ಇಂದಿನ ಮಹಿಳಾ ಸಾಹಿತ್ಯದಲ್ಲಿ ಅಸಮಾನತೆಯ ದಾಂಪತ್ಯದ ಕುರಿತು ನಿರಾಕರಣೆ ಇದೆ. ಶೀಲವೆಂದರೆ ಹೆಣ್ಣು ಎಂಬ ಕಲ್ಪನೆಯನ್ನು ಅದು ನಿರಾಕರಿಸುತ್ತದೆ. ಒತ್ತಾಯದ ಹೇರುವಿಕೆಯ ಕ್ರಮಗಳನ್ನು ವಿರೋಧಿಸುತ್ತದೆ. ಅಂತಹ ನೂರಾರು ಕವಿತೆಗಳು, ಕಥೆಗಳು ಇಂದಿನ ಸಾಹಿತ್ಯವನ್ನು ಹೊಸ ದೃಷ್ಟಿಕೋನದಲ್ಲಿ ವಿರಚಿಸುತ್ತವೆ – ನಾಗರೇಖಾ ಗಾಂವಕರ, ಉಪನ್ಯಾಸಕರು.
ಅಕ್ಷರಕ್ರಾಂತಿಯೊಂದಿಗೆ ಇಂದಿನ ಸ್ತ್ರೀ ಸಮುದಾಯ ಬೆಳೆದು ಸಂಪೂರ್ಣ ವಿಶಿಷ್ಟ ಮಹಿಳಾ ಶೈಲಿ, ವಸ್ತು ವೈವಿಧ್ಯತೆಯೆಡೆಗೆ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನದೊಂದಿಗೆ ಸ್ತ್ರೀ ಸಾಹಿತ್ಯವೂ ಪುರುಷ ಬಹುತ್ವ ಸಾಹಿತ್ಯದೊಂದಿಗೆ ಸಂವಾದಿಯಾಗಿ ನಿಲ್ಲುವ ನೆಲೆಯನ್ನು ಹುಡುಕುತ್ತಿದೆ. ಸ್ತ್ರೀಯಾತ್ಮಕ ಚಿಂತನೆಗಳು, ಸ್ತ್ರೀ ಸ್ವತಂತ್ರ ಅಭಿವ್ಯಕ್ತಿಯ ಸಂಗತಿಗಳು ಇಂದಿನ ಆಧುನಿಕ ಪ್ರಜ್ಞೆಯ ಕಥೆ ಕಾವ್ಯಗಳಲ್ಲಿ ಹೇರಳವಾಗಿರಬಹುದು. ಆದರೆ ಇದೆಲ್ಲದರ ಮೂಲ ಹುಡುಕಿದರೆ ನಮ್ಮ ಜಾನಪದ ಜಗತ್ತಿನ ಸಾಹಿತ್ಯ ಪ್ರಪಂಚ ಎಷ್ಟು ಪ್ರಜ್ಞಾಪೂರ್ವಕ ಜಗತ್ತಾಗಿತ್ತು ಎಂಬುದನ್ನೂ ನಾವು ಗಮನಿಸಲೇ ಬೇಕಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಮಹಿಳಾ ದಾಖಲೀಕರಣದ ಮೂಲ ಶಿಷ್ಟ ಸಾಹಿತ್ಯವಲ್ಲ. ಗರತಿಯ ಹಾಡುಗಳಲ್ಲಿ ಬೀಸುವ ಹಾಡು, ಹಾಲು ಕರೆಯುವ ಹಾಡು, ಮಗುವ ಮಲಗಿಸುವ ಹಾಡು, ಪತಿಪತ್ನಿ ಸಂಬಂಧದ ಕುರಿತ ಹಾಡು, ಗೆಣೆಯನ ಕುರಿತಾಗಿ ಮೂಡಿದ ಹಾಡು, ಪುರುಷ ದೌರ್ಜನ್ಯ ವಿರೋಧಿಸುವ ಹಾಡುಗಳು ಹೇರಳವಾಗಿ ಸಿಗುತ್ತವೆ. ಇಲ್ಲಿ ಹೆಣ್ಣಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಗರತಿಯೊಬ್ಬಳು ಹೆಣ್ಣು ಮಗುವಿಗೆ ಹಂಬಲಿಸಿ
“ ಗಂಡು ಮಕ್ಕಳು ಒಂಬತ್ತು ಕೊಡು ಸ್ವಾಮಿ,
ಬಂಡೀಯ ಕಳಸಕ್ಕೆ ಒಪ್ಪುವಂತ ಒಬ್ಬ ಹೆಣ್ಣ ಮಗಳ ಕೊಡು ದೇವ”
ಎಂದು ಗರತಿಯೊಬ್ಬಳು ಬೇಡುವ ರೀತಿಯಲ್ಲಿ ಸ್ತ್ರೀಗೆ ಎಂತಹ ಬೆಲೆಯಿತ್ತು ಎಂಬುದು ವೇದ್ಯವಾಗುತ್ತದೆ. ಸೂಕ್ಷ್ಮ ಮನಸ್ಸಿನ ಜನಪದ ಸ್ತ್ರೀ ಆ ಕಾಲದಲ್ಲೆ ಪುರುಷರ ದಬ್ಬಾಳಿಕೆಗೆ ಹೀಗೆ ನುಡಿದ ಹಾಡುಗಳಿವೆ.
“ಅಂಜಿಕೆ ತೋರಿದರೆ ಅಂಜುವ ಮಗಳಲ್ಲ
ಮುಂಜಾವದಾಗ ಹುಲಿಕರಡಿ! ತೋರಿದರೆ
ಅಂಜಿತಿರುಗುವಳ ಮಗಳಲ್ಲ’ ಪುರುಷನ ದಬ್ಬಾಳಿಕೆಗೆ ಹೆದರಿ ಬಾಳುವ ಹೆಣ್ಣು ತಾನಲ್ಲವೆಂದು ಹೇಳುವ ಜನಪದ ಹೆಣ್ಣು ತೋರುವ ಅಗಾಧ ಧೈರ್ಯ ಆಕೆಯಲ್ಲಿನ ಆತ್ಮಾಭಿಮಾನದ ಪ್ರತೀಕ.
ಆನಂತರದ ಶಿಷ್ಟ ಸಾಹಿತ್ಯ ಪರಂಪರೆಯಲ್ಲಿ ನಮ್ಮ ಹಿಂದಿನ ಕವಿಗಳ ವಿರಚಿತ ಕಾವ್ಯಗಳಲ್ಲಿ ಸ್ತ್ರೀಯನ್ನು ಪೂರಕ ಪಾತ್ರವಾಗಿ, ದೇವಿ, ತಾಯಿ, ಇಲ್ಲವೇ ರಕ್ಕಸಿಯ ರೂಪದಲ್ಲಿ ಹೆಚ್ಚು ಕಡಿಮೆ ಕಡೆಯಲಾಗಿದೆ. ಅಂಬೆ ಪಾತ್ರದ ಹೊರತಾಗಿ ಪುರುಷನಿಗೆ ಸೆಡ್ಡು ಹೊಡೆಯುವ ಸ್ತ್ರೀ ಪಾತ್ರಗಳು ನೆನಪಾಗಲಾರವು. ಆದರೆ ಅಂದಿನ ಶಿಷ್ಟ ಸಾಹಿತ್ಯದ ಸ್ತ್ರೀ ಪಾತ್ರಗಳನ್ನು ಇಂದಿನ ಸಾಹಿತ್ಯ ಜಗತ್ತಿನ ಹಲವು ಮಹಿಳಾ ಸಾಹಿತಿಗಳು ಪುನರ್ ರಚನೆಯ ನೆಲೆಯಲ್ಲಿ ಸ್ತ್ರೀಯಾತ್ಮಕ ನೆಲೆಯಲ್ಲಿ ವಿಭಿನ್ನವಾಗಿ ಚಿತ್ರಿಸಿದ್ದಾರೆ
