದ ಸುತ್ತೋಲೆ ಮತ್ತು ಎರಡನೆಯದು ಗುಲಬರ್ಗಾದ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ಮೇಲಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ನಡೆದಿದೆ ಎನ್ನಲಾದ ಆರ್.ಎಸ್.ಎಸ್ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ವಿಡಿಯೋ ಮತ್ತು ವಿಷಯ.
ಆಡಳಿತ ವ್ಯವಸ್ಥೆ ಸಾಂವಿಧಾನಿಕ ಆಶಯಗಳು ರೂಪಿಸುವ ಕಾನೂನು ಕಟ್ಟಳೆಗಳಂತೆ ನಡೆಯಬೇಕು ಮತ್ತು ಮತಧರ್ಮದ ವಿಷಯಗಳು ಖಾಸಗೀ ಬದುಕಿಗೆ ಮಿತವಾಗಿರಬೇಕು ಎನ್ನುವುದು ಸಂವಿಧಾನದ ಆಶಯ ಕೂಡಾ. ಅಂದರೆ ನಂಬಿಕೆ, ಆಚರಣೆಗಳಿಗೆ ಸಂಬಂಧ ಪಟ್ಟ ವಿಷಯಗಳು ಖಾಸಗೀ ಮತ್ತು ಆಡಳಿತ ಸಂಬಂಧೀ ವಿಷಯಗಳು ಸಾರ್ವಜನಿಕ ಸ್ತರಕ್ಕೆ ಮಿತಿಗೊಳಿಸಿ ನಮ್ಮ ನಡವಳಿಕೆಗಳಿರಬೇಕು ಎನ್ನುವ ಒಂದು ಪ್ರಜ್ಞೆ. ಆಡಳಿತ ವ್ಯವಸ್ಥೆ ಎಲ್ಲ ಧರ್ಮಗಳನ್ನು ವಿರೋಧಿಸುತ್ತದೆ ಎನ್ನುವ ವಿತಂಡವಾದಗಳೂ ಚಾಲ್ತಿಯಲ್ಲಿವೆ, ಬಹುಭಾಷೆ, ಬಹುಧರ್ಮ ಮತ್ತು ಸಾಂಸ್ಕೃತಿಕ ವೈವಿಧ್ಯ ಇರುವ ಈ ದೇಶದಲ್ಲಿ ರಾಜಕೀಯದಲ್ಲಿ ಧರ್ಮವನ್ನು ತರುವುದೇ ಆಗಿದ್ದಲ್ಲಿ ಯಾವ ಧರ್ಮವನ್ನು ತರುವುದು? ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರು ತಮ್ಮ ಧರ್ಮವನ್ನು ಅರಿತು ತಾವು ಒಂದು ಧರ್ಮವನ್ನು ಪಾಲಿಸಿದರೂ, ಪ್ರಜೆಗಳು ಅವರ ಇಚ್ಛೆಯಂತೆ ಬದುಕುವ ವಾತಾವರಣವನ್ನು ಕಲ್ಪಿಸಿದ್ದರು. ಇಲ್ಲದೇ ಹೋದರೆ ಇಷ್ಟೊಂದು ಜಾತಿ, ಮತ, ಪಂಥ, ಪಂಗಡಗಳು ಈ ನಾಡಿನಲ್ಲಿ ಸುದೀರ್ಘ ಕಾಲ ಅಸ್ತಿತ್ವದಲ್ಲಿರಲು ಮತ್ತು ಈ ದಿನದ ವರೆಗೂ ಮುಂದುವರಿದುಕೊಂಡು ಬರಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಅನೇಕ ಸಂದರ್ಭಗಳಲ್ಲಿ ರಾಜ, ಮಹಾರಾಜರು ಒಂದು ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮವನ್ನು ಸ್ವೀಕರಿಸಿರುವ ಎಷ್ಟೋ ಸಂದರ್ಭಗಳನ್ನು ನಾವು ಚರಿತ್ರೆಯಲ್ಲಿ ಕಾಣಬಹುದಾಗಿದೆ.
