ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಲೆಂದೇ ಯತ್ನಾಳ್ ಬಣ ಹೋರಾಟ: ಪರಮೇಶ್ವರ್ ಆರೋಪ

Most read

ಬೆಂಗಳೂರು: ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಅವಧಿಯಲ್ಲಿ ವಕ್ಫ್ ನೋಟೀಸ್ ಕೊಟ್ಟಿರುವ ವಿಷಯದಲ್ಲಿ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಲೆಂದೇ ಬಸನಗೌಡ ಯತ್ನಾಳ್ ಬಣ ಹೋರಾಟ ಮಾಡುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆರೋಪಿಸಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ವಕ್ಫ್ ನೋಟೀಸ್ ನೀಡಿರುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿದ್ದ ಆಪಾದನೆಯ ಸತ್ಯ ಬಹಿರಂಗವಾಗಿದೆ ಎಂದು ತಿರುಗೇಟು ನೀಡಿದರು.

ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ರೈತರಿಗೆ ನೋಟೀಸ್ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ನೋಟೀಸ್ ನೀಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು. ಮಾಜಿ ಶಾಸಕ ಕುಮಾರ ಬಂಗಾರಪ್ಪ ನೇತೃತ್ವದಲ್ಲಿ ಕಮಿಟಿ ಮಾಡಿ, 2900 ಎಕರೆಗೆ ಜಮೀನಿಗೆ ನೋಟೀಸ್ ನೀಡಿದ್ದಾರೆ. ನಮ್ಮ ಸರ್ಕಾರದಲ್ಲಿ 300 ಎಕರೆಗೆ ನೋಟಿಸ್ ನೀಡಲಾಗಿದೆ. ಯಾರ ಅವಧಿಯಲ್ಲಿ ಹೆಚ್ಚು ನೋಟಿಸ್ ನೀಡಲಾಗಿದೆ ಎಂಬುದನ್ನು ರಾಜ್ಯದ ಜನತೆ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟೀಸ್ ನೀಡಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ನಾವು ಆ ವಿಚಾರವನ್ನು ಕೈಗೊತ್ತಿಕೊಂಡಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡುವುದಾಗಿ ಹೇಳಿದರು. ಇವಿಎಂ ದುರ್ಬಳಕೆ ಕುರಿತಂತೆ ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಇವಿಎಂ ದುರ್ಬಳಕೆ ಸೆಲೆಕ್ಟಿವ್ ಆಗಿ ಮಾಡುತ್ತಾರೆ. ಸೆಲೆಕ್ಟಿವ್ ಆಗಿ ರಾಜ್ಯ ಆಯ್ಕೆ ಮಾಡುತ್ತಾರೆ ಎಂಬುದಾಗಿ ಹೇಳಿದ್ದೇವೆ. ಈ ವಿಚಾರವನ್ನು ಹೊಸದಾಗಿ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

More articles

Latest article