Tuesday, September 17, 2024

ವಿಶ್ವಕಪ್ ಸೂಪರ್ 8: ಭಾರತಕ್ಕೆ ಸುಲಭದ ತುತ್ತಾಗುವುದೇ ಅಫಘಾನಿಸ್ತಾನ?

Most read

ಬ್ರಿಡ್ಜ್ ಟೌನ್ (ಬಾರ್ಬೊಡಸ್): ಇಲ್ಲಿನ ಕೆನ್ಸಿಂಗ್ ಟನ್ ಓವಲ್ ಕ್ರೀಡಾಂಗಣ ಭಾರತ ಮತ್ತು ಅಫಘಾನಿಸ್ತಾನ ನಡುವಿನ ಪಂದ್ಯಕ್ಕೆ ಸಜ್ಜಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ಕೆನ್ಸಿಂಗ್ ಟನ್ ಓವಲ್ ನಲ್ಲಿ 2007ರಲ್ಲಿ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯ ನಡೆದಿತ್ತು. ಸುಮಾರು 28,000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆಯಿರುವ ಇಲ್ಲಿಗೆ ಇಂದು ಭಾರತೀಯ ಪ್ರೇಕ್ಷಕರು ಪ್ರವಾಹದಂತೆ ಹರಿದುಬರುತ್ತಿದ್ದಾರೆ.

ಗ್ರೂಪ್ ಹಂತದಲ್ಲಿ ಅಜೇಯವಾಗಿ ಸೂಪರ್ ಎಂಟರ ಘಟ್ಟಕ್ಕೆ ತೇರ್ಗಡೆಯಾಗಿರುವ ಭಾರತ ಇಂದು ನಡೆಯಲಿರುವ ತನ್ನ ಮೊದಲ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಂದಿನ ಪಂದ್ಯ ಮತ್ತು ಶನಿವಾರ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಗೆದ್ದುಕೊಂಡರೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.  ಸೂಪರ್ ಎಂಟರ ತನ್ನ ಕೊನೆಯ ಪಂದ್ಯವನ್ನು ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಸೋಮವಾರ ಎದುರಿಸಬೇಕಾಗಿರುವುದರಿಂದ ಭಾರತ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಕಡೆ ತನ್ನ ಚಿತ್ತ ಹರಿಸಬೇಕಾಗಿದೆ.

ಅಘಫಾನಿಸ್ತಾನ ಮತ್ತು ಭಾರತ ನಡುವೆ ನಡೆದಿರುವ ಎಲ್ಲ ಏಳು ಪಂದ್ಯಗಳನ್ನೂ ಭಾರತವೇ ಗೆದ್ದುಕೊಂಡಿದೆ. ಆದರೆ ರಶೀದ್ ಖಾನ್ ನಾಯಕತ್ವದ ಅಫಘಾನಿಸ್ತಾನ ಮೊದಲಿನಂತೆ ಈಗ ದುರ್ಬಲ ತಂಡವಲ್ಲ. ಗ್ರೂಪ್ ಹಂತದಲ್ಲಿ ಅದು ತೋರಿದ ಸಾಮರ್ಥ್ಯವನ್ನು ಗಮನಿಸಿದರೆ ಭಾರತಕ್ಕೆ ಸುಲಭದ ತುತ್ತಾಗುವ ನಿರೀಕ್ಷೆಯೇನೂ ಇಲ್ಲ. ಅಫಘಾನಿಸ್ತಾನ ತಂಡ ಸಾಂಘಿಕ ಪ್ರದರ್ಶನವನ್ನು ನೆಚ್ಚಿಕೊಂಡಿದ್ದು, ಒಂದು ವೇಳೆ ಎಲ್ಲ ಆಟಗಾರರು ಸಿಡಿದು ನಿಂತರೆ ಜಗತ್ತಿನ ಯಾವುದೇ ಶ್ರೇಷ್ಠ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ.