ದೇಶ ಸ್ವಾತಂತ್ರ್ಯ ಪಡೆದ ನಂತರ ಎಲ್ಲ ಜನ ವರ್ಗಗಳಿಗೆ ಘನತೆಯ ಬದುಕು ದೊರೆಯಬೇಕು ಎನ್ನುವ ಆಶಯದಿಂದ “ಪ್ರಜಾಪ್ರಭುತ್ವ ವ್ಯವಸ್ಥೆ” ಮತ್ತು ಇದರ ಪರಿಣಾಮಕಾರಿ ಕಾರ್ಯನಿರ್ವಹಣೆಗೆ “ಸಂವಿಧಾನ” ಅಸ್ತಿತ್ವಕ್ಕೆ ಬಂದ ಪರಿಣಾಮವಾಗಿ ಹಳೆಯ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಯಿತು. ಆದಾಗ್ಯೂ ಕೇವಲ ರಾಜಕೀಯ ಸ್ವಾತಂತ್ರ್ಯ ಒಂದೇ ಸಾಂವಿಧಾನಿಕ ಆಶಯವಾದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ತರಲಾರದು ಎನ್ನುವ ತಿಳುವಳಿಕೆ ಮತ್ತು ಇದರ ಕಾರ್ಯಸಾಧನೆ ಬಹಳ ಸವಾಲಿನದ್ದೂ ಆಗಿದೆ ಎನ್ನುವ ವಿವೇಕ ಆರಂಭಿಕ ಹಂತಗಳಲ್ಲಿ ದೇಶವನ್ನು ಮುನ್ನಡೆಸಿದ ನಮ್ಮ ನಾಯಕರಲ್ಲಿ ಇತ್ತು. ಹೀಗಾಗಿಯೇ ‘ಜಾತ್ಯತೀತ’ ಎನ್ನುವ ಪದ ಸಾರ್ವಜನಿಕ ಜೀವನದಲ್ಲಿ ಚಲಾವಣೆಗೆ ಬಂದಿತು.
ಸಮಾನತೆ ಎಂದಾಕ್ಷಣ ಅಥವಾ ಎಲ್ಲಾ ಧರ್ಮಗಳೂ ಸಮಾನ, ಎಂದಾಕ್ಷಣ ಹಾಗಾದರೆ ಎಲ್ಲರನ್ನೂ ಒಂದೇ ರೀತಿ ಕಾಣಿರಿ, ಮೀಸಲಾತಿ ಏಕೆ, ಸವಲತ್ತು ಏಕೆ ಎನ್ನುವ ವಿತಂಡವಾದಗಳೂ ಉದ್ಭವವಾಗುತ್ತವೆ. ಆದರೆ ಇದೊಂದು ಬಹಳ ಸೂಕ್ಷ್ಮವಾದ, ಸಂವೇದನಾಶೀಲತೆಯಿಂದ ನಿಭಾಯಿಸಬೇಕಾದ ಸಂಗತಿ. ಎಲ್ಲರೂ ಸಮಾನರು ಹೌದು, ಆದರೆ ಸಮಾನವಾಗಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಅವಕಾಶದ ಹಂಚಿಕೆ ಎಲ್ಲರಲ್ಲಿ ಹೇಗಿದೆ? ರಾಜಕೀಯ ಸಮಾನತೆಯೇನೋ ಇರಬಹುದು ಆದರೆ ಇದರ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳೇನು? ಎನ್ನುವ ಪ್ರಶ್ನೆ ತರ್ಕಕ್ಕೆ ಮೀರಿದ ವಿಷಯ. ಕುದ್ಮುಲ್ ರಂಗರಾಯರು, ಕಾರ್ನಾಡ್ ಸದಾಶಿವ ರಾಯರು ಬಾಬಾ ಸಾಹೇಬ್ ಅಂಬೇಡ್ಕರ್ ಅರ್ಥವಾದರೆ ನಮಗಿದು ಮನದಟ್ಟಾದೀತು. ದುರ್ಬಲವಾಗಿರುವ ಮಗುವಿಗೆ ತಾಯಿ ಕೊಂಚ ಹೆಚ್ಚು ಪ್ರೀತಿ ತೋರಿಸುತ್ತಾಳೆ, ಯಾಕೆಂದರೆ, ಉಳಿದ ಮಕ್ಕಳಿಗೆ ಅದಕ್ಕೆ ಹೋಲಿಸಿದರೆ ಹೆಚ್ಚು ಶಕ್ತಿ ಇರುತ್ತದೆ, ಅದನ್ನು ಉಪಯೋಗಿಸಿ ಅವರು ಬದುಕಬಲ್ಲರು, ಆದರೆ ಉಳಿದವರ ಎದುರು ದುರ್ಬಲವಾಗಿರುವ ತನ್ನ ಮಗುವಿಗೆ ಕೊಂಚ ಹೆಚ್ಚಿನ ಆಸರೆ ಬೇಕು. ಹಾಗಾಗಿ ಅವನಿ/ಳಿಗೆ ಹೆಚ್ಚು ಒಲವು ತೋರಿಸುತ್ತಾಳೆ.