12ನೇ ಶತಮಾನಕ್ಕೆ ಬಂದರೆ ವಚನ ಸಾಹಿತ್ಯದ ಪ್ರಮುಖ ವಚನಗಾರ್ತಿಯರು ಸಾಮಾಜಿಕ ನೆಲೆಯಲ್ಲಿ ಸಾಂಸ್ಕೃತೀಕರಣದ ಹಿನ್ನೆಲೆಯಲ್ಲಿ ಪೋಷಿಸಲ್ಪಟ್ಟ ಸಾಂಪ್ರದಾಯಿಕ ವಿಧಿವಿಧಾನಗಳನ್ನು, ಕಂದಾಚಾರಗಳನ್ನು ವಿರೋಧಿಸಿ ವಚನಗಳನ್ನು ಬರೆದರು. ವಚನಗಾರ್ತಿಯರ ಸ್ವಾಯತ್ತ ನಿಲುವಿಗೆ ಸೋದಾಹರಣವಾಗಿ ‘ಅಮುಗೆ ರಾಯಮ್ಮ’ನ ವಚನ ಹೀಗೆ ಹೇಳುತ್ತದೆ.
‘ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು
ಎನ್ನ ಮನದಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು’
ತನ್ನ ಬದುಕಿನ ಸಕಲಕ್ಕೂ ತಾನೇ ಜವಾಬ್ದಾರಳು. ತನ್ನ ಉದ್ಧಾರ ಯಾವ ಪುರುಷನಿಂದಲೂ ಅಗಬೇಕಾದದ್ದಲ್ಲ ಎಂಬ ಸ್ವಾಯತ್ತ ಪ್ರಜ್ಞೆ ಇಲ್ಲಿದೆ.
ಅಕ್ಕಮಹಾದೇವಿ, ಮುಕ್ತಾಯಕ್ಕನಂತಹ ಹಲವು ವಚನಗಾರ್ತಿಯರು ಅಂದಿನ ಕಾಲಕ್ಕೆ ಸಮಾನತೆ ಅಗತ್ಯವನ್ನು ಹೇರಳವಾಗಿ ತಮ್ಮ ವಚನಗಳಲ್ಲಿ ಮಂಡಿಸಿದ್ದಾರೆ
ಆಧುನಿಕ ಮಹಿಳಾ ಸಾಹಿತ್ಯವನ್ನು ಸಂಪೂರ್ಣ ಮಹಿಳಾ ವಿರಚಿತ ಸಾಹಿತ್ಯದ ಹಿನ್ನೆಲೆಯನ್ನು ವಿಶಿಷ್ಟವಾಗಿ ಮೂರು ನೆಲೆಗಳಲ್ಲಿ ಗುರುತಿಸಬಹುದು. ಮೊದಲಿನ ಸ್ವಾತಂತ್ರ್ಯಪೂರ್ವದ ಮಹಿಳಾ ಸಂವೇದನೆಗಳಲ್ಲಿ ತಮ್ಮ ವ್ಯಕ್ತಿತ್ವ ಮತ್ತು ಸ್ತ್ರೀ ಅನುಭವಿಸುವ ಸಂಕಟಗಳ ಬಗ್ಗೆ ವಿಷಾದವಿದ್ದರೂ, ಪಿತೃಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸದೇ ಕೌಟುಂಬಿಕ ನೆಲೆಯಲ್ಲಿ ಅದನ್ನು ಪೋಷಿಸುವ ಜವಾಬ್ದಾರಿಯನ್ನು