ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ವಿಚಾರವನ್ನು ಮರು ಪರಿಶೀಲನೆ ನಡೆಸುವಂತೆ ಹೈಕಮಾಂಡ್‌ಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ. ಈ ಸಂಬಂಧ ಬೆಂಗಳೂರಿನಲ್ಲಿ ನಾಳೆ ಭಿನ್ನಮತೀಯರ ಸಭೆ ನಡೆಯಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಗುರುವಾರ ಅವರು ಮಾತನಾಡಿ ಯತ್ನಾಳ ಮರಳಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ. ಶಾಸಕ ಯತ್ನಾಳ ವಿರುದ್ಧದ ಕ್ರಮ ನಿರೀಕ್ಷಿತವಾಗಿದ್ದು ಈ ಮೂಲಕ ನಮ್ಮ ವಿರೋಧಿ ಬಣಕ್ಕೂ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.
ಯತ್ನಾಳ ನಮ್ಮ ಪಕ್ಷದ ದೊಡ್ಡ ನಾಯಕ. ಹಾಗೆಂದ ಮಾತ್ರಕ್ಕೆ ಪಕ್ಷದ ನಿರ್ಧಾರ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ನಾವೆಲ್ಲರೂ ಸೇರಿ ಚರ್ಚೆ ನಡೆಸುತ್ತೇವೆ. ಯತ್ನಾಳ ಕ್ರಮದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಪತ್ರ ಬರೆದು ಹೈಕಮಾಂಡ್‌ಗೆ ಮನವಿ ಮಾಡಿಕೊಳ್ಳುತ್ತೇವೆ. ಯತ್ನಾಳ ಅವರು ವೀರಶೈವ ಸಮುದಾಯದ ನಾಯಕರೂ ಹೌದು. ಅವರ ಸಾಮರ್ಥ್ಯವನ್ನು ಬಿಜೆಪಿ ಬಳಸಿಕೊಳ್ಳಬೇಕಿತ್ತು ಎಂದರು.
ನಾನು ಕೂಡ ವೇದಿಕೆ ಮೇಲೆ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೇನೆ. ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೂ ನೋಟಿಸ್ ನೀಡಿದ್ದಾರೆ. ಆದರೆ ಯತ್ನಾಳ ಅವರ ಮೇಲೆ ಹೆಚ್ಚು ಪ್ರೀತಿ ಇದೆ. ಆ ಕಾರಣಕ್ಕೆ ಉಚ್ಚಾಟಿಸಿದ್ದಾರೆ. ನಾವು ಇದನ್ನು ಪಕ್ಷದ ಪ್ರೀತಿ ಎಂದೇ ಭಾವಿಸುತ್ತೇವೆ ಎಂದು ಜಾರಕಿಹೊಳಿ ಹೇಳಿದರು.
ಏನೇ ಆದರೂ ಯತ್ನಾಳ ಅವರೂ ಸೇರಿದಂತೆ ನಾನು ಮತ್ತು ನಮ್ಮ ತಂಡದವರೆಲ್ಲ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ಸಲ ನಮ್ಮದೇ ಸರ್ಕಾರ ತರಲು ಏನು ಬೇಕೋ ಅದನ್ನು ಮಾಡುತ್ತೇವೆ. ಕೆಲವೊಮ್ಮೆ ಸೂರ್ಯ, ಚಂದ್ರನಿಗೂ ಗ್ರಹಣ ಬಡಿಯುತ್ತದೆ. ನಾವು ರಾಜಕಾರಣಿಗಳು. ನಮ್ಮಿಂದಲೂ ಒಮ್ಮೊಮ್ಮೆ ಸಮಸ್ಯೆಗಳು ಉಂಟಾಗುತ್ತವೆ. ಈಗ ನಾವೆಲ್ಲರೂ ಗಟ್ಟಿಯಾಗಿ ಯತ್ನಾಳ ಜೊತೆಗೆ ನಿಲ್ಲುತ್ತೇವೆ. ಯತ್ನಾಳ ಒಂಟಿ ಅಲ್ಲ ಎಂದರು.
ಕೇಂದ್ರದ ಟಾಪ್-10 ನಾಯಕರಲ್ಲಿ ಒಬ್ಬರೊಂದಿಗೆ ನಾನು ಮಾತಾಡಿದ್ದೇನೆ. ಬಿಜೆಪಿ ನಮಗೆ ತಂದೆ ತಾಯಿ ಸಮಾನ ಎಂದು ಹೇಳಿದ್ದೇನೆ. ರಾಷ್ಟ್ರ ಮಟ್ಟದ ನಾಯಕರ ಮೇಲೆ ನಮಗೆ ವಿಶ್ವಾಸ ಇದೆ. ಪುನಃ ಯತ್ನಾಳ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಈ ವಿಚಾರದಲ್ಲಿ ವಿಜಯೇಂದ್ರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಈ ಹಿಂದೆ ಅವರ ಬಗ್ಗೆ ಆಡಿದ ಎಲ್ಲ ಮಾತಿಗೆ ನಾನು ಬದ್ಧನಿದ್ದೇನೆ ಎಂದೂ ರಮೇಶ ಜಾರಕಿಹೊಳಿ ತಿಳಿಸಿದರು.