ಪ್ರತೀ ವರುಷ ಜೂನ್ 14ನೇ ತಾರೀಕಿನಂದು ‘ವಿಶ್ವ ರಕ್ತದಾನಿ ದಿನಾಚರಣೆ’(World Blood Donor Day)ಯನ್ನು ಆಚರಿಸಲಾಗುತ್ತದೆ. ರಕ್ತದಾನದ ಮಹತ್ವ ಮತ್ತು ರಕ್ತ ನೀಡಿಕೆಯಿಂದ ಜೀವ ಉಳಿಸುವ ಮಾನವೀಯ ಕಾರ್ಯದಲ್ಲಿ ಅರ್ಹರು ಪಾಲ್ಗೊಳ್ಳುವಂತೆ ಮಾಡುವುದೇ ಈ ದಿನಾಚರಣೆಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ಲೇಖಕ ಕೆ ಎಸ್ ರವಿಕುಮಾರ್ ರೂಪುಗೊಳಿಸಿದ ಬರಹ ಇಲ್ಲಿದೆ.
ಜಗದ ಜನರನ್ನೆಲ್ಲ ವಿಭಜಿಸಲೇ ಬೇಕೆಂದಿದ್ದರೆ ರಕ್ತದ ಗುಂಪುಗಳಲ್ಲಿ ವಿಂಗಡಿಸಿ ಬಿಡಬಹುದು. ಅರ್ಥಾತ್ ಎಂಟು ಗುಂಪುಗಳು. ಈ ವಿಂಗಡಣೆ ಬಹಳ ನಿಖರವಾದದ್ದು ಮತ್ತು ನೈಸರ್ಗಿಕವಾದದ್ದು. ವಿಭಜನೆ ಅನ್ನುವುದೇ ತಾರತಮ್ಯ ಮತ್ತು ಹಗೆತನಗಳಿಗೆ ದಾರಿ ಮಾಡಿಕೊಡುವ ಕತ್ತಿ ಮಸೆತವಾಗಿದೆ. ಮೇಲು-ಕೀಳು, ಉಚ್ಛ-ನೀಚ, ಸ್ಪೃಶ್ಯ,-ಅಸ್ಪೃಶ್ಯ ಬಿಳಿಯ-ಕರಿಯ, ಸಸ್ಯಾಹಾರಿ-ಮಾಂಸಾಹಾರಿ ಎಂದೆಲ್ಲ ಕರೆದುಕೊಂಡು ಮಾನವ ಕುಲ ಶೋಷಕ ಮತ್ತು ಶೋಷಿತ ಎಂದು ಬೇರೆ ಬೇರೆ ಬಣಗಳಲ್ಲಿ ನಿಲ್ಲುತ್ತದೆ. ಅವಮಾನ, ಹಿಂಸೆ, ಸಂಘರ್ಷ, ಅತ್ಯಾಚಾರ, ಹತ್ಯೆಗಳಿಗೆ ನೆಪಗಳು ಬಲಿತವರ ಪರವಾಗಿ ಸೃಷ್ಟಿಗೊಳ್ಳುತ್ತವೆ. ಜಗತ್ತು ಅಶಾಂತಿಯ ಬೀಡಾಗುತ್ತದೆ. ಆದರೆ ರಕ್ತಾಧಾರಿತ ವರ್ಗೀಕರಣ ಮನುಷ್ಯರ ನಡುವೆ ಸಮಾನತೆಯನ್ನು ಕಾಪಾಡಿಕೊಂಡೇ ಅವರ ಉಳಿವಿಗೆ ಅಗತ್ಯವಿರುವ ಮಾನವೀಯ ತಿಳುವಳಿಕೆಯನ್ನು ನೀಡಬಲ್ಲುದು.
ಏನದು ಮಾನವೀಯ ತಿಳುವಳಿಕೆ?
ಆಸ್ಟ್ರಿಯಾದ ವಿಜ್ಞಾನಿ ಕಾರ್ಲ್ ಲ್ಯಾಂಡ್‍ಸ್ಟೀನರ್ ಆಂಟಿಜೆನ್, ಆಂಟಿಬಾಡಿ, ಎಗ್ಲುಟಿನೋಜೆನ್, Rh ಅಂಶ ಇತ್ಯಾದಿ ರಕ್ತದ ವಿವಿಧ ಘಟಕಗಳ ಅರಿವಿನ ನೆರವಿನಿಂದ ರಕ್ತದ ಗುಂಪುಗಳನ್ನು ಕಂಡುಹಿಡಿಯುವ ಸಾಕಷ್ಟು ಮುನ್ನವೂ ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ನೀಡುವ ಅಭ್ಯಾಸ ಚಾಲ್ತಿಯಲ್ಲಿತ್ತು. ಅಂದು ಎಲ್ಲರ ರಕ್ತ ಒಂದೇ ಎಂದು ‘ವಿವೇಚನಾರಹಿತ’ವಾಗಿ ನಂಬಲಾಗಿತ್ತು. ಹೊರಗಿನ ರಕ್ತ ಅಕಸ್ಮಾತ್ ಫಲಾನುಭವಿಗೆ ಹೊಂದಿದರೆ ಅವನು/ಳು ಬದುಕುಳಿಯುತ್ತಿದ್ದನು/ಳು. ಹೊಂದದೇ ಹೋದರೆ ಅಸುನೀಗುತ್ತಿದ್ದನು/ಳು. ಫಲಾನುಭವಿಗೆ ಹಾನಿಯಾಗದ ರೀತಿಯಲ್ಲಿ ರಕ್ತದ ಗುಂಪುಗಳನ್ನು ಪತ್ತೆ ಹಚ್ಚಿ ಕರಾರುವಾಕ್ ಹೊಂದಿಸುವುದರ ಮೇಲೆ ಮೊದಲು ಯಶಸ್ವಿ ಬೆಳಕು ಚೆಲ್ಲಿದ್ದು ಕಾರ್ಲ್ ಲ್ಯಾಂಡ್‍ಸ್ಟೀನರ್ (ಈ ಸಂಶೋಧನೆ ಅವರಿಗೆ 1930ರ ವೈದ್ಯ ವಿಜ್ಞಾನದ ನೊಬೆಲ್ ಪುರಸ್ಕಾರವನ್ನು ತಂದುಕೊಟ್ಟಿತು). ಅವರ ಈ ಸಂಶೋಧನೆಯಿಂದ ಆಯಾಯ ಗುಂಪಿನವರಿಗೆ ಆಯಾಯ ಗುಂಪಿನವರ ರಕ್ತವನ್ನು ನೀಡುವ ಮೂಲಕ ಫಲಾನುಭವಿ ಚೇತರಿಸಿ ಕೊಳ್ಳುವುದು ಸಾಧ್ಯವಾಗುತ್ತಿತ್ತು. ಆದರೆ ಇಲ್ಲೊಂದು ಅಡಚಣೆಯಿತ್ತು. ಇಂದು ಒಬ್ಬರಿಂದ ತೆಗೆದ ರಕ್ತವನ್ನು ಮುಂದೆಂದೋ ಯಾರಿಗೋ ನೀಡಬೇಕಿದ್ದರೆ ಆಗಿನ್ನೂ ಅದನ್ನು ದೀರ್ಘಕಾಲ ಕೆಡದಂತೆ ಸಂಗ್ರಹಿಸಿಡುವ ತಂತ್ರಜ್ಞಾನದ ಆವಿಷ್ಕಾರವಾಗಿರಲಿಲ್ಲ (ಕಡಿಮೆ ಅವಧಿಗಾದರೆ ರೆಫ್ರಿಜರೇಟರ್‌ನಲ್ಲಿ ಇಡಲಾಗುತ್ತಿತ್ತು. ನೆನಪಿರಲಿ, 1920-30ರ ದಶಕಗಳಲ್ಲಿ ರೆಫ್ರಿಜರೇಟರ್ ಬಹಳ ಸಿರಿವಂತರು, ಪಂಚತಾರಾ ಹೋಟೆಲ್‍ಗಳು ಮತ್ತು ಸರ್ಕಾರಿ ಪ್ರಯೋಗಾಲಯಗಳಲ್ಲಷ್ಟೆ ಲಭ್ಯವಿರುತ್ತಿತ್ತು). ಹೀಗಾಗಿ ಅಂದು ಪಡೆದ ರಕ್ತವನ್ನು ಅಂದೇ ಅಗತ್ಯವಿದ್ದವರಿಗೆ ನೀಡಿಬಿಡಬೇಕಿತ್ತು. ರಕ್ತವನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿ ಸಂಗ್ರಹಿಸಬಹುದು ಮತ್ತು ಬೇಕೆಂದಾಗ ಇನ್ನೊಬ್ಬರಿಗೆ ನೀಡಬಹುದು ಎಂಬ ಸುಧಾರಿತ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದು ಅಮೆರಿಕಾದ ಚಾರ್ಲ್ಸ್ ರಿಚರ್ಡ್ ಡ್ರ್ಯೂ. ಜಗತ್ತಿನ ಮೊಟ್ಟ ಮೊದಲ ಸುಸಜ್ಜಿತ ವೈಜ್ಞಾನಿಕ ಮಾದರಿಯ ರಕ್ತದ ಬ್ಯಾಂಕ್ ((Blood Bank) ಅಥವಾ ರಕ್ತ ಸಂಗ್ರಹಾಗಾರದ ಜನಕ ಅವನು.