ಹೆಣ್ಣೆ ಹೊರಬೇಕೆನ್ನುವ ಅಧೀನ ಭಾವ ಗೋಚರಿಸುತ್ತದೆ. ಅಲ್ಲದೇ ಕೊಡಗಿನ ಗೌರಮ್ಮ, ತಿರುಮಲಾಂಬ, ಸರಸ್ವತಿಬಾಯಿ ರಾಜವಾಡೆ, ತಿರುಮಲೆ ರಾಜಮ್ಮ ಮುಂತಾದವರ ಕೃತಿಗಳಲ್ಲಿ ದಾರ್ಶನಿಕತೆಯ ಕಡೆಗೆ ಹೆಚ್ಚಿನ ಒಲವಿತ್ತು. ಕನ್ನಡದ ಮೊದಲ ಕಾದಂಬರಿ ಎಂದು ಪ್ರಸಿದ್ಧವಾದ ತಿರುಮಲಾಂಬಾನವರು ಬರೆದ ‘ಸುಶೀಲೆ’ಯಾಗಿರಲಿ, ಮಧ್ಯಮವರ್ಗದ ಹೆಣ್ಣುಗಳ ತುಡಿತಗಳು, ಸಾಂಪ್ರದಾಯಿಕ ಚೌಕಟ್ಟಿನಲ್ಲಿನ ತಲ್ಲಣಗಳನ್ನು ಚಿತ್ರಿಸಿ ಬರೆದ ಎಂ. ಕೆ. ಇಂದಿರಾರವರ ಎರಡು ಕನಸು, ಗೆಜ್ಜೆಪೂಜೆ, ಬಿಡುಗಡೆ, ಶುಭಮಂಗಳ ಮುಂತಾದ ಕೃತಿಗಳಾಗಿರಲಿ, ಮಹಿಳೆಯರ ವಿವಿಧ ಮುಖಗಳ ಸಮಸ್ಯೆಗಳನ್ನು ಸಾಮಾಜಿಕ, ಮನೋವೈಜ್ಞಾನಿಕ ನೆಲೆಯ ಕಥಾಹಂದರದೊಳಗೆ ಕಟ್ಟಿಕೊಟ್ಟ ತ್ರಿವೇಣಿಯವರ ಸೋತು ಗೆದ್ದವಳು, ಶರಪಂಜರ, ಬೆಳ್ಳಿಮೋಡ ಮುಂತಾದ ಕಾದಂಬರಿಗಳಲ್ಲಾಗಿರಲಿ, ಅನುಪಮಾ ನಿರಂಜನರ ‘ಮಾಧವಿ’ ಕಾದಂಬರಿಯಾಗಿರಲೀ ಮಹಿಳಾ ಪಾತ್ರಗಳ ಪ್ರಾತಿನಿಧ್ಯವಿದ್ದರೂ, ಅವು ಸಾಮಾಜಿಕ ನಡವಳಿಕೆಗೆ ಅತೀತವಾಗಿ ನಡೆದುಕೊಳ್ಳಲಾರದ ಪಾತ್ರಗಳು. ತಮ್ಮ ದುಃಸ್ಥಿತಿಗೆ ಈ ಹೆಣ್ತನವೇ ಕಾರಣವೆಂಬ ಮನೋಭೂಮಿಕೆಯಲ್ಲಿ ನರಳುವಂಥ ಪಾತ್ರಗಳು. ಅಂದಿನ ಲೇಖಕಿಯರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ಇದ್ದರೂ ಭಾರತೀಯ ಕೌಟಂಬಿಕ ವ್ಯವಸ್ಥೆಯಲ್ಲಿ ಹೆಣ್ಣು ಅನುಭವಿಸುತ್ತಿದ್ದ ಸಂಕಟಗಳ ವಿಜೃಂಭಣೆಯನ್ನಷ್ಟೇ ಕಟ್ಟಿಕೊಟ್ಟರು. ಅದರಿಂದ ಹೊರಬರುವ ಮಾರ್ಗಗಳ ಕುರಿತು ಮೌನವಾದರು.
ಇನ್ನು ಎರಡನೆಯ ತಲೆಮಾರಿಗೆ ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ, ಸ್ವತಂತ್ರ ಆಕಾಂಕ್ಷೆ ಹೊಂದಿದ್ದರೂ ಅದನ್ನು ದಕ್ಕಿಸಿಕೊಳ್ಳುವಲ್ಲಿ ಅಸಮರ್ಥತೆ ಇರುವುದರಿಂದ ಆ ವ್ಯವಸ್ಥೆಯನ್ನು ಮೀರಿ ಬದುಕುವ ಪರಿಸರ ನಿರ್ಮಿತಿಯನ್ನು ಸೃಷ್ಟಿಸಲಾಗದ ಅಸಹಾಯಕತೆಯನ್ನು ಅಭಿವ್ಯಕ್ತಿಸಿದಂತವು. ಉದಾಹರಿಸುವುದಾದರೆ ವೀಣಾ ಶಾಂತೇಶ್ವರರ ‘ಗಂಡಸರು’ ಕಾದಂಬರಿಯ ‘ಶಾಂತಿ’, ನಿರಾಕರಣೆ ಕಥೆಯ ‘ಶಕುಂತಲೆ’, ಗೀತಾ ನಾಗಭೂಷಣರ ‘ಅವ್ವ’ ಕಥೆ, ಹಸಿಮಾಂಸ ಮತ್ತು ಹದ್ದುಗಳು, ಬಿ.ಟಿ ಲಲಿತಾ ನಾಯಕರ ‘ಗತಿ’ ಕಾದಂಬರಿ, ವೈದೇಹಿಯವರ ‘ಅಮ್ಮಚ್ಚಿಯೆಂಬ ನೆನಪು’ ಕಥೆ, ‘ಅಕ್ಕು’ ಕಾದಂಬರಿ, ಸಾರಾ ಅಬೂಬಕ್ಕರ್ ಅವರ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಾದಿಯಾ ಹೀಗೆ ಇವರೆಲ್ಲರ ಪ್ರಮುಖ ಪಾತ್ರಗಳು ಪ್ರತಿಭಟನೆಯ ಪಾತ್ರಗಳಾಗಿದ್ದರೂ, ಅಸ್ತಿತ್ವದ ಹೊಸ ರೂಪದ ಆಕಾಂಕ್ಷೆ ಹೊಂದಿದ್ದರೂ ಸನ್ನಿವೇಶದ ಕೈಗೊಂಬೆಯಂತೆ ಚಿತ್ರಿಸಲ್ಪಟ್ಟಿವೆ. ತಾಯಿಯಾಗಿ, ಗೆಳತಿಯಾಗಿ, ಪತ್ನಿಯಾಗಿ ತನ್ನ ತ್ಯಾಗವನ್ನು ನೀಡಿಯೂ ಜಗತ್ತಿನ ನ್ಯಾಯತಕ್ಕಡಿಯಲ್ಲಿ ಆಕೆಗೆ ಸಿಗದ ಜಯದ ಕುರಿತು ವಿಷಾದವಿದೆ. ಆದರೆ ಇದೇ ತಲೆಮಾರಿನ ಕಾವ್ಯ ಜಗತ್ತಿನಲ್ಲಿ ಆಧುನಿಕ ಕನ್ನಡ ಕಾವ್ಯದ ಮಹಿಳಾ ಕಾವ್ಯದ ನಿರ್ಭಿಡೆಯ ನುಡಿಗಳು ಎನ್ ವಿ. ಭಾಗ್ಯಲಕ್ಷಿಯವರದು ಎನ್ನಬಹುದು. ಅವರ ಒಂದು ಕವನದ ಸಾಲು ಹೀಗೆ ಹೇಳುತ್ತದೆ.
“ಹುಡುಗಿ ಕಾಮದ ಬಗ್ಗೆ ಪದ್ಯ ಬರೆದರೆ
ಮುದುಕರಿಗೆಲ್ಲ ಚಳಿ ಹೊತ್ತಿಸಿದ ಬೆಂಕಿ
ತೀರದ ಬಯಕೆಗಳ ಕೊಳ್ಳಿ
ಹುಡುಗಿ ಕಾಮದ ಬಗ್ಗೆ ಪದ್ಯ ಬರೆದರೆ
ಮುದುಕಿಯರು ಕೆಂಡ ಉಗುಳುತ್ತಾರೆ
ಮುಚ್ಚಿಟ್ಟಿದ್ದು ತೆಗೆದು
ಬಟಾಬಯಲು ಮಾಡಿ ಹೆಣ್ತನದ ಸ್ವಾಭಿಮಾನ ಎಂದೆಲ್ಲ”.
ಯಾವ ಮುಚ್ಚುಮರೆ ತೋರದೆ ಸಾಹಿತ್ಯದ ಒಳಹೊರಗಿನ ತಲ್ಲಣಗಳಿಗೆ ತೆರೆದುಕೊಳ್ಳುವ, ತನ್ನನ್ನು ಲೋಕಕ್ಕೆ ಪ್ರಸ್ತುತ ಪಡಿಸುವ ರೀತಿಗೆ, ತನ್ನ ಅರಿಯುವ ಕ್ರಮಕ್ಕೆ ಇಲ್ಲಿಯ ಸಾಲುಗಳು ಇಂಬುಕೊಡುತ್ತವೆ.
ಇದರ ಮುಂದುವರೆದ ದನಿಯಾಗಿ ಮೂರನೇ ತಲೆಮಾರಿನ ಮಹಿಳಾ ಸಾಹಿತ್ಯ ಭಿನ್ನ ಸಾಂಸ್ಕೃತಿಕ ಸಾಮಾಜಿಕ ಅನುಭವಗಳಿಂದ ಢಾಳಾಗಿ ಗೋಚರಿಸುತ್ತವೆ. ಸ್ತ್ರೀ ಸ್ವತಂತ್ರ ವ್ಯಕ್ತಿತ್ವ ಮತ್ತು ಸ್ವಾಯತ್ತ ನೆಲೆಯಲ್ಲಿ ಪ್ರಕಟಗೊಳ್ಳುತ್ತವೆ. ಪ್ರತಿಭಾ ನಂದಕುಮಾರ, ಲಲಿತ ಸಿದ್ದಬಸವಯ್ಯ, ಸವಿತಾ ನಾಗಭೂಷಣ, ಎಚ್ ಎಲ್ ಪುಷ್ಪ, ದು. ಸರಸ್ವತಿ, ಎಂ. ಎಸ್ ವೇದಾ, ಎಚ್. ಎಸ್. ಮುಕ್ತಾಯಕ್ಕ, ಹೇಮಾ ಪಟ್ಟಣಶೆಟ್ಟಿ, ಎಲ್ ಸಿ ಸುಮಿತ್ರಾ ಎಸ್.ವಿ ಪ್ರಭಾವತಿ, ಕೆ.ಷರೀಫಾ, ಎಂ.ಆರ್.ಕಮಲ, ಮಮತಾ ಸಾಗರ, ಭಾರತಿ ಬಿ.ವಿ, ಆನಂತರದ ತಲೆಮಾರಿನ ವಿಭಾ, ವಿನಯಾ ಒಕ್ಕುಂದ, ತಾರಿಣಿ ಶುಭದಾಯಿನಿ, ಸುನಂದಾ ಕಡಮೆ, ಮಾಧವಿ ಭಂಡಾರಿ ಕೆರೆಕೋಣ, ನಾಗರೇಖಾ ಗಾಂವಕರ, ತೇಜಶ್ರೀ ಜ.ನಾ, ರೇಣುಕಾ ರಮಾನಂದ, ಶ್ರೀದೇವಿ ಕೆರೆಮನೆ, ಅಕ್ಷತಾ ಹುಂಚದ ಕಟ್ಟೆ, ಪೂರ್ಣಿಮಾ ಮಾಳಗಿಮನಿ, ಮಂಜುಳಾ ಹಿರೇಮಠ, ಅಕ್ಷತಾ ಕೃಷ್ಣಮೂರ್ತಿ, ಭುವನಾ ಹಿರೇಮಠ, ಕಾವ್ಯಾ ಕಡಮೆ ಇತ್ಯಾದಿ ಮಹಿಳಾ ಸಾಹಿತಿಗಳ ಬಹುಮುಖ್ಯ ಪ್ರಜ್ಞೆ ಪರ್ಯಾಯದ ಹುಡುಕಾಟವಾಗಿದೆ. ಸಮಕಾಲೀನ ಸಂದರ್ಭಗಳ ಎಲ್ಲ ಸಂಗತಿಗಳಿಗೆ ದನಿಯಾಗುತ್ತ, ಸ್ತ್ರೀ ಸ್ವತಂತ್ರ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತ ಸಾಗುತ್ತಿದೆ. ಸಾಹಿತ್ಯ ಈ ತಲೆಮಾರಿಗೆ ತನ್ನಲ್ಲಿನ ಒಳಗನ್ನು ಸ್ವಯಂಸ್ಪೂರ್ತಿಯಿಂದ ವ್ಯಕ್ತಗೊಳಿಸಲು ಇರುವ ಮಾಧ್ಯಮ.
ಇಂದಿನ ಮಹಿಳಾ ಸಾಹಿತ್ಯದಲ್ಲಿ ಅಸಮಾನತೆಯ ದಾಂಪತ್ಯದ ಕುರಿತು ನಿರಾಕರಣೆ ಇದೆ. ಶೀಲವೆಂದರೆ ಹೆಣ್ಣು ಎಂಬ ಕಲ್ಪನೆಯನ್ನು ನಿರಾಕರಿಸುತ್ತದೆ. ಒತ್ತಾಯದ ಹೇರುವಿಕೆಯ ಕ್ರಮಗಳನ್ನು ವಿರೋಧಿಸುತ್ತವೆ. ಅಂತಹ ನೂರಾರು ಕವಿತೆಗಳು, ಕಥೆಗಳು ಇಂದಿನ ಸಾಹಿತ್ಯವನ್ನು ಹೊಸ ದೃಷ್ಟಿಕೋನದಲ್ಲಿ ವಿರಚಿಸುತ್ತದೆ. ಇಷ್ಟಾಗಿಯೂ ಸ್ತ್ರೀಯರ ಬೌದ್ಧಿಕತೆಯನ್ನು, ಅಸ್ತಿತ್ವವಾದವನ್ನು ತಿರಸ್ಕರಿಸುವ ಅದನ್ನು ಹಳದಿ ಇಲ್ಲ ಕೆಂಪು ಕಣ್ಣುಗಳಿಂದ ನೋಡುವ ಜನರೇ ಹೆಚ್ಚಿರುವುದರಿಂದ ಮಹಿಳಾ ಸಂವೇದನೆಗೆ ಸಮಾನತೆಯ ಚಿಂತನೆಗಳಿಗೆ ಕಾಲವೇ ಉತ್ತರಿಸಬೇಕಷ್ಟೇ.
ನಾಗರೇಖಾ ಗಾಂವಕರ
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು ಬರಹಗಾರರೂ, ಅನುವಾದಕರೂ, ಅಂಕಣಕಾರರೂ ಆಗಿದ್ದಾರೆ.
ಇದನ್ನೂ ಓದಿ- http://“ಟಿಕ್-ಟಿಕ್ ಟೈಂಬಾಂಬಿನ ತಂಟೆಗಳು” https://kannadaplanet.com/the-strings-of-a-ticking-time-bomb/