ಪಾರಂಪರಿಕವಾಗಿ ಸಶಕ್ತವಾದ ಕೆಲವು ಹಿತಾಸಕ್ತಿಗಳು ಸಾಂವಿಧಾನಿಕ ಆಶಯಗಳನ್ವಯ ರಾಜ್ಯಾಂಗ ವ್ಯವಸ್ಥೆ ಕಾರ್ಯನಿರ್ವಹಿಸಿದರೂ ಪಾರಂಪರಿಕವಾಗಿ ತಮಗಿರುವ ಶಕ್ತಿಯಿಂದ (ಸಾಮಾಜಿಕ ಬಂಡವಾಳ) ವ್ಯವಸ್ಥೆಯನ್ನು ತಮ್ಮ ಪರವಾಗಿ ದುಡಿಸಿಕೊಳ್ಳಲು ಶಕ್ತವಾಗಿರುವ ಸನ್ನಿವೇಶವನ್ನು ದೇಶದೆಲ್ಲೆಡೆ ನಾವು ಕಾಣಬಹುದಾಗಿದೆ. ಅದರಲ್ಲಿಯೂ ಇಪ್ಪತ್ತೊಂದನೆಯ ಶತಮಾನದಲ್ಲಿ ಮಾರುಕಟ್ಟೆ ನಿಯಂತ್ರಿತ ನೀತಿ ಮೇಲುಗೈ ಸಾಧಿಸಿದ ಮೇಲೆ ಇದು ಮತ್ತಷ್ಟು ಬಲಯುತವಾಗಿ ಬೆಳೆದು ಇನ್ನಷ್ಟು ಸ್ಪಷ್ಟವಾಗಿ ಕಂಡುಬರುತ್ತಿದೆ, ಹಾಗೆಯೇ ಮುಂದುವರಿಯತ್ತಲೂ ಇದೆ. ನಮ್ಮ ಶಾಸನ ಸಭೆಗಳೂ, ಆರ್ಥಿಕ ಚಟುವಟಿಕೆಗಳು, ಸಂಪತ್ತಿನ ಹಂಚಿಕೆ ಎಲ್ಲದರಲ್ಲಿಯೂ ಇದು ಪ್ರತಿಫಲಿತವಾಗುತ್ತಾ ಬರುತ್ತಿದೆ. ಈ ಕಾರಣದಿಂದ ಸಾರ್ವಜನಿಕ ಮತ್ತು ಖಾಸಗೀ ನಡುವಿನ ಅಂತರ ಸಂಪತ್ತಿನ ಹಂಚಿಕೆಯಲ್ಲಿ ಹೆಚ್ಚಾಗುತ್ತಾ ಹೋಗುತ್ತಿದೆ.
ಇನ್ನೊಂದೆಡೆ ಖಾಸಗೀಕರಣದ ಪ್ರಭಾವ ಸಾರ್ವಜನಿಕ ಭೂಮಿಕೆಯನ್ನು ಒತ್ತುವರಿ ಮಾಡುತ್ತಾ ಸಾಗುತ್ತಿದೆ. ಈ ಕಾರಣದಿಂದ ತಮ್ಮ ಅಭಿವ್ಯಕ್ತಿ, ಹಿತಾಸಕ್ತಿಗಳಿಗೆ ಕೇವಲ ಸಾರ್ವಜನಿಕ (ಸ್ಪೇಸ್) ಭೂಮಿಕೆಯನ್ನು ಮಾತ್ರ ಅವಲಂಬಿಸಿರುವ ದುರ್ಬಲರ ಮಾತು ಮೌನವಾಗುತ್ತಿದೆ. ಅವರಿಗೆ ಇದ್ದ ಅಲ್ಪ ಅವಕಾಶಗಳೂ ಹಾಗಾಗಿ ಗೌಣವಾಗುತ್ತಿವೆ. ಸ್ವಾತಂತ್ರ್ಯೋತ್ಸವದ ಎಪ್ಪತ್ತೈದನೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದು, ಜೀವಿತದ ಅವಧಿಯ ಒಂಭತ್ತು ವರ್ಷಗಳನ್ನು ಬಂಧನದಲ್ಲಿ ಕಳೆದ ಈ ದೇಶದ ಮೊದಲ ಪ್ರಧಾನಿ, ಜವಾಹರಲಾಲ್ ನೆಹರೂ ಹೆಸರೇ ಕಳೆದುಹೋದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಇಲ್ಲಿ ನಿಜವಾಗಿಯೂ ವಂಚಿತವಾಗುತ್ತಿರುವುದು ದುರ್ಬಲರ ಧ್ವನಿ, ಮತ್ತು ಸಮಾನತೆಯ ತತ್ವ ಚಿಂತನೆಗಳು.