ರಕ್ತದ ಬಣ್ಣ ‘ಒಂದೇ ಕೆಂಪು’…
ರಕ್ತದ ಬಣ್ಣ ‘ಒಂದೇ ಕೆಂಪು’ ಎಂಬ ಕಾರಣಕ್ಕೆ ಜಗದ ಜನರೆಲ್ಲ ಒಂದೇ ಎಂದು ಭಾವಿಸುವುದು ಸಾಮಾನ್ಯ ಸಂಗತಿ. ಭಾವನಾತ್ಮಕವಾಗಿ ಎಲ್ಲರನ್ನು ಬೆಸೆಯುವ ಸಂಗತಿಯೂ ಹೌದು. ಆದರೆ ‘A+ve’, ‘B+ve’, ‘O+ve’, ‘AB+ve’, ‘A-ve’, ‘B-ve’, ‘O-ve’ ಮತ್ತು ‘AB-ve’ ಎಂಬ ಎಂಟು ಗುಂಪುಗಳಲ್ಲಿ ಜನರನ್ನು ವರ್ಗೀಕರಿಸುವ ವ್ಯವಸ್ಥೆ ನಮ್ಮ ತಿಳುವಳಿಕೆಗೆ ದಕ್ಕಿದ ಮೇಲೆ ವೈಜ್ಞಾನಿಕ ಕ್ರಮದಲ್ಲಿ ರಕ್ತದಾನ ಅತ್ಯಂತ ಮಾನವೀಯ ನಡವಳಿಕೆ ಎಂದು ಪರಿಗಣಿಸಲ್ಪಟ್ಟಿದೆ. ಕಾಲ ಕ್ರಮೇಣ ಚಳವಳಿಯ ರೂಪ ಪಡೆದು ಚಿಕಿತ್ಸಾ ಕ್ರಮದ ಸಾಂಪ್ರದಾಯಿಕ ಸ್ವರೂಪವನ್ನೇ ಬದಲಿಸಿಬಿಟ್ಟಿದೆ. ಈ ನಿಟ್ಟಿನಲ್ಲಿ ರಕ್ತದ ಬಗ್ಗೆ ನಾವು ಪಡೆದ ತಿಳುವಳಿಕೆಯೆ ಮಾನವೀಯ ತಿಳುವಳಿಕೆಯಾಗಿದೆ. ಜೀವವುಳಿಸುವ ಬೆರಗಿನ ತಿಳುವಳಿಕೆಯಾಗಿದೆ.
ರಕ್ತದಾನವು ಭಿನ್ನತೆಯ ಪಟ್ಟಭದ್ರ ನೆಲೆಗಟ್ಟುಗಳನ್ನೆ ಅಲುಗಾಡಿಸಿ ಬಿಡುತ್ತದೆ. ಕೃತಕ ಅಹಮಿಕೆಯನ್ನು ಹೊಸ ಗ್ರಹಿಕೆಯ ಅಲ್ಲೋಲ ಕಲ್ಲೋಲಕ್ಕೆ ದೂಡಿಬಿಡುತ್ತದೆ. ‘A+ve’ ಗುಂಪಿನ ‘ಶ್ರೇಷ್ಠ’ ಬಿಳಿಯನೊಬ್ಬನ ಜೀವವನ್ನು ‘ನಿಕೃಷ್ಠ’ ಕರಿಯ ನೀಗ್ರೋ ಒಬ್ಬನ ‘A+ve’ ರಕ್ತ ಉಳಿಸಬಹುದಾಗಿದೆ. ‘O-ve’ ಗುಂಪಿನ ದನ ತಿನ್ನದ ಹುಂಬ ಕರ್ಮಠನೊಬ್ಬನ ಜೀವವನ್ನು ದನ ತಿನ್ನುವವನ ‘O-ve’ ರಕ್ತ ಉಳಿಸಬಹುದಾಗಿದೆ. ‘B+ve’ ಗುಂಪಿನ ಜಿಗುಟು ಸಸ್ಯಾಹಾರಿಯ ಜೀವವನ್ನು ‘ಅಸಹ್ಯ’ ಮಾಂಸಹಾರಿಯ ‘B+ve’ ರಕ್ತ ಉಳಿಸಬಹುದಾಗಿದೆ. ಮಡಿ ಮೈಲಿಗೆಯೆಂದು ಜಿಗಿದಾಡುವ ‘AB-ve’ ಗುಂಪಿನ ಮನೆ ಯಜಮಾನತಿಯ ಜೀವವನ್ನು ಮನೆಗೆಲಸದಾಕೆಯ ‘AB-ve’ ರಕ್ತ ಉಳಿಸಬಹುದಾಗಿದೆ. ‘B-ve’ ಗುಂಪಿನ ಮಡಿವಂತ ಸನಾತನಿಯ ಜೀವವನ್ನು ದಲಿತನೊಬ್ಬನ ‘O+ve’ ರಕ್ತ ಉಳಿಸಬಹುದಾಗಿದೆ (‘O’ ಗುಂಪು ಸಾರ್ವತ್ರಿಕ ದಾನಿ, Universal Donor ಎನಿಸಿದ್ದರೂ ಸಂದರ್ಭಾನುಸಾರ ಕೆಲವು ಮುನ್ನೆಚ್ಚರಿಕೆಗಳು ಅಗತ್ಯವಾಗಬಹುದು). ಚಿನ್ನದ ತಟ್ಟೆಯಲ್ಲಿ ಅನ್ನ ಉಣ್ಣುವ ‘AB-ve’ ಗುಂಪಿನ ಸಿರಿವಂತನ ಜೀವವನ್ನು ನಿತ್ಯ ಹಾಲು ಕೊಟ್ಟು ಕೂಳಿಗೆ ಖಾತರಿ ಮಾಡಿಕೊಳ್ಳುವ ಗೌಳಿಗಿತ್ತಿಯ ‘B+ve’ ರಕ್ತ ಉಳಿಸ ಬಹುದಾಗಿದೆ. (‘O’ ಗುಂಪು ಸಾರ್ವತ್ರಿಕ ಸ್ವೀಕಾರಿ, Universal Recipient ಎನಿಸಿದ್ದರೂ ಸಂದರ್ಭಾನುಸಾರ ಕೆಲವು ಮುನ್ನೆಚ್ಚರಿಕೆಗಳು ಅಗತ್ಯವಾಗಬಹುದು). ಜೀವ ಉಳಿಸಿಕೊಳ್ಳುವ ತುರ್ತಿನಲ್ಲಿರುವಾಗ ರಕ್ತ ಕೊಟ್ಟವರ ಕುಲ, ಲಿಂಗ, ಜಾತಿ, ಮತ, ಭಾಷೆ, ಬಣ್ಣ, ಆಹಾರ ಪದ್ಧತಿಗಳನ್ನೆಲ್ಲ ಗಮನಿಸಲಾಗದಂತಹ ಸಂವೇದನೆಯನ್ನು ನಮ್ಮ ಮುಂದೆ ಸುರಿಯುವ ರಕ್ತವಿಜ್ಞಾನಕ್ಕೆ ನೆರವು ಸಲ್ಲಿಕೆಗಳನ್ನು ತೋರಿಸದೇ ಹೋದರೆ ಆತ್ಮ ವಂಚನೆಯಾದೀತು.
