ವಿಶ್ವ ರಂಗಭೂಮಿ ದಿನ | ರಂಗಭೂಮಿ ಸಮಸ್ಯೆಗಳಿಗೆಂದು  ಬಿಡುಗಡೆ?

Most read

ಇಂದು ವಿಶ್ವ ರಂಗಭೂಮಿ ದಿನಾಚರಣೆ. ವಿಶ್ವ ರಂಗಭೂಮಿ ದಿನ ಎನ್ನುವುದು ಸಂಭ್ರಮದ ಜೊತೆಗೆ  ಕನ್ನಡ ರಂಗಭೂಮಿಯ ಸಮಸ್ಯೆಗಳ ಕುರಿತು ಚರ್ಚಿಸಿ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನಕ್ಕೆ ರಂಗಕರ್ಮಿಗಳು ಚಾಲನೆ ನೀಡಿದರೆ ಈ ಸಂಭ್ರಮದ ದಿನಕ್ಕೊಂದು ಅರ್ಥ ಮತ್ತು ಸಾರ್ಥಕತೆ ಬರುತ್ತದೆ.  ಅಂತಹಾ ಒಂದು ಪ್ರಯತ್ನವನ್ನು ಮಾಡಿದ್ದಾರೆ ರಂಗಕರ್ಮಿ ಶಶಿಕಾಂತ ಯಡಹಳ್ಳಿ.

ಪ್ರತಿ ವರ್ಷದಂತೆ ಮಾರ್ಚ್ 27 ವಿಶ್ವರಂಗಭೂಮಿ ದಿನಾಚರಣೆಯನ್ನು ಕನ್ನಡ ರಂಗಭೂಮಿಯವರು ಸಂಭ್ರಮದಿಂದ ಆಚರಿಸುತ್ತಾರೆ.  ವಿಶ್ವ ರಂಗಭೂಮಿ ದಿನಕ್ಕಾಗಿ ರಂಗಸಾಧಕರು ಬರೆದ ಸಂದೇಶವನ್ನು ಓದಲಾಗುತ್ತದೆ. ಅನೇಕ ಕಡೆ ವಿಶ್ವರಂಗಭೂಮಿ ದಿನದ ನೆಪದಲ್ಲಿ ರಂಗಗೀತೆ ಸಂಗೀತ, ವಿಚಾರ ಸಂಕಿರಣ, ಸನ್ಮಾನ, ಪ್ರಶಸ್ತಿ ಪ್ರಧಾನ, ನಾಟಕ ಪ್ರದರ್ಶನದಂತಹ ಹಲವಾರು ರಂಗಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ರಂಗಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ಈ ವಾರ್ಷಿಕ ಸಂಭ್ರಮದಲ್ಲಿ ಹಿನ್ನೆಲೆಗೆ ಸರಿಯುತ್ತವೆ. ವಿಶ್ವರಂಗಭೂಮಿ ದಿನ ಎನ್ನುವುದು ಸಂಭ್ರಮದ ಜೊತೆಗೆ  ಕನ್ನಡ ರಂಗಭೂಮಿಯ ಸಮಸ್ಯೆಗಳ ಕುರಿತು ಚರ್ಚಿಸಿ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನಕ್ಕೆ ರಂಗಕರ್ಮಿಗಳು ಚಾಲನೆ ನೀಡಿದರೆ ಈ ಸಂಭ್ರಮದ ದಿನಕ್ಕೊಂದು ಅರ್ಥ ಮತ್ತು ಸಾರ್ಥಕತೆ ಬರುತ್ತದೆ. 

