ಇಂದಿನಿಂದ ಮಹಿಳಾ ಪ್ರೀಮಿಯರ್ ಲೀಗ್: ಕ್ರಿಕೆಟ್ ಚಾಂಪಿಯನ್ ಆರ್‌ ಸಿಬಿಗೆ ಜೈಂಟ್ಸ್ ಸವಾಲು

Most read

ವಡೋದರಾ: ಭಾರತದ ಮಹಿಳೆಯರ ಕ್ರಿಕೆಟ್ ಕ್ಷೇತ್ರದ ಮಹತ್ವಾಕಾಂಕ್ಷೆಯ ಟೂರ್ನಿಯಾಗಿರುವ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮೂರನೇ ಆವೃತ್ತಿ ಇಂದಿನಿಂದ ಶ ಆರಂಭವಾಗಲಿದೆ. ಭಾರತ ಮತ್ತು ವಿದೇಶಗಳ ಖ್ಯಾತ ಕ್ರಿಕೆಟ್ ಆಟಗಾರ್ತಿಯರು ಕಣಕ್ಕಿಳಿಯಲಿದ್ದು ಈ ಪಂದ್ಯಾವಳಿ ತೀವ್ರ ಕುತೂಹಲ ಮೂಡಿಸಿದೆ. ಕೋತಂಬಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ. ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ತಂಡವು ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆ ಹೊಂದಿದೆ.

ಡಬ್ಲ್ಯುಪಿಎಲ್ (WPL) ಆರಂಭವಾದಾಗಿನಿಂದ ದೇಶಿ ಕ್ರಿಕೆಟ್‌ನಲ್ಲಿ ಹೆಚ್ಚು ಹೆಚ್ಚು ಪ್ರತಿಭೆಗಳು ಬೆಳಕಿಗೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮೊದಲೆರಡು ಆವೃತ್ತಿಗಳಲ್ಲಿ ಬೆಂಗಳೂರಿನ ಶ್ರೇಯಾಂಕಾ ಪಾಟೀಲ ಮತ್ತು ಸೈಕಾ ಇಷಾಕ್ ಅವರು ಗಮನ ಸೆಳೆಯುವುದರ ಜತೆಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಬಾರಿಯೂ ಹಲವು ಪ್ರತಿಭಾನ್ವಿತ ಆಟಗಾರರಿಗೆ ಡಬ್ಲ್ಯುಪಿಎಲ್ ವೇದಿಕೆಯಾಗುವ ನಿರೀಕ್ಷೆ ಇದೆ.

ಜತೆಗೆ ಬೇರೆ ಬೇರೆ ದೇಶಗಳ ಖ್ಯಾತನಾಮ ಆಟಗಾರ್ತಿಯರಾದ ಅಲಿಸಾ ಹೀಲಿ, ಸೋಫಿ ಮಾಲಿನೆ ಮತ್ತು ಕೇಟ್ ಕ್ರಾಸ್ ಅವರು ಗಾಯಗೊಂಡಿದ್ದು ಈ ಬಾರಿ ಕಣಕ್ಕಿಳಿಯುತ್ತಿಲ್ಲ. ಇದರಿಂದಾಗಿ ಅವರ ಸ್ಥಾನದಲ್ಲಿ ಆಡಲಿರುವ ಯುವ ಆಟಗಾರ್ತಿಯರಿಗೆ ಇದು ಉತ್ತಮ ಅವಕಾಶವಾಗಿದೆ.

ಭಾರತ ತಂಡದ ನಾಯಕಿಯಾಗಿ ನಾನು ಡಬ್ಲ್ಯುಪಿಎಲ್‌ನಲ್ಲಿ ಆಡಲು ಬಹಳ ಉತ್ಸುಕಳಾಗಿರುವೆ. ಈ ಟೂರ್ನಿಗಾಗಿ ದೇಶಿ ಕ್ರಿಕೆಟಿಗರು ಬೆಳೆಯಲು ಅನುಕೂಲವಾಗುತ್ತಿದೆ ಎಂದು ಹರ್ಮನ್ಪ್ರೀತ್ ಕೌರ್ ಸಂವಾದದಲ್ಲಿ ಹೇಳಿದ್ದಾರೆ.

ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಕಠಿಣ ಸವಾಲು ಎದುರಾಗಿದೆ. ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ಸೋಫಿ ಮಾಲಿನೆ, ಸೋಫಿ ಡಿವೈನ್ ಹಾಗೂ ಕೇಟ್ ಕ್ರಾಸ್ ಅವರಿಲ್ಲದೇ ತಂಡವು ಕಣಕ್ಕಿಳಿಯಲಿದೆ. ಆದರೆ ಎಲಿಸ್ ಪೆರಿ, ಶ್ರೇಯಾಂಕಾ ಮತ್ತು ಆಶಾ ಶೋಭನಾ ಅವರು ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ ಆಗಿ ಮರಳಿ, ತಂಡಕ್ಕೆ ಆಸರೆಯಾಗುವರೇ ಎಂದು ಕಾದು ನೋಡಬೇಕಿದೆ.

ಕಳೆದ ಆವೃತ್ತಿಯಲ್ಲಿ ಆಡಿದ್ದವರಲ್ಲಿ ಬಹುತೇಕರು ಈ ಬಾರಿ ಟೂರ್ನಿಗೆ ಅಲಭ್ಯವಾಗಿದ್ದಾರೆ. ಶ್ರೇಷ್ಠ ಆಲ್ರೌಂಡರ್ ಸೋಫಿ (ಡಿವೈನ್) ಅವರು ಕೂಡ ಆಡುತ್ತಿಲ್ಲ. ಇನ್ನು ಕೆಲವರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮಾನಸಿಕವಾಗಿ ನಾವು ಸಮರ್ಥರಾಗಿದ್ದೇವೆ. ಚೆನ್ನಾಗಿ ಆಡುತ್ತೇವೆ ಎಂದು ಆರ್ಸಿಬಿ ನಾಯಕಿ ಸ್ಮೃತಿ ಮಂದಾನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆತ್ ಮೂನಿ ನಾಯಕತ್ವದ ಗುಜರಾತ್ ತಂಡದಲ್ಲಿ ಈ ಬಾರಿ ಉತ್ತಮ ಆಟಗಾರ್ತಿಯರಿರುವುದು ಲಾಭದಾಯಕವಾಗಿದೆ. ಆ್ಯಷ್ಲೆ ಗಾರ್ಡನರ್, ಹರ್ಲಿನ್ ಡಿಯೊಲ್, ದಿಯಾಂದ್ರ ಡಾಟಿನ್ ಅವರಂತಹ ಆಟಗಾರ್ತಿಯರು ಗುಜರಾತ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

More articles

Latest article