ನನ್ನ ಅಭಿಪ್ರಾಯದಲ್ಲಿ ಈ ದೇಶದ ನಿಜವಾದ ದೇಗುಲಗಳು ವಿದ್ಯಾಸಂಸ್ಥೆಗಳು. ಅಂತಹ ವಿದ್ಯಾಸಂಸ್ಥೆಗಳಲ್ಲಿ ಯಾವುದೇ ರಾಜಕೀಯ ಸಂಬಂಧಿತ ಚಟುವಟಿಕೆಗಳು ನಡೆಯುವುದು ಸರ್ವಥಾ ಸರಿಯಲ್ಲ. ವಿದ್ಯಾರ್ಜನೆ ನಡೆಯುವ ಸ್ಥಳಗಳಲ್ಲಿ ಕಲಿಕೆಗೆ ಸಂಬಂಧ ಪಡದ ಚಟುವಟಿಕೆಗಳಿಗೆ ಅವಕಾಶ ನಿರಾಕರಿಸುವುದು ಸರಿಯಾಗಿಯೇ ಇದೆ. ಯಾವುದೇ ಧರ್ಮದ ಆಚರಣೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸುವುದಕ್ಕೆ ಯಾರೂ ಅಡ್ಡಿಪಡಿಸಲಾರರು. ಆದರೆ ಸಾರ್ವಜನಿಕ ಸ್ಥಳಗಳಲ್ಲಿಯೇ ಈ ರೀತಿಯ ಆಚರಣೆಗಳು ಇತ್ತೀಚಿನ ದಿನಗಳಲ್ಲಿ ಭಕ್ತಿಯ ನೆಪದಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳಾಗುತ್ತಿರುವ ಕಾರಣ ವಿವಾದಗಳಿಗೆ ಕಾರಣವಾಗುತ್ತಿದೆ. ಧರ್ಮದ ಪೋಷಾಕಿನ ಒಳಗಿರುವ ಹಿತಾಸಕ್ತಿಗಳು ಬೇರೆಯಾಗಿರುವುದು ಸಮಸ್ಯೆಗೆ ಎಡೆಮಾಡಿಕೊಡುತ್ತಿದೆ. ಇತ್ತೀಚಿನವರೆಗೂ ಕೇವಲ ನಂಬಿಕೆ, ಸಂಪ್ರದಾಯದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲೂ ಕೆಲವೊಂದು ಆಚರಣೆಗಳು ನಡೆದುಕೊಂಡು ಬಂದಿರುವುದೂ ಸುಳ್ಳಲ್ಲ. ಇತ್ತೀಚಿನವರೆಗೂ ಅದು ಯಾವುದೂ, ಯಾರಿಗೂ ಸಮಸ್ಯೆ ಆಗಿರಲಿಲ್ಲ. ಅವೆಲ್ಲವನ್ನೂ ನಮ್ಮ ಜನ ಸೌಹಾರ್ದದ ನೆಲೆಗಳಾಗಿಯೇ ಕಂಡು ಸಂಭ್ರಮಿಸಿದ್ದರು. ಅಂತಹ ನೆಲೆಗಳಲ್ಲಿ “ಟ್ರೋಜನ್ ಕುದುರೆ” ಗಳನ್ನು ಕಂಡ ರಾಜಕೀಯಕ್ಕೆ ಏನನ್ನೋಣ?