ಕನ್ನಡ ರಂಗಭೂಮಿ ಅನೇಕ ಸಮಸ್ಯೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡೆ ಮುನ್ನಡೆಯುತ್ತಿದೆ. ಕಲಾವಿದರಿಗೆ ಸೂಕ್ತ ಸಂಭಾವನೆ ಇಲ್ಲ, ರಂಗಸಂಘಟಕರಿಗೆ ಸರಕಾರದ ಸಹಾಯ ನಿಕ್ಕಿಯಿಲ್ಲ, ನಿರ್ದೇಶಕರಿಗೆ ವರ್ಷಪೂರಾ ಕೆಲಸಗಳಿಲ್ಲ, ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಎಂಬುದಿಲ್ಲ. ನಾಟಕ ಇದ್ದಲ್ಲಿ ರಂಗಮಂದಿರಗಳಿಲ್ಲ, ರಂಗಮಂದಿರಗಳಿದ್ದಲ್ಲಿ  ಪ್ರೇಕ್ಷಕರಿಲ್ಲ, ಪ್ರೇಕ್ಷಕರಿದ್ದಲ್ಲಿ ನಾಟಕಗಳಿಲ್ಲ. ಹೀಗೆ ಹಲವಾರು ಇಲ್ಲಗಳ ನಡುವೆಯೂ ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಲೇ ಇದೆ. ಕಲೆ ಸಾಹಿತ್ಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸರಕಾರ ಅಸ್ತಿತ್ವಕ್ಕೆ ತಂದಿದೆ. ಅನೇಕ ಅಕಾಡೆಮಿಗಳೂ ಇಲಾಖೆಯ ಕೃಪೆಯಲ್ಲಿವೆ. ಆದರೆ ಈ ಇಲಾಖೆ ಹಾಗೂ ಅಕಾಡೆಮಿಗಳು ಎಷ್ಟರ ಮಟ್ಟಿಗೆ ಕಲೆ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಕಟಿಬದ್ಧವಾಗಿವೆ ಎನ್ನುವುದೇ ಪ್ರಶ್ನೆಯಾಗಿ ಕಾಡುತ್ತಿದೆ. ಇದಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನ ವಿಶ್ವ ರಂಗಭೂಮಿ ದಿನಾಚಾರಣೆಯ ನೆಪದಲ್ಲಿಯಾದರೂ ಆಗಬೇಕಿದೆ. ಅಂತಹಾ ಒಂದು ಪ್ರಯತ್ನ ಇಲ್ಲಿದೆ.

