ಬಸವಣ್ಣ ಟೀಕಿಸಿದ ಯತ್ನಾಳ್‌ ಬಂಧನಕ್ಕೆ ಲಿಂಗಾಯತ ಮಹಾಸಭಾ ಆಗ್ರಹ

Most read

ಮಂಡ್ಯ: ವಿಶ್ವಸಂವಿಧಾನ ಶಿಲ್ಪಿ  ಬಸವಣ್ಣನವರನ್ನು ʼಹೊಳೆಗೆ ಹಾರಿಕೊಂಡರುʼ ಎಂದು ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡಲೇ ಬಂಧಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಹೆಸರನ್ನು ಇಟ್ಟುಕೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್, ಅಣ್ಣ ಬಸವಣ್ಣನವರ ಆದರ್ಶಗಳನ್ನು ಅರಿಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬಸವಣ್ಣನವರ ನಿಜವಾದ ಅನುಯಾಯಿಯಾಗಿದ್ದರೆ ಯತ್ನಾಳ್ ಹಣೆಯಲ್ಲಿ ವಿಭೂತಿ ಧರಿಸಿ ಕೊರಳಲ್ಲಿ ಇಷ್ಟಲಿಂಗ ಧರಿಸಬೇಕಿತ್ತು. ಆದರೆ ಅವರು, ನಕಲಿ ಹಿಂದೂ ನಾಯಕರಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರು ಬಸವಣ್ಣನವರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಆದರೆ, ಅವರನ್ನು ಅವಹೇಳನ ಮಾಡಿರುವ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಯಿಂದ ಉಚ್ಛಾಟಿಸುವ ಶಕ್ತಿಯನ್ನು ಕರ್ನಾಟಕ ಹಾಗೂ ಕೇಂದ್ರದ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ. ರಾಜ್ಯ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಬಿಜೆಪಿ ನಾಯಕರಿಗೆ ಸಹಿಸಲಾಗುತ್ತಿಲ್ಲ.  ಹಿಂದುತ್ವದ ಸೋಗಿನಲ್ಲಿ ಬಸವಣ್ಣನವರ ಆಶಯಗಳನ್ನು ಹತ್ತಿಕ್ಕಲು ಸಮುದಾಯವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ವಿಶ್ವಗುರು ಬಸವಣ್ಣನವರ ಹೆಸರಲ್ಲೇ ಗೆದ್ದು ಬಂದು ಅಧಿಕಾರ ಹಿಡಿಯುವ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಮನಸ್ಸೋ ಇಚ್ಚೆ ಮಾತನಾಡಿದರೆ ಅವರ ನಾಲಗೆಯನ್ನು ಸೀಳಬೇಕಾದೀತು ಎಂದೂ ಅವರು ಎಚ್ಚರಿಕೆ ನೀಡಿದರು.
ಮಳವಳ್ಳಿಯ ಕಲ್ಯಾಣ ಬಸವೇಶ್ವರ ಮಠದ ಪೀಠಾಧ್ಯಕ್ಷ ಓಂಕಾರ ಸ್ವಾಮೀಜಿ ಮಾತನಾಡಿ, ಯತ್ನಾಳ್, ಲಿಂಗಾಯತ ಸಮುದಾಯದಲ್ಲಿ ಜನಿಸಿ ಬೆಳೆದು ಸಮುದಾಯವನ್ನು ಶಕ್ತಿಯಾಗಿ ಬಳಸಿಕೊಂಡು ಶಾಸಕ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಅವರು ಬಸವಣ್ಣನವರು ಹೊಳೆಗೆ ಹಾರಿಕೊಂಡರು ಎಂದು ಹೇಳಿಕೆ ನೀಡಿರುವುದು ಅಸಹನೀಯ. ಇಂತಹ ಹೇಳಿಕೆಗಳನ್ನು ನೀಡಿದವರು ಯಾರೇ ಆಗಿದ್ದರೂ ಸಮುದಾಯ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮಹಾಸಭಾದ ಮದ್ದೂರು ತಾಲೂಕು ಅಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ, ಮುಖಂಡರಾದ ಯೋಗ ಶಿಕ್ಷಕ ಶಿವರುದ್ರಸ್ವಾಮಿ, ಬೆಳ್ಳಪ್ಪ, ವೀರಭದ್ರಯ್ಯ ಹಲಸಹಳ್ಳಿ, ಆನಂದ್ ಕೊನ್ನಾಪುರ ಹಾಗೂ ಮಳವಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

More articles

Latest article