ಒಂದು ಕಾಲಕ್ಕೆ ಸೌಹಾರ್ದದ ನೆಲೆಗಳಾಗಿದ್ದ ಸಮುದಾಯದ ಉದಾರತೆಯನ್ನು ರಾಜಕೀಯ ಹಿತಾಸಕ್ತಿಗಳು, ಸಾರ್ವಜನಿಕ ಸ್ತರವನ್ನು ಆಕ್ರಮಿಸಿಕೊಳ್ಳಲು ಹಿತ್ತಲ ಬಾಗಿಲುಗಳಾಗಿ ಪರಿವರ್ತಿಸಿಕೊಳ್ಳುವ ಕಾರಣದಿಂದ ಗೊಂದಲವುಂಟಾಗುತ್ತಿದೆ. ಸ್ವಂತ ಹಿತಾಸಕ್ತಿಯ ಮುಂದೆ ಯಾವುದೂ ನಿಲ್ಲುವುದಿಲ್ಲ ಎನ್ನುವುದನ್ನು ಕೊರೋನಾ ಕಾಲ ನಮಗೆ ಬಹಳ ಸರಿಯಾಗಿಯೇ ನೆನಪಿಸಿದೆ. ಎಂತೆಂಥಾ ಪವಿತ್ರ ಕ್ಷೇತ್ರಗಳು ಪೂಜೆ, ಪುನಸ್ಕಾರಗಳಿಲ್ಲದೆ, ಜನ ದರ್ಶನಗಳಿಲ್ಲದೇ ಉಳಿದವು, ಜನ ಜೀವ ಭಯದಿಂದ ಮನೆಯ ಒಳಗೇ ಉಳಿದರು. ಸ್ವಂತ ಅಪ್ಪ ಅಮ್ಮಂದಿರ ಶವ ಸಂಸ್ಕಾರವನ್ನೂ ಮಾಡದೇ ಪ್ರಾಣ, “ಮಾನ” ಕಾಪಾಡಿಕೊಂಡರು. ಆದರೆ ಈ ಪಾಠಗಳನ್ನು ನಾವೆಲ್ಲ ಬಹಳ ಬೇಗನೇ ಮರೆತು ಬಿಟ್ಟೆವು.
ವಿದ್ಯಾಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಕಲಿಕಾ ಸಂಬಂಧೀ ಚಟುವಟಿಕೆಗಳಿಗೆ ಹೊರತುಪಡಿಸಿ ಮಿಕ್ಕ ಉದ್ದೇಶಗಳಿಗೆ ಶಾಲಾ ಕಾಲೇಜಿನ ಆವರಣಗಳ ಬಳಕೆಯ ಬಗ್ಗೆ ಸ್ಪಷ್ಟವಾದ ನೀತಿಯೊಂದರ ಅವಶ್ಯಕತೆ ಇದೆಯೆಂದಾದರೆ, ಸರಕಾರೀ ಶಾಲೆಗಳಿಗೆ ಸರಕಾರ ಮತ್ತು ಖಾಸಗೀ ಸಂಸ್ಥೆಗಳಿಗೆ ಸರಕಾರ, ಆಡಳಿತ ಮಂಡಳಿ, ಹೆತ್ತವರು ಮತ್ತು ಅಧ್ಯಾಪಕರು ಸೇರಿ ಸಾಂವಿಧಾನಿಕ ಆಶಯದಂತೆ ದೂರದೃಷ್ಟಿ ಇರುವ ನಿಯಮ ಒಂದನ್ನು ರೂಪಿಸಿ ಕೊಳ್ಳುವುದು ಒಳ್ಳೆಯದು. ಆದರೆ ಯಾವ ಕಾರಣದಿಂದಲೂ ಅಲ್ಲಿ ರಾಜಕೀಯ ಕಾರ್ಯಕ್ರಮಗಳು ನಡೆಯುವುದು ಸರಿಯಲ್ಲ. ಮುಂದಿನ ತಲೆಮಾರು ಘನತೆವೆತ್ತ ಬದುಕು ನಡೆಸಲು ಅನುವು ಮಾಡಿಕೊಡಬೇಕು ಎನ್ನುವ ಚಿಂತನೆ ಸಾರ್ವಜನಿಕ ಜೀವನದಲ್ಲಿರುವವರ ಚಿತ್ತದಲ್ಲಿ ಹುತ್ತ ಗಟ್ಟುವವರೆಗೆ, ಎಲ್ಲವನ್ನೂ ಮೆಟ್ಟಿಲಾಗಿಯೇ ಕಾಣುವ ರೋಗದಿಂದ ನಮ್ಮ ನಾಯಕರಿಗೆ ಮುಕ್ತಿ ಹೇಗೆ? ಮನೆಯನ್ನೇನೋ ಕಟ್ಟಬಹುದು ಆದರೆ ಸುಖೀ ಸಮಾಜದ ಆಶಯದ ಮೂಟೆ ಹೊತ್ತು ಜನರ ಮನಸ್ಸು ಮುಟ್ಟುವುದು ಹೇಗೆ?
ಡಾ.ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ-ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ; ಕೇಸರಿ ಪಡೆ ಕೆರಳಿ ಕೆಂಡ https://kannadaplanet.com/restriction-to-non-academic-activities/