ಡ್ಯಾರೆನ್ ಸಾಮಿ ಸ್ಟೇಡಿಯಂ (ಗ್ರೋಸ್ ಐಲೆಟ್): ಹೊಡಿಬಡಿ ಆಟಕ್ಕೆ ಹೆಸರಾದ ಇಂಗ್ಲೆಂಡ್ ತಂಡಕ್ಕೆ ವೆಸ್ಟ್ ಇಂಡೀಸ್ ನೀಡಿದ 181 ರನ್ ಗಳ ಸವಾಲು ದೊಡ್ಡದಾಗಲೇ ಇಲ್ಲ. 17.3 ಓವರ್ ಗಳಲ್ಲೇ ಗೆಲುವಿನ ರೇಖೆಯನ್ನು ದಾಟಿದ ಇಂಗ್ಲೆಂಡ್ ಸೂಪರ್ 8 ಘಟ್ಟದ ತನ್ನ ಮೊದಲ ಪಂದ್ಯವನ್ನು ಗೆದ್ದು ಬೀಗಿತು.
ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಇಂದು ನಡೆದ ಎರಡನೇ ಸೂಪರ್ 8 ಪಂದ್ಯದಲ್ಲಿ 181 ರನ್ ಚೇಸ್ ಮಾಡಿದ ಇಂಗ್ಲೆಂಡ್ ನ ಆರಂಭಿಕ ಆಟಗಾರ ಫಿಲ್ ಸಾಲ್ಟ್ 47 ಎಸೆತಗಳಲ್ಲಿ 87 ರನ್ ಗಳಿಸಿ ಗೆಲುವನ್ನು ಖಚಿತಪಡಿಸಿದರು. 26 ಎಸೆತಗಳಲ್ಲಿ 48 ರನ್ ಗಳಿಸಿದ ಜಾನಿ ಬೇರ್ ಸ್ಟೋ ಗೆಲುವಿನ ಔಪಚಾರಿಕತೆಯನ್ನು ಮುಗಿಸಿದರು.
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ವೆಸ್ಟ್ ಇಂಡೀಸ್ ತಂಡದ ಆಟಗಾರರಲ್ಲಿ ಒಬ್ಬರೂ ದೊಡ್ಡಮೊತ್ತ ಗಳಿಸಲು ಸಾಧ್ಯವಾಗಲಿಲ್ಲವಾದರೂ ಎಲ್ಲರೂ ಉಪಯುಕ್ತ ಕಾಣಿಕೆಯನ್ನು ನೀಡಿದರು. ಬ್ರಾಂಡನ್ ಕಿಂಗ್ (23), ಜಾನ್ಸನ್ ಚಾರ್ಲ್ಸ್ (38), ನಿಕೋಲಸ್ ಪೂರನ್ (36), ರೋವ್ಮನ್ ಪೋವಲ್ (36), ರುಥರ್ಫೋರ್ಡ್ (28) ರನ್ ಗಳಿಸಿದರು. ನಿಗದಿತ 20 ಓವರ್ ಗಳಲ್ಲಿ ವೆಸ್ಟ್ ಇಂಡೀಸ್ 180 ರನ್ ಗಳಿಸಿತು.
181 ರನ್ ಗಳ ಗೆಲುವಿನ ಗುರಿ ಪಡೆದ ಇಂಗ್ಲೆಂಡ್ ಉತ್ತಮವಾಗಿ ಇನ್ನಿಂಗ್ಸ್ ಆರಂಭಿಸಿತು. ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಮತ್ತು ನಾಯಕ ಜೋಸ್ ಬಟ್ಲರ್ ಮೊದಲ ವಿಕೆಟ್ ಜೊತೆಯಾಟದಲ್ಲಿ 7.4 ಓವರ್ ಗಳಲ್ಲಿ 67 ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. ಮೊಯಿನ್ ಅಲಿ 13 ರನ್ ಗಳಿಸಿ ಔಟಾದರು. ನಂತರ ಆಡಲು ಬಂದ ಜಾನಿ ಬೇರ್ ಸ್ಟೋ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಬೇರ್ ಸ್ಟೋ ಮತ್ತು ಫಿಲ್ ಸಾಲ್ಟ್ ವೆಸ್ಟ್ ಇಂಡೀಸ್ ಬೌಲರ್ ಗಳನ್ನು ದಂಡಿಸುತ್ತ ಇನ್ನೂ 15 ಎಸೆತಗಳು ಇರುವಾಗಲೇ ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: 20 ಓವರ್ ಗಳಲ್ಲಿ 180/4, ಇಂಗ್ಲೆಂಡ್: 17.3 ಓವರ್ ಗಳಲ್ಲಿ 181/2
ಪಂದ್ಯಪುರುಷೋತ್ತಮ: ಫಿಲ್ ಸಾಲ್ಟ್