ಇವೆಲ್ಲ ಏಕಪಕ್ಷೀಯ ಪೂರ್ವಗ್ರಹದಿಂದ ಕೂಡಿದ ಉದಾಹರಣೆಗಳು ಎಂದು ಕೆಲವರಿಗಾದರೂ ಅನ್ನಿಸಬಹುದು. ಆದರೇನು ಮಾಡುವುದು, ಇಲ್ಲಿಯ ತನಕ ಜಗತ್ತು ಏಕಪಕ್ಷೀಯವಾಗಿಯೇ ಯೋಚಿಸಿಕೊಂಡು ಬಂದಿದೆಯಲ್ಲ? ರಕ್ತ ದಾನದ ಹಿನ್ನೆಲೆಯಲ್ಲಿ ನಾನಿಲ್ಲಿ ಇಷ್ಟೆಲ್ಲ ಉದಾಹರಣೆಗಳನ್ನು ನೀಡಲು ಕಾರಣವಿದೆ. ಸ್ವತಃ ಚಾರ್ಲ್ಸ್ ರಿಚರ್ಡ್ ಡ್ರ್ಯೂ ಕರಿಯ ರಕ್ತ, ಬಿಳಿಯ ರಕ್ತ ಎಂಬ ತಾರತಮ್ಯದ ನಡುವೆಯೇ ಬದುಕಿ ಅದರ ವಿರುದ್ಧ ಪ್ರಜ್ಞಾಪೂರ್ವಕವಾಗಿ ಸಿಡಿದು ನಿಂತ ನಿರ್ಭೀತ ಮಾನವತಾವಾದಿಯಾಗಿದ್ದವನು. ರಕ್ತ ವಿಜ್ಞಾನ(Haematology)ಕ್ಕೆ ಬುನಾದಿ ಹಾಕಿದ ಕಾರ್ಲ್ ಲ್ಯಾಂಡ್‍ಸ್ಟೀನರ್ ನಂತರ ಅದನ್ನು ಉತ್ತುಂಗಕ್ಕೆ ಒಯ್ದ ಅತ್ಯಂತ ಮಹತ್ವದ ಸಂಶೋಧಕ ಎನಿಸಿದ್ದವನು.
***
ಚಾರ್ಲ್ಸ್ ನಡೆದ ಹಾದಿ ಹೀಗಿತ್ತು…
ಚಾರ್ಲ್ಸ್ 1904ರ ಇಸವಿ ಜೂನ್ 3ರಂದು ವಾಷಿಂಗ್‍ಟನ್ ಡಿ.ಸಿ.ಯಲ್ಲಿ ಜನಿಸಿದನು. ತಂದೆ ರಿಚರ್ಡ್ ನೆಲಹಾಸು ಸಜ್ಜುಗೊಳಿಸು (carpet laye)ವ ವೃತ್ತಿಯವ. ತಾಯಿ ನೋರಾ ಬುರ್ರೆಲ್ ಶಿಕ್ಷಕಿ. ಚಾರ್ಲ್ಸ್ ನ ಒಬ್ಬ ತಮ್ಮ ಜೋಸೆಫ್. ಮೂವರು ತಂಗಿಯರು, ಎಲ್ಸಿ, ನೋರಾ ಮತ್ತು ಈವಾ. ರಿಚರ್ಡ್‍ನದು ಬಡ ಮಧ್ಯಮ ನೀಗ್ರೋ ಕುಟುಂಬ. ಕೌಟುಂಬಿಕ ಜವಾಬ್ದಾರಿ, ಪೌರ ಪ್ರಜ್ಞೆ, ವ್ಯಕ್ತಿ ಸ್ವಾತಂತ್ರ್ಯ, ಸ್ಪರ್ಧೆಗೆ ಹಿಂದೆಗೆಯದ ಗುಣಗಳ ಮಹತ್ವವನ್ನು ಮಕ್ಕಳಿಗೆ ನೀಡುವಲ್ಲಿ ಹೆತ್ತವರು ಹಿಂದೆ ಬಿದ್ದಿರಲಿಲ್ಲ. ಬಿಳಿಯರ ಭರ್ತ್ಸನೆ ಎದುರಿಸಿ ಬದುಕುವ ಛಾತಿ ಚಾರ್ಲ್ಸ್ ಗೆ ಬಾಲ್ಯದಲ್ಲೇ ಪರಿಚಯವಾಗಿತ್ತು. ಹೆತ್ತವರ ಗಳಿಕೆ ದೊಡ್ಡ ಸಂಸಾರದ ಅಗತ್ಯಗಳನ್ನು ಪೂರೈಸಲು ಸಾಲುತ್ತಿರಲಿಲ್ಲ. ಹನ್ನೆರಡನೇ ವಯಸ್ಸಿನಲ್ಲೆ, ಅಭ್ಯಾಸ ಮಾಡುತ್ತಲೆ ಚಾರ್ಲ್ಸ್ ಸಂಪಾದಿಸತೊಡಗಿದ. ಅವನು ಬೀದಿಬದಿಯ ಸ್ಟಾಲಿನಲ್ಲಿ ವಿವಿಧ ಪತ್ರಿಕೆಗಳನ್ನು ಮಾರಿದ. ದೊಡ್ಡವನಾದಂತೆ ಕಟ್ಟಡ ನಿರ್ಮಾಣಗಳಲ್ಲಿ, ಈಜುಕೊಳದಲ್ಲಿ ಲೈಫ್ ಗಾರ್ಡ್ ಆಗಿ, ಕ್ರೀಡಾಪಟುಗಳಿಗೆ ಕೋಚ್ ಆಗಿಯೂ ದುಡಿದು ಮನೆಗೆ ನೆರವಾದ. ಓದಿನಲ್ಲೂ ಜಾಣ, ಕ್ರೀಡೆಯಲ್ಲೂ ಮುಂದು. ಕಾಲೇಜು ಮೆಟ್ಟಿಲು ಹತ್ತುವ ಮುನ್ನವೇ ‘ಉತ್ತಮ ಕ್ರೀಡಾಪಟು’ ಎಂಬ ಶಾಲಾ ಪ್ರಶಸ್ತಿಗೆ ಭಾಜನನಾಗಿದ್ದ. ಅಥ್ಲೆಟಿಕ್ಸ್, ಈಜು, ಬ್ಯಾಸ್ಕೆಟ್‍ಬಾಲ್ ಮತ್ತು ಫುಟ್‍ಬಾಲ್ ವಿಭಾಗಗಳಲ್ಲಿ ಅವನ ಸಾಧನೆ ಗಮನಾರ್ಹವಾಗಿತ್ತು. ಅಂದು ದೇಶದ ಐವರು ಅತ್ಯುತ್ತಮ ‘ಅಡೆತಡೆ ಓಟಗಾರ’(hurdler)ರಲ್ಲಿ ಅವನೂ ಒಬ್ಬನಾಗಿದ್ದ. ಕಾಲೇಜಿನಲ್ಲಿದ್ದಾಗ ಜೆಸ್ಸಿ ಓವೆನ್ಸ್ ಜೊತೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಅವನಿಗೆ ಲಭಿಸಿತ್ತು. ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಅವಕಾಶ ಸ್ವಲ್ಪದರಲ್ಲೇ ತಪ್ಪಿಹೋಗಿತ್ತು. ಅಂತಿಮವಾಗಿ ಸಮಾನ ಅರ್ಹತೆಯಿದ್ದ ಇಬ್ಬರನ್ನು ಆಯ್ಕೆ ಮಾಡಲು ನಾಣ್ಯ ತೂರಲಾಯಿತು. ಅವಕಾಶ ಚಾರ್ಲ್ಸ್ ಪರವಾಗಿರಲಿಲ್ಲ. ಹದಿವಯಸ್ಸಿನ ಈ ಅವಧಿಯಲ್ಲಿ ಅವನು ಎಲೆಕ್ಟ್ರಿಕಲ್ ಇಂಜಿನಿಯರ್ ಆಗುವ ಕನಸು ಕಂಡಿದ್ದ.
