ಮೇ ಮೂರನೇ ದಿನಾಂಕವನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಗಿದೆ. ಮಾಧ್ಯಮಗಳ ಪ್ರಾಮುಖ್ಯತೆ ಮತ್ತು ಅಪಾಯವನ್ನು ಪರಿಗಣಿಸಿ, ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡಲು ಹಾಗೂ ಮಾಧ್ಯಮಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಿಂದ ರಕ್ಷಿಸಲು ಈ ಪತ್ರಿಕಾ ದಿನವನ್ನು ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮಗಳು ಪ್ರಭುತ್ವದ ಒತ್ತಡಕ್ಕೆ ಒಳಗಾಗಿ ಹಿಡಿದಿರುವ ಹಾದಿಯ ಮೇಲೆ ಬೆಳಕು ಚೆಲ್ಲಿದ್ದಾರೆ ಪತ್ರಕರ್ತರಾದ ಶಶಿಕಾಂತ ಯಡಹಳ್ಳಿ.
ಪತ್ರಿಕಾ ಸ್ವಾತಂತ್ರ್ಯದ ಕುರಿತು ಜಾಗೃತಿ ಮೂಡಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಗೌರವಿಸುವ ಮತ್ತು ಎತ್ತಿಹಿಡಿಯುವ ನಿಟ್ಟಿನಲ್ಲಿ ಆಳುವ ಸರಕಾರಗಳ ಕರ್ತವ್ಯವನ್ನು ನೆನಪಿಸಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಮೇ 3 ನೇ ದಿನಾಂಕವನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವೆಂದು ಘೋಷಿಸಿತು. 1993 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮೊದಲ ಬಾರಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲು ನಿರ್ಧರಿಸಿತು. ಹೀಗಾಗಿ ಪ್ರತಿ ವರ್ಷ ಪ್ರಪಂಚದಾದ್ಯಂತ ಮೇ 3 ನೇ ತಾರೀಖಿನಂದು ಅಂತಾರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿವಸದಂದು ಪತ್ರಿಕಾ ಸ್ವಾತಂತ್ರ್ಯದ ಕುರಿತ ಮೂಲಭೂತ ತತ್ವಗಳನ್ನು ನೆನಪಿಸಿ ಕೊಳ್ಳಲಾಗುತ್ತದೆ. ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡಲು ಹಾಗೂ ಮಾಧ್ಯಮಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಿಂದ ರಕ್ಷಿಸಲು ಮತ್ತು ಈ ವೃತ್ತಿಯಲ್ಲಿ ನಿರತರಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮಾಧ್ಯಮಗಳ ಪ್ರಾಮುಖ್ಯತೆ ಮತ್ತು ಅಪಾಯವನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಪತ್ರಿಕಾ ದಿನವನ್ನು ಜಾರಿಗೆ ತರಲಾಗಿದೆ.
ಆದರೆ ಪತ್ರಿಕಾ ದಿನಾಚರಣೆಯನ್ನು ಆಚರಿಸುವ ಸಂಭ್ರಮ ಭಾರತದ ಮಾಧ್ಯಮೋದ್ಯಮದಲ್ಲಿ ಇದೆಯಾ? 2016 ರಿಂದ ಪ್ರಪಂಚದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಕುಸಿಯುತ್ತಲೇ ಇದೆ. ಪ್ರಪಂಚದ 180 ದೇಶಗಳ ಪತ್ರಿಕಾ ಸ್ವಾತಂತ್ರ್ಯದ ಕ್ರಮಾಂಕದಲ್ಲಿ ಭಾರತವು 161 ನೇ ಸ್ಥಾನದಲ್ಲಿದೆ. ಇಡೀ ವಿಶ್ವದಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎಂದು ಹೇಳಲಾಗುತ್ತದೆ. ಆದರೆ ಈ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಘೋಷಿತ ನಿಯಂತ್ರಣಗಳನ್ನು ಹೇರಲಾಗಿದೆ. ಇಂದಿರಾ ಗಾಂಧಿಯವರು ಜಾರಿಗೆ ತಂದ ಎಮರ್ಜೆನ್ಸಿ ಅವಧಿಯನ್ನು ಹೊರತು ಪಡಿಸಿ ಭಾರತದ ಪತ್ರಿಕಾ ಸ್ವಾತಂತ್ರ್ಯ ಎಂದೂ ಹೀಗೆ ಒತ್ತಡಕ್ಕೊಳಗಾಗಿರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳಿಂದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಹೇಳಲಾಗುವ ಮಾಧ್ಯಮಾಂಗವು ಸ್ವತಂತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಕ್ತತೆಯನ್ನು ಕಳೆದು ಕೊಂಡಿದೆ. ಸರ್ವಾಧಿಕಾರಿ ಮಾದರಿಯ ಆಡಳಿತದಲ್ಲಿ ಪತ್ರಿಕೋದ್ಯಮವೇ ಪ್ರಭುತ್ವದ ಒತ್ತಡಕ್ಕೆ ಒಳಗಾಗಿ ತನ್ನ ಸ್ವಾತಂತ್ರ್ಯವನ್ನು ತಾನೇ ಕಳೆದುಕೊಂಡಿದೆ ಇಲ್ಲವೇ ಮಾರಾಟಕ್ಕಿಟ್ಟಿದೆ.
ಯಾವುದೇ ಪ್ರಭುತ್ವ ಇರಲಿ ವಿರೋಧ ಪಕ್ಷದ ಹಾಗೆ ಪ್ರತಿರೋಧ ತೋರುವುದು ಮಾಧ್ಯಮಗಳ ಕಾಯಕವಾಗಿತ್ತು. ಆದರೆ ಅಂತಹ ಮಾಧ್ಯಮಗಳೇ ಈಗ ಬಂಡವಾಳಿಗರ ಹಾಗೂ ಕಾರ್ಪೋರೇಟ್ ಕುಳಗಳ ಕೈವಶವಾಗಿವೆ. ಮಾಲೀಕರ ಹಿತಾಸಕ್ತಿಯ ವಿರುದ್ಧದ ನಿಲುವನ್ನು ತೆಗೆದುಕೊಳ್ಳುವುದು ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಅಸಾಧ್ಯವಾಗಿದೆ. ಹಾಗೇನಾದರೂ ಮಾಡಿದರೆ ಅಂತವರ ಕೆಲಸಕ್ಕೇ ಸಂಚಕಾರ ಬರುತ್ತದೆ. ಹೀಗಾಗಿ ಪತ್ರಿಕಾ ಸ್ವಾತಂತ್ರ್ಯದ ಜೊತೆಜೊತೆಗೆ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವೂ ದಮನವಾಗಿದ್ದು ಗುಲಾಮಗಿರಿ ಸಂಸ್ಕೃತಿ ಮಾಧ್ಯಮೋದ್ಯಮದ ಭಾಗವಾಗಿದೆ. ಮಾಧ್ಯಮಗಳ ಮಾಲೀಕರ ರಾಜಕೀಯ ಒಲವು ನಿಲುವನ್ನು ಪ್ರಚಾರ ಮಾಡುವ ಸಾಧನವಾಗಿ ಮಾತ್ರ ಪತ್ರಕರ್ತರು ಬಳಕೆಯಾಗುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದೇ ಸಂಕಟದಲ್ಲಿದೆ.
ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಹುತೇಕ ಸುದ್ದಿ ಮಾಧ್ಯಮಗಳು ಪ್ರಭುತ್ವದ ಓಲೈಕೆಗೆ ಮುಡಿಪಾಗಿವೆ. ಅಂತಹ ಎಲ್ಲಾ ಸುದ್ದಿ ಮಾಧ್ಯಮಗಳ ಮಾಲೀಕರು ಪ್ರಭುತ್ವದ ಜೊತೆಗೆ ರಾಜಿಯಾಗಿದ್ದಾರೆ ಇಲ್ಲವೇ ಆಳುವ ಪಕ್ಷಕ್ಕೆ ಮಾರಾಟವಾಗಿದ್ದಾರೆ. ಪ್ರಭುತ್ವದ ವಿರುದ್ಧದ ಪ್ರತಿರೋಧವನ್ನೇ ಮರೆತಿದ್ದಾರೆ. ಎಲ್ಲೋ ಕೆಲವು ಪತ್ರಿಕೆ ಹಾಗೂ ಸುದ್ದಿ ಚಾನೆಲ್ ಗಳು ಮೋದಿಯವರ ಜನವಿರೋಧಿ ಆಡಳಿತವನ್ನು ವಿರೋಧಿಸಿದರೂ ಪ್ರಭುತ್ವದ ಏಜನ್ಸಿಗಳಿಂದ ಕಿರುಕುಳಕ್ಕೊಳಗಾಗುತ್ತಾರೆ, ಸಂಪನ್ಮೂಲಗಳ ಮೂಲಗಳನ್ನೇ ಕಳೆದುಕೊಳ್ಳುತ್ತಾರೆ, ಜಾಹೀರಾತು ಆದಾಯದಿಂದ ವಂಚಿತರಾಗುತ್ತಾರೆ. ಇಲ್ಲವೇ ಅಂಬಾನಿ ಆದಾನಿಯಂತವರಿಗೆ ತಮ್ಮ ಮಾಧ್ಯಮವನ್ನೇ ಮಾರಾಟ ಮಾಡಬೇಕಾದ ಪರಿಸ್ಥಿತಿಗೆ ಒಳಗಾಗುತ್ತಾರೆ. ಎನ್.ಡಿ.ಟಿವಿ ಇದಕ್ಕೆ ಉದಾಹರಣೆಯಾಗಿದೆ.
ಬಹುತೇಕ ಮುಖ್ಯ ವಾಹಿನಿಗಳು ಮೋದಿಯವರ ಪರವಾಗಿ ಸುದ್ದಿಗಳನ್ನು ಬಿತ್ತರಿಸುತ್ತಲೇ ಇರುವುದರಿಂದ ಅಂತವುಗಳಿಗೆ ಗೋದಿ (ಲ್ಯಾಪ್ ಡಾಗ್) ಮಾಧ್ಯಮಗಳು ಎಂದೇ ಕರೆಯಲಾಗುತ್ತದೆ. ಮೋದಿ ಸರಕಾರದ ಪರವಾಗಿ ಸುದ್ದಿಗಳನ್ನು ಬಿತ್ತರಿಸುತ್ತಾ ಜನರಲ್ಲಿ ಪ್ರಭುತ್ವದ ಬಗ್ಗೆ ಸಹಾನುಭೂತಿಯನ್ನು ಹಾಗೂ ಸರಕಾರದ ವಿರೋಧಿಗಳ ಬಗ್ಗೆ ದ್ವೇಷವನ್ನು ಹುಟ್ಟಿಸುವ ಕಾಯಕವನ್ನು ಗೋದಿ ಮಾಧ್ಯಮಗಳು ತುಂಬಾ ನಿಷ್ಠೆಯಿಂದ ಮಾಡುತ್ತಿವೆ. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು ಸೂಚಿಸಿದಂತೆ ಕಾರ್ಪೋರೇಟ್ ಗಳ ಕೈಯಲ್ಲಿ ಮಾಧ್ಯಮಗಳ ಮಾಲೀಕತ್ವ ಹೆಚ್ಚುತ್ತಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಪ್ರಮುಖ ಬೆದರಿಕೆಯಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾರ್ಪೋರೇಟ್ ಮಾಧ್ಯಮಗಳು ಯಾವಾಗಲೂ ಪ್ರಭುತ್ವದ ಪರವಾಗಿರುತ್ತವೆ ಹಾಗೂ ಪ್ರಭುತ್ವವನ್ನು ನಿಯಂತ್ರಿಸುತ್ತಲೇ ಇರುತ್ತವೆ ಮತ್ತು ಆಳುವ ಸರಕಾರದಿಂದ ಸಕಲ ಸವಲತ್ತುಗಳನ್ನೂ ಪಡೆದು ತಮ್ಮ ಲೂಟಿ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಇರುತ್ತವೆ. ಪ್ರಭುತ್ವ ಕೂಡ ಇಂತಹ ಕಾರ್ಪೋರೇಟ್ ಮಾಧ್ಯಮಗಳನ್ನು ಬಳಸಿಕೊಂಡು ತನ್ನ ಅಧಿಕಾರವನ್ನು ಮತ್ತೆ ಮತ್ತೆ ಪ್ರತಿಷ್ಠಾಪನೆ ಮಾಡಿಕೊಳ್ಳುತ್ತಲೇ ಇರುತ್ತವೆ. ಹೀಗಾಗಿ ಪ್ರಭುತ್ವ ಮತ್ತು ಮಾಧ್ಯಮಗಳು ಕೊಡುಕೊಳ್ಳುವ ಕ್ರಿಯೆಯಲ್ಲಿ ತೊಡಗಿದ್ದು ಪತ್ರಿಕಾ ಸ್ವಾತಂತ್ರ್ಯ ಹಾಗೂ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಬಿಕ್ಕಟ್ಟಿನಲ್ಲಿದೆ.
ಪ್ರಭುತ್ವವನ್ನು ಪ್ರಶ್ನಿಸುವ ಸುದ್ದಿ ಮಾಧ್ಯಮಗಳ ಅಸ್ತಿತ್ವಕ್ಕೇ ಕುತ್ತು ಬರುತ್ತಲೇ ಇರುತ್ತದೆ. ಕಳೆದ ವರ್ಷ ಮಲಯಾಳಂ ಸುದ್ದಿ ವಾಹಿನಿಯಾದ ‘ಮೀಡಿಯಾ ಒನ್’ ಮೇಲೆ ಕೇಂದ್ರ ಸರಕಾರವು ನಿಷೇಧವನ್ನು ಹೇರಿತು. ರಾಷ್ಟ್ರೀಯ ಭದ್ರತೆಗೆ ಈ ವಾಹಿನಿ ಆತಂಕವನ್ನು ಒಡ್ಡುತ್ತದೆ ಎನ್ನುವ ಗೊಡ್ಡು ಕಾರಣ ನೀಡಿ ಅದರ ಪರವಾನಗಿಯನ್ನೇ ಮಾಹಿತಿ ಮತ್ತು ಪ್ರಸಾರ ಇಲಾಖೆಯು ರದ್ದುಗೊಳಿಸಿತು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸರಕಾರದ ಆದೇಶವನ್ನು ರದ್ದುಗೊಳಿಸಿತು. ಸರಕಾರದ ಮಾತು ಕೇಳದ ಮಾಧ್ಯಮಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ಮಾಡಿಸಿ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸವನ್ನೂ ಮಾಡಲಾಗಿದೆ. ಗುಜರಾತ್ 2002 ರ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ನಂತರ ಬಿಬಿಸಿ ಸುದ್ದಿವಾಹಿನಿಯ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ.
ಸರಕಾರದ ದಮನಕ್ಕೆ ಪ್ರತಿಯಾಗಿ ಪ್ರಭುತ್ವ ವಿರೋಧಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸಿ ಜಾಗೃತಿ ಮಾಡುತ್ತಿರುವುದೇ ಸ್ವತಂತ್ರ ಸುದ್ದಿ ವೆಬ್ ಸೈಟ್ ಮಾಧ್ಯಮಗಳು ಹಾಗೂ ಯುಟ್ಯೂಬರ್ ಗಳು. ಮುಖ್ಯ ವಾಹಿನಿ ಮಾಧ್ಯಮಗಳು ಹಾಗೂ ಪತ್ರಿಕೆಗಳು ಅದೆಷ್ಟೇ ಸುಂದರ ಸುಳ್ಳುಗಳನ್ನು ಹೆಣೆದು ಪ್ರಭುತ್ವವನ್ನು ಸಮರ್ಥಿಸಿಕೊಂಡರೂ ಸತ್ಯಾಸತ್ಯತೆಗಳನ್ನು ಬಯಲು ಮಾಡುವ ಕೆಲಸವನ್ನು ಪ್ರಜ್ಞಾವಂತ ಪತ್ರಕರ್ತರುಗಳು ವಾಟ್ಸಾಪ್, ಇನ್ಸ್ಟ್ರಾಗ್ರಾಂ, ಫೇಸ್ಬುಕ್, ಯುಟ್ಯೂಬ್ ಮುಂತಾದ ಜಾಲತಾಣಗಳ ಡಿಜಿಟಲ್ ಮಾಧ್ಯಮಗಳ ಮೂಲಕ ನಿತ್ಯ ಮಾಡುತ್ತಲೇ ಇದ್ದಾರೆ. ಜನರು ಮುಖ್ಯವಾಹಿನಿಗಳ ಬಗ್ಗೆ ನಂಬಿಕೆಯನ್ನು ಕಳೆದು ಕೊಂಡಿದ್ದಾರೆ ಮತ್ತು ಸ್ವತಂತ್ರ ಮಾಧ್ಯಮಗಳು ಬಿತ್ತರಿಸುವ ನಿಜ ಸುದ್ದಿಗಾಗಿ ಕಾತರಿಸುತ್ತಿದ್ದಾರೆ. ಹೀಗಾಗಿಯೇ ದ್ರುವ ರಾಠಿಯಂತಹ, ರವೀಶ್ ಕುಮಾರ್ ಅಂತಹ ಯುಟ್ಯೂಬರ್ ಮಾಡುವ ಒಂದೊಂದು ವಿಡಿಯೋಗಳಿಗೂ ಕೋಟ್ಯಾಂತರ ಜನ ವೀಕ್ಷಕರಿದ್ದಾರೆ. ಅಷ್ಟೊಂದು ವೀಕ್ಷಕರು ಯಾವುದೇ ಗೋದಿ ಮಾಧ್ಯಮಗಳಿಗೂ ಇಲ್ಲವಾಗಿದೆ.
ಇದೇ ಸಾಮಾಜಿಕ ಜಾಲತಾಣಗಳನ್ನು ಬಳಿಸಿಕೊಂಡ ಬಿಜೆಪಿ ಐಟಿ ಸೆಲ್ ನಂತಹ ಸುಳ್ಳು ಸುದ್ದಿಗಳ ಫ್ಯಾಕ್ಟರಿಗಳು ಮೋದಿ ಕುರಿತು ಅನೇಕ ದಂತಕತೆಗಳನ್ನು ಹೆಣೆದು ಪ್ರಚಾರ ಮಾಡುತ್ತಲೇ ಇವೆ. ಸಂಘ ಪರಿವಾರದ ಅಂಗಗಳು ಅವುಗಳನ್ನು ಹಂಚಿಕೊಂಡು ಜನರಲ್ಲಿ ಮೋದಿ ಮೇನಿಯಾ ಹೆಚ್ಚಿಸಲು ಪ್ರಯತ್ನಿಸುತ್ತಲೇ ಇವೆ. ಆದರೆ ಇವರ ಎಲ್ಲಾ ರೀತಿಯ ಸುಳ್ಳುಗಳಿಗೂ ಸ್ವತಂತ್ರ ಪತ್ರಕರ್ತರು ಕೌಂಟರ್ ಕೊಡುತ್ತಲೇ ಬಂದಿದ್ದಾರೆ. ಸುಳ್ಳಿನ ಮುಖವಾಡವನ್ನು ಬಯಲು ಗೊಳಿಸುತ್ತಲೇ ಇದ್ದಾರೆ. ಫ್ಯಾಕ್ಟ್ ಚೆಕ್ ಮೂಲಕ ಸತ್ಯ ಸಂಗತಿಯನ್ನು ಜನರಿಗೆ ತಿಳಿಸುತ್ತಲೇ ಇದ್ದಾರೆ. ಸರ್ವಾಧಿಕಾರಿ ಪ್ರಭುತ್ವ ಸ್ಥಾಪಿಸಲು ಬಯಸಿರುವ ಮೋದಿ ಶಾ ಹಾಗೂ ಸಂಘದ ಅಧಿನಾಯಕರುಗಳಿಗೆ ಈ ಸ್ವತಂತ್ರ ಪತ್ರಕರ್ತರುಗಳೇ ಈಗ ಅಡೆತಡೆಯೊಡ್ಡುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಕೂಡಾ ಸೆನ್ಸಾರ್ ಹೇರಲು, ನಿರ್ಬಂಧಗಳನ್ನು ಹೇರಿ ನಿಯಂತ್ರಿಸಲು ಕಾನೂನನ್ನು ಜಾರಿಗೆ ತರುವ ಪ್ರಯತ್ನವನ್ನೂ ಸಂಸತ್ತಿನಲ್ಲಿ ಮಾಡಲಾಗಿದೆ. ಮತ್ತೊಮ್ಮೆ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದೇ ಆದರೆಾದನ್ನು ಖಂಡಿತಾ ಜಾರಿಗೆ ತರಲಾಗುತ್ತದೆ. ಸತ್ಯ ಹೇಳುವ ಧ್ವನಿಗಳನ್ನು ದಮನಿಸಲಾಗುತ್ತದೆ.
ಹಿಂದುತ್ವವಾದಿಗಳ ಮುಖವಾಡವನ್ನು ಬಯಲು ಮಾಡುತ್ತಿದ್ದ ಗೌರಿ ಲಂಕೇಶರಂತಹ ಪತ್ರಕರ್ತೆಯನ್ನು ಸನಾತನ ಸಂಸ್ಥೆಯೊಂದು ಹತ್ಯೆ ಮಾಡಿತು. ರತ್ನಗಿರಿಯಲ್ಲಿ ಶಶಿಕಾಂತ ವಾರಿಶೆಯಂತಹ ಪತ್ರಕರ್ತ ಕ್ರಿಮಿನಲ್ ಮಾಫಿಯಾ ಚಟುವಟಿಕೆಗಳನ್ನು ಬಹಿರಂಗ ಪಡಿಸಿದ್ದಕ್ಕಾಗಿ ಕೊಲ್ಲಲಾಯಿತು. ಕಳೆದ ವರ್ಷ ಮಾರ್ಚ್ ನಲ್ಲಿ ಇರ್ಫಾನ್ ಮೆಹ್ರಾಜ್ ಎನ್ನುವ ಪತ್ರಕರ್ತನನ್ನು ಎನ್ ಐ ಎ ತನಿಖಾ ಸಂಸ್ಥೆಯು ಯುಎಪಿಎ ಕರಾಳ ಕಾನೂನಿನ ಅಡಿಯಲ್ಲಿ ಬಂಧಿಸಿತು. ಹಾಗೆಯೇ ನಾಲ್ವರು ಪತ್ರಕರ್ತರು ಸಾರ್ವಜನಿಕ ಸುರಕ್ಷತಾ ಕಾಯ್ದೆ ಹಾಗೂ ಯುಎಪಿಎ ಅಡಿಯಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾರೆ.
ಸ್ವತಂತ್ರ ಮಾಧ್ಯಮಗಳೂ ಸಹ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿವೆ. ಪ್ರತಿ ನಿತ್ಯ ಸಂಘ ಪರಿವಾರದವರಿಂದ, ಮೋದಿ ಅಂಧಭಕ್ತರಿಂದ ನಿಂದನೆ, ಬೆದರಿಕೆ, ಕಿರುಕುಳಗಳನ್ನು ಅನುಭವಿಸಬೇಕಾಗಿದೆ. ದೇಶದ್ರೋಹಿ, ಧರ್ಮದ್ರೋಹಿ, ಪಾಕಿಸ್ತಾನಿ, ನಗರ ನಕ್ಸಲ್ ಎನ್ನುವ ಆರೋಪಗಳನ್ನು ಹೊರಬೇಕಾಗುತ್ತದೆ. ಸತತವಾಗಿ ನಿಂದಿಸುವ ಮೂಲಕ ಸ್ವತಂತ್ರ ಪತ್ರಕರ್ತರಿಗೆ ಮಾನಸಿಕ ಹಿಂಸೆಯನ್ನು ಕೊಟ್ಟು ಅವರ ಅಭಿವ್ಯಕ್ತಿಯನ್ನು ದಮನಿಸುವ ಪ್ರಯತ್ನ ಸತತವಾಗಿ ನಡೆಯುತ್ತಲೇ ಇದೆ. ಸ್ವತಂತ್ರ ಪತ್ರಕರ್ತರ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಳ್ಳು ದೂರುಗಳನ್ನು ದಾಖಲಿಸುವುದು, ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ.
ಸರಕಾರವನ್ನು ಟೀಕಿಸಿದ್ದಕ್ಕಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರದ ನೀತಿಗಳನ್ನು ವಿರೋಧಿಸಿದ್ದಕ್ಕಾಗಿ ರಾಜ್ಯ ಸರಕಾರಗಳೇ ಪತ್ರಕರ್ತರ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ಹಿಂಸಿಸುತ್ತಿವೆ. ಉತ್ತರ ಪ್ರದೇಶದಲ್ಲಿ 66 ಪತ್ರಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲಾಗಿದೆ. 48 ಪತ್ರಕರ್ತರ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರವನ್ನು ವರದಿ ಮಾಡಲು ಹೋಗಿದ್ದ ಸಿದ್ದಿಕ್ ಕಪ್ಪನ್ ಮೇಲೆ ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪ ಹೊರಿಸಿ 2020 ರಿಂದ ಜೈಲಿನಲ್ಲಿಟ್ಟಿದ್ದಾರೆ. (ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿದ್ದಾರೆ). ಇಂತಹ ಅನೇಕ ಘಟನೆಗಳಿಂದಾಗಿ ಭಾರತವು ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶವಾಗಿ ಪರಿಗಣಿಸಲ್ಪಟ್ಟಿದೆ. ಚೀನಾದಲ್ಲಿ ಪತ್ರಕರ್ತರ ಮೇಲೆ ಕಣ್ಗಾವಲು ಇರಿಸಿ ಬೆದರಿಸಿ ಜೈಲಿಗೆ ಹಾಕಲಾಗುತ್ತದೆ. ಈಜಿಪ್ತಿನಲ್ಲಿ ಸರಕಾರವು ಸುದ್ದಿ ಸಂಸ್ಥೆಗಳನ್ನು ನಿರ್ಬಂಧಿಸಲು ಭದ್ರತಾ ಪಡೆಗಳನ್ನು ಬಳಸಿದೆ. ಭಾರತದಲ್ಲಿ ಸುದ್ದಿ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ಪ್ರಭುತ್ವ ವಿರೋಧಿ ಪತ್ರಕರ್ತರನ್ನು ಭಯೋತ್ಪಾಕರಂತೆ ಪರಿಗಣಿಸಲಾಗುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ ಈ ದೇಶದ ಪ್ರಧಾನಿ ಒಂದೇ ಒಂದು ಸಲವೂ ಪತ್ರಿಕಾಗೋಷ್ಟಿಯನ್ನು ನಡೆಸದೇ ಇರುವುದು ಭಾರತದ ಇತಿಹಾಸದಲ್ಲೇ ಮೊದಲನೆಯದಾಗಿದೆ. ಜನರ ಪರವಾಗಿ ಪ್ರಶ್ನಿಸುವ ಅವಕಾಶವನ್ನೇ ಪ್ರಧಾನಿಯವರು ಮಾಧ್ಯಮದವರಿಗೆ ಕೊಡದೆ ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ನಿರ್ಲಕ್ಷಿಸಿದ್ದು ಅಕ್ಷಮ್ಯ. ಪತ್ರಿಕಾ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಅಡಿಪಾಯ. ಅದು ಅವಸಾನವಾದಂತೆಲ್ಲಾ ಜನತಂತ್ರವೂ ಅಪಾಯಕ್ಕೆ ಒಳಗಾಗುತ್ತದೆ. ಸರ್ವಾಧಿಕಾರದತ್ತ ಸಾಗುತ್ತಿರುವ ಮೋದಿ ಸರಕಾರಕ್ಕೂ ಅದೇ ಬೇಕಾಗಿದೆ.
ಮಾಧ್ಯಮದ ಸ್ವಾತಂತ್ರ್ಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಮುಖ ಭಾಗವಾಗಿದೆ. ಇದು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ವಿಭಿನ್ನ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಅನುವು ಮಾಡಿಕೊಡುತ್ತದೆ. ವೈಚಾರಿಕತೆಯನ್ನು ಉತ್ತೇಜಿಸಲು, ಸತ್ಯವನ್ನು ಜನರಿಗೆ ತಿಳಿಸಲು ಮಾಧ್ಯಮ ಸ್ವಾತಂತ್ರ್ಯವು ಅತ್ಯಗತ್ಯವಾಗಿದೆ. ಆದರೆ ಸರ್ವಾಧಿಕಾರಿ ಪ್ರಭುತ್ವದಲ್ಲಿ ಇಂತಹುದಕ್ಕೆಲ್ಲಾ ನೆಲೆ ಹಾಗೂ ಬೆಲೆ ಎರಡೂ ಇಲ್ಲವಾಗಿದೆ. ಪ್ರಜಾಪ್ರಭುತ್ವದ ಮಿಕ್ಕ ಮೂರೂ ಆಧಾರ ಸ್ತಂಭಗಳಂತೆ ಮೀಡಿಯಾಂಗವೂ ಸಹ ಮೋದಿ ಸರಕಾರದ ಕೈವಶವಾಗಿದೆ. ಮತ್ತೆ ಮೋದಿ ಸರಕಾರ ಬಹುಮತದಿಂದ ಅಸ್ತಿತ್ವಕ್ಕೆ ಬಂದಿದ್ದೇ ಆದರೆ ಸಂಪೂರ್ಣವಾಗಿ ಪತ್ರಿಕಾ ಸ್ವಾತಂತ್ರ್ಯ ತನ್ನ ಸ್ವಾತಂತ್ರ್ಯವನ್ನು ಕಳೆದು ಕೊಳ್ಳುತ್ತದೆ. ಸ್ವತಂತ್ರ ಪತ್ರಿಕೋದ್ಯಮವೂ ಸರಕಾರಿ ನಿಯಂತ್ರಣಕ್ಕೊಳಪಡುತ್ತದೆ. ಎಲ್ಲಾ ರೀತಿಯ ಡಿಜಿಟಲ್ ಮಾಧ್ಯಮಗಳು ಸೆನ್ಸಾರ್ ನಿಯಮಕ್ಕೊಳಗಾಗುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಪುಸ್ತಕದ ಪದವಾಗುತ್ತದೆ.
ಶಶಿಕಾಂತ ಯಡಹಳ್ಳಿ
ಪತ್ರಕರ್ತರು
ಇದನ್ನೂ ಓದಿ- ಲೈಂಗಿಕ ದೌರ್ಜನ್ಯ ಹಗರಣ ಫೇಕ್ ಎಂದ ಕೇಂದ್ರ ಗೃಹ ಸಚಿವ