1. ನೆನಗುದಿಗೆ ಬಿದ್ದ ಸಾಂಸ್ಕೃತಿಕ ನೀತಿ ಜಾರಿಯಾಗಬೇಕಿದೆ

ಕರ್ನಾಟಕಕ್ಕೆ ಸಾಂಸ್ಕೃತಿಕ ನೀತಿ ಬೇಕೆಂದು ಸರಕಾರವು ಪ್ರೊ. ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು 44 ಶಿಫಾರಸ್ಸುಗಳೊಂದಿಗೆ 25-06-2014 ರಂದು ಸರಕಾರಕ್ಕೆ ವರದಿ ಸಲ್ಲಿಸಿತು. ಕೆಲವು ಅಂಶಗಳ ಬಗ್ಗೆ ಸಚಿವ ಸಂಪುಟ ಆಕ್ಷೇಪಣೆ ಎತ್ತಿದ್ದರಿಂದಾಗಿ ಮಾನ್ಯ ಕೆ.ಹೆಚ್.ಪಾಟೀಲರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚನೆಗೊಂಡು 5-5-2017 ರಂದು  27 ಅಂಶಗಳ ಪರಿಷ್ಕೃತ ಶಿಫಾರಸ್ಸು ಸಲ್ಲಿಸಲಾಯ್ತು. 10-10-2017 ರಂದು ಸಾಂಸ್ಕೃತಿಕ ನೀತಿಯ ಅನಿಷ್ಠಾನಕ್ಕೆ ಸರಕಾರ ಅಧಿಕೃತವಾಗಿ ಆದೇಶ ಹೊರಡಿಸಿತು. ಆದರೆ ಆದೇಶವಾಗಿ 6 ವರ್ಷಗಳಾದರೂ ಸಾಂಸ್ಕೃತಿಕ ನೀತಿಯನ್ನು ಅಧಿಕಾರಿ ವರ್ಗ ಯಥಾವತ್ತಾಗಿ ಜಾರಿ ಮಾಡಲಿಲ್ಲ. ಸಾಂಸ್ಕೃತಿಕ ನೀತಿ ಅನುಷ್ಠಾನಕ್ಕೆ ಬಂದಿದ್ದೇ ಆದರೆ ಅಕಾಡೆಮಿ ಪ್ರಾಧಿಕಾರಗಳಿಗೆ ಒಂದಿಷ್ಟು ಸ್ವಾಯತ್ತತೆ ದೊರಕುತ್ತದೆ. ಮೂರು ವರ್ಷಗಳ ಅವಧಿ ನಿರಾತಂಕವಾಗುತ್ತದೆ. ಅವಧಿ ಪೂರ್ಣಗೊಂಡ ನಂತರ ಮುಂದಿನ ನೇಮಕಾತಿ ಆಗುವವರೆಗೂ ಕೆಲಸಗಳು ನಿರಂತರವಾಗುತ್ತವೆ. ಯಾವತ್ತೂ ಅಕಾಡೆಮಿ, ಪ್ರಾಧಿಕಾರ, ಪ್ರತಿಷ್ಠಾನ, ರಂಗಾಯಣಗಳು ರೂವಾರಿಗಳಿಲ್ಲದೇ ನಿಷ್ಕ್ರಿಯ ವಾಗದಂತಾಗುತ್ತದೆ. ಹೀಗೆ, ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಆತಂಕ ರಹಿತವಾಗಿ ಸ್ವಾಯತ್ತತೆಯಿಂದ ಕಾರ್ಯಪ್ರವೃತ್ತರಾಗಲು ಸಾಧ್ಯವಾಗುತ್ತದೆ. ಆದಷ್ಟು ಬೇಗ ಸಾಂಸ್ಕೃತಿಕ ನೀತಿ ಜಾರಿ ಮಾಡುವುದಾಗಿ ಮಾನ್ಯ ಸಚಿವರಾದ ಶಿವರಾಜ ತಂಗಡಗಿಯವರು ಹೇಳುತ್ತಲೇ ಇದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಆದೇಶಗೊಂಡ ಸಾಂಸ್ಕೃತಿಕ ನೀತಿಯನ್ನು ಜಾರಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. 

2. ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಸಕಾಲದಲ್ಲಿ  ನೇಮಕಾತಿ

ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ 15 ಅಕಾಡೆಮಿಗಳು, 4 ಪ್ರಾಧಿಕಾರಗಳು, 24 ಪ್ರತಿಷ್ಠಾನಗಳು ಮತ್ತು 6 ರಂಗಾಯಣಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷರು, ನಿರ್ದೇಶಕರು, ಸದಸ್ಯರುಗಳ  ನೇಮಕಾತಿಯಾಗದೇ ಇರುವುದರಿಂದ ಅವೆಲ್ಲವೂ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದವು. ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ದಿನದ ಎರಡು ಗಂಟೆಗಳ ಮುಂಚೆ ಮಾರ್ಚ್ 16 ರಂದು ತರಾತುರಿಯಲ್ಲಿ ಅಕಾಡೆಮಿ ಪ್ರಾಧಿಕಾರಗಳಿಗೆ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತಾದರೂ ನೀತಿ ಸಂಹಿತೆಯಿಂದಾಗಿ ಮತ್ತೆ ಈ ಎಲ್ಲಾ ಸರಕಾರಿ ಸಂಸ್ಥೆಗಳು ಮುಖ್ಯಸ್ಥರಿದ್ದೂ ಅನಾಥವಾದವು. ಕೆಲವು ಅಕಾಡೆಮಿಗಳಿಗೆ ಇನ್ನೂ ಕೆಲವು ಸದಸ್ಯರುಗಳ ನೇಮಕಾತಿ ಆಗಿಲ್ಲ, ರಂಗಸಮಾಜಕ್ಕೆ ಸದಸ್ಯರ ಆಯ್ಕೆಯಾಗಿದ್ದರೂ ನಿರ್ದೇಶಕರುಗಳ ಆಯ್ಕೆ ಬಾಕಿ ಇದೆ. ಎಲ್ಲಾ ಪ್ರತಿಷ್ಠಾನಗಳಿಗೆ ನೇಮಕಾತಿ ಮಾಡಬೇಕಿದೆ. ಸರಕಾರಿ ಸಂಸ್ಥೆಗಳಿಗೆ ಶೀಘ್ರವಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕಾಗಿದೆ. ಜೂನ್ 4 ರ ನಂತರವಾದರೂ ಮತ್ತೆ ವಿಳಂಬ ಮಾಡದೇ ಇವೆಲ್ಲವನ್ನೂ ಘೋಷಣೆ ಮಾಡಲು ಈಗಿಂದಲೇ ಸಂಸ್ಕೃತಿ ಸಚಿವಾಲಯ ಪೂರ್ವಸಿದ್ದತೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ರಂಗಕರ್ಮಿಗಳು ಒತ್ತಾಯಿಸಬೇಕಿದೆ. 