1920ರಲ್ಲಿ ದೊಡ್ಡ ತಂಗಿ ಎಲ್ಸಿ ಇನ್‌ಫ್ಲುಎಂಜಾದಿಂದ ಜಟಿಲಗೊಂಡ ಕ್ಷಯರೋಗಕ್ಕೆ ತುತ್ತಾದಳು. ಸ್ವತಃ ಚಾರ್ಲ್ಸ್ ಪುಟ್‍ಬಾಲ್ ಆಡುವಾಗ ತೀವ್ರವಾಗಿ ಗಾಯಗೊಂಡು ಆಸ್ಪತ್ರ್ರೆಗೆ ದಾಖಲಾದ. ಈ ಎರಡು ಘಟನೆಗಳು ಅವನ ಮನಸು ವೈದ್ಯ ವಿಜ್ಞಾನದ ಕಡೆ ಹೊರಳಲು ಕಾರಣವಾದವು. 1922ರಲ್ಲಿ ಅವನು ಮಸಾಚುಸೆಟ್ಸ್‌ನ ಆಮ್‍ಹರ್ಸ್ಟ್ ಕಾಲೇಜಿಗೆ ಸೇರಲು ಕ್ರೀಡೆಗೆ ಸಂಬಂಧಿಸಿದ ಒಂದು ವಿದ್ಯಾರ್ಥಿ ವೇತನ ಸಹಾಯ ಮಾಡಿತು. ಈ ಕಾಲೇಜಿನಿಂದ 1926ರಲ್ಲಿ ಪದವಿಯೊಂದಿಗೆ ಹೊರಬಂದು ವೈದ್ಯಕೀಯ ಶಿಕ್ಷಣಕ್ಕೆ ಸೂಕ್ತ ವಿದ್ಯಾ ಸಂಸ್ಥೆಯ ತಲಾಶಿಗಿಳಿದ. ನೀಗ್ರೋ ಒಬ್ಬ ಅಷ್ಟು ಸಲೀಸಾಗಿ ಅಂದು ಬಿಳಿಯರ ಹಿಡಿತದಲ್ಲಿದ್ದ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆಯುವುದು ಸಾಧ್ಯವಿರಲಿಲ್ಲ. ಇಂಗ್ಲಿಷಿನಲ್ಲಿ ಉತ್ತಮ ಸಾಧನೆ ಇಲ್ಲ ಎಂಬ ನೆಪವೊಡ್ಡಿ ಹೋವಾರ್ಡ್ ವೈದ್ಯಕೀಯ ಕಾಲೇಜು ಅವನಿಗೆ ಸೀಟು ಕೊಡಲು ತಕರಾರು ತೆಗೆಯಿತು. ಒಂದು ವರ್ಷ ಕಾಯುವುದಾದರೆ ತಾನು ಸೀಟು ನೀಡಬಹುದೆಂದು ಹಾರ್ವರ್ಡ್ ಕಾಲೇಜು ಷರತ್ತು ವಿಧಿಸಿತು. ಈ ಹೋವಾರ್ಡ್, ಹಾರ್ವರ್ಡ್‍ಗಳ ಸಹವಾಸವೇ ಬೇಡವೆಂದು ಚಾರ್ಲ್ಸ್ ಕೆನಡಾದ ಮಾಂಟ್ರಿಯಲ್‍ನಲ್ಲಿರುವ ಮ್ಯಾಕ್‍ಗಿಲ್ ಯೂನಿವರ್ಸಿಟಿ ಮೆಡಿಸಿನ್ ಕಾಲೇಜಿಗೆ ಸೇರಿದ. ಅಲ್ಲಿ ಕರಿಯರನ್ನು ಸಹಾನುಭೂತಿಯಿಂದ ಕಾಣುವ ಪರಿಪಾಠವಿತ್ತು. ಅಲ್ಲಿಯೂ ಚಾರ್ಲ್ಸ್‌ನ ಕ್ರೀಡಾಭಿರುಚಿ ಕಡಿಮೆಯಾಗಲಿಲ್ಲ. ಕಾಲೇಜಿಗೇ ಅತ್ಯುತ್ತಮ ಕ್ರೀಡಾಪಟು ಎಂಬ ಪ್ರಶಂಸೆಗೆ ಪಾತ್ರನಾದ. ಓದಿನಲ್ಲೂ ಹಿಂದೆ ಬೀಳಲಿಲ್ಲ. ಅವನನ್ನು ಹಲವು ಶೈಕ್ಷಣಿಕ ಬಹುಮಾನಗಳು, ಫೆಲೋಶಿಪ್‍ಗಳು ಅರಸಿ ಬಂದವು. ಇಲ್ಲಿದ್ದಾಗಲೇ ರಕ್ತದ ಬಗ್ಗೆ ಅಧ್ಯಯನ ನಡೆಸಬೇಕೆಂಬ ಆಸಕ್ತಿ ಅವನಿಗೆ ಮೊದಲ ಬಾರಿ ಮೊಳೆಯಿತು. 1933ರಲ್ಲಿ 127 ವಿದ್ಯಾರ್ಥಿಗಳಿದ್ದ ತರಗತಿಯಲ್ಲಿ ಎರಡನೆ ರ್ಯಾಂಕಿನೊಂದಿಗೆ Doctor of Medicine ಮತ್ತು Master of Surgery ಪದವಿಗಳನ್ನು ಪಡೆದ.
