ಸಾಗರ: ʼನಾಡಿʼ ಎಂದೇ ಜನಮಾನಸದಲ್ಲಿ ಪ್ರಸಿದ್ಧರಾಗಿರುವ ಮೇರು ಸಾಹಿತಿ ನಾ ಡಿಸೋಜಾ (87) ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ನಾರ್ಬರ್ಟ್ ಡಿಸೋಜ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಜನಿಸಿದರು. ಇವರ ತಂದೆ ಫಿಲಿಪ್ ಡಿಸೋಜ ಶಾಲಾ ಮಾಸ್ತರರಾಗಿದ್ದರು. ಅವರು ಶಾಲಾಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಓದತೊಡಗಿದ ಬಾಲಕ ನಾ ಡಿಸೋಜ ಅವರಲ್ಲಿ ತಾನೇತಾನಾಗಿ ಸಾಹಿತ್ಯದೊಲವು ಮೊಳೆಯಿತು. ಜೊತೆಗೆ ತಾಯಿ ರೊಪೀನಾ ಅವರು ಹೇಳುತ್ತಿದ್ದ ಜನಪದ ಹಾಡುಗಳು ಮತ್ತು ಕತೆಗಳು ಡಿಸೋಜ ಅವರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ತಮ್ಮಂದಿರಾದ ಗೊರೂರು ನರಸಿಂಹಾಚಾರ್ ಅವರು ಅಕರ್ಷಕವಾಗಿ ಶಾಲೆಯಲ್ಲಿ ಬೋಧಿಸುತ್ತಿದ್ದ ರೀತಿ ಮತ್ತು ಕಾಲೇಜಿನ ದಿನಗಳಲ್ಲಿ ಗುರುಗಳಾಗಿದ್ದ ಡಾ. ಜಿ. ಎಸ್. ಶಿವರುದ್ರಪ್ಪನವರ ಪಾಂಡಿತ್ಯದ ಪ್ರಭಾವ ನಾ. ಡಿಸೋಜ ಅವರನ್ನು ಸಾಕಷ್ಟು ಮೋಡಿಮಾಡಿತ್ತು.
ನಾ. ಡಿಸೋಜ ಅವರು ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿ ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.
ನಾ. ಡಿಸೋಜ ಅವರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, ಸುಮಾರು 500 ಕಥೆಗಳು, ಹತ್ತಾರು ನಾಟಕಗಳು, ರೇಡಿಯೋ ನಾಟಕಗಳು, ಅನೇಕ ಪತ್ರಿಕಾ ಲೇಖನಗಳು ಹೀಗೆ ವಿಶಾಲ ವ್ಯಾಪ್ತಿಯ ಬರಹ ಮಾಡಿದ್ದರು. ಇವರ ‘ಮುಳುಗಡೆಯ ಊರಿಗೆ ಬಂದವರು’ ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಸಂದಿತ್ತು. ‘ದ್ವೀಪ’ ಮತ್ತು ‘ಕಾಡಿನ ಬೆಂಕಿ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿವೆ.
ನಾ ಡಿಸೋಜ ಅವರ ಕತೆಗಳು ಪ್ರಪಂಚ ಪತ್ರಿಕೆಯಲ್ಲಿ ಮೊದಲು ಪ್ರಕಟಗೊಂಡು ಮುಂದೆ ಎಲ್ಲ ಪತ್ರಿಕೆಗಳಲ್ಲೂ ಬಹುಬೇಡಿಕೆ ಪಡೆದವು. ಡಿಸೋಜ ಅವರ ಹಲವಾರು ಸಣ್ಣಕತೆಗಳು ಕೊಂಕಣಿ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿವೆ.
ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ 1964ರಲ್ಲಿ ಬೆಳಕಿಗೆ ಬಂತು. ಹಸಿರಿನಳಿವು, ಕ್ರಿಸ್ತುವ ಮಂದಿಯ ನಡೆನುಡಿ, ಕಳ್ಳ ಸಂಪಾದನೆ, ಹಿಂದುಳಿದ ಬುಡಕಟ್ಟು ಜನರ ಬದುಕು ಹೀಗೆ ಹಲವು ಹತ್ತು ಚಿತ್ತಾರಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ. ಇತಿಹಾಸ ಪ್ರಸಿದ್ಧ ಕಾಗೋಡು ಸತ್ಯಾಗ್ರಹವನ್ನು ಕೇಂದ್ರವಾಗಿರಿಸಿಕೊಂಡು ಅವರು ರಚಿಸಿದ್ದ ʼಕೊಳಗʼ ಕಾದಂಬರಿ ಪ್ರಸಿದ್ಧವಾಗಿದೆ. ಸುರೇಶ್ ಹೆಬ್ಳೀಕರ್ ಅವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ’, ಸಿರಿಗಂಧ ಶ್ರೀನಿವಾಸಮೂರ‍್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟಮಕ್ಕಳು’ ಮತ್ತು ಮನು ಅವರ ನಿರ್ದೇಶನದಲ್ಲಿ ‘ಆಂತರ‍್ಯ’ ಕಾದಂಬರಿಗಳು ಚಲನಚಿತ್ರಗಳಾಗಿವೆ. ದ್ವೀಪ ಕಾದಂಬರಿಯು ‘ಅಯ್ಲ್ಯಾಂಡ್’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಬಂದಿದೆ. ‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ.
ನಾ. ಡಿಸೋಜ ಅವರು ಬರವಣಿಗೆಯಲ್ಲಿ ಮಾತ್ರವಲ್ಲದೆ ಪರಿಸರಕ್ಕಾಗಿನ ಹೋರಾಟದಲ್ಲೂ ಪಾತ್ರವಹಿಸಿದ್ದಾರೆ. ಇಕ್ಕೇರಿ ಗಣಿಕಾರಿಗೆ ಬೇಡ ಹೋರಾಟ, ಅಂಬುತೀರ್ಥದಿಂದ ಅರಬ್ಬೀಸಮುದ್ರದವರೆಗಿನ ಶರಾವತಿ ನಡೆ, ತಾಳಗುಪ್ಪ ಶಿವಮೊಗ್ಗ ಬ್ರಾಡ್ಗೇಜ್ ಹೋರಾಟ ಮುಂತಾದವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ನಾ ಡಿಸೋಜ ಅವರು 2014 ವರ್ಷದಲ್ಲಿ ಮಡಿಕೇರಿಯಲ್ಲಿ ನೆಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವಾನ್ವಿತ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿದ್ದವು.