3. ಪ್ರಶಸ್ತಿ ಪ್ರದಾನಕ್ಕೆ ಆದ್ಯತೆ

ಸಂಸ್ಕೃತಿ ಇಲಾಖೆಯ ಅಕಾಡೆಮಿ ಪ್ರಾಧಿಕಾರಗಳು ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳು ಎರಡು ವರ್ಷಗಳಿಂದ ಬಾಕಿ ಉಳಿದಿವೆ. ಇಲ್ಲಿಯವರೆಗೂ ಯಾವುದೇ ಅಕಾಡೆಮಿಗಳಿಗೆ ವಾರಸುದಾರರೇ ಇಲ್ಲವಾದ್ದರಿಂದ ವಾರ್ಷಿಕ ಪ್ರಶಸ್ತಿಗಳೇ ಘೋಷಣೆಯಾಗಿಲ್ಲ. ಹೀಗಾಗಿ ಈಗ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಸದಸ್ಯರುಗಳು ಚಾರ್ಜ್ ತೆಗೆದುಕೊಂಡ ತಕ್ಷಣ ತುರ್ತು ಸಭೆ ಕರೆದು ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿ ಆದಷ್ಟು ಬೇಗ ಅರ್ಹರಿಗೆ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುವ ಕೆಲಸವನ್ನು ಪ್ರಥಮ ಆದ್ಯತೆಯ ಮೇರೆಗೆ ಮಾಡಬೇಕಿದೆ. ಅದಕ್ಕೆ ಬೇಕಾದ ಅನುದಾನವನ್ನು ಸರಕಾರ ಬಿಡುಗಡೆ ಮಾಡಬೇಕೆಂದು ಅಕಾಡೆಮಿಯ ಅಧ್ಯಕ್ಷರುಗಳು ಸರಕಾರವನ್ನು ಒತ್ತಾಯಿಸಬೇಕಿದೆ.   