……ನಮ್ಮ ಬಹುಪಾಲು ಶಕ್ತಿ ಉಸಿರುಗಟ್ಟಿಸುವ ಪರಿಸರವನ್ನು ಎದುರಿಸುವುದರಲ್ಲೆ ವ್ಯಯವಾಗಿಬಿಡುತ್ತದೆ. ಉಳಿದ ಅತಿ ಕಮ್ಮಿ ಶಕ್ತಿಯನ್ನೇ ನಾವು ಹೊಸ ವಿಚಾರ ಮತ್ತು ವಸ್ತುಗಳನ್ನು ಸೃಷ್ಟಿಸಲು ಬಳಸಬೇಕು. ಕರಿಯನೊಬ್ಬ ತನ್ನ ಸುತ್ತ ಎದ್ದಿರುವ ಎತ್ತರದ ಗೋಡೆಗಳನ್ನು ಒಡೆದು ಹೊರಬರಬೇಕೆಂದರೆ ನಿಜಕ್ಕೂ ಅವನು ಸಮಾಜಕ್ಕೆ ಅಸಾಧಾರಣ ರಚನಾತ್ಮಕ ಕೊಡುಗೆ ನೀಡಬೇಕಾಗುತ್ತದೆ. ಆದ್ದರಿಂದ ವಿಜ್ಞಾನದ ಪ್ರತಿಯೊಬ್ಬ (ಕರಿಯ) ವಿದ್ಯಾರ್ಥಿಯೂ ತನ್ನದೇ ಸಾಮರ್ಥ್ಯದ ಮೂಲಕ ತನ್ನನ್ನು ಬಂಧಿಸಿದ ಗೋಡೆಗಳ ಒಂದೆರಡು ಇಟ್ಟಿಗೆಗಳನ್ನಾದರೂ ಒಡೆಯುತ್ತ ಸಾಗಿದರೆ ತಾರತಮ್ಯದ ಗೋಡೆಗಳು ಚೂರುಚೂರಾಗಿ ಒಂದು ದಿನ ಸಂಪೂರ್ಣ ಸ್ವಾತಂತ್ರ್ಯ ಖಚಿತವೆಂದು ನಾನು ಭಾವಿಸಿದ್ದೇನೆ……ಡಾ: ಚಾರ್ಲ್ಸ್ ರಿಚರ್ಡ್ ಡ್ರ್ಯೂ
ಆ ದಿನಗಳಲ್ಲಿ ಬಿಳಿಯ ರೋಗಿಗಳು ಕರಿಯ ವೈದ್ಯರಿಂದ ಚಿಕಿತ್ಸೆ ಪಡೆಯಲು ಬಯಸುತ್ತಿರಲಿಲ್ಲ. ಅಮೆರಿಕದ ಆಸ್ಪತ್ರೆಗಳಲ್ಲಿ ಚಾರ್ಲ್ಸ್‌ಗೆ ನೌಕರಿ ದೊರೆಯುವುದು ಅಷ್ಟು ಸರಳವಿರಲಿಲ್ಲ. ಹೋವಾರ್ಡ್ ಕಾಲೇಜಿನಲ್ಲಿ ರೋಗಶಾಸ್ತ್ರ (Pathology) ದ ಅರೆಕಾಲಿಕ ಬೋಧಕನಾಗಿ ಕೆಲಸ ಮಾಡುತ್ತ ಫ್ರೀಡ್ಮೆನ್ಸ್ ಕಾಲೇಜಿನಲ್ಲಿ ಶಸ್ತ್ರಕ್ರಿಯೆ (Surgery) ಯನ್ನು ಬೋಧಿಸಿದ. ಮೂರು ವರ್ಷ ಎಡ್ವರ್ಡ್ ಲೀ ಹೊವೆಸ್ ಅವರಲ್ಲಿ ಸರ್ಜರಿಯಲ್ಲಿ ಹೆಚ್ಚಿನ ತರಬೇತಿ ಪಡೆದ. ಉದಯೋನ್ಮುಖ ಪ್ರತಿಭಾನ್ವಿತರನ್ನು ಸಂಶೋಧನೆಯ ಕಡೆಗೆ ಉತ್ತೇಜಿಸಲೆಂದು ರಾಕ್ಫೆಲರ್ ಪ್ರತಿಷ್ಠಾನ ನೀಡುವ ವಿದ್ಯಾರ್ಥಿವೇತನವು ಅವನನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರೆಸ್ಬೆಟೆರಿಯನ್ ಕಾಲೇಜಿಗೆ ಕರೆತಂದಿತು. ಅಲ್ಲಿ ಜಾನ್ ಸ್ಕಡರ್ ಎಂಬುವವರ ಮಾರ್ಗದರ್ಶನದಲ್ಲಿ ರಕ್ತದ ರಸಾಯನ ಶಾಸ್ತ್ರ, ಅದರ ಸಂರಕ್ಷಣೆ ಮತ್ತು ಪೂರಣ (transfusion)ದ ಬಗ್ಗೆ ಸಂಶೋಧನೆ ನಡೆಸಿದ. ಇವರಿಬ್ಬರ ನೇತೃತ್ವದಲ್ಲಿ ಕಾಲೇಜಿನ ಮೊದಲ ಪ್ರಾಯೋಗಿಕ ರಕ್ತದ ಬ್ಯಾಂಕ್ ಆರಂಭಗೊಂಡಿತು. ಜೀವಕೋಶಗಳನ್ನೆಲ್ಲ ತೆಗೆದ ರಕ್ತದ ದ್ರವಭಾಗವಾದ ಪ್ಲಾಸ್ಮಾ ಅನ್ನು ಒಣಗಿಸಿ ದೀರ್ಘಕಾಲ ಸಂರಕ್ಷಿಸಿ ಬೇಕೆಂದಾಗ ಬಳಸುವ ವಿಧಾನವನ್ನು ಚಾರ್ಲ್ಸ್ ಅಭಿವೃದ್ಧಿಪಡಿಸಿದ. ಈ ವಿಧಾನವೇ ರಕ್ತದ ಬ್ಯಾಂಕ್ ಪರಿಕಲ್ಪನೆಗೆ ಮೂಲವಾಯಿತು. ಮುಂದೆ ಚಾರ್ಲ್ಸ್ ನೆರವಿನಿಂದ ಬ್ರಿಟನ್ ತನ್ನ ಮೊಟ್ಟ ಮೊದಲ ರಕ್ತದ ಬ್ಯಾಂಕನ್ನು ಆರಂಭಿಸಿತು.
ರಕ್ತಬ್ಯಾಂಕಿಗೆ ಸಂಬಂಧಿಸಿದ ಸಂಶೋಧನಾ ಥೀಸಿಸ್‍ಗಾಗಿ 1940ರಲ್ಲಿ ಚಾರ್ಲ್ಸ್‌ಗೆ ವೈದ್ಯಕೀಯ ಡಾಕ್ಟೊರೇಟ್ ಪದವಿ ದೊರೆಯಿತು. ಕೊಲಂಬಿಯಾ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಆ ಪದವಿ ಪಡೆದ ಮೊದಲ ನೀಗ್ರೋ ಚಾರ್ಲ್ಸ್ ಆಗಿದ್ದ (ಹ್ಞಾಂ, ನನಗಿಲ್ಲಿ ನಮ್ಮ ಅಂಬೇಡ್ಕರ್ ನೆನಪಾಗುತ್ತಾರೆ. ಅವರು ಓದಿದ ವಿಶ್ವವಿದ್ಯಾನಿಲಯವಿದು. 1927ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಅವರು ಪಿ.ಎಚ್.ಡಿ. ಪದವಿ ಪಡೆದಿದ್ದರು. 1952ರಲ್ಲಿ ‘ಮಹಾನ್ ಸಮಾಜ ಸುಧಾರಕ’ ಮತ್ತು ‘ಜಗತ್ತಿನ ಅಸದೃಶ ವಿದ್ವಾಂಸ’ ಎಂದು ಗುರ್ತಿಸಿ ಅಂಬೇಡ್ಕರ್ ಅವರಿಗೆ ಕೊಲಂಬಿಯಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟೊರೇಟ್ ನೀಡಿ ಸನ್ಮಾನಿಸಿತ್ತು. ಇಂತಹ ಗೌರವಕ್ಕೆ ಪಾತ್ರರಾದ ಏಕೈಕ ಭಾರತೀಯ ಬಿ.ಆರ್.ಅಂಬೇಡ್ಕರ್).
1939ರ ಸೆಪ್ಟೆಂಬರ್ 23ರಂದು ಚಾರ್ಲ್ಸ್‌ನ ಬದುಕಿಗೆ ಪ್ರೊಫೆಸರ್ ಮಿನ್ನಿ ಲೆನೊರ್ ರಾಬ್ಬಿನ್ಸ್ ಪ್ರವೇಶವಾಯಿತು. ಈ ದಂಪತಿಗಳಿಗೆ ನಾಲ್ಕು ಮಕ್ಕಳಾದವು. ಮೂವರು ಹೆಣ್ಣು ಮಕ್ಕಳು, ಒಬ್ಬ ಮಗ. ಅದೊಂದು ನೆಮ್ಮದಿ ತುಂಬಿದ ಸ್ವಯಂಪರಿಪೂರ್ಣ ಕುಟುಂಬವಾಗಿತ್ತು.