ಅಫಘಾನಿಸ್ತಾನದ ಬ್ಯಾಟರ್ ರೆಹಮತ್ತುಲ್ಲಾ ಗುರ್ಬಾಜ್ ಉತ್ತಮ ಫಾರಂ ನಲ್ಲಿದ್ದಾರೆ. ಗ್ರೂಪ್ ಹಂತದಲ್ಲಿ ಅವರು ಒಟ್ಟು 167 ರನ್ ಗಳನ್ನು ಪೇರಿಸಿ ತಮ್ಮ ಶಕ್ತಿ ತೋರಿಸಿದ್ದಾರೆ. ಅವರನ್ನು ಬೇಗನೇ ಕಟ್ಟಿಹಾಕುವುದು ಭಾರತದ ಬೌಲಿಂಗ್ ಪಡೆಗೆ ಸವಾಲಾಗಲಿದೆ. ಇಬ್ರಾಹಿಂ ಜರ್ದಾನ್ ಕೂಡ ಅಪಾಯಕಾರಿ ಆಟಗಾರ. ಅವರ ವಿಕೆಟ್ ಪಡೆಯುವುದು ಕೂಡ ಬಹಳ ಮುಖ್ಯವಾಗಲಿದೆ. ಅಫಘಾನಿಸ್ತಾನದ ಬೌಲಿಂಗ್ ಪಡೆ ಇನ್ಯಾವುದೇ ಕ್ರಿಕೆಟ್ ತಂಡಕ್ಕೆ ನೀರು ಕುಡಿಸುವಷ್ಟು ಬಲಶಾಲಿಯಾಗಿದೆ. ಫಜಲಕ್ ಫಾರೂಕಿ ಈ ಟೂರ್ನಿಯಲ್ಲಿ 12 ವಿಕೆಟ್ ಗಳಿಸಿ ಅತ್ಯುತ್ತಮ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ನಾಯಕ ರಶೀದ್ ಖಾನ್ ಯಾವುದೇ ಹಂತದಲ್ಲಿ ಬೌಲ್ ಮಾಡಲು ಬಂದರೂ ಪಂದ್ಯಕ್ಕೆ ದೊಡ್ಡ ತಿರುವು ನೀಡಬಲ್ಲ ಬೌಲರ್.

ಮೇಲ್ನೋಟಕ್ಕೆ ಭಾರತ ಅಫಘಾನಿಸ್ತಾನಕ್ಕಿಂತ ಬಲಶಾಲಿ ತಂಡ. ಆರಂಭಿಕ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಬ್ಯಾಟ್ ಗಳು ಮಾತನಾಡಲು ಆರಂಭಿಸಿದರೆ ಅವರನ್ನು ತಡೆಯುವುದು ಸಾಧ್ಯವಿಲ್ಲ. ಆದರೆ ಈ ಟೂರ್ನಿಯ ಮೂರೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿರುವುದು ಭಾರತ ಪಾಳಯಕ್ಕೆ ಚಿಂತೆಯ ವಿಷಯವಾಗಿದೆ. ಆದರೆ ವೆಸ್ಟ್ ಇಂಡೀಸ್ ಪಿಚ್ ಗಳು ಅಮೆರಿಕದ ಪಿಚ್ ಗಳಿಗಿಂತ ಭಿನ್ನವಾಗಿರುವುದರಿಂದ ವಿರಾಟ್ ಅಫಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಬಹುದು ಎಂಬ ನಿರೀಕ್ಷೆ ಇದೆ.

ಭಾರತ ತಂಡದ ಸಂಯೋಜನೆ ಬದಲಾಗುವ ಸಾಧ್ಯತೆ ಇದ್ದು ಆಡುವ ಹನ್ನೊಂದರ ಬಳಗದಲ್ಲಿ ಇಬ್ಬರು ಹೊರಹೋಗಿ, ಇನ್ನಿಬ್ಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಶಿವಂ ದುಬೆ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡದ ಒಳಗೆ ಬಂದು ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ತಮ್ಮ ಹಿಂದಿನ ಮೂರನೇ ಕ್ರಮಾಂಕಕ್ಕೆ ಮರಳಬಹುದು. ಇನ್ನೊಂದೆಡೆ ಮಹಮದ್ ಸಿರಾಜ್ ಬದಲಿಗೆ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಪಂದ್ಯ ಭಾರತೀಯ ಕಾಲಮಾನ 8 ಗಂಟೆಗೆ ಆರಂಭಗೊಳ್ಳಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

More articles

Latest article