4. ಸಂಸ್ಕೃತಿ ಇಲಾಖೆಯ ಕಚೇರಿಯನ್ನು  ಜನಸ್ನೇಹಿಯಾಗಿಸುವುದು

ಕನ್ನಡ ಭವನದಲ್ಲಿರುವ ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿರುವ ನೌಕರ ವರ್ಗದವರು ಸಹಾಯ ಕೇಳಿ ಇಲಾಖೆಗೆ ಬರುವ ಸಾಹಿತಿ ಕಲಾವಿದರನ್ನು ಗೌರವದಿಂದ ಕಾಣುವಂತಹ ವಾತಾವರಣವನ್ನು ನಿರ್ಮಿಸಬೇಕಿದೆ. ವಯಸ್ಸಾದ ಕಲಾವಿದರು ಬಂದರೆ ಕೂಡಲೂ ಖುರ್ಚಿ ಸಿಗದೇ ನಿಲ್ಲಬೇಕಾದ ದುಸ್ಥಿತಿ ಇದೆ. “ಅಧಿಕಾರಿಗಳು ಹಾಗೂ ನೌಕರರು ಕಲಾವಿದರುಗಳ ಫೋನ್ ಎತ್ತುತ್ತಿಲ್ಲ ಹಾಗೂ ಅಗತ್ಯ ಮಾಹಿತಿಗಳನ್ನೂ ಸರಿಯಾಗಿ ಕೊಡುತ್ತಿಲ್ಲ” ಎನ್ನವ ದೂರು ಸರ್ವೇಸಾಮಾನ್ಯವಾಗಿದೆ. ಇಲಾಖೆಗೆ ಬರುವ ಎಲ್ಲರ ಜೊತೆ ಆತ್ಮೀಯವಾಗಿ ಮಾತಾಡುವ, ಅಗತ್ಯ ಸಹಾಯ ಸಹಕಾರವನ್ನು ನೀಡುವ ಜನಸ್ನೇಹಿ ವಾತಾವರಣವನ್ನು ನಿರ್ಮಿಸುವತ್ತ  ಸಂಸ್ಕೃತಿ ಇಲಾಖೆಯ ನಿರ್ದೇಶಕರು ಚಿತ್ತ ಹರಿಸಬೇಕಿದೆ.

5. ದಲ್ಲಾಳಿಗಳ ಹಾವಳಿಗೆ  ಕಡಿವಾಣ ಹಾಗೂ ಭ್ರಷ್ಟಾಚಾರದ ನಿಯಂತ್ರಣ

ಸಂಸ್ಕೃತಿ ಇಲಾಖೆಯಲ್ಲಿ ಅಘೋಷಿತ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಲೇ ಬಂದಿದೆ. ಕೆಲವು ನೌಕರರು ಹಾಗೂ ಅಧಿಕಾರಿಗಳು ಸಾಂಸ್ಕೃತಿಕ ದಲ್ಲಾಳಿಗಳ ಜೊತೆ ಶಾಮೀಲಾಗಿ ಅನುದಾನ ಹಾಗೂ ಪ್ರಾಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಲಂಚ ಕೊಡದೇ ಅನುದಾನ ಸಿಗಲು ಸಾಧ್ಯವೇ ಇಲ್ಲವೆನ್ನುವ ಆರೋಪ ಕೇಳಿಬರುತ್ತಿದೆ. ಈ ಎಲ್ಲಾ ರೀತಿಯ ಅವ್ಯವಹಾರಗಳನ್ನು ನಿಲ್ಲಿಸಲು ಹಾಗೂ ದಲ್ಲಾಳಿಗಳನ್ನು ದೂರವಿಡಲು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸೂಕ್ತ ಕ್ರಮವನ್ನು ತ್ವರಿತಗತಿಯಲ್ಲಿ  ತೆಗೆದುಕೊಳ್ಳಬೇಕಿದೆ. ಸಂಸ್ಕೃತಿ ಇಲಾಖೆಯ ಘನತೆಯನ್ನು ಹೆಚ್ಚಿಸಬೇಕಿದೆ.

