ಪ್ರಿಸ್ಕ್ರಿಪ್ಶನ್ ಚೀಟಿಯನ್ನು ಕನ್ನಡದಲ್ಲಿ ಬರೆಯಿರಿ: ವೈದ್ಯರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿಳಿಮಲೆ ಸೂಚನೆ

Most read

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ನೀಡುವ ಪ್ರಿಸ್ಕ್ರಿಪ್ಶನ್‌ನನ್ನು ಕನ್ನಡದಲ್ಲಿ ಬರೆಯುವಂತೆ ಸೂಚನೆ ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಸಮಾನ ಮನಸ್ಕರ ಜೊತೆ ಸಂವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಯಚೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಇಂಗ್ಲಿಷ್‌ನಲ್ಲಿ ವೈದ್ಯರ ಚೀಟಿಯಿಂದ ಉಂಟಾಗುವ ತೊಂದರೆಯ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸಂಬಂಧಿತರಿಗೆ ನೋಟಿಸ್ ನೀಡಲಾಗಿದೆ. ಆದ್ದರಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚೀಟಿಯನ್ನು ಕನ್ನಡದಲ್ಲೇ ಬರೆಯುವಂತೆ ಸೂಚಿಸಲಾಗಿದೆ. ಮುಂದೆ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೂ ಈ ಆದೇಶವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕೈಗಾರಿಕಾ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಅವಕಾಶಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿ ಶಾಸನ ಆಗಬೇಕು. ಆಗ ಮಾತ್ರ ಸ್ಥಳೀಯರಿಗೆ ಉದ್ಯೋಗವು ಸಿಗಲು ಸಾಧ್ಯವಿದೆ. ಹೀಗಾಗಿ ಡಾ. ಸರೋಜಿನಿ ಮಹಿಷಿ ಶಿಫಾರಸನ್ನು ಮುಂದಿನ ಅಧಿವೇಶನದಲ್ಲಿ ಸರ್ಕಾರ ಶಾಸನವಾಗಿ ರೂಪಿಸಲು ಮುಂದಾಗಬೇಕು ಎಂದು ಹೇಳಿದರು.

ಡಾ.ಸರೋಜಿನಿ ಮಹಿಷಿ ವರದಿಯಲ್ಲಿ 58 ವಿಭಾಗಗಳಿದ್ದು, ಈ ಕಾಲಕ್ಕೆ ಕೇವಲ 14 ವಿಭಾಗಗಳು ಮಾತ್ರ ಅನುಷ್ಠಾನಕ್ಕೆ ಯೋಗ್ಯವಾಗಿವೆ. ಹಾಗಾಗಿ ಈ ವರದಿಯ ಯಥಾವತ್ ಜಾರಿ ಸಾಧ್ಯವಾಗದು. ಈ 14 ವಿಭಾಗಗಳ ಶಿಫಾರಸನ್ನು ಅನುಷ್ಠಾನಕ್ಕೆ ತರಬೇಕಾದರೆ ವರದಿಯು ಶಾಸನವಾಗಿ ಬದಲಾಗಬೇಕು. ಅದಕ್ಕಾಗಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗಿ ಬಳಿಕ ಶಾಸನ ರೂಪ ಪಡೆಯಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಈ ವರದಿ ಕಾನೂನು ರೂಪ ಪಡೆದರೆ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ. 70 ರಷ್ಟು ಉದ್ಯೋಗ ಕಾನೂನು ಬದ್ಧವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.

ಈ ರೀತಿ ಕಾಯ್ದೆ ಜಾರಿಯಾದರೆ ಹೊಸ ಕಂಪನಿಗಳಿಗೆ ಬಂಡವಾಳ ಹೂಡಿಕೆಗೆ ತೊಂದರೆಯಾಗುವುದಿಲ್ಲ. ತಮಿಳುನಾಡಿನಲ್ಲಿ ಸ್ಥಳೀಯ ಉದ್ಯೋಗ ನೀತಿ ಇಲ್ಲದಿದ್ದರೂ ಅಲ್ಲಿನವರಿಗೆ ಉದ್ಯೋಗದಲ್ಲಿ ಕಂಪನಿಗಳು ಆದ್ಯತೆ ನೀಡುತ್ತವೆ. ಹಾಗೆಯೇ ಕರ್ನಾಟಕದಲ್ಲೂ ಆಗುತ್ತಿಲ್ಲ. ಅದಕ್ಕಾಗಿ ಈ ಕಾಯ್ದೆ ಜಾರಿಗೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ರಾಜ್ಯದಲ್ಲಿರುವ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲವರನ್ನು ನೇಮಕ ಮಾಡುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸ್ಥಳೀಯ ಸಾಮಾನ್ಯರ ಒಡನಾಟ ಹೊಂದಿರುವ ಬ್ಯಾಂಕ್, ಆಸ್ಪತ್ರೆ ಹಾಗೂ ಪಶು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ತಿಳಿದಿರುವವರ ಅಗತ್ಯವಿದೆ. ಡಾ.ಸರೋಜಿನಿ ಮಹಿಷಿ ವರದಿಯಲ್ಲೂ ಇದರ ಉಲ್ಲೇಖ ಇದೆ. ನವೆಂಬರ್ 1 ರೊಳಗೆ ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲ ಒಬ್ಬರಾದರೂ ಇರಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

More articles

Latest article