***
‘ಬ್ರಿಟನ್‍ಗಾಗಿ ರಕ್ತ’ (Blood for Britain) ಯೋಜನೆ
ಸುವ್ಯವಸ್ಥಿತ ರಕ್ತದ ಬ್ಯಾಂಕ್ ಸ್ಥಾಪನೆಯಿಂದಾಗಿ ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಚಾರ್ಲ್ಸ್‌ನನ್ನು ಮಹತ್ವಪೂರ್ಣ ಸಂಶೋಧಕ ಎಂದು ಗುರ್ತಿಸಲಾಯಿತು. ಅವನು ಪ್ರಸಿದ್ಧಿಯ ಶಿಖರ ಏರುವ ಹೊತ್ತಿಗೆ ಯುರೋಪು ಎರಡನೇ ಮಹಾಯುದ್ಧದ ಸುಳಿಗೆ ಸಿಲುಕಿತ್ತು. ಬ್ರಿಟನ್ ಹಿಟ್ಲರನ ದಾಳಿಗೆ ತತ್ತರಿಸುತ್ತಿತ್ತು. ಅದರ ಲಕ್ಷಾಂತರ ಅರೆಜೀವದ ಸೈನಿಕರು ಮತ್ತು ನಾಗರೀಕರು ರಕ್ತನಷ್ಟದಿಂದ ಕೊನೆಯುಸಿರೆಳೆಯದಂತೆ ಮಾಡಬೇಕಿದ್ದರೆ ಅಪಾರ ಪ್ರಮಾಣದ ರಕ್ತ ತುರ್ತಾಗಿ ಬೇಕಿತ್ತು. ಬ್ರಿಟನ್ ಒಂದರಲ್ಲೆ ಆ ಪ್ರಮಾಣದ ರಕ್ತ ಲಭ್ಯವಿರಲಿಲ್ಲ. ಅದು ಹೆಚ್ಚಿನ ರಕ್ತಕ್ಕೆ ಅಮೆರಿಕಾಕ್ಕೆ ಮೊರೆಯಿಟ್ಟಿತು. ಆಗ ರೂಪುಗೊಂಡದ್ದೆ ‘ಬ್ರಿಟನ್‍ಗಾಗಿ ರಕ್ತ’ (Blood for Britain) ಯೋಜನೆ. ಈ ಯೋಜನೆಗೆ ಚಾರ್ಲ್ಸ್‌ನನ್ನು ವೈದ್ಯಕೀಯ ಮೇಲ್ವಿಚಾರಕನೆಂದು ನೇಮಿಸಲಾಯಿತು.
ರಕ್ತದ ಪ್ಲಾಸ್ಮಾ ಸಂಗ್ರಹಣೆಗೆ ಸಮರೋಪಾದಿ ಸಿದ್ಧತೆಗಳು ಶುರುವಾದವು. ನ್ಯೂಯಾರ್ಕಿನ ಆಸ್ಪತ್ರೆಗಳಲ್ಲಿ ರಕ್ತದಾನ ಅವ್ಯಾಹತವಾಗಿ ಜರುಗಿತು. 1941ರ ಜನವರಿ ಹೊತ್ತಿಗೆ 14,556 ದಾನಿಗಳಿಂದ ರಕ್ತ ಸಂಗ್ರಹಿಸಿ ಅದರಿಂದ 5000 ಲೀಟರಿಗೂ ಹೆಚ್ಚಿನ ಪ್ಲಾಸ್ಮಾ ಅನ್ನು ಪಡೆದು ಅಮೆರಿಕಾದ ರೆಡ್ ಕ್ರಾಸ್ ಸಂಸ್ಥೆಯ ನೇತೃತ್ವದಲ್ಲಿ ಬ್ರಿಟನ್ನಿಗೆ ಕಳುಹಿಸಲಾಯಿತು. ಒಮ್ಮೆಲೆ ಪಡೆದ ಇಷ್ಟು ದೊಡ್ಡ ಪ್ರಮಾಣದ ರಕ್ತವನ್ನು ಯಾವುದೇ ಬಗೆಯ ಸೋಂಕಿಗೆ ಒಳಗಾಗದಂತೆ ರಕ್ಷಿಸುವುದು ಅಂದು ಲಭ್ಯವಿದ್ದ ವಿಧಾನಗಳಲ್ಲಿ ಸಾಧ್ಯವಿರಲಿಲ್ಲ. ಚಾರ್ಲ್ಸ್ ತರಾತುರಿಯಲ್ಲಿ ಹೊಸದೇ ವಿಧಾನಗಳನ್ನು ಆವಿಷ್ಕರಿಸಬೇಕಾಯಿತು. ಸುಮಾರು ಐದು ತಿಂಗಳ ಯೋಜನೆಯ ಅವಧಿಯಲ್ಲಿ ಅವನು ಹಗಲಿರುಳೆನ್ನದೆ ದುಡಿದನು. ಮೊದಲ ಹಂತದ ಯೋಜನೆಯ ಅಂತಿಮ ವರದಿಯನ್ನು ಅವನು ನೀಡಿದಾಗ ಅವನ ತೀವ್ರ ಪಾಲ್ಗೊಳ್ಳುವಿಕೆ ಮತ್ತು ಉತ್ಸಾಹ ಎಲ್ಲರನ್ನು ದಂಗುಬಡಿಸಿತ್ತು. ಅಗಾಧ ಪ್ರಮಾಣದಲ್ಲಿ ರಕ್ತವನ್ನು ಸುರಕ್ಷಿತವಾಗಿ ಸಂಗ್ರಹಿಸಿ ಮತ್ತು ಸಂರಕ್ಷಣೆ ಮಾಡಬಹುದೆನ್ನುವುದನ್ನು ಮನುಕುಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಾರ್ಲ್ಸ್ ಸಾಬೀತು ಪಡಿಸಿದ್ದನು. ಅವನ ಸಾಧನೆ ಜಗತ್ತಿನ ರಕ್ತ ವಿಜ್ಞಾನಿಗಳನ್ನು ವಿಪತ್ತಿನ ಸಮಯದಲ್ಲಿ ಒಟ್ಟಾಗಿ ಕೆಲಸಮಾಡಲು ಪ್ರೇರೇಪಿಸಿದ್ದಲ್ಲದೆ ಹೆಚ್ಚಿನ ಸಂಶೋಧನೆಗಳಿಗೆ ಹಾದಿಗಳನ್ನು ತೆರೆದಿಟ್ಟಿತು.
ದಾನಿಗಳಿಂದ ರಕ್ತ ಸಂಗ್ರಹಿಸುವ ಸಂದರ್ಭದಲ್ಲಿ ವಾಹನಗಳನ್ನು ಬಳಸಿ ‘ಸಂಚಾರಿ ರಕ್ತ ಸಂಗ್ರಹಣಾ ಘಟಕ’ಗಳನ್ನು ಚಾರ್ಲ್ಸ್ ಆರಂಭಿಸಿದ್ದು ಒಂದು ವಿನೂತನ ಪ್ರಯತ್ನವಾಗಿತ್ತು. ಈ ಪ್ರಯತ್ನ ರಕ್ತದಾನದ ಮಹತ್ವವನ್ನು ಮನೆ ಮನೆಗೆ ತಿಳಿಸಲು ಸಹಾಯಕವಾಯಿತು. ರಕ್ತ ದಾನವೆಂಬ ಸಾಮೂಹಿಕ ಕ್ರಿಯೆ ಜನರನ್ನು ಒಂದು ಮಹತ್ತರ ಆದರ್ಶದ ನೆರಳಿನಡಿ ಒಗ್ಗೂಡಿಸಲು ನೆಪವಾಯಿತು. ಬಿಳಿಯ-ಕರಿಯ, ಆಸ್ತಿಕ-ನಾಸ್ತಿಕ, ಹೆಣ್ಣು-ಗಂಡು, ಹಿರಿಯ-ಕಿರಿಯ, ಮೂಲನಿವಾಸಿ-ಪರದೇಸಿ ಎಂಬ ಭೇದಗಳಿಲ್ಲದೆ ಜನತೆ ನಾವೆಲ್ಲ ಮನುಷ್ಯರು ಎಂದು ಪರಿಭಾವಿಸಿಕೊಂಡು ರಕ್ತದಾನ ಮಾಡಲು ಅಪೂರ್ವ ಪ್ರೇರಣೆಯಾಗಿತ್ತು. ರಕ್ತದಿಂದ ಪಡೆದ ಪ್ಲಾಸ್ಮಾ ಅನ್ನು ಒಣಗಿಸಿ, ಹರಳುಗಟ್ಟಿಸಿ ವಿಶೇಷ ಸೀಸೆಗಳಲ್ಲಿ ತುಂಬಲಾಗುತ್ತಿತ್ತು. ದ್ರವರೂಪದ ಪೂರ್ಣ ರಕ್ತಕ್ಕಿಂತ ಒಣ ಪ್ಲಾಸ್ಮಾದ ನಿರ್ವಹಣೆ ಎಲ್ಲ ಬಗೆಯಲ್ಲೂ ಸುಲಭವಿತ್ತು. ಚಾರ್ಲ್ಸ್‌ನ ತಂಡ ಮತ್ತು ರೆಡ್ ಕ್ರಾಸ್ ಸಂಸ್ಥೆ ಬ್ರಿಟನ್ನಿಗೆ ಕಳುಹಿಸಿದ ಪ್ರತಿ ಡಬ್ಬಿಯಲ್ಲಿ 400 ಸಿ.ಸಿ. ಗಾತ್ರದ ಎರಡು ಸೀಸೆಗಳಿರುತ್ತಿದ್ದವು. ಒಂದು ಘನರೂಪದ ಪ್ಲಾಸ್ಮಾ ಇರುವ ಸೀಸೆಯಾದರೆ ಇನ್ನೊಂದರಲ್ಲಿ ಅದನ್ನು ದ್ರವರೂಪಕ್ಕೆ ತರಲು ಅಗತ್ಯವಿರುವ ಭಟ್ಟಿ ಇಳಿಸಿದ ನೀರು (distilled water) ಇರುತ್ತಿತ್ತು. ಮುಚ್ಚಳ ತೆಗೆದ ಮೂರೇ ನಿಮಿಷಗಳಲ್ಲಿ ಎರಡನ್ನೂ ಬೆರೆಸಿ ಫಲಾನುಭವಿಗೆ ನೀಡಲು ಸಜ್ಜುಗೊಳಿಸ ಬಹುದಾಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ಈ ಮಿಶ್ರಣ ತಾಜಾ ಆಗಿ ಉಳಿಯುತ್ತಿತ್ತು. ಮಹಾಯುದ್ಧ ಮುಗಿಯುವ ಹೊತ್ತಿಗೆ ರೆಡ್ ಕ್ರಾಸ್ ಸಂಸ್ಥೆ ಬ್ರಿಟನ್ನಿನ 60 ಲಕ್ಷ ಫಲಾನುಭವಿಗಳಿಗೆ ಸಾಲುವಷ್ಟು ಪ್ಲಾಸ್ಮಾ ಅನ್ನು ಸಂಗ್ರಹಿಸಿ ಕಳುಹಿಸಿತ್ತು.
ಚಾರ್ಲ್ಸ್‌ನ ತೀವ್ರ ಪಾಲ್ಗೊಳ್ಳುವಿಕೆಯ ಹೊರತಾಗಿಯೂ ‘ಬ್ರಿಟನ್ನಿಗಾಗಿ ರಕ್ತ’ದ ಯೋಜನೆ ಶುರುವಿನಿಂದಲೂ ಜನಾಂಗೀಯ ಭೇದದ ಸೋಂಕಿಗೆ ಒಳಗಾಯಿತು. ಅಮೆರಿಕಾದ ಮಿಲಿಟರಿ ಇಲಾಖೆಯು ಬಿಳಿಯರ ಪ್ಲಾಸ್ಮಾ ಮತ್ತು ಕರಿಯರ ಪ್ಲಾಸ್ಮಾಗಳನ್ನು ಪ್ರತ್ಯೇಕಿಸಿ ಬ್ರಿಟನ್ನಿಗೆ ಕಳುಹಿಸಬೇಕೆಂಬ ನಿರ್ದೇಶನವನ್ನೇ ನೀಡಿತ್ತು! ಬ್ರಿಟೀಷರು ಮೊದಲ ಆದ್ಯತೆಯಾಗಿ ಬಿಳಿಯರ ಪ್ಲಾಸ್ಮಾವನ್ನೆ ಬಳಸಿಕೊಳ್ಳಲಿ, ಅಲ್ಲಿನ ಕರಿಯರಿಗೆ ಕರಿಯರ ಪ್ಲಾಸ್ಮಾವನ್ನೇ ನೀಡಲಿ ಎಂಬ ಸಂದೇಶ ಈ ನಿರ್ದೇಶನದ ಹಿಂದಿದ್ದ ಹುನ್ನಾರವಾಗಿತ್ತು. ಅಮೆರಿಕಾದ ರೆಡ್ ಕ್ರಾಸ್ ಕರಿಯರಿಂದ ರಕ್ತ ಪಡೆಯದೆ ಬರೀ ಬಿಳಿಯರ ರಕ್ತವನ್ನೇ ಕಳುಹಿಸಿಕೊಡುವುದೆಂದು ಮೊದಲಿಗೆ ತೀರ್ಮಾನಿಸಿತ್ತು. ಆದರೆ ಕರಿಯರ ಸಂಘಟನೆಗಳಿಂದ ಮತ್ತು ಅವರ ನೇತೃತ್ವದ ಪತ್ರಿಕೆಗಳಿಂದ ಈ ನಿಲುವಿಗೆ ಜೋರು ಪ್ರತಿಭಟನೆ ವ್ಯಕ್ತವಾಯಿತು. ಈ ಪ್ರತಿಭಟನೆಗೆ ಹೆದರಿ ಕರಿಯರ ಪ್ಲಾಸ್ಲಾಮವನ್ನೂ ಕಳುಹಿಸುವುದು, ಆದರೆ ಪ್ರತ್ಯೇಕ ಇರಿಸಿ ಕಳುಹಿಸುವುದು ಎಂಬ ನಿರ್ಧಾರಕ್ಕೆ ರೆಡ್ ಕ್ರಾಸ್ ಬಂತು. ಹೇಗೂ ಮಿಲಿಟರಿ ಇಲಾಖೆಯ ನಿರ್ದೇಶನವೂ ಹೀಗೇ ಇತ್ತಲ್ಲ. ಚಾರ್ಲ್ಸ್ ಡ್ರ್ಯೂ ಈ ನಿಲುವನ್ನು ‘ವ್ಯಕ್ತಿಯಿಂದ ವ್ಯಕ್ತಿಗೆ ರಕ್ತದ ಗುಂಪುಗಳು ಬೇರೆ ಬೇರೆ ಇರಬಹುದು. ಹಾಗೆಂದ ಮಾತ್ರಕ್ಕೆ ರಕ್ತದಲ್ಲಿ ಕರಿಯ ರಕ್ತ, ಬಿಳಿಯ ರಕ್ತ ಎಂಬ ವರ್ಗೀಕರಣವಿಲ್ಲ’ ಎಂದು ಕಟುವಾಗಿ ಪ್ರತಿಕ್ರಿಯಿಸಿ ರೆಡ್ ಕ್ರಾಸ್‍ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದನು. ಆ ಹೊತ್ತಿಗಾಗಲೇ ಯೋಜನೆಯಲ್ಲಿ ತನ್ನ ಪಾಲಿನ ಜವಾಬುದಾರಿಯನ್ನು ಅವನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ್ದನು ಎಂಬುದನ್ನು ನಾವು ಮರೆಯಬಾರದು. ಅಮೆರಿಕಾದ ‘ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯದ ಆಡಳಿತ’ವು ಚಾರ್ಲ್ಸ್‌ನ ನಿರ್ಗಮನಕ್ಕೆ ‘ಅವನು ಬಹಳ ಕಾಲ ಕುಟುಂಬದಿಂದ ದೂರ ಉಳಿದಿದ್ದು ಈಗ ತನ್ನ ಕುಟುಂಬದವರೊಡನೆ ಸೇರಲು ರಾಜೀನಾಮೆ ನೀಡಿ ಹೋಗಿದ್ದಾನೆ’ ಎಂದು (ಸುಳ್ಳು) ಸಮಜಾಯಿಷಿ ನೀಡಿ ಬಿಳಿಯರಿಗಾದ ಅವಮಾನದ ತೀವ್ರತೆಯನ್ನು ತಗ್ಗಿಸಲು ಕೊಂಚ ಪ್ರಯತ್ನ ನಡೆಸಿತು. ಆದರೆ ಚಾರ್ಲ್ಸ್ ಇಂತದ್ದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. 1942ರಲ್ಲಿ ಹೊವಾರ್ಡ್ ವಿಶ್ವ ವಿದ್ಯಾನಿಲಯಕ್ಕೆ ತೆರಳಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡನು. ಸ್ಥಳೀಯ ಮತ್ತು ಹೆಸರಾಂತ ವೈದ್ಯಕೀಯ ಸಂಘ, ಸಮಿತಿ, ಮಂಡಳಿಗಳಿಂದ ಕರಿಯ ವೈದ್ಯರನ್ನು ಹೊರಹಾಕುವ ಬಿಳಿಯರ ಪ್ರಯತ್ನವನ್ನು ವಿರೋಧಿಸುವ ಚಳವಳಿಯಲ್ಲಿ ಚಾರ್ಲ್ಸ್ ಕಡೆತನಕ ಕ್ರಿಯಾಶೀಲನಾಗಿದ್ದನು.
ಪ್ರಶಸ್ತಿ ಮತ್ತು ಪುರಸ್ಕಾರಗಳು
37ರ ಚಿಕ್ಕ ಹರೆಯದಲ್ಲೆ ಚಾರ್ಲ್ಸ್‌ನನ್ನು ‘ರಕ್ತ ಬ್ಯಾಂಕಿನ ಪಿತಾಮಹ’ ಎಂದು ಜನ ಗುರ್ತಿಸ ತೊಡಗಿದರು. ಆದರೆ ಚಾರ್ಲ್ಸ್ ಮಾತ್ರ ಬೀಗಿಹೋಗಲಿಲ್ಲ. ಎಲ್ಲರ ಪಾಲ್ಗೊಳ್ಳುವಿಕೆಯಿಂದ ‘ಬ್ರಿಟನ್ನಿಗಾಗಿ ರಕ್ತʼದಂತಹ ಯೋಜನೆ ಯಶಸ್ವಿಯಾಯಿತು ಎಂದು ಕಡೆತನಕ ಹೇಳಿಕೊಂಡು ಬಂದನು. ರಕ್ತದ ಗುಂಪು ಬೇರೆ ಬೇರೆ ಇದ್ದರೂ ಎಲ್ಲರ ಪ್ಲಾಸ್ಮಾ ಮಾತ್ರ ಒಂದೇ ಮತ್ತು ಅನೇಕ ಸಾರಿ ಫಲಾನುಭವಿಗೆ ಪೂರ್ಣ ರಕ್ತಕ್ಕಿಂತ ಬರಿಯ ಪ್ಲಾಸ್ಮಾವನ್ನು ನೀಡಿಯೂ ಜೀವ ಉಳಿಸಬಹುದು ಎಂಬುದು ಚಾರ್ಲ್ಸ್‌ನ ಮಹತ್ವದ ಸಂಶೋಧನೆಗಳಾಗಿದ್ದವು.
ಪ್ಲಾಸ್ಮಾದ ಮೇಲಿನ ಸಂಶೋಧನೆಗಾಗಿ ‘ವರ್ಣೀಯ ಜನರ ಏಳಿಗೆಗಾಗಿರುವ ರಾಷ್ಟ್ರೀಯ ಒಕ್ಕೂಟದ’ ಸ್ಪಿಂಗಾರ್ನ್ ಪದಕ, ವೈದ್ಯಕೀಯ ವಿಜ್ಞಾನದ ಸಂಶೋಧನೆಗಾಗಿ ಇ.ಎಸ್.ಜೋನ್ಸ್ ಪ್ರಶಸ್ತಿ, ವರ್ಜೀನಿಯ ಮತ್ತು ಆಮ್ಹೆರ್ಸ್ಟ್ ಕಾಲೇಜುಗಳಿಂದ ಗೌರವ ಡಾಕ್ಟೋರೇಟ್ ಹೀಗೆ ಎಲ್ಲೆಡೆಯಿಂದ ಪ್ರಶಸ್ತಿ ಮತ್ತು ಪುರಸ್ಕಾರಗಳು ಚಾರ್ಲ್ಸ್‌ನನ್ನು ಅರಸಿ ಬಂದವು. 1946ರಲ್ಲಿ ಅಂತರರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಮಂಡಳಿಯ ಫೆಲೋ ಆಗಿ ಹಾಗೂ ಅಮೆರಿಕನ್-ಸೋವಿಯೆತ್ ವಿಜ್ಞಾನದ ಸಮಿತಿಗೆ ಸದಸ್ಯನಾಗಿಯೂ ಅವನನ್ನು ಆಯ್ಕೆ ಮಾಡಲಾಯಿತು. 1949ರಲ್ಲಿ ಮಹಾಯುದ್ಧೋತ್ತರ ಯುರೋಪಿನ ಹದಗೆಟ್ಟ ಆರೋಗ್ಯ ವ್ಯವಸ್ಥೆಯ ಪುನಶ್ಚೇತನ ಸಮೀಕ್ಷೆಯಲ್ಲಿ ಭಾಗಿಯಾದ ಅಮೆರಿಕಾ ತಂಡದ ಪರವಾಗಿ ಚಾರ್ಲ್ಸ್ ಸೇವೆ ಸಲ್ಲಿಸಿದನು.
ವರ್ಣೀಯ ನೆಲೆಯಲ್ಲಿ ಅದೆಷ್ಟೆ ಅವಮಾನವಿರಲಿ ವೈದ್ಯಕೀಯ ಸೇವೆ ಸಲ್ಲಿಸುವ ಸನ್ನಿವೇಶ ಎದುರಾದಾಗ ಕಹಿ ನೆನಪುಗಳನ್ನು ಬದಿಗಿರಿಸಿ ಕೆಲಸ ಮಾಡುವುದು ಚಾರ್ಲ್ಸ್‌ನ ದೊಡ್ಡತನವಾಗಿತ್ತು. ತಾರತಮ್ಯದ ಇಟ್ಟಿಗೆಗಳಿರಲಿ ಬೃಹತ್ ಗೋಡೆಗಳನ್ನೇ ಬದುಕಿನುದ್ದಕ್ಕೂ ಒಡೆದುಹಾಕುತ್ತ ಬಂದ ಡಾ. ಚಾರ್ಲ್ಸ್ ರಿಚರ್ಡ್ ಡ್ರ್ಯೂ ನಲವತ್ತಾರರ ನಡುಹರೆಯದಲ್ಲಿ 1950ರ ಏಪ್ರಿಲ್ 1ರಂದು ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಾಗ ಜಗತ್ತು ಅಕ್ಷರಶಃ ಒಬ್ಬ ಸಾಹಸಿಯನ್ನು ಕಳೆದುಕೊಂಡಿತ್ತು. ಪ್ರತಿಭೆ ಮತ್ತು ಪ್ರತಿರೋಧಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುತ್ತ ಅಸ್ತಿತ್ವದಲ್ಲಿರುವುದು ಅಷ್ಟು ಸುಲಭವಲ್ಲ. ಅಪಮಾನ ಮತ್ತು ಮನ್ನಣೆ ಎರಡೂ ಒತ್ತರಿಸಿ ಬರುವಾಗ ಯಾವುದಾದರು ಒಂದು ಕಡೆ ಮನಸು ಹೊರಳಿದರೂ ಮೊದಲ ಬಲಿಪಶು ಯಾವಾಗಲೂ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗಳೇ ಆಗಿರುತ್ತವೆ. ಹಾಗಾಗದಂತೆ ಸಮತೋಲನ ಕಾಯ್ದುಕೊಂಡು ಮನುಕುಲಕ್ಕೆ ರಕ್ತಸಮಾನತೆಯ ಸಂದೇಶ ನೀಡಿದ ಚಾರ್ಲ್ಸ್ ಇಂದಿಗೂ ಎಂದಿಗೂ ಮಹತ್ತರ ಕಾಳಜಿಯ ಸೆಲೆ.
ಕೆ.ಎಸ್.ರವಿಕುಮಾರ್, ಹಾಸನ
ವಿಜ್ಞಾನ ಲೇಖಕರು. ಮೊ : 9964604297