ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಅಕ್ಟೋಬರ್ 1 ರಿಂದ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ. ನಗರದ ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಹಿಂಪಡೆದಿರುವುದರಿಂದ ಉದ್ಯೋಗಿಗಳೆಲ್ಲರೂ ಕಡ್ಡಾಯವಾಗಿ ಕಚೇರಿಗೆ ಆಗಮಿಸಿ ಕೆಲಸ ನಿರ್ವಹಿಸಬೇಕಾಗಿದೆ.
ಇದರಿಂದ ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆದುಪ್ಪಟ್ಟಾಗುವ ಸಾಧ್ಯತೆಗಳಿದ್ದು ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರಿನ ಔಟರ್ ರಿಂಗ್ ರೋಡ್ (ಒಆರ್ ಆರ್) ನಲ್ಲಿ ಸುಮಾರು 500 ಪ್ರತಿಷ್ಠಿತ ಐಟಿ ಕಂಪನಿಗಳಿದ್ದು, 2,000 ಕಚೇರಿಗಳನ್ನು ಹೊಂದಿವೆ. ಈ ಪೈಕಿ ಶೇ. 80ರಷ್ಟು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕಚೇರಿಗೆ ಆಗಮಿಸಿ ಕೆಲಸ ನಿರ್ವಹಿಸಲು ಸೂಚಿಸಿವೆ. ಇದರಿಂದಾಗಿ, ಔಟರ್ ರಿಂಗ್ ರೋಡ್‌ನಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟುವ ಸಾಧ್ಯತೆಗಳಿವೆ. ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ, ಇದೇ ಅವಧಿಯಲ್ಲಿ ಈ ರಸ್ತೆಯಲ್ಲಿ ಜೂನ್ 2024 ಕ್ಕೆ ಹೋಲಿಸಿದರೆ 2025 ಜೂನ್ ವೇಳೆಗೆ ಶೇ. 45 ರಷ್ಟು ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬುಧವಾರ ಈ ರಸ್ತೆಯಲ್ಲಿ ಸಂಚರಿಸಿದ ವಾಹನಗಳ ಸಂಖ್ಯೆ 1.2 ಲಕ್ಷಕ್ಕೆ ಏರಿಕೆಯಾಗಿದೆ. ವರ್ಕ್ ಫ್ರಮ್ ಹೋಮ್ ರದ್ದತಿಯಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಂಚಾರ ತಜ್ಞರು ಊಹಿಸಿದ್ದಾರೆ.
ಈ ಸಮಸ್ಯೆಯನ್ನು ಸಂಚಾರ ಪೊಲೀಸರು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.