6. ರಂಗಮಂದಿರಗಳಿಗೆ ಏಕರೂಪದ ಬಾಡಿಗೆ ನಿಗದಿ

ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ, ಮಾನ್ಯ ಉಮಾಶ್ರೀಯವರು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಯಲ್ಲಿರುವ ಎಲ್ಲಾ ರಂಗಮಂದಿರಗಳ ಬಾಡಿಗೆ ದರದಲ್ಲಿ ಏಕರೂಪತೆಯನ್ನು ತರಲಾಗಿತ್ತು. ಹಾಗೂ ರಂಗಚಟುವಟಿಕೆಗಳಿಗೆ ಕಡಿಮೆ ದರದಲ್ಲಿ ರಂಗಮಂದಿರಗಳನ್ನು ಕೊಡಮಾಡಲಾಗುತ್ತಿತ್ತು. ಆದರೆ ಈಗ ಬಾಡಿಗೆ ದರವೂ ದ್ವಿಗುಣಗೊಂಡಿದೆ ಹಾಗೂ ಒಂದೊಂದು ರಂಗಮಂದಿರಕ್ಕೂ ವಿಭಿನ್ನವಾದ ದರ ನಿಗದಿ ಪಡಿಸಲಾಗಿದೆ. ಇದರಿಂದಾಗಿ ರಂಗಚಟುವಟಿಕೆಗಳಿಗೆ ತೊಂದರೆಯಾಗಿದೆ. ಇದೆಲ್ಲವನ್ನೂ ಪರಿಶೀಲಿಸಿ ಮೊದಲಿನಂತೆಯೇ ಕಡಿಮೆ ದರದಲ್ಲಿ ಏಕರೂಪದ ಬಾಡಿಗೆಯನ್ನು ನಿಗದಿಪಡಿಸಿ ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಇಲಾಖೆಯ ನಿರ್ದೇಶಕರು ಮಾಡಬೇಕಿದೆ.

7. ರಂಗಮಂದಿರಗಳ ಬುಕ್ಕಿಂಗ್ ನಲ್ಲಿ ಪಾರದರ್ಶಕತೆ

ಬೆಂಗಳೂರಿನಲ್ಲಿರುವ ರವೀಂದ್ರ ಕಲಾಕ್ಷೇತ್ರ, ನಯನ ರಂಗಮಂದಿರ ಮತ್ತು ಕಲಾಗ್ರಾಮ ಸಮುಚ್ಚಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿವೆ. ಅವುಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಆನ್ ಲೈನ್ ವ್ಯವಸ್ಥೆ ಕೂಡಾ ಇದೆ. ಆದರೆ ಈ ವ್ಯವಸ್ಥೆಯನ್ನೂ ದುರುಪಯೋಗ ಪಡಿಸಿಕೊಂಡು ಬೇಕಾದವರಿಗೆ ಬೇಕಾದ ದಿನಗಳಂದು ಕಾಯ್ದಿರಿಸುವ ಹುನ್ನಾರಗಳೂ ಇಲಾಖೆಯ ಒಳಗಡೆ ನಡೆಯುತ್ತಿವೆ. ಪ್ರಭಾವ ಇರುವವರಿಗೆ ಹೆಚ್ಚು ಡೇಟ್ಸ್ ಗಳನ್ನು ಕಾಯ್ದಿರಿಸಲಾಗುತ್ತಿದೆ. ಮೊದಲು ಕಾಯ್ದಿರಿಸಿ ನಂತರ  ಬೇರೆಯವರಿಗೆ ಮಾರುವ ವ್ಯವಸ್ಥೆಯನ್ನೂ ಕೆಲವು ದಲ್ಲಾಳಿಗಳು ರೂಪಿಸಿಕೊಂಡಿದ್ದಾರೆ. ಇಲಾಖೆಯ ಕಂಪ್ಯೂಟರ್ ವ್ಯವಸ್ಥೆಯನ್ನೇ ತಿದ್ದುವ ತಿರುಚುವ ಸಾಧ್ಯತೆಗಳೂ ಅತಿಯಾಗಿವೆ. ಇದರಲ್ಲಿ ಮ್ಯಾನೇಜರ್ ಹಾಗೂ ಅಧಿಕಾರಿಗಳೂ ಶಾಮೀಲಾಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ರಂಗಮಂದಿರಗಳನ್ನು ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಬೇಕಿದೆ. ಪ್ರಾಮಾಣಿಕತೆಯೊಂದಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯ ನಿರ್ದೇಶಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. 

8. ಅಪೂರ್ಣಗೊಂಡ  ರಂಗ ದಾಖಲಾತಿ  ಯೋಜನೆಗೆ  ಮರುಚಾಲನೆ

ಜೆ.ಲೋಕೇಶರವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರಂಗಭೂಮಿಯ ಡಿಜಿಟಲ್ ದಾಖಲಾತಿ ಯೋಜನೆಯನ್ನು ಆರಂಭಿಸಿದ್ದರು. ರಂಗಭೂಮಿಗೆ ಸಂಬಂಧಿಸಿದಂತೆ ನಾಡಿನಾದ್ಯಂತ ಸಹಸ್ರಾರು ದಾಖಲೆಗಳನ್ನು ಸಂಗ್ರಹಿಸಿ ಸ್ಕ್ಯಾನ್ ಮಾಡಿಸಲಾಗಿತ್ತು. ಅದಕ್ಕಾಗಿ ಆಗ ಸಂಸ್ಕೃತಿ ಸಚಿವಾಲಯದ ಸಚಿವೆಯಾಗಿದ್ದ ಮಾನ್ಯ ಜಯಮಾಲಾರವರು ಹತ್ತು ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನೂ ಕೊಟ್ಟಿದ್ದರು. ಇಡೀ ಯೋಜನೆ ಮುಕ್ತಾಯದ ಹಂತದಲ್ಲಿರುವಾಗ ಸರಕಾರ ಬದಲಾಗಿ ಅವಧಿ ಪೂರ್ವದಲ್ಲಿ ಲೋಕೇಶರವರು ಅಕಾಡೆಮಿಯಿಂದ ನಿರ್ಗಮಿಸ ಬೇಕಾಯ್ತು. ನಂತರ ಬಂದವರು ಆ ಯೋಜನೆಯ ಬಗ್ಗೆ ಆಸಕ್ತಿ ವಹಿಸದೇ ಇದ್ದುದರಿಂದ ಅಪೂರ್ಣವಾಗಿಯೇ ಉಳಿಯಿತು. ಈಗಾಗಲೇ ಹದಿನೈದು ಲಕ್ಷದಷ್ಟು ಹಣ ವೆಚ್ಚವಾಗಿದ್ದು, ಹಲವಾರು ಜನರ ಶ್ರಮವೂ ವ್ಯರ್ಥವಾಗಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು ಹೊಸದಾಗಿ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಿ ಬಂದವರು ಮೊದಲ ಆದ್ಯತೆ ಕೊಡಬೇಕಾಗಿದೆ.

9. ಅಕಾಡೆಮಿಗಳ ಮೂಲಕವೇ ಪ್ರಾಯೋಜನೆ

ರಂಗಭೂಮಿಯ ಚಟುವಟಿಕೆಗಳನ್ನು ಉತ್ತೇಜಿಸಲು, ಕಲಾವಿದರನ್ನು ಪ್ರೋತ್ಸಾಹಿಸಲು ಕರ್ನಾಟಕ ನಾಟಕ ಅಕಾಡೆಮಿ ಇದೆ. ಆದರೆ ಸಂಸ್ಕೃತಿ ಇಲಾಖೆಯೂ ನಾಟಕ ಪ್ರದರ್ಶನಗಳಿಗೆ ಪ್ರಾಯೋಜನೆಯನ್ನು ಮಂಜೂರು ಮಾಡುತ್ತಿದೆ. ಸಂಸ್ಕೃತಿ ಇಲಾಖೆಯು ನಾಟಕ ಅಕಾಡೆಮಿಯ ಮೂಲಕವೇ ಪ್ರಾಯೋಜನೆ ಪ್ರೋತ್ಸಾಹ ಅನುದಾನಗಳನ್ನು ರಂಗ ಪ್ರದರ್ಶನಗಳಿಗೆ ಕೊಡುವುದು ಸೂಕ್ತವಾಗಿದೆ. ಸಂಸ್ಕೃತಿ ಇಲಾಖೆಯೇ ನಾಟಕಗಳಿಗೂ ಪ್ರಾಯೋಜನೆ ಹಣವನ್ನು ಕೊಡುವುದಾದರೆ ನಾಟಕ ಅಕಾಡೆಮಿ ಯಾಕಿರಬೇಕು? ಆದ್ದರಿಂದ ಯಾವುದೇ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯವನ್ನು ಸಂಸ್ಕೃತಿ ಇಲಾಖೆ ಮಾಡುವುದಿದ್ದರೆ ಅದಕ್ಕೆ ಸಂಬಂಧಿಸಿದ ಅಕಾಡೆಮಿಗಳ ಮೂಲಕವೇ ಮಾಡುವುದು ಉತ್ತಮ. ಈ ಕುರಿತು ಇಲಾಖೆಯ ನಿರ್ದೇಶಕರು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕಿದೆ. 

ಅದೇ ರೀತಿ ಪ್ರತಿ ಜಿಲ್ಲೆಗೊಂದು ಸುಸಜ್ಜಿತ ರಂಗಮಂದಿರ, ತಾಲ್ಲೂಕಿಗೊಂದು ಆಪ್ತರಂಗಮಂದಿರ, ಬೆಂಗಳೂರಿನ ಬಡಾವಣೆಗಳಲ್ಲಿ ಬಡಾವಣಾ ಕಿರುರಂಗಮಂದಿರಗಳನ್ನು ನಿರ್ಮಿಸಿ ಕೊಡಬೇಕೆಂದೂ ಹಾಗೂ ಹೆಚ್ಚು ರಂಗಚಟುವಟಿಕೆಗಳು ನಡೆಯುವಲ್ಲಿ ಹೆಚ್ಚುವರಿ ತಾಲಿಂ ಕೊಠಡಿಗಳನ್ನು ಕಟ್ಟಿಸಿ ಕೊಡಬೇಕೆಂದೂ ಸರಕಾರವನ್ನು ಒತ್ತಾಯಿಸಬೇಕಿದೆ. ಸರಕಾರಿ ವಸತಿ ಶಾಲೆಗಳಿಗೆ ರಂಗಶಿಕ್ಷಕರನ್ನು ನೇಮಿಸಿ ಕೊಳ್ಳಬೇಕು, ಶಾಲಾ ಶಿಕ್ಷಕರಾಗುವವರಿಗೆ ತರಬೇತಿ ಕೊಡುವಾಗ ರಂಗಶಿಕ್ಷಣದ ಕುರಿತು ಪಠ್ಯವನ್ನೂ ಅಳವಡಿಸಬೇಕು, ಶಾಲೆ ಕಾಲೇಜುಗಳಲ್ಲಿ ರಂಗಶಿಕ್ಷಣವನ್ನು ಕಡ್ಡಾಯ ಗೊಳಿಸಬೇಕು, ಪೂರ್ಣಾವಧಿ ಕಲಾವಿದರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕೆಂದೂ ಸರಕಾರವನ್ನು ಒತ್ತಾಯಿಸ ಬೇಕಿದೆ. 

ಇವೆಲ್ಲವೂ ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ ಕನ್ನಡ ರಂಗಭೂಮಿ ಸಮೃದ್ಧವಾಗಿ ಬೆಳೆದು ಇಡೀ ದೇಶದಲ್ಲೇ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೆರೆಯುವುದರಲ್ಲಿ ಸಂದೇಹವೇ ಇಲ್ಲ. ಅದಕ್ಕಾಗಿ ಸರಕಾರದ ಸಂಪೂರ್ಣ ಸಹಕಾರ ಹಾಗೂ ರಂಗಕರ್ಮಿಗಳ ಬದ್ಧತೆ ಎರಡೂ ಬೇಕಾಗುತ್ತದೆ. ಈ ಕುರಿತ ಚರ್ಚೆ ಸಂವಾದಗಳಿಗೆ ವಿಶ್ವರಂಗಭೂಮಿ ದಿನವು ನೆಪವಾಗಬೇಕಿದೆ. ಕಲೆ ಸಮಾಜದ ಅಸ್ಮಿತೆಯಾದರೆ, ಕಲಾವಿದರು ಈ ನಾಡಿನ ಆಸ್ತಿಯಾಗಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article