ವಿಶ್ವಕಪ್ ಸೂಪರ್ 8:  ಅಮೆರಿಕಾಗೆ ಸೋಲುಣಿಸಿದ ದಕ್ಷಿಣ ಆಫ್ರಿಕಾ

Most read

ನಾರ್ತ್‌ ಸೌಂಡ್‌, ಸೇಂಟ್‌ ಜಾರ್ಜ್‌ (ಆಂಟಿಗುವಾ ಅಂಡ್‌ ಬರ್ಬುಡ): ಆಂಡ್ರೀಸ್ ಗೌಸ್ 47 ಎಸೆತಗಳಲ್ಲಿ ಗಳಿಸಿದ ಭರ್ಜರಿ 80 ರನ್ ವ್ಯರ್ಥವಾಯಿತು. ದಕ್ಷಿಣ ಆಫ್ರಿಕಾ ತಂಡದ ಶಿಸ್ತಿನ ಬೌಲಿಂಗ್ ಎದುರು ಅಮೆರಿಕ 18 ರನ್ ಗಳಿಂದ ಸೋತು ಮಂಡಿಯೂರಿತು. ವಿಶ್ವಕಪ್‌ ಟಿ-20, 2024ರ ಸೂಪರ್‌-8 (T20 World Cup 2024) ಘಟ್ಟದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಗೆಲುವಿನ ಅಭಿಯಾನ ಆರಂಭಿಸಿತು.

ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಟಾಸ್ ಗೆದ್ದ ಅಮೆರಿಕ ಮೊದಲು ಬ್ಯಾಟ್ ಮಾಡಲು ದಕ್ಷಿಣ ಆಫ್ರಿಕಾಗೆ ಆಹ್ವಾನಿಸಿದರು. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅಮೆರಿಕ ಬೌಲರ್ ಗಳನ್ನು 5 ಸಿಕ್ಸರ್, 7 ಬೌಂಡರಿಗಳನ್ನು ಚೆಚ್ಚಿ ಕಾಡಿದರು. ಕೇವಲ 40 ಎಸೆತಗಳಲ್ಲಿ ಅವರು 74 ರನ್ ಗಳಿಸಿ ಹರ್ಮೀತ್ ಸಿಂಗ್ ಬೌಲಿಂಗ್ ನಲ್ಲಿ ಔಟಾದರು. ಅವರಿಗೆ ಇನ್ನೊಂದು ತುದಿಯಲ್ಲಿ ಸಮರ್ಥ ಬೆಂಬಲ ನೀಡಿದ ನಾಯಕ ಐಡನ್ ಮಾರ್ಕರನ್ 32 ಎಸೆತಗಳಲ್ಲಿ 46 ರನ್ ಗಳಿಸಿದರು. ಕೊನೆಯ ಓವರ್ ಗಳಲ್ಲಿ ಹೆನ್ರಿಕ್ ಕ್ಲಾಸನ್ ತಮ್ಮ ಎಂದಿನ ಬಿರುಸಿನ ಆಟ ಪ್ರದರ್ಶಿಸಿ 36 ರನ್ ಗಳಿಸುವ ಮೂಲಕ ತಂಡದ ಮೊತ್ತಹಿಗ್ಗಿಸುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 194 ರನ್ ಗಳಿಸಿ ಅಮೆರಿಕದ ಎದುರು ದೊಡ್ಡ ಸವಾಲನ್ನು ನೀಡಿತು.

ಅಮೆರಿಕದ ಆರಂಭ ಅಷ್ಟೇನು ಚೆನ್ನಾಗಿರಲಿಲ್ಲ. ಒಂದೆಡೆ ಆರಂಭಿಕ ಆಟಗಾರ ಆಂಡ್ರೀಸ್ ಗೌಸ್ ಹೊಡಿಬಡಿ ಆಟ ಪ್ರದರ್ಶಿಸುತ್ತಿದ್ದರೆ ಮತ್ತೊಂದೆಡೆ ತಂಡವು 56 ರನ್ ಗಳಿಸುಷ್ಟರಲ್ಲಿ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಭರ್ಜರಿಯಾಗಿಯೇ ಆಟ ಆರಂಭಿಸಿದ ಸ್ಟೀವನ್ ಟೈಲರ್ ಸ್ಟೀವನ್ ಟೈಲರ್ 24 ರನ್ ಗಳಿಸಿ ಕಗೀಸೋ ರಬಾಡಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರಾಶೆ ಹುಟ್ಟಿಸಿದರು. ಆರೋನ್ ಜೋನ್ಸ್ ಮತ್ತು ಕೋರಿ ಆಂಡರ್ ಸನ್ ಬ್ಯಾಟ್ ಗಳು ಸದ್ದು ಮಾಡಲಿಲ್ಲ. ನಿತೀಶ್ ಕುಮಾರ್ ಕೂಡ 8 ರನ್ ಮಾತ್ರ ಗಳಿಸಿ ಔಟಾದರು. ಕೆಳಕ್ರಮಾಂಕದಲ್ಲಿ ಆಡಲು ಬಂದ ಹರ್ಮೀತ್ ಸಿಂಗ್ ಕೊಂಚ ಪ್ರತಿರೋಧ ತೋರಿ 22 ಎಸೆತಗಳಲ್ಲಿ 38 ರನ್ ಗಳಿಸಿ ರಬಾಡಾ ಅವರಿಗೆ ವಿಕೆಟ್ ಒಪ್ಪಿಸಿದರು.

ನಿಗದಿತ 20 ಓವರ್ ಗಳಲ್ಲಿ ಗೌಸ್ ಸಾಹಸದ ನಡುವೆಯೂ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾ 18 ರನ್ ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.

ಸಂಕ್ತಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ 194/4, ಮತ್ತು ಅಮೆರಿಕ 176/6

ಪಂದ್ಯ ಪುರುಷೋತ್ತಮ: ಕ್ವಿಂಟನ್ ಡಿಕಾಕ್